ದಶಕದಿಂದ ಹೋರಾಡಿದರೂ ಬಡವರಿಗೆ ಸಿಗದ ಸರಕಾರಿ ನಿವೇಶನ !
ಬೆಂಗಳೂರು, ಮಾ.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಕುಟುಂಬಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 1,110 ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಮೀಸಲಿಟ್ಟ ಜಮೀನಿನಲ್ಲಿ ‘ಮುಖ್ಯಮಂತ್ರಿ ವಸತಿ ಯೋಜನೆ' ಅನುಷ್ಠಾನದ ನೆಪದಲ್ಲಿ ‘ಪರಿಶಿಷ್ಟರಿಗೆ ಸೂರು ನೀಡಲು ಮೀಸಲಿಟ್ಟ ನಿವೇಶನವನ್ನು ಕಸಿದುಕೊಳ್ಳಲು ಕೆಲವರು ಸಂಚು ರೂಪಿಸಿದ್ದಾರೆ' ಎಂಬ ಆರೋಪ ಕೇಳಿಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ನಿವೇಶನ ರಹಿತ ಎಸ್ಸಿ-ಎಸ್ಟಿ ವರ್ಗದವರಿಗೆ ವಸತಿ ಕಲ್ಪಿಸಲು 2007ರಲ್ಲಿ ಪ್ರಕ್ರಿಯೆ ಆರಂಭಿಸಿದ್ದು, ದೀರ್ಘ ಹೋರಾಟದ ಬಳಿಕ 2013ರಲ್ಲಿ 1,110 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಿವೇಶನ ಹಂಚಿಕೆಗೆ ಭೂಮಿ ಲಭ್ಯವಿಲ್ಲ ಎಂಬ ನೆಪದಲ್ಲಿ ವಿಳಂಬ ಮಾಡಲಾಗಿದೆ. ಆ ಬಳಿಕ 2015ರಲ್ಲಿ ಶ್ರೀನಿವಾಸ ಪ್ರಸಾದ್ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಸತಿ ಕಲ್ಪಿಸಲು ಸಂಪುಟ ಒಪ್ಪಿಗೆ ನೀಡಲಾಗಿದೆ.
ಆ ಬಳಿಕ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಸರಕಾರಿ ಗೋಮಾಳ ಸ.ನಂ.24ರಲ್ಲಿ 18 ಎಕರೆ ಹಾಗೂ ಸ.ನಂ.3 ಎಕರೆ, ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಅಗರ ಗ್ರಾಮದ ಸ.ನಂ.28ರಲ್ಲಿ 7 ಎಕರೆ ಸೇರಿದಂತೆ ಒಟ್ಟು 29.5 ಎಕರೆ ಜಮೀನನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಆದರೆ, ಈಗಾಗಲೇ 1,110 ಮಂದಿ ಪೌರಕಾರ್ಮಿಕರು ಸೇರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿದ್ದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 20x30 ಅಳತೆಯ ನಿವೇಶನ ಹಂಚಿಕೆಗೆ ಆದೇಶ ಮಾಡಬೇಕಿತ್ತು.
ಆದರೆ, ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ಕೆಲ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ದಶಕಗಳಿಂದ ನಗರದ ವಿವಿಧೆಡೆಗಳಲ್ಲಿ ವಾಸ ಮಾಡುತ್ತಿರುವ ಪೌರ ಕಾರ್ಮಿಕರು, ಬಡಕೂಲಿ ಕಾರ್ಮಿಕರು, ನಿವೇಶನ ರಹಿತ ನಿರ್ಗತಿಕರು ಬೀದಿಯಲ್ಲೇ ಬದುಕು ದೂಡಬೇಕಾದ ದುಸ್ಥಿತಿ ಎದುರಾಗಿದೆ. ಈ ಮಧ್ಯೆ ಕೆಲ ಜನಪ್ರತಿನಿಧಿಗಳು ಬಡವರಿಗೆ ನಿವೇಶನ ಹಂಚಿಕೆಗೆ ಅಡ್ಡಿಯಾಗಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ವಸತಿ ಸಚಿವರ ತಕರಾರು: ‘ಬಡವರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕಾದ ವಸತಿ ಸಚಿವರು ಹಾಗೂ ಯಲಹಂಕ ಕ್ಷೇತ್ರದ ಶಾಸಕರೇ, ‘ಫಲಾನುಭವಿಗಳನ್ನು ಅಧಿಕಾರಿಗಳೇ ಆಯ್ಕೆ ಮಾಡಿದ್ದಾರೆ. ಹೀಗಾಗಿ ಆಯ್ಕೆ ಪಟ್ಟಿ ಪುನರ್ ಪರಿಶೀಲಿಸಬೇಕು' ಎಂಬ ತಕರಾರು ತೆಗೆದಿದ್ದಾರೆ. ಅಲ್ಲದೆ, 1,110 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡುವ ಬದಲಿಗೆ ಸಿಎಂ ಬಹುಮಹಡಿ ವಸತಿ ಯೋಜನೆಗೆ ಭೂಮಿ ಬಳಕೆ ಮಾಡಿಕೊಳ್ಳಬೇಕೆಂಬ ಪ್ರಸ್ತಾವ ಮುಂದಿಟ್ಟಿದೆ.
ಹೀಗಾಗಿ ಬಡವರಿಗೆ ಸೂರು ಕಲ್ಪಿಸುವ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸರಕಾರಗಳ ವಿಳಂಬ ಧೋರಣೆಯಿಂದ ಸುಮಾರು ಹತ್ತು ವರ್ಷಗಳಿಂದ ಹೋರಾಟ ನಡೆಸಿದರೂ ಬಡ ಕೂಲಿ ಕಾರ್ಮಿಕರಿಗೆ ಸೂರು ಕಟ್ಟಿಕೊಳ್ಳಲು ನಿವೇಶನ ಇನ್ನೂ ಸರಕಾರಿ ಕಡತ, ಕಾಗದಗಳಲ್ಲೇ ಉಳಿದಿದೆ.
ಸತ್ತ ಮೇಲೆ ಸಿಗಬಹುದೇ ಸೂರು: ಸೂರು ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಪೌರಕಾಮಿರ್ಕರು ಸೇರಿದಂತೆ ಪರಿಶಿಷ್ಟರ ಪರವಾಗಿ ದಶಕಗಳಿಂದ ಬಿಬಿಎಂಪಿ ಸೇರಿದಂತೆ ಕಚೇರಿಯಿಂದ ಕಚೇರಿಗೆ ಕಡತಗಳನ್ನು ಹಿಡಿದು ಅಲೆಯುತ್ತಿರುವ ‘ಬಹುಜನ ವಿಮೋಚನ ಚಳವಳಿ'ಯ ಸಂಚಾಲಕ ಎಸ್ ಗಂಗಾಧರ್, ‘ನಾವು ಸತ್ತ ಮೇಲೆ ನಮಗೆ ಸೂರು ಸಿಗಬಹುದೇನೋ?' ಎಂದು ಪ್ರಶ್ನಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಎಸ್ಸಿ-ಎಸ್ಟಿ ವರ್ಗದ ಜನರು ಸ್ವತಂ ಸೂರಿನ ಕನಸು ನನಸಾಗುವ ಹೊತ್ತಿನಲ್ಲೆ ಸಿಎಂ, ಸಚಿವರು ಹಾಗೂ ಶಾಸಕರು ಅಡ್ಡಿಯಾಗುತ್ತಿದ್ದಾರೆ. ಇಚ್ಛಾಶಕ್ತಿ ಪ್ರದರ್ಶಿಸಿ ಬಡವರಿಗೆ ಮೀಸಲಿಟ್ಟ ಭೂಮಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದರೆ ಬಡ ಕಾರ್ಮಿಕರು ಬೀದಿಗೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಗಂಗಾಧರ್ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
‘ಬಡವರಿಗೆ ನಿವೇಶನ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ, ರಾಜೀವ್ ಗಾಂಧಿ ವಸತಿ ನಿಗಮದ 1ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಮೇಲ್ಕಂಡ ಜಮೀನನ್ನು ಆರ್ಜಿಎಚ್ಸಿಎಲ್ಗೆ ವರ್ಗಾಯಿಸಿ, ಗುಂಪು ವಸತಿಯಡಿ 2500 ಫಲಾನುಭವಿಗಳಿಗೆ ಸಿದ್ಧ ವಸತಿ ಕಲ್ಪಿಸಲು ಹಾಗೂ ಸದರಿ ಯೋಜನೆ ಮಾರ್ಗಸೂಚಿ ಅನುಸಾರ ಫಲಾಭವಿಗಳಿಗೆ ಹಂಚಿಕೆ ಮಾಡಲು ನಗರಾಭಿವೃದ್ಧಿ ಇಲಾಖೆಗೆ ನಿರ್ದೇಶಿಸಲಾಗಿದೆ'
ನಮ್ಮ ನಿವೇಶನ ನಮಗೆ ಕೊಡಿ: ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಪೌರ ಕಾರ್ಮಿಕರು ಸೇರಿದಂತೆ ಬಡವರಿಗೆ ಮೀಸಲಿಟ್ಟ ಭೂಮಿಯಲ್ಲಿ ಕೂಡಲೇ 1,110 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ, ಹಕ್ಕುಪತ್ರ ನೀಡಬೇಕು. ಅಲ್ಲದೆ, ಬಡವರು ಮನೆ ಕಟ್ಟಿಕೊಳ್ಳಲು ಸೂಕ್ತ ನೆರವು ನೀಡಬೇಕು. ಆ ಮೂಲಕ ನಿರ್ಗತಿಕರಿಗೆ ಸೂರು ಒದಗಿಸಲು ಸರಕಾರ ಮುಂದಾಗಬೇಕು'
-ಎಸ್.ಗಂಗಾಧರ್, ಸಂಚಾಲಕ ಬಹುಜನ ವಿಮೋಚನ ಚಳವಳಿ