ಸೌದಿ ಯುವರಾಜಗೆ ವಿಳಂಬವಿಲ್ಲದೆ ಶಿಕ್ಷೆಯಾಗಬೇಕು: ಜಮಾಲ್ ಖಶೋಗಿ ಗೆಳತಿ ಒತ್ತಾಯ
ಫೋಟೊ ಕೃಪೆ: twitter.com
ಇಸ್ತಾಂಬುಲ್ (ಟರ್ಕಿ), ಮಾ. 1: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿ ದೇಶದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರನ್ನು ವಿಳಂಬವಿಲ್ಲದೆ ಶಿಕ್ಷಿಸಬೇಕು ಎಂದು ಖಶೋಗಿಯ ಟರ್ಕಿ ದೇಶದ ಗೆಳತಿ ಹಾತಿಸ್ ಸೆಂಗಿಝ್ ಸೋಮವಾರ ಹೇಳಿದ್ದಾರೆ.
ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ 2018ರ ಅಕ್ಟೋಬರ್ 2ರಂದು ಖಶೋಗಿಯನ್ನು ಸೌದಿ ಅರೇಬಿಯದಿಂದ ಬಂದಿದ್ದ ಹಂತಕರ ಪಡೆಯೊಂದು ಬರ್ಬರವಾಗಿ ಹತ್ಯೆಗೈದಿತ್ತು. ಅವರ ಶವ ಇನ್ನೂ ಪತ್ತೆಯಾಗಿಲ್ಲ.
ಹಾತಿಸ್ ಸೆಂಗಿಝ್ ಜೊತೆ ಮದುವೆಯಾಗುವುದಕ್ಕಾಗಿ ದಾಖಲೆಗಳನ್ನು ಪಡೆಯಲು ಅವರು ಸೌದಿ ಕೌನ್ಸುಲೇಟ್ ಕಚೇರಿಗೆ ಹೋಗಿದ್ದರು.
ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ಆದೇಶದಂತೆ ಅವರೇ ಕಳುಹಿಸಿದ ಗುಪ್ತಚರ ಸಿಬ್ಬಂದಿಯ ತಂಡವೊಂದು ಇಸ್ತಾಂಬುಲ್ ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಯನ್ನು ಹತ್ಯೆ ಮಾಡಿತ್ತು ಎಂದು ಹೇಳುವ ಅಮೆರಿಕದ ಗುಪ್ತಚರ ವರದಿಯೊಂದನ್ನು ಅವೆುರಿಕದ ಜೋ ಬೈಡನ್ ಸರಕಾರವು ಶುಕ್ರವಾರ ಬಹಿರಂಗಗೊಳಿಸಿದೆ.
‘‘ಯಾವುದೇ ಕಳಂಕವಿಲ್ಲದ ಅಮಾಯಕ ವ್ಯಕ್ತಿಯೊಬ್ಬರ ಅಮಾನುಷ ಕೊಲೆಗೆ ಆದೇಶ ನೀಡಿರುವ ಯುವರಾಜನಿಗೆ ವಿಳಂಬವಿಲ್ಲದೆ ಶಿಕ್ಷೆಯಾಗುವುದು ಅಗತ್ಯವಾಗಿದೆ’’ ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಹಾಕಿರುವ ಹೇಳಿಕೆಯೊಂದರಲ್ಲಿ ಸೆಂಗಿಝ್ ಹೇಳಿದ್ದಾರೆ.