varthabharthi


ಕಾಲಂ 9

15ನೇ ಹಣಕಾಸು ಆಯೋಗ: ಬರಿದಾಗುತ್ತಿರುವ ಕರ್ನಾಟಕ, ದರೋಡೆ ಮಾಡುತ್ತಿರುವ ಕೇಂದ್ರ ಸರಕಾರ

ವಾರ್ತಾ ಭಾರತಿ : 3 Mar, 2021
ಶಿವಸುಂದರ್

135 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇ. 1.07 ಎಂದರೆ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಸಲ್ಲಬೇಕಿರುವ 1.5 ಲಕ್ಷ ಕೋಟಿ ರೂಪಾಯಿಗಳನ್ನು ಮೋದಿ ಸರಕಾರ ದರೋಡೆ ಮಾಡಿದೆ. ಅಂದರೆ ಪ್ರತಿ ವರ್ಷ ಕರ್ನಾಟಕಕ್ಕೆ ಸಲ್ಲಬೇಕಾದ 30,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಕರ್ನಾಟಕದಿಂದ ಕಿತ್ತುಕೊಳ್ಳುತ್ತಿದೆ. ರೂ. 30,000 ಕೋಟಿ ಎಂದರೆ ನಮ್ಮ ರಾಜ್ಯದ ಬಜೆಟ್‌ನ ಶೇ.15-20ರಷ್ಟು. ಯಡಿಯೂರಪ್ಪನವರ ಸರಕಾರ ಈ ಕೊರತೆಯನ್ನು ಮೋದಿ ಭಕ್ತರಿಂದ ಮಾತ್ರ ವಸೂಲಿ ಮಾಡುವುದಿಲ್ಲ. ಅಲ್ಲವೇ?


ಇದೇ ಫೆಬ್ರವರಿ 2021ರಲ್ಲಿ 15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯನ್ನು ನೀಡಿದೆ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ತೀವ್ರಗೊಂಡ ಕೇಂದ್ರದ ಹಗಲು ದರೋಡೆಯನ್ನು 15ನೇ ಆಯೋಗ 2021-26ರ ಅವಧಿಗೆ ನವೀಕರಿಸಿರುವುದಲ್ಲದೆ ಭಾರತದ ಫೆಡರಲ್ ಸ್ವರೂಪವನ್ನೇ ಬದಲು ಮಾಡುವ ಮೋದಿ ಸರಕಾರದ ಹುನ್ನಾರಗಳೆಲ್ಲಕ್ಕೂ ಶಾಸನ ಮುದ್ರೆಯನ್ನು ಒತ್ತಿದೆ. ಇದರ ದೀರ್ಘಕಾಲೀನ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಮುಂಚೆ ಭಾರತದ ಮೂಲ ಶಿಥಿಲ ಫೆೆಡರಲ್ ವ್ಯವಸ್ಥೆಯ ಬೇರುಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಫೆಡರಲ್ ಭಾರತದಲ್ಲಿ ಕೇಂದ್ರವೇಕೆ ಸರ್ವಾಧಿಕಾರಿ?  

ಭಾರತವನ್ನು ರಾಜ್ಯಗಳ ಒಕ್ಕೂಟ- ಯೂನಿಯನ್ ಆಫ್ ಸ್ಟೇಟ್ಸ್- ಎಂದು ಭಾರತದ ಸಂವಿಧಾನದ ಆರ್ಟಿಕಲ್ 2 ಸ್ಪಷ್ಟಪಡಿಸುತ್ತದೆ. 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಪೂರ್ಣ ಪೀಠ ನೀಡಿರುವ ಸಾಂವಿಧಾನಿಕ ಆದೇಶದಲ್ಲೂ ಫೆಡರಲಿಸಂ- ಭಾರತದ ಒಕ್ಕೂಟ ಸ್ವರೂಪ- ಭಾರತದ ಸಂವಿಧಾನದ ಮೂಲ ರಚನೆಯ ಭಾಗವೆಂದು ಘೋಷಿಸಲಾಗಿದೆ. ಅದರ ಭಾಗವಾಗಿಯೇ ಭಾರತದ ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ತೆರಿಗೆ ಸಂಗ್ರಹ ಮಾಡುವ ಮತ್ತು ಶಾಸನಗಳನ್ನು ರೂಪಿಸುವ ಪರಮಾಧಿಕಾರವನ್ನು ಕೇಂದ್ರ ಹಾಗೂ ರಾಜ್ಯಗಳೆರಡಕ್ಕೂ ಹಂಚಿದೆ. ಸಂವಿಧಾನದ ಆರ್ಟಿಕಲ್ 246ರ ಅನ್ವಯ ರೂಪಿಸಲಾಗಿರುವ ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳ ಪರಮಾಧಿಕಾರವಿರುವ ಬಾಬತ್ತುಗಳನ್ನು ನಿರ್ದಿಷ್ಟೀಕರಿಸಲಾಗಿದೆ. ಅದರ ಜೊತೆಗೆ ಕೇಂದ್ರ ಹಾಗೂ ರಾಜ್ಯಗಳೆರಡೂ ಶಾಸನಗಳನ್ನು ಮಾಡಬಹುದಾದ ಸಮವರ್ತಿ ಪಟ್ಟಿಯನ್ನು ನೀಡಲಾಗಿದೆ. ಆದರೆ ಕೇಂದ್ರದಲ್ಲಿ ತುರ್ತುಸ್ಥಿತಿ ಜಾರಿ ಮಾಡಿದ ಇಂದಿರಾ ಗಾಂಧಿ ಹಾಗೂ ಇಂದು ಅಘೋಷಿತ ಸರ್ವಾಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಯಂತಹವರ ಸರಕಾರಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮವರ್ತಿ ಪಟ್ಟಿಯನ್ನು ಬಳಸಿಕೊಂಡು ರಾಜ್ಯಗಳ ಅಧಿಕಾರದೊಳಗೆ ಸಾಂವಿಧಾನಿಕವಾಗಿಯೇ ಒತ್ತುವರಿ ಮಾಡುತ್ತಾ ಬಂದಿವೆ. ಇದಕ್ಕೆ ಪುಷ್ಟಿಕೊಡುವಂತೆ ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗದ ಎಲ್ಲಾ ರೆಸಿಡ್ಯುಯಲ್ ಅಧಿಕಾರಗಳನ್ನು ಕೇಂದ್ರಕ್ಕೆ ವಹಿಸಲಾಗಿದೆ. ಬಹುತ್ವವನ್ನು ಗೌರವಿಸದ ಯಾವುದೇ ಆಳುವಿಕೆ ಅಧಿಕಾರಕ್ಕೆ ಬಂದಾಗ ಇದೇ ಸಂವಿಧಾನವನ್ನೇ ಬಳಸಿಕೊಂಡು ಸರ್ವಾಧಿಕಾರವನ್ನು ತರಬಹುದಾದ ಅವಕಾಶಗಳು ಸಂವಿಧಾನದ ಸಂದಿಯಲ್ಲಿ ಬಚ್ಚಿಡಲಾಗಿದೆ. ಅದೇನೇ ಇರಲಿ, ಶೆಡ್ಯೂಲ್ 7ರಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ವಿಭಜಿತವಾಗಿ ರುವ ಜವಾಬ್ದಾರಿ ಮತ್ತು ಹಕ್ಕುಗಳನ್ನು ಗಮನಿಸಿದರೆ ರಾಜ್ಯಗಳಿಗೆ ಹೆಚ್ಚು ಜವಾಬ್ದಾರಿಗಳನ್ನೂ ನೀಡಲಾಗಿದ್ದರೆ, ಕೇಂದ್ರಕ್ಕೆ ಹೆಚ್ಚು ತೆರಿಗೆ ಹಾಗೂ ಶಾಸನದ ಅಧಿಕಾರಗಳನ್ನೂ ಕೊಡಮಾಡಿರುವುದು ಎದ್ದು ಕಾಣುತ್ತದೆ. ಉದಾಹರಣೆಗೆ ದೇಶದ ಜನರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿರುವ ಆಹಾರ, ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಭದ್ರತೆಯಂತಹ ಎಲ್ಲಾ ಜವಾಬ್ದಾರಿಗಳು ಮೂಲಭೂತವಾಗಿ ರಾಜ್ಯಗಳ ಜವಾಬ್ದಾರಿಯಾಗಿವೆ. ಅವುಗಳಲ್ಲಿ ಏಕರೂಪತೆ ತರುವ ಮತ್ತು ಗುಣಮಟ್ಟಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಅದರ ಜೊತೆಗೆ ದೇಶದ ರಕ್ಷಣೆ, ವಿದೇಶಾಂಗ..ಇತ್ಯಾದಿ ವೆಚ್ಚಗಳಿರುತ್ತವೆ. ಅದೇನೇ ಇರಲಿ, ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುವುದು ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲಗಳು ದೊರಕುವಂತಾದರೆ ಮಾತ್ರ ಎನ್ನುವುದು ರಾಜ್ಯಗಳಿಗಿರುವ ಜವಾಬ್ದಾರಿಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಆದರೆ, ಭಾರತ ಒಕ್ಕೂಟದಲ್ಲಿ ಕೇಂದ್ರ ಸರಕಾರ ಹಾಗೂ ಎಲ್ಲಾ 30 ರಾಜ್ಯಗಳ ಒಟ್ಟಾರೆ ತೆರಿಗೆ ಸಂಗ್ರಹವನ್ನು ಗಣನೆಗೆ ತೆಗೆದುಕೊಂಡಲ್ಲಿ ಕೇಂದ್ರವು ಶೇ. 63-64ರಷ್ಟು ತೆರಿಗೆಯನ್ನು ಸಂಗ್ರಹ ಮಾಡಿದರೆ ರಾಜ್ಯಗಳು ಕೇವಲ ಶೇ.36-37ರಷ್ಟು ತೆರಿಗೆ ಮೂಲವನ್ನು ಮಾತ್ರ ಪಡೆದುಕೊಂಡಿವೆ. ಅದಕ್ಕೆ ತದ್ವಿರುದ್ಧವಾಗಿ, ಕೇಂದ್ರವು ಒಟ್ಟರೆಯಾಗಿ ಶೇ. 43ರಷ್ಟು ವೆಚ್ಚವನ್ನು ಮಾಡಬೇಕಿದ್ದರೆ ರಾಜ್ಯಗಳು ಶೇ. 57ರಷ್ಟು ವೆಚ್ಚಗಳನ್ನು ಮಾಡುತ್ತಿವೆ.

ಹಣಕಾಸು ಆಯೋಗಗಳೋ? ಆರ್ಥಿಕ ಕೇಂದ್ರೀಕರಣದ ಸಾಧನಗಳೋ?

ಈ ಅಸಮತೋಲನವನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಲೆಂದೇ ಸಂವಿಧಾನದಲ್ಲಿ ಆರ್ಟಿಕಲ್ 280ರ ಪ್ರಕಾರ ರಾಷ್ಟ್ರಪತಿಗಳು ಒಂದು ಸ್ವತಂತ್ರ ಹಣಕಾಸು ಆಯೋಗವನ್ನು ನೇಮಕ ಮಾಡುವ ಅಧಿಕಾರವನ್ನು ನೀಡಲಾಗಿದೆ. ಈ ಆಯೋಗವು ಕೇಂದ್ರವು ರಾಜ್ಯಗಳಲ್ಲಿರುವ ಜನರಿಂದ ಸಂಗ್ರಹಿಸುವ ಪ್ರತ್ಯೇಕ ತೆರಿಗೆಗಳಲ್ಲಿ ರಾಜ್ಯಗಳಿಗೆ ಎಷ್ಟು ವರ್ಗಾಯಿಸತಕ್ಕದ್ದೆಂದು ನಿಗದಿ ಮಾಡುತ್ತದೆ ಮತ್ತು ಯಾವ್ಯಾವ ರಾಜ್ಯಗಳಿಗೆ ಎಷ್ಟು ಪಾಲು ನೀಡಬೇಕೆಂಬುದರ ಬಗ್ಗೆಯೂ ಮಾನದಂಡಗಳನ್ನು ತೀರ್ಮಾನಿಸುತ್ತದೆ. ಅದರ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಳ್ಳಬೇಕಿರುತ್ತದೆ. ಇದರ ಜೊತೆಗೆ ‘ಯೋಜನಾ ಆಯೋಗ’ (ಪ್ಲಾನಿಂಗ್ ಕಮಿಷನ್)ವೂ ರಾಜ್ಯಗಳಿಗೆ ಕೇಂದ್ರ ಸಂಗ್ರಹಿಸಿದ ಸಂಪನ್ಮೂಲಗಳ ಪಾಲನ್ನು ಶರತ್ತುವಾರು ಹಂಚುತ್ತಿತ್ತು. ಈವರೆಗೆ 15 ಹಣಕಾಸು ಆಯೋಗಗಳು ನೇಮಕವಾಗಿದ್ದು, 15ನೇ ಹಣಕಾಸು ಆಯೋಗವು ತನ್ನ ಪೂರ್ಣ ವರದಿಯನ್ನು 2021ರ ಫೆಬ್ರವರಿಯಲ್ಲಿ ಸರಕಾರಕ್ಕೆ ನೀಡಿದೆ ಮತ್ತು ಅದನ್ನು ಮೋದಿ ಸರಕಾರ ಸದನದಲ್ಲಿ ಮಂಡಿಸಿ ಉತ್ಸಾಹದಿಂದ ಅನುಷ್ಠಾನಕ್ಕೆ ಮುಂದಾಗಿದೆ. ಕೆಲವು ಉದಾಹರಣೆಗಳನ್ನು ಬಿಟ್ಟರೆ, ಎಲ್ಲಾ ಹಣಕಾಸು ಆಯೋಗಗಳು ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲು ಮತ್ತು ರಾಜ್ಯಗಳ ನಡುವಿನ ತೆರಿಗೆ ಪಾಲಿನ ಹಂಚಿಕೆಯ ಪ್ರಮಾಣವನ್ನು ನಿಗದಿ ಮಾಡುವಾಗ ಕೇಂದ್ರ ಸರಕಾರದ ಆದ್ಯತೆಗಳನ್ನಷ್ಟೇ ಗಮನವಿಟ್ಟುಕೊಂಡು ವ್ಯವಹರಿಸಿವೆ. ಕೇಂದ್ರದ ತೆರಿಗೆ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲು (ಡಿವಿಸಬಲ್ ಪೂಲ್) ಮತ್ತು ಕೇಂದ್ರದ ವೆಚ್ಚದ ಪಾಲು ಎಂದು ವಿಂಗಡಿಸಲಾಗುತ್ತದೆ. ಡಿವಿಸಬಲ್ ಪೂಲ್‌ನಲ್ಲಿ ನಿಗದಿಯಾದ ಮೊತ್ತವನ್ನು ರಾಜ್ಯಗಳಿಗೆ ನಿಗದಿಯಾದ ಮಾನದಂಡಗಳಿಗನುಸಾರ ಹಂಚಿಕೊಳ್ಳಲಾಗುತ್ತದೆ. ಇದರ ಜೊತೆಗೆ ಕೇಂದ್ರೀಯ ಯೋಜನೆಗಳು (ಸೆಂಟ್ರಲ್ ಸೆಕ್ಟರ್- ಸಿ.ಎಸ್.) ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಒಟ್ಟಿಗೆ ಜಾರಿ ಮಾಡುವ ಕೇಂದ್ರೀಯ ಪ್ರಾಯೋಜಿತ ಯೋಜನೆಗಳು (ಸೆಂಟ್ರಲ್ ಸ್ಪೊಸೋರ್ಡ್ ಸ್ಕೀಮ್ಸ್- ಸಿಎಸ್‌ಎಸ್)ಗಳಿಗೆ ಅನುದಾನ ಒದಗಿಸುವ ಮೂಲಕವೂ ಕೇಂದ್ರವು ತಾನು ಸಂಗ್ರಹಿಸಿದ ಸಂಪನ್ಮೂಲಗಳನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತದೆ. ಆದರೆ ಈ ಎರಡೂ ಬಗೆಯ ಯೋಜನೆಗಳನ್ನು ಪಡೆದುಕೊಳ್ಳಲು ಕೇಂದ್ರವು ರಾಜ್ಯಗಳಿಗೆ ಹಲವಾರು ಶರತ್ತುಗಳನ್ನು ಹಾಕುವ ಮೂಲಕ ರಾಜ್ಯಗಳ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುತ್ತಾ ಬಂದಿದೆ. ಹನ್ನೊಂದನೇ ಹಣಕಾಸು ಆಯೋಗವು (2000-05-ವಾಜಪೇಯಿ ನೇತೃತ್ವದ ಎನ್‌ಡಿಎ-1ರ ಅವಧಿ) ಕೇಂದ್ರದ ತೆರಿಗೆಗಳಲ್ಲಿ ರಾಜ್ಯ ಸರಕಾರಗಳ ಪಾಲನ್ನು ಶೇ. 29.5 ಎಂದು ನಿಗದಿ ಮಾಡಿತ್ತು. 13ನೇ ಹಣಕಾಸು ಆಯೋಗವು (2010-15- ಯುಪಿಎ-2 ಅವಧಿ) ಈ ಪಾಲನ್ನು ಶೇ. 32ಕ್ಕೆ ಏರಿಸಿತ್ತು.

ಮೋದಿ ಅವಧಿ -ಮಾತಲ್ಲಿ ಫೆಡರಲ್-ಕೃತಿಯಲ್ಲಿ ಹಿಟ್ಲರ್
 ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ತಮ್ಮದು ಕೋಆಪರೆಟಿವ್ ಫೆಡರಲಿಸಂ ತತ್ವವನ್ನು ಎತ್ತಿ ಹಿಡಿಯುವ, ರಾಜ್ಯಗಳ ಸ್ವಾಯತ್ತತೆಗೆ ಒತ್ತುಕೊಡುವ ಸರಕಾರವೆಂದು ಹೇಳುತ್ತಾ ಒಂದು ಕಡೆ ಯೋಜನಾ ಆಯೋಗವನ್ನು ರದ್ದು ಮಾಡಿತು. ಅದರ ಬದಲಿಗೆ ‘‘ರಾಜ್ಯಗಳ ಸ್ವತಂತ್ರ ಅಭಿವೃದ್ಧಿಯ ಸಮಾಲೋಚನಾ ವೇದಿಕೆ’’ಯಾಗುತ್ತದೆಂಬ ಪೊಳ್ಳು ಭರವಸೆಯೊಂದಿಗೆ ಮೋದಿ ಸರಕಾರ ಸ್ಥಾಪಿಸಿದ ‘ನ್ಯಾಷನಲ್ ಇನ್‌ಸ್ಟಿಟ್ಯೂಶನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ- NITI’ ಆಯೋಗವು, ಮೋದಿ ಸರಕಾರದ ಸರ್ವಾಧಿಕಾರಿ ನೀತಿಗಳಿಗೆ ತಾಂತ್ರಿಕ ಸಹಾಯ ಒದಗಿಸುವ ವೇದಿಕೆಯಾಗಿ ರಾಜ್ಯಗಳ ಅಧಿಕಾರ ಮತ್ತು ಜನರ ಹಕ್ಕುಗಳನ್ನು ಮೊಟಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಮತ್ತೊಂದು ಕಡೆ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು 14ನೇ ಹಣಕಾಸು ಆಯೋಗದ ಮೂಲಕ ಶೇ. 42ಕ್ಕೆ ಏರಿಸಿತು. ಆದರೆ ಇದು ಬಿಜೆಪಿ-ಆರೆಸ್ಸೆಸ್ ಗಳ ಇತರ ನೀತಿಗಳಂತೆ ಹಸಿಹಸಿ ಸುಳ್ಳೆಂಬುದು ಕೇವಲ ಕೆಲವೇ ತಿಂಗಳಲ್ಲಿ ಸಾಬೀತಾಯಿತು. ಮೋದಿ ಸರಕಾರದ ಅಂಕಿಅಂಶಗಳನ್ನೇ ಹಿಂದಿರುಗಿ ಗಮನಿಸುವು ದಾದರೆ, ಮೋದಿ ಸರಕಾರದ ಅವಧಿಯಲ್ಲಿ ರಾಜ್ಯಗಳಿಗೆ ದಕ್ಕಿರುವ ಪಾಲು ಹೀಗಿದೆ: 2014-15ರಲ್ಲಿ- ಶೇ. 27.4, 2015-16ರಲ್ಲಿ ಶೇ. 34.77, 2016-17ರಲ್ಲಿ- ಶೇ. 35.43, 2017-18ರಲ್ಲಿ- ಶೇ. 35.37 ಹಾಗೂ 2018-19ರಲ್ಲಂತೂ ರಾಜ್ಯಗಳಿಗೆ ದಕ್ಕಿರುವ ಪಾಲು ಕೇವಲ ಶೇ. 33.87 ಮಾತ್ರ! ಹೀಗೆ ಮೋದಿ ಸರಕಾರ ರಾಜ್ಯಗಳಿಗೆ ಯಾವೊಂದು ವರ್ಷದಲ್ಲೂ ಶೇ. 42ರಷ್ಟು ಪಾಲನ್ನು ರಾಜ್ಯಗಳಿಗೆ ಕೊಡದಿದ್ದರೂ 2019ರ ಚುನಾವಣೆಯಲ್ಲಿ ಕೋ ಆಪರೇಟಿವ್ ಫೆಡರಲಿಸಂ ಬಗ್ಗೆಯೂ ಪ್ರಚಾರ ಮಾಡಿಕೊಂಡಿತು.

ಅಷ್ಟು ಮಾತ್ರವಲ್ಲ, 2021ನೇ ಸಾಲಿನ ಬಜೆಟ್‌ನಲ್ಲಿ ನಮೂದಿಸಿರುವ 2020-21ನೇ ಸಾಲಿನ ಬಜೆಟ್‌ನ ಪರಿಷ್ಕೃತ ಅಂಕಿಅಂಶಗಳ ಪ್ರಕಾರ ರಾಜ್ಯಗಳ ಪಾಲು ಶೇ. 28.9ಕ್ಕೇ ಇಳಿದಿತ್ತು. 2021-22ನೇ ಸಾಲಿನ ಬಜೆಟ್ ಅಂದಾಜಿನಲ್ಲೇ ರಾಜ್ಯಗಳ ಪಾಲನ್ನು ಕೇವಲ ಶೇ. 30ಕ್ಕೆ ನಿಗದಿಗೊಳಿಸಲಾಗಿದೆ!

ಇದಕ್ಕೆ ಒಂದು ಕಾರಣ ತೆರಿಗೆಯ ಪಾಲನ್ನು ಹೆಚ್ಚಿಸಿದಂತೆ ನಾಟಕವಾಡಿದ ಮೋದಿ ಸರಕಾರ ಮತ್ತೊಂದು ಕಡೆ ಅನುದಾನ ಹಾಗೂ ಶರತ್ತಿನ ಯೋಜನಾ ಪಾಲನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದ್ದು.

ಸೆಸ್-ಸರ್ಚಾರ್ಜ್- ಮೋದಿ ವಂಚನೆಯ ಪ್ರಧಾನ ಸಾಧನ

ಅವೆಲ್ಲಕ್ಕಿಂತ ಮುಖ್ಯವಾಗಿ ಮೋದಿ ಸರಕಾರ ತೆರಿಗೆಯ ಮೇಲಿನ ಸೆಸ್ ಹಾಗೂ ಸರ್ಚಾರ್ಜ್‌ಗಳನ್ನು ಹಿಂದಿನ ಯಾವುದೇ ಸರಕಾರಗಳು ಹೆಚ್ಚಿಸದಷ್ಟು ಮಟ್ಟಿಗೆ ಹೆಚ್ಚಿಸಿತು. ನಿಯಮಗಳ ಪ್ರಕಾರ ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲಿರುತ್ತದೆಯೇ ವಿನಾ ತೆರಿಗೆಯ ಮೇಲಿನ ಸೆಸ್ ಅಥವಾ ಸರ್ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲಿರುವುದಿಲ್ಲ. ಇಂತಹ ಹಗಲು ದರೋಡೆಯನ್ನು ಸಂವಿಧಾನ ಕರ್ತರೂ ಊಹಿಸಿರಲಿಲ್ಲವಾದ್ದರಿಂದ ತೆರಿಗೆ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಸಂವಿಧಾನದಲ್ಲಿರುವ ಆರ್ಟಿಕಲ್ 268, 269 ಮತ್ತು 271ರಲ್ಲಿ ಅದರ ಬಗ್ಗೆ ಯಾವ ನಿರ್ದಿಷ್ಟ ಸೂಚನೆಯೂ ಇರಲಿಲ್ಲ. ಹೀಗಾಗಿ 1965ರಲ್ಲಿ ನಾಲ್ಕನೇ ಹಣಕಾಸು ಆಯೋಗ ರಚನೆಯಾಗುವವರೆಗೆ ಸೆಸ್ ಮತ್ತು ಸರ್ಚಾರ್ಜ್‌ಗಳು ಡಿವಿಸಬಲ್ ಪೂಲ್‌ನ ಭಾಗವೇ ಆಗಿತ್ತು. ಆದರೆ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ಒಂದು ನಿರ್ದಿಷ್ಟ ಕಾಲಾವಧಿಗೆ ಮತ್ತು ಒಂದು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ ವಿಧಿಸುವ ಉದ್ದೇಶ ಹೊಂದಿರುವುದರಿಂದ ಅದನ್ನು ಸಾಮಾನ್ಯ ಹಂಚಿಕೆಯೊಂದಿಗೆ ಬೆರೆಸಿದರೆ ನಿರ್ದಿಷ್ಟ ಉದ್ದೇಶ ಈಡೇರುವುದಿಲ್ಲ ಎಂಬ ನೆಪದಿಂದ 4ನೇ ಹಣಕಾಸು ಆಯೋಗದಿಂದಾಚೆಗೆ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ವಾಜಪೇಯಿ ನೇತೃತ್ವದ ಎನ್‌ಡಿಎ-1 ಸರಕಾರ ಅಧಿಕಾರಕ್ಕೆ ಬಂದಾಗ ಭಾರತ ಸರಕಾರಕ್ಕೆ 80ನೇ ತಿದ್ದುಪಡಿ ಮಾಡಿ ಸಂವಿಧಾನದ ಆರ್ಟಿಕಲ್ 271ಕ್ಕೆ ತಿದ್ದುಪಡಿಯನ್ನು ತಂದು ಸೆಸ್ ಹಾಗೂ ಸರ್ಚಾ ರ್ಜ್‌ಗಳನ್ನು ಡಿವಿಸಬಲ್ ಪೂಲ್‌ನಲ್ಲಿ ಸೇರಿಸಬಾರದೆನ್ನುವ ಶಾಸನವನ್ನೇ ಮಾಡಿಬಿಡಲಾಯಿತು. ಹಾಗಿದ್ದರೂ 13ನೇ ಹಣಕಾಸು ಆಯೋಗವು ಯಾವ ಕಾರಣಕ್ಕೂ ಸೆಸ್‌ನ ಪ್ರಮಾಣ ಹಾಗೂ ಅವಧಿ ಹೆಚ್ಚಾಗಬಾರದೆಂದು ತಾಕೀತು ವಿಧಿಸಿತ್ತು.

15ನೇ ಹಣಕಾಸು ಆಯೋಗ- ಕರ್ನಾಟಕಕ್ಕೆ ಮೋದಿಯ ಮಹಾದ್ರೋಹ

ಆದರೆ ಮೋದಿ ಸರಕಾರ 14ನೇ ಹಣಕಾಸು ಆಯೋಗದ ಅವಧಿಯಲ್ಲೇ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ಹೆಚ್ಚಿಸುವ ಮೂಲಕ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾದ ತೆರಿಗೆ ಪಾಲಿನಲ್ಲಿ ಸರಾಸರಿ ಶೇ. 8ರಷ್ಟನ್ನು ದರೋಡೆ ಮಾಡಿದೆ. 15ನೇ ಹಣಕಾಸು ಆಯೋಗದಲ್ಲಂತೂ ಈ ಹಗಲು ದರೋಡೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಇನ್ನೂ ಐದು ವರ್ಷಗಳ ಕಾಲ ನಡೆಯಲಿದೆ. 15ನೇ ಆಯೋಗದ ಪ್ರಕಾರ ಕೇಂದ್ರ ಸರಕಾರದ ಒಟ್ಟಾರೆ ತೆರಿಗೆ ಸಂಗ್ರಹ 2021-26ರ ಐದು ವರ್ಷದ ಅವಧಿಯಲ್ಲಿ ರೂ. 135.2 ಲಕ್ಷ ಕೋಟಿಯಷ್ಟಾಗಲಿದೆಯೆಂದು ಅಂದಾಜಿಸಲಾಗಿದೆ. ಆಯೋಗವು ರಾಜ್ಯದ ಪಾಲನ್ನು ಶೇ.41 ಎಂದು ನಿಗದಿಗೊಳಿಸಿದೆ. ಆದ್ದರಿಂದ ರಾಜ್ಯಗಳ ಪಾಲು ರೂ. 55 ಲಕ್ಷ ಕೋಟಿಗಳಾಗಬೇಕು. ಅಲ್ಲವೇ? ಆದರೆ ಹಣಕಾಸು ಆಯೋಗವು ಇದರಲ್ಲಿ ಕೇವಲ 103 ಲಕ್ಷ ಕೋಟಿ ರೂಪಾಯಿಗಳನ್ನು ಮಾತ್ರ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕೆಂದು ತಿಳಿಸಿದೆ.

ಏಕೆಂದರೆ ಇನ್ನುಳಿದ 32 ಲಕ್ಷ ಕೋಟಿ ರೂಪಾಯಿಗಳು ಸೆಸ್ ಮತ್ತು ಸರ್ಚಾರ್ಜ್‌ಗಳಿಂದ ಸಂಗ್ರಹಿಸಲಾಗುವುದೆಂದು ಅಂದಾಜಿಸಿದೆ. ಹೀಗಾಗಿ 2021-26ರ ಅವಧಿಯಲ್ಲಿ ರಾಜ್ಯಗಳ ಪಾಲು 103 ಲಕ್ಷ ಕೋಟಿ ರೂಪಾಯಿಗಳ ಶೇ. 41 ರಷ್ಟು 42.2 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಯಲಿದೆ. ಆದರೆ ರಾಜ್ಯಗಳಿಗೆ ಸಲ್ಲಬೇಕಿರುವ 12.8 (55-42.2) ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪನ್ಮೂಲವನ್ನು ಮೋದಿ ಸರಕಾರ ಹಗಲು ದರೋಡೆ ಮಾಡಲಿದೆ. ಇದರ ಜೊತೆಗೆ 15ನೇ ಆಯೋಗವು ರಾಜ್ಯಗಳ ನಡುವಿನ ತೆರಿಗೆಪಾಲು ಹಂಚಿಕೆಗೆ ಹೆಚ್ಚು ಕೆಳಗಿನ ಮಾನದಂಡಗಳನ್ನು ನಿಗದಿಗೊಳಿಸಿದೆ: ಆದಾಯವಿರುವ ರಾಜ್ಯಗಳಿಗೆ ಹೋಲಿಸಿದಲ್ಲಿ ಆಯಾ ರಾಜ್ಯಗಳ ಆದಾಯ ದೂರ (ಇನ್‌ಕಮ್ ಡಿಸ್ಟನ್ಸ್- 45 ಅಂಕ), ಜನಸಂಖ್ಯಾ ಪ್ರಮಾಣ (15), ಜನಸಂಖ್ಯಾ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು (12.5), ತೆರಿಗೆ ಸಂಗ್ರಹದ ಕ್ರಮಗಳು (2.5), ಪರಿಸರ ಕ್ರಮಗಳು ಇತ್ಯಾದಿಗಳು ಹಾಗೂ ಜನಸಂಖ್ಯಾ ಪ್ರಮಾಣಕ್ಕೆ ಮೊತ್ತಮೊದಲ ಬಾರಿಗೆ 1971ರ ಜನಗಣತಿಗೆ ಬದಲಾಗಿ 2011ರ ಜನಗಣತಿಯನ್ನು ಮಾನದಂಡವನ್ನಾಗಿಸಿಕೊಂಡಿದೆ.

ಈ ಎಲ್ಲಾ ಕಾರಣಗಳಿಂದ ಕೇಂದ್ರದ ತೆರಿಗೆಯ ಡಿವಿಸಬಲ್ ಪೂಲ್‌ನಲ್ಲಿ ಕರ್ನಾಟಕದ ಪಾಲು ಶೇ. 4.71ರಿಂದ 3.64ಕ್ಕೆ ಇಳಿದಿದೆ. ಅಂದರೆ, ಶೇ. 1.07ರಷ್ಟು ಕಡಿಮೆಯಾಗಿದೆ. 135 ಲಕ್ಷ ಕೋಟಿ ರೂಪಾಯಿಗಳಲ್ಲಿ ಶೇ. 1.07 ಎಂದರೆ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಸಲ್ಲಬೇಕಿರುವ 1.5 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ದರೋಡೆ ಮಾಡಿದೆ. ಅಂದರೆ ಪ್ರತಿ ವರ್ಷ ಕರ್ನಾಟಕಕ್ಕೆ ಸಲ್ಲಬೇಕಾದ 30,000 ಕೋಟಿ ರೂಪಾಯಿಗಳನ್ನು ಮೋದಿ ಸರಕಾರ ಕರ್ನಾಟಕದಿಂದ ಕಿತ್ತುಕೊಳ್ಳುತ್ತಿದೆ. ರೂ. 30,000 ಕೋಟಿ ಎಂದರೆ ನಮ್ಮ ರಾಜ್ಯದ ಬಜೆಟ್‌ನ ಶೇ.15-20ರಷ್ಟು. ಯಡಿಯೂರಪ್ಪನವರ ಸರಕಾರ ಈ ಕೊರತೆಯನ್ನು ಮೋದಿ ಭಕ್ತರಿಂದ ಮಾತ್ರ ವಸೂಲಿ ಮಾಡುವುದಿಲ್ಲ. ಅಲ್ಲವೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)