‘ಹೀರೋ: ಇಲ್ಲಿ ಮೇಕಿಂಗ್ ಶೈಲಿಯೊಂದೇ ‘ಹೀರೋ’!
ಹೀರೋ ಜೊತೆಗೆ ಪ್ರೀತಿಯಲ್ಲಿದ್ದ ಹುಡುಗಿ ಇಂದು ಖಳನಾಯಕನ ಪತ್ನಿ. ಎಲ್ಲವೂ ಮುಗಿಯಿತು ಎನ್ನುವಲ್ಲಿಂದ ಆರಂಭವಾಗುವ ಕತೆ. ಆದರೆ ಮುಂದೆ ಅದೇ ನಾಯಕ, ನಾಯಕಿಯೇ ಚಿತ್ರದ ತುಂಬ ತುಂಬಿಕೊಳ್ಳುತ್ತಾರೆ.
ಚಿತ್ರದ ಕತೆಯ ಬಗ್ಗೆ ಹೇಳುವುದಾದರೆ ಹೇಳಿಕೊಳ್ಳುವ ಕತೆಯೇ ಇಲ್ಲ. ಇರುವ ಒಂದು ಎಳೆಯನ್ನು ವಿವರಿಸುವ ಅಗತ್ಯವಿಲ್ಲ. ಬಹುಶಃ ಅದೇ ಕಾರಣಕ್ಕಾಗಿಯೇ ಇರಬೇಕು, ನಿರ್ದೇಶಕರದ್ದು ಟ್ರೇಲರ್ ಮೂಲಕ ಮಿಸ್‌ಗೈಡ್ ಮಾಡುವ ಪ್ರಯತ್ನ. ಆದರೆ ಸಿನೆಮಾದ ಆರಂಭದಲ್ಲೇ ಸತ್ಯ ಏನೆಂದು ತಿಳಿಸುತ್ತಾರೆ. ಹಾಗಾಗಿ ಕುತೂಹಲವನ್ನೆಲ್ಲ ಅಳಿಸುತ್ತಾರೆ!
ಖಳನಾಯಕನಾಗಿ ಪ್ರಮೋದ್ ಶೆಟ್ಟಿ ಅವರು ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಏನೂ ಕಾಣಿಸುವುದಿಲ್ಲ. ’ಒಂದು ಶಿಕಾರಿಯ ಕತೆ’ ಚಿತ್ರದಲ್ಲಿದ್ದ ಕೋವಿ, ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿದ್ದಂತೆ ನಿಧಾನದ ಮಾತು, ಹೀಗೆ ಎಲ್ಲವೂ ನೋಡಿರುವಂಥ ಭಾವ. ಆದರೆ ಆ ಮನೆಗೆ ಹೀರೋ ಪ್ರವೇಶಿಸುವುದರೊಂದಿಗೆ ಬದಲಾವಣೆಗೆ ಜೀವ. ನಿರ್ದೇಶಕರದ್ದು ಒಟ್ಟು ಚಿತ್ರದಲ್ಲಿ ಜೀವಂತಿಕೆ ತುಂಬುವ ಪ್ರಯತ್ನ. ಹಾಗಾಗಿ ಒಂದೆಡೆ ಜೀವಗಳೇ ಹೋಗುತ್ತಿದ್ದರೂ, ಮತ್ತೊಂದೆಡೆ ಅವುಗಳ ಪರಿಣಾಮವೇ ಇರದಂತಹ ಪಾತ್ರಗಳ ಹಾವಭಾವ. ಅದರಲ್ಲಿ ನವ ನಟ ಪ್ರದೀಪ್ ಶೆಟ್ಟಿಯವರ ಅಭಿನಯವಂತೂ ಉಲ್ಲೇಖಾರ್ಹ.
ಮಧ್ಯಂತರದ ಬಳಿಕ ಚಿತ್ರದಲ್ಲಿ ಇರುವುದೆಲ್ಲ ಚೇಸಿಂಗ್ ಮಾತ್ರ. ಆದರೆ ಓಟದಲ್ಲಿರುವ ವೇಗ ಕತೆಯಲ್ಲಿ ಇಲ್ಲ. ಹಾಗಾಗಿಯೇ ಬೇರೇನೋ ನಿರೀಕ್ಷೆ ಮಾಡಿ ಕುಳಿತವರಿಗೆ ಹೀರೋ ಬೋರ್ ಹೊಡೆಸಿದರೆ ಅಚ್ಚರಿ ಇಲ್ಲ. ಆದರೆ ಸಾಮಾನ್ಯವಾಗಿ ರಿಷಬ್ ಚಿತ್ರಗಳ ಬಗ್ಗೆ ಒಂದು ಕಲ್ಪನೆ ಇರುವವರಿಗೆ ಆ ಕ್ವಾಲಿಟಿಗೆ ಮೋಸ ಬರದಂತೆ ಸಿನೆಮಾ ನೀಡುವಲ್ಲಿ ನವ ನಿರ್ದೇಶಕ ಭರತ್ ಅವರು ಗೆದ್ದಿದ್ದಾರೆ. ನಾಯಕಿಯಾಗಿ ಗಾನವಿ ತಮ್ಮ ಕಿರುತೆರೆಯ ಇಮೇಜ್ ಬಿಟ್ಟು ನಟಿಸಿದ್ದಾರೆ. ಹಾಗಂತ ಅವರಿಗೂ ಅಭಿನಯಕ್ಕೆ ದೊಡ್ಡ ಅವಕಾಶಗಳೇನೂ ಇಲ್ಲ. ಇರುವ ಸಾಧ್ಯತೆಗಳನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಈ ಮಾತು ಪೂರ್ತಿ ಚಿತ್ರಕ್ಕೂ ಅನ್ವಯವಾಗುತ್ತದೆ. ಯಾಕೆಂದರೆ ಲಾಕ್‌ಡೌನ್ ಇದ್ದಂತಹ ಸಂದರ್ಭದಲ್ಲಿ ಸೀಮಿತ ಲೊಕೇಶನ್, ಬಜೆಟ್ ಮತ್ತು ಪಾತ್ರಗಳನ್ನು ಇರಿಸಿಕೊಂಡು ಈ ಮಟ್ಟದಲ್ಲಿ ಆಕರ್ಷಕವೆನಿಸುವ ಮೇಕಿಂಗ್ ನೀಡಿರುವುದಕ್ಕಾಗಿ ಪ್ರಶಂಸಿಸಲೇಬೇಕು. ಅದೇ ಸಂದರ್ಭದಲ್ಲಿ ಹಿನ್ನೆಲೆಯ ಬಗ್ಗೆ ಗೊತ್ತಿಲ್ಲದ ಚಿತ್ರ ನೋಡುವವರಿಗೆ ಮೇಕಿಂಗ್ ಬಿಟ್ಟರೆ ಇಲ್ಲಿ ಬೇರೇನೂ ಇಲ್ಲವಲ್ಲ ಎನಿಸುವ ಸಾಧ್ಯತೆಯೇ ಹೆಚ್ಚು. ಕಲಾವಿದರ ವಿಚಾರಕ್ಕೆ ಬಂದರೆ ಉಗ್ರಂ ಮಂಜು ನಟನೆಯೂ ಉಲ್ಲೇಖಾರ್ಹ. ಆದರೆ ಘಟನೆಗೆ ಸಂಬಂಧವೇ ಇರದಂತೆ ವರ್ತಿಸುವ ಅಡುಗೆ ಭಟ್ಟನ ಪಾತ್ರ ಮತ್ತು ಹೊಡೆದಾಟದ ನಡುವೆ ಕುಡಿತದಲ್ಲಿ ಧೈರ್ಯ ತಂದುಕೊಂಡ ಹೀರೋ ವರ್ತನೆ ಅತಿರೇಕ ಅನಿಸದಿರದು. ಹಾಗಂತ ರಕ್ತದ ಹರಿದಾಟಗಳ ನಡುವೆ ತುಸು ತಮಾಷೆಯಾಗಿ ನೆನಪಿಸುವುದಾದರೆ ಅವೆರಡೇ ವಿಚಾರಗಳು ಮಾತ್ರ ಇವೆ ಎನ್ನುವುದು ಕೂಡ ಅಷ್ಟೇ ಸತ್ಯ. ಅದೇ ರೀತಿ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರದ ಆಕರ್ಷಕ ಅಂಶ.
ಇದೊಂದು ವಯಸ್ಕರ ಪ್ರಮಾಣ ಪತ್ರ ಪಡೆದುಕೊಂಡಿರುವ ಸಿನೆಮಾ. ಹಾಗಾಗಿಯೇ ಮಕ್ಕಳೊಂದಿಗೆ ನೋಡುವುದು ಕಷ್ಟ. ಕಾರಣ ಹೊಡೆದಾಟ ಮತ್ತು ರಕ್ತದ ಚೆಲ್ಲಾಟ ಎಂದು ವಿವರಿಸಬೇಕಿಲ್ಲ. ಆದರೆ ಅಂತಹ ಸನ್ನಿವೇಶಗಳನ್ನು ಕೂಡ ಆದಷ್ಟು ಕಲಾತ್ಮಕವಾಗಿಯೇ ಮೂಡಿಸಿರುವ ಛಾಯಾಗ್ರಾಹಕರ ಕೈ ಚಳಕ ಅದ್ಭುತ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅಭಿಮಾನಿಗಳನ್ನು ನಿರಾಶೆಗೊಳಿಸದ ಸಿನೆಮಾ ‘ಹೀರೋ’ ಎನ್ನಬಹುದು.
ತಾರಾಗಣ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್
ನಿರ್ದೇಶನ: ಭರತ್ ರಾಜ್ ನಿರ್ಮಾಣ: ರಿಷಬ್ ಶೆಟ್ಟಿ