ಕುವೈತ್ 'ಕೆಕೆಎಂಎ' ಸ್ಥಾಪಕಾಧ್ಯಕ್ಷ ಸಗೀರ್ ತ್ರಿಕರಿಪ್ಪುರ ನಿಧನಕ್ಕೆ ಕಂಬನಿ ಮಿಡಿದ ಕೇರಳ, ಕನ್ನಡಿಗರು
ಅನಿವಾಸಿಗಳ ಪಾಲಿನ ಆಶಾಕಿರಣವಾಗಿದ್ದ ಅನನ್ಯ ಸಮಾಜ ಸೇವಕ
ಮಂಗಳೂರು, ಮಾ.8: ‘ಸಗೀರ್ ತ್ರಿಕರಿಪ್ಪುರ’ ಎಂಬ ಈ ಹೆಸರನ್ನು ಕೇಳದ ಅನಿವಾಸಿ ಕೇರಳ, ಕನ್ನಡಿಗರು ಇಲ್ಲ ಎನ್ನಬಹುದು. ಅದರಲ್ಲೂ ಕುವೈತ್‌ನಲ್ಲಿರುವ ಕೇರಳ-ಕನ್ನಡಿಗರ ಪಾಲಿಗೆ ಸಗೀರ್ ಆಶಾಕಿರಣವಾಗಿದ್ದರು. ಸಗೀರ್ ಅವರು ಮಾ. 7ರಂದು ಮಧ್ಯಾಹ್ನ ಕುವೈತ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೊರೋನ ಸೋಂಕಿಗೆ 62ರ ಹರೆಯದ ಸಗೀರ್ ಬಲಿಯಾಗಿದ್ದರೆ ಅವರ ಪತ್ನಿ ಸೌದತ್ ಕೂಡ ಎರಡು ವಾರಗಳ ಹಿಂದೆ ಕುವೈತ್‌ನಲ್ಲೇ ಕೋವಿಡ್ -19ಗೆ ಬಲಿಯಾಗಿದ್ದರು. ಸಮಾಜ ಸೇವೆಗಾಗಿ ಬದುಕನ್ನು ಮುಡಿಪಾಗಿಟ್ಟ ಸಗೀರ್ ಮತ್ತವರ ಪತ್ನಿ ಸೌದತ್‌ರ ಅಗಲಿಕೆಗೆ ಲಕ್ಷಾಂತರ ಅನಿವಾಸಿ ಕೇರಳ-ಕನ್ನಡಿಗರು ಕಂಬನಿ ಮಿಡಿದಿದ್ದಾರೆ.
ಕೇರಳದ ತ್ರಿಕರಿಪ್ಪುರ ಎಂಬಲ್ಲಿ ಆಸಿಯಾ ಮತ್ತು ಮಮ್ಮು ದಂಪತಿಯ ಪುತ್ರನಾಗಿ ಹುಟ್ಟಿದ ಕೆ.ಕೆ.ಕುಂಞಬ್ದುಲ್ಲಾರಿಗೆ ಬಾಲ್ಯದಲ್ಲೇ ಬಡತನದ ಅರಿವಾಗಿತ್ತು. ಸುಮಾರು 30 ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಕುವೈತ್‌ಗೆ ತೆರಳಿದ್ದ ಕುಂಞಬ್ದುಲ್ಲಾ ಮುಂದೊಂದು ದಿನ ‘ಸಗೀರ್ ತ್ರಿಕರಿಪ್ಪುರ’ ಎಂಬ ಹೆಸರಿನಲ್ಲಿ ಮನೆಮಾತು ಆದಾರು ಎಂದು ಯಾರೂ ಊಹಿಸಿರಲಿಲ್ಲ.
ಯಾಕೆಂದರೆ ಕುಂಞಬ್ದುಲ್ಲಾ ಕುವೈತ್‌ಗೆ ಕಾಲಿಟ್ಟಾಗ ಪರಿಸ್ಥಿತಿ ಹಾಗಿತ್ತು. ಸಾಮಾನ್ಯ ಕೆಲಸ ಮಾಡುತ್ತಲೇ ಬೆಳೆದ ಕುಂಞಬ್ದುಲ್ಲಾ ಪ್ರಖ್ಯಾತ ಕಂಪೆನಿಯೊಂದರಲ್ಲಿ ಪ್ರಧಾನ ಸಲಹೆಗಾರನ ಹುದ್ದೆ ಏರಿದರು. ಈ ಹುದ್ದೆ ಏರಿದರೂ ಕೂಡ ಅವರು ತಾನು ಸವೆಸಿದ ದಾರಿಯನ್ನು ಮರೆತಿರಲಿಲ್ಲ. ತನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಲೇ ಇದ್ದರು. ಅಷ್ಟೇ ಅಲ್ಲ, ಕುವೈತ್‌ನಲ್ಲಿ ತಳಮಟ್ಟದ ಕೆಲಸ ಮಾಡುವವರ ಕಷ್ಟವನ್ನು ಚೆನ್ನಾಗಿ ಅರಿತಿದ್ದರು. ಹಾಗಾಗಿ ಅವರನ್ನು ಸಂಘಟಿಸಬೇಕು ಎಂಬ ಸಂಕಲ್ಪದೊಂದಿಗೆ 2002ರಲ್ಲಿ ‘ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್’ ಎಂಬ ಸಂಸ್ಥೆಯನ್ನು ಸಮಾನ ಮನಸ್ಕ 7 ಮಂದಿಯ ಜೊತೆಗೂಡಿ ಕಟ್ಟಿದರು. ಅಷ್ಟೇ ಅಲ್ಲ ಅದರ ಸ್ಥಾಪಕಾಧ್ಯಕ್ಷರೂ ಆದರು.
ಚಾಲಕರು, ಕೂಲಿ ಕಾರ್ಮಿಕರು, ಮನೆಕೆಲಸ ಮಾಡುವವರು, ಅಡೆಂಡರ್... ಹೀಗೆ ತಳಮಟ್ಟದಲ್ಲಿ ಕೆಲಸ ಮಾಡುವವರ ಶ್ರೇಯಾಭಿವೃದ್ಧಿಗಾಗಿ ‘ಕೆಕೆಎಂಎ’ ಕಟ್ಟಿ ಬೆಳೆಸಿದರು. ಸೇವಾ ಚಟುವಟಿಕೆಗಳ ಮೂಲಕ ಮನೆಮಾತಾದರು. ‘ಕೆಕೆಎಂಎ’ಯ ಪ್ರಸಿದ್ಧಿಯೊಂದಿಗೆ ಕುಂಞಬ್ದುಲ್ಲಾ ಪ್ರಸಿದ್ಧಿ ಪಡೆದರು. ಅದು ‘ಸಗೀರ್ ತ್ರಿಕರಿಪ್ಪುರ’ ಎಂಬ ಹೆಸರಿನ ಮೂಲಕ !
ಕುವೈಟ್‌ನಲ್ಲಿ ಸಗೀರ್ ತ್ರಿಕರಿಪ್ಪುರ ಅಂದರೆ ಸಮಾಜ ಸೇವೆ, ಸಮಾಜ ಸೇವೆ ಅಂದರೆ ಸಗೀರ್ ತ್ರಿಕರಿಪ್ಪುರ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಕೇರಳಕ್ಕೆ ಮಾತ್ರ ಸೀಮಿತವಾಗಿದ್ದ ‘ಕೆಕೆಎಂಎ’ ಕರ್ನಾಟಕದ ಅನಿವಾಸಿಗರನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಹಾಗಾಗಿ ಕೇರಳ-ಕರ್ನಾಟಕದ ಅನಿವಾಸಿಗರ ಪಾಲಿಗೆ ಸಗೀರ್ ತ್ರಿಕರಿಪ್ಪುರ ಆಶಾಕಿರಣವಾದರು.
ಮಂಗಳೂರು ಮತ್ತು ಕೇರಳದ ಆಸ್ಪತ್ರೆಗಳಿಗೆ ಡಯಾಲಿಸಿಸ್ ಯಂತ್ರಗಳ ಕೊಡುಗೆ, ಹೃದಯ ಚಿಕಿತ್ಸಾಲಯ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ನಿರ್ಮಾಣ, ನೀರಿನ ಸೌಕರ್ಯ ಇತ್ಯಾದಿ. ಅಂದಹಾಗೆ, ಈ ‘ಕೆಕೆಎಂಎ’ ಸಂಘಟನೆಯಲ್ಲಿ 18 ಸಾವಿರ ಮಂದಿ ಸದಸ್ಯರಿದ್ದಾರೆ. ಸದಸ್ಯರ ಪೈಕಿ ಶೇ.90 ಮಂದಿ ಆರ್ಥಿಕವಾಗಿ ತೀರಾ ಹಿಂದುಳಿದವರು ಎನ್ನುವುದು ಗಮನಾರ್ಹ.
ಸಂಘಟನೆಯ ಸದಸ್ಯರು ನಿಧನರಾದಾಗ ಅವರ ಕುಟುಂಬಕ್ಕೆ ಧನ ಸಹಾಯ ಕಲ್ಪಿಸುವ ಯೋಜನೆಯನ್ನೂ ಸಗೀರ್ ತ್ರಿಕರಿಪ್ಪುರ ಹಮ್ಮಿಕೊಂಡಿದ್ದರು. ಈ ಯೋಜನೆ ಯಶಸ್ವಿಯಾಗುತ್ತಲೇ ಕೆಕೆಎಂಎ ಮಾತ್ರವಲ್ಲ ಸಗೀರ್ ತ್ರಿಕರಿಪ್ಪುರ ಕೂಡ ಮನೆ ಮಾತಾದರು. ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದರು.
ಬಡತನದಲ್ಲಿ ಹುಟ್ಟಿ ಬೆಳೆದು, ಉದ್ಯೋಗ ಅರಸಿಕೊಂಡು ಕುವೈತ್‌ಗೆ ತೆರಳಿ, ಅಲ್ಲೇ 30 ವರ್ಷಗಳ ಕಾಲ ನೆಲೆಸಿ ಇಬ್ಬರು ಪುತ್ರಿಯರಾದ ಸೌದ್ ಅಬ್ದುಲ್ಲಾ ಮತ್ತು ಸಮಾ ಅಬ್ದುಲ್ಲಾ ಅವರಿಗೆ ಉತ್ತಮ ಶಿಕ್ಷಣ ನೀಡಿದರು. ಆ ಪೈಕಿ ಸೌದ್ ವೈದ್ಯೆಯಾಗಿ ಕೇರಳದಲ್ಲೇ ಜನಸೇವೆಯಲ್ಲಿ ತೊಡಗಿಸಿಕೊಂಡರೆ ಸಮಾ ಇಂಜಿನಿಯರ್ ಆಗಿ ಕತರ್‌ನಲ್ಲಿ ನೆಲೆಸಿದ್ದಾರೆ.
ಸಗೀರ್ ತ್ರಿಕರಿಪ್ಪುರ ಅವರ ಸೇವೆಯನ್ನು ಗುರುತಿಸಿ ಕೇರಳ ಸರಕಾರವು 2011ರಲ್ಲಿ ಘರ್ಶೋಮ್ ಪ್ರವಾಸಿ ಪ್ರಶಸ್ತಿ ಮತ್ತು 2012ರಲ್ಲಿ ಪ್ರವಾಸಿ ಭಾರತಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು. ಇದಲ್ಲದೆ ಇನ್ನೂ ಅನೇಕ ಪ್ರಶಸ್ತಿಗೆ ಸಗೀರ್ ತ್ರಿಕರಿಪ್ಪುರ ಭಾಜನರಾಗಿದ್ದಾರೆ.
ಕೇರಳದ ತ್ರಿಕರಿಪ್ಪುರ ಎಂಬ ಹಳ್ಳಿಯಲ್ಲಿ ಹುಟ್ಟಿದ ಸಗೀರ್ ಕುವೈತನ್ನು ತನ್ನ ಕರ್ಮಭೂಮಿಯನ್ನಾಗಿಸಿದ್ದರು. ಆದಾಗ್ಯೂ ಕೇರಳದ ಪಡ್ನೆ ಎಂಬಲ್ಲೂ ಮನೆ ಮಾಡಿಕೊಂಡಿದ್ದರು.
ಕುವೈತ್‌ನ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಮತ್ತು ಕೆಕೆಎಂಎ ಕರ್ನಾಟಕ ರಾಜ್ಯಾಧ್ಯಕ್ಷ ಫಾರೂಕ್ ಎಸ್‌ಎಂ ಸಹಿತ ಕೆಎಂಸಿಸಿ ಕುವೈತ್, ಐಸಿಎಫ್ ಕುವೈಟ್, ಎಂಇಎಸ್ ಕುವೈತ್, ರಿಸಾಲಾ ಸ್ಟಡಿ ಸರ್ಕಲ್, ಜನತಾ ಕಲ್ಚರಲ್ ಸೆಂಟರ್‌ನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.