ಚಿಕ್ಕಮಗಳೂರು: ಕೊರೋನ ಸೋಂಕು ನಿಯಂತ್ರಣಕ್ಕೆ ಕೇರಳ, ಮಹಾರಾಷ್ಟ್ರ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ; ಸಂಸದೆ ಶೋಭಾ
ಚಿಕ್ಕಮಗಳೂರು, ಮಾ.2: ಜಿಲ್ಲೆಯಲ್ಲಿರುವ ವಿವಿಧ ಪ್ರವಾಸಿ ತಾಣಗಳಿಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಪ್ರವಾಸಿಗರು ಕಾರುಗಳಲ್ಲಿ ಬರುತ್ತಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಆ ರಾಜ್ಯಗಳಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಮತ್ತು ಮಹಾರಾಷ್ಟ್ರಗಳ ವಾಹನಗಳಿಗೆ, ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಡಿಸಿ, ಎಸ್ಪಿಗೆ ಸೂಚನೆ ನೀಡಿದ್ದಾರೆ. .
ಮಂಗಳವಾರ ನಗರದ ಜಿಪಂ ಕಚೇರಿಯ ನಝೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಈ ಎರಡು ರಾಜ್ಯಗಳಿಂದ ಜಿಲ್ಲೆ ಪ್ರವೇಶಿಸುವ ವಾಹನಗಳಿಗೆ ನಿರ್ಬಂಧ ರೂಪಿಸದಿದ್ದಲ್ಲಿ ಜಿಲ್ಲೆಯಲ್ಲಿ ಮತ್ತೆ ಕೊರೋನ ಸೋಂಕು ಹರಡುವ ಸಾಧ್ಯತೆ ಇದೆ. ಜಿಲ್ಲೆಗೆ ಈ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ಕೊರೋನ ನೆಗೆಟಿವ್ ವರದಿ ತಪಾಸಣೆ ಕಡ್ಡಾಯ ಮಾಡಬೇಕೆಂದರು.
ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, 2020ರ ಮಾರ್ಚ್ ತಿಂಗಳಿಗೂ ಮೊದಲು ಕೇರಳದಿಂದ ದಿನಕ್ಕೆ 20 ಟೂರಿಸ್ಟ್ ಬಸ್‍ಗಳು ಬರುತ್ತಿದ್ದವು. ಲಾಕ್‍ಡೌನ್ ಬಳಿಕ ಟೂರಿಸ್ಟ್ ಬಸ್‍ಗಳು ಬರುತ್ತಿಲ್ಲ. ಪ್ರವಾಸಿಗರು ಕಾರುಗಳ ಮೂಲಕ ಬರುತ್ತಿದ್ದಾರೆ. ಮಹಾರಾಷ್ಟ್ರದಿಂದ ಯಾವುದೇ ವಾಹನಗಳು ಬರುತ್ತಿಲ್ಲ ಎಂದರು.
ಎಸ್ಪಿ ಅಕ್ಷಯ್ ಎಂ.ಎಚ್. ಮಾತನಾಡಿ, ಕೇರಳ ಮತ್ತು ಮಹಾರಾಷ್ಟ್ರ ಗಡಿಪ್ರದೇಶಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳಿಗೆ ರಾಜ್ಯ ಸರಕಾರ ನಿರ್ಬಂಧ ವಿಧಿಸಿದೆ. ಜಿಲ್ಲೆಗೆ ಪ್ರವೇಶಿಸುವ ವಾಹನಗಳಿಗೆ ಸರಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ. ಇಂತಹ ವಾಹನಗಳಿಗೆ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿ 10 ಎಕರೆ ಜಮೀನು ಗುರುತಿಸಲಾಗಿದೆ. ಜಮೀನು ಸಂಬಂಧ ಕೆಲ ತಾಂತ್ರಿಕ ಸಮಸ್ಯೆಗಳಿವೆ ಎಂದು ಸಂಬಂಧಿಸಿದ ಇಲಾಖಾಧಿಕಾರಿ ಸಭೆಯ ಗಮನಕ್ಕೆ ತಂದಾಗ, ಇದಕ್ಕೆ ಪ್ರತಿಕ್ರಿಸಿದ ಸಂಸದೆ ಶೋಭಾ, ಸ್ಪೈಸ್‍ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುದಾನ ನೀಡಲಿದೆ, ಜಮೀನು ಸಮಸ್ಯೆಗಳನ್ನು ಬಗೆಹರಿಸಿ ಸ್ಪೈಸ್‍ಪಾರ್ಕ್ ನಿರ್ಮಾಣದ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 6,500 ಕಾರ್ಮಿಕರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇಎಸ್‍ಐ ಆಸ್ಪತ್ರೆ ನಿರ್ಮಾಣಕ್ಕೆ ಕನಿಷ್ಠ 30ಸಾವಿರ ಕಾರ್ಮಿಕರು ನೋಂದಣಿ ಹೊಂದಿರಬೇಕು ಎಂದು ಇಎಸ್‍ಐ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದಾಗ, ಜಿಲ್ಲೆಯಲ್ಲಿ ಇಎಸ್‍ಐ ಆಸ್ಪತ್ರೆ ನಿರ್ಮಾಣ ಕುರಿತು ಜನಪ್ರತಿನಿಧಿಗಳು ಭಾಷಣ ಮಾಡುವುದಕಷ್ಟೇ ಸೀಮಿತವಾಗಿದೆ. ಇಎಸ್‍ಐ ಆಸ್ಪತ್ರೆ ನಿರ್ಮಾಣ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಕಾರ್ಮಿಕ ಕಾನೂನು ಬದಲಾವಣೆಯಾಗಿದ್ದು, ಕಾಫಿತೋಟಗಳ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಫಿತೋಟಗಳ ಕಾರ್ಮಿಕರನ್ನು ನೋಂದಾಯಿಸಿ, ನೋಂದಣಿ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಕಡೂರು, ಬೀರೂರು, ತರೀಕೆರೆ, ರಂಗೇನಹಳ್ಳಿ, ಮೂಡಿಗೆರೆ, ಪಂಚೇನಹಳ್ಳಿ ಯಗಚಿ ಹಾಗೂ ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯಲ್ಲಿ 11 ಜನೌಷಧ ಕೇಂದ್ರಗಳು ಮಾತ್ರ ಇವೆ. ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಜನೌಷಧ ಕೇಂದ್ರಗಳ ಹೆಚ್ಚಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಅಗತ್ಯ ಔಷಧಗಳ ದಾಸ್ತಾನು ಇರಿಸಬೇಕೆಂದು ಶೋಭಾ ಕರಂದ್ಲಾಜೆ ಹೇಳಿದರು.
ಕೊರೋನ ಹಿನ್ನೆಲೆಯಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ಸಂಸದರ ಅನುದಾನ ಬರುವುದು ಅನುಮಾನವಿದೆ. ಈ ಹಿಂದೆ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕು. ಸಂಸದರ ಅನುದಾನವನ್ನು ಸಂಪೂರ್ಣವಾಗಿ ಬಳಸಿದ ಫಂಡ್ ಕ್ಲಿಯರ್ ಸರ್ಟಿಫಿಕೇಟ್ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸಂಸದೆ ಇದೇ ವೇಳೆ ಸೂಚಿಸಿದರು.
ಶಿವಮೊಗ್ಗ, ತಮಕೂರು ನಾಲ್ಕು ಪಥದ ರಸ್ತೆ ನಿರ್ಮಾಣ ತೀರ್ಮಾನ 2012ರಲ್ಲೇ ಆಗಿದೆ. ಈ ಮಾಹಿತಿ ಮೆಸ್ಕಾಂ ಅಧಿಕಾರಿಗಳಿಗೂ ತಿಳಿದಿದೆ. ಆದರೆ ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಕಂಬಗಳನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಹಾಕಲಾಗಿದೆ. ಈ ಹೆದ್ದಾರಿಯನ್ನು ಅಗಲೀಕರಣ ಮಾಡುವ ಸಂದರ್ಭ ಮೆಸ್ಕಾಂನವರು ಹಾಕಿರುವ ವಿದ್ಯುತ್ ಕಂಬಗಳನ್ನು ಮತ್ತೆ ತೆರವು ಮಾಡಬೇಕು. ಇದಕ್ಕೆ ಮತ್ತೆ ಕೋಟ್ಯಂತರ ರೂ. ವಿನಯೋಗಿಸಬೇಕು. ಅಧಿಕಾರಿಗಳು ಮಾಡುವ ಕೆಲಸದಿಂದ ಸರಕಾರದ ಅನುದಾನ ಪೋಲಾಗುತ್ತಿದೆ ಎಂದು ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಸಂಸದರ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತದೆ ಎಂದು ಗೊತ್ತಿದ್ದರೂ ಮೆಸ್ಕಾಂ ಅಧಿಕಾರಿಗಳು ಹೆದ್ದಾರಿ ಪಕ್ಕದಲ್ಲೇ ವಿದ್ಯುತ್ ಹಾಕಿದ್ದೀರಲ್ಲಾ, ಹೆದ್ದಾರಿ ಅಗಲೀಕರಣದ ವೇಳೆ ಕಂಬ ಸ್ಥಳಾಂತರಿಸಲು ಅನುದಾನ ಯಾರು ಕೊಡುತ್ತಾರೆ, ಜನಸಾಮಾನ್ಯರಿಗೆ ಅರ್ಥವಾಗುವ ವಿಷಯ ಇಂಜಿನಿಯರ್‍ಗಳಿಗೆ ಅರ್ಥವಾಗುವುದಿಲ್ಲವಾ?, ನೀವು ಇಂಜಿನಿಯರ್‍ಗಳ ಎಂದು ಸಂಸದೆ ಶೋಭಾ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ಪಡೆದರು.
ಕಡೂರು ಮತ್ತು ಮುಗ್ತಿಹಳ್ಳಿ 173 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 202ಕೋಟಿ ರೂ. ಬಿಡುಗಡೆಯಾಗಿದ್ದು, ಶೇ.75ರಷ್ಟು ಕಾಮಗಾರಿ ಮುಗಿದಿದೆ. ಕೆಲವು ಕಡೆಗಳಲ್ಲಿ ಭೂಸ್ವಾ ಧೀನ ಪ್ರಕ್ರಿಯೆ ಬಾಕಿ ಇದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕೊಟ್ಟಿಗೆಹಾರ-ಮೂಡಿಗೆರೆ 11 ಕಿಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮೇ ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಚಾರ್ಮಾಡಿಘಾಟಿ ರಸ್ತೆ ಕಾಮಗಾರಿಗೆ 19 ಕೋಟಿ ಅನುದಾನ ಬಿಡುಗಡೆಯಾಗಿದ್ದು, 8ಕಿ.ಮೀ ಬಿಟ್ಟು ಉಳಿದಂತೆ ಮುಕ್ತಾಯವಾಗಿದೆ. ಭಾರೀ ಮಳೆಯಿಂದ ಕುಸಿದ ಕೆಲವು ದೊಡ್ಡ ಕಾಮಗಾರಿಗಳು ಬಾಕಿ ಇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ತಿಳಿಸಿದರು.
ಕಳೆದ ವರ್ಷ ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಿಂದ ರಸ್ತೆ ಬದಿ ಮತ್ತು ಮನೆ ಸಮೀಪದಲ್ಲಿ ಧರೆಕುಸಿತ ಉಂಟಾಗಿದ್ದು, ಇಂತಹ ಕಡೆಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗುವಂತೆ ಶೋಭಾ ಕರಂದ್ಲಾಜೆ ಸೂಚಿಸಿದಾಗ, ಜಿಪಂ ಸಿಇಒ ಪೂವಿತಾ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಸಮುದಾಯ ತಡೆಗೋಡೆ ನಿರ್ಮಾಣಕ್ಕೆ ಅವಕಾಶವಿದೆ. ವೈಯಕ್ತಿಕ ತಡೆಗೋಡೆ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಸಂಬಂಧ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದರು.
ತರೀಕೆರೆ ತಾಲೂಕು ಪಂಚಾಯತ್ ಅಧ್ಯಕ್ಷೆ ಪದ್ಮಾವತಿ ಸಂಜೀವ್‍ಕುಮಾರ್ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ನೀಡಲು 30 ಸಾವಿರ ಆದಾಯ ಪ್ರಮಾಣಪತ್ರ ನೀಡಬೇಕಿದ್ದು, 30ಸಾವಿರ ಆದಾಯ ಪ್ರಮಾಣಪತ್ರ ತರಲು ಸಾಧ್ಯವಿಲ್ಲದ ಕಾರಣದಿಂದ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ 70 ನಿವೇಶನಗಳ ಹಂಚಿಕೆ ಬಾಕಿ ಉಳಿದಿದೆ. 30 ಸಾವಿರ ವಾರ್ಷಿಕ ಆದಾಯ ಪ್ರಮಾಣಪತ್ರ ಯಾರಿಗೂ ಸಿಗುವುದಿಲ್ಲ. ಈ ಸಂಬಂಧ ಅಗತ್ಯ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಜಿ.ಪಂ.ಸಿಇಒ ಎಸ್.ಪೂವಿತಾ, ಎಸಿ ಡಾ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಪಂ ಸದಸ್ಯರು, ವಿವಿಧ ತಾಪಂ ಅಧ್ಯಕ್ಷರು ಉಪಸ್ಥಿತರಿದ್ದರು.
ಮೂಡಿಗೆರೆ, ಕಳಸ ಭಾಗದಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳ ಸಂತ್ರಸ್ಥರಿಗೆ ನಿವೇಶನ ನೀಡಲು ಕಳಸ ಹೋಬಳಿ ವ್ಯಾಪ್ತಿಯಲ್ಲಿ 20 ಎಕರೆ ಜಮೀನು ಗುರುತಿಸಲಾಗಿದ್ದು, ಸಂತ್ರಸ್ಥರಿಗೆ ಹಕ್ಕುಪತ್ರವನ್ನೂ ನೀಡಲಾಗಿದೆ. ಆದರೆ ಜಿಲ್ಲಾಡಳಿತ ಗುರುತು ಮಾಡಿರುವ ನಿವೇಶನಗಳಲ್ಲಿ ಯಾರೂ ಮನೆ ಕಟ್ಟಲೂ ಮುಂದಾಗಿಲ್ಲ. ಜಮೀನು ಬಿಟ್ಟು ಬರಲು ಸಂತ್ರಸ್ಥರು ಮುಂದಾಗುತ್ತಿಲ್ಲ. ಈ ಸಂತ್ರಸ್ಥರಿಗೆ ಮನೆ ನಿರ್ಮಾಣಕ್ಕೆ ನೀಡುವ 5 ಪಕ್ಷ ಪರಿಹಾರಧನದ ಪೈಕಿ 1 ಲಕ್ಷ ರೂ. ಈಗಾಗಲೇ ನೀಡಲಾಗಿದೆ. ಮನೆಕಟ್ಟಲು ಮುಂದಾಗದ ಪರಿಣಾಮ ಬಾಕಿ ಪರಿಹಾರಧನವನ್ನು ತಡೆಹಿಡಿಯಲಾಗಿದೆ.
- ಡಾ.ಎಚ್.ಎಲ್.ನಾಗರಾಜ್, ಕಂದಾಯ ಉಪವಿಭಾಗಾಧಿಕಾರಿ, ಚಿಕ್ಕಮಗಳೂರು
-