varthabharthi


ಕಾಲಂ 9

‘ಒಂದು ದೇಶ-ಒಂದು ಚುನಾವಣೆ’: ಸಾಂವಿಧಾನಿಕ ಸರ್ವಾಧಿಕಾರಕ್ಕೆ ಚಿತಾವಣೆ

ವಾರ್ತಾ ಭಾರತಿ : 10 Mar, 2021
ಶಿವಸುಂದರ್

ಆರೆಸ್ಸೆಸ್-ಬಿಜೆಪಿ ಮತ್ತು ಮೋದಿ ಸರಕಾರ ಈ ವ್ಯವಸ್ಥೆಯನ್ನು 2019ರ ಚುನಾವಣೆಯಲ್ಲೇ ಜಾರಿಗೆ ತರಬೇಕೆಂದಿದ್ದವು. ಆದರೆ ಅವು ಜಾರಿಯಾಗಬೇಕೆಂದರೆ ಸಂವಿಧಾನದ 83, 172ನೇ ವಿಧಿಗಳಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನೂ ತರಬೇಕಾಗುತ್ತದೆ. ಆದರೆ ಇದು ಭಾರತದ ಸಂವಿಧಾನದ ಮೂಲರಚನೆಯಾಗಿರುವ ಫೆಡರಲ್ ವ್ಯವಸ್ಥೆಯನ್ನೂ ಬದಲಿಸುತ್ತದೆ. ಸಂಸತ್ತಿಗೆ ಸಂವಿಧಾನದ ಮೂಲರಚನೆಯನ್ನು ಬದಲಿಸುವ ಅವಕಾಶವಿಲ್ಲ. ಹೀಗಾಗಿ 2019ರಲ್ಲಿ ಅದು ಸಾಧ್ಯವಾಗಲಿಲ್ಲ.
ಈಗ 2024ಕ್ಕಾದರೂ ‘ಒಂದು ದೇಶ ಒಂದು ಚುನಾವಣೆ’ ಯೆಂಬ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿ ಮಾಡಲು ಆರೆಸ್ಸೆಸ್-ಬಿಜೆಪಿ-ಕಾರ್ಪೊರೇಟ್ ಕೂಟವು 2019ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಒಂದು ತಿಂಗಳಿಂದಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ.


ಕರ್ನಾಟಕದ ವಿಧಾನಸಭೆಯಲ್ಲಿ ಮೊನ್ನೆ ‘ಒಂದು ದೇಶ-ಒಂದು ಚುನಾವಣೆ’ಯ ಬಗ್ಗೆ ಸ್ಪೀಕರ್ ಸ್ಮಗಲ್ ಮಾಡಿದ್ದ ವಿಷಯ ಚರ್ಚೆ ಆಗಲಿಲ್ಲ. ಆದರೆ ಸದನದ ಹೊರಗೆ ಹಾಗೂ ದೇಶಾದ್ಯಂತ ಈ ಬಗ್ಗೆ ಆರೆಸ್ಸೆಸ್-ಬಿಜೆಪಿ ಕೂಟ ವಿಸ್ತೃತ ಜನಾಭಿಪ್ರಾಯ ರೂಪಿಸುತ್ತಿದೆ.

ಒಂದು ದೇಶ- ಒಂದೇ ಪಕ್ಷ- ಒಂದೇ ಧರ್ಮ- ಒಂದೇ ನಾಯಕ ಎಂಬ ಆರೆಸ್ಸೆಸ್‌ನ ಸಂವಿಧಾನ ವಿರೋಧಿ ಯೋಜನೆಗೆ ‘ಒಂದು ದೇಶ-ಒಂದು ಚುನಾವಣೆ’ ಎಂಬುದು ಮೊದಲನೇ ಮೈಲಿಗಲ್ಲಾಗಿದೆ. ಆದ್ದರಿಂದಲೇ ಮೋದಿ ಸರಕಾರ 2014ರಲ್ಲಿ ಬಂದಾಗಿನಿಂದಲೂ ಈ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಹಾಗೂ ಈ ಸಾಂವಿಧಾನಿಕ ದಾಳಿಗೆ ಲಾ ಕಮಿಷನ್, ಚುನಾವಣಾ ಆಯೋಗ ಹಾಗೂ NITI ಆಯೋಗಗಳನ್ನೂ ಬಳಸಿಕೊಳ್ಳುತ್ತಿದೆ. ಮೋದಿ ಸರಕಾರ ಒಂದೇ ಚುನಾವಣೆಯ ಬಗ್ಗೆ ಮುಂದಿಡುತ್ತಿರುವ ವಾದಗಳ ಹುರುಳನ್ನು ಅರ್ಥಮಾಡಿಕೊಳ್ಳುವ ಮುನ್ನ ಒಂದು ದೇಶ ಹಲವು ಚುನಾವಣೆಗಳ ಸಂದರ್ಭ ಏಕೆ ಸೃಷ್ಟಿಯಾಯಿತು ಎಂಬುದನ್ನು ಗಮನಿಸೋಣ.

ಒಂದು ದೇಶ- ಹಲವು ಚುನಾವಣೆ ಆಗಿದ್ದೇಕೆ?  
ಹಾಗೆ ನೋಡಿದರೆ, 1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ 1967ರ ಸಾರ್ವತ್ರಿಕ ಚುನಾವಣೆಯ ತನಕವೂ ಭಾರತದಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆಯುತ್ತಿದ್ದವು ಹಾಗೂ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿತ್ತು.

ಆದರೆ ಭಾರತದ ಪ್ರಜಾತಂತ್ರ ಪ್ರಬುದ್ಧತೆಯನ್ನು ಪಡೆಯುತ್ತಿದ್ದಂತೆ ಈ ಪ್ರವೃತ್ತಿಗೆ 1967ರ ಚುನಾವಣೆಯ ಫಲಿತಾಂಶ ದೊಡ್ಡ ಶಾಕ್ ನೀಡಿತು. ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ಶಕ್ತಿ ಕ್ಷೀಣಿಸಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ತಮಿಳುನಾಡು, ಕೇರಳ, ಪ. ಬಂಗಾಳ, ಒಡಿಶಾ ಹಾಗೂ ಇನ್ನಿತರ ಒಂಭತ್ತು ರಾಜ್ಯಗಳಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬಂದಿತು. ಇದಕ್ಕೆ ಹಲವು ಕಾರಣಗಳಿದ್ದವು. ಅ) ನೆಹರೂ ನಂತರ ಕಾಂಗ್ರೆಸ್ ಪಕ್ಷದೊಳಗೆ ಸೃಷ್ಟಿಯಾದ ಬಿಕ್ಕಟ್ಟು.

ಆ) ಕಾಂಗ್ರೆಸ್ ಪಕ್ಷ 20 ವರ್ಷಗಳ ಕಾಲ ಸತತವಾಗಿ ಕೇಂದ್ರದಲ್ಲಿ ಮತ್ತು ಬಹುಪಾಲು ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದರೂ ಜನರ ನಿರೀಕ್ಷೆಗಳನ್ನು ಈಡೇರಿಸದೆ ಹಳೆಯ ಶೋಷಕ ವ್ಯವಸ್ಥೆ ಮತ್ತೊಂದು ರೀತಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದು.

ಇ) ಭಾರತದ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬಹುತ್ವಗಳನ್ನು ಗುರುತಿಸದೆ ಕಾಂಗ್ರೆಸ್ ಸರಕಾರ ಏಕರೂಪತೆಯ ಸರ್ವಾಧಿಕಾರವನ್ನು ಹೇರುತ್ತಿದ್ದದ್ದು. ಹೀಗಾಗಿ ಈ 1967ರ ಚುನಾವಣೆಯ ಪರಿಣಾಮಗಳು ಏಕಪಕ್ಷ ಅಧಿಕಾರವನ್ನು ತಿರಸ್ಕರಿಸುವ ಮೂಲಕ ಭಾರತದ ಪ್ರಜಾತಂತ್ರ ಪಕ್ವಗೊಳ್ಳುತ್ತಿದ್ದುದನ್ನೇ ತೋರಿಸುತ್ತಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಆಗಿನ ಕಾಂಗ್ರೆಸ್ ಸರಕಾರ ಈ ಭಿನ್ನತೆ ಮತ್ತು ಬಹುತ್ವಗಳನ್ನು ಗೌರವಿಸದೆ ಸಾಮ, ದಾನ, ಭೇದ ಮತ್ತು ದಂಡ ಮಾರ್ಗಗಳನ್ನು ಅನುಸರಿಸಿ ಆರ್ಟಿಕಲ್ 356ರನ್ನು ದುರ್ಬಳಕೆ ಮಾಡಿಕೊಂಡು ಬಹುಪಾಲು ಎಲ್ಲಾ ಕಾಂಗ್ರೆಸೇತರ ಸರಕಾರಗಳನ್ನು ವಜಾ ಮಾಡಿತು. ಆದ್ದರಿಂದ ಆ ರಾಜ್ಯಗಳಲ್ಲಿ ವಿಧಾನಸಭೆಗಳಿಗೆ 1969ರಲ್ಲೇ ಮತ್ತೊಮ್ಮೆ ಚುನಾವಣೆಗಳು ನಡೆಯುವಂತಾಯಿತು. ಕಾಂಗ್ರೆಸೇತರ ಸರಕಾರಗಳ ಮೇಲಿನ ದಾಳಿಗಳು 1980ರ ದಶಕದಲ್ಲೂ ಮುಂದುವರಿಯಿತು.

ಈ ಧೋರಣೆ ಬಲವಾದ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾಗಿ ಭಾರತದ ಚುನಾವಣಾ ಪ್ರಜಾತಂತ್ರವನ್ನು ಮೇಲಿನಿಂದ ಒಂದಷ್ಟು ಪ್ರಜಾತಾಂತ್ರೀಕರಿಸಿತು. ಇಂದಿರಾಗಾಂಧಿ ನಿಧನಾನಂತರ ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಆಧಿಪತ್ಯ ಮಾದರಿ ಕುಸಿದು ಮೈತ್ರಿ ಸರಕಾರಗಳ ಸಂಕ್ರಮಣ ಅವಧಿಯಲ್ಲಿ ಏಳು ಲೋಕಸಭೆಗಳೂ ಸಹ ಬಹುಮತವನ್ನು ಕಳೆದುಕೊಂಡು ಅವಧಿಯನ್ನು ಪೂರೈಸದೆ ಚುನಾವಣೆಯನ್ನು ಎದುರಿಸಬೇಕಾಯಿತು. 2014ರ ನಂತರ ಭಾರತದ ಚುನಾವಣಾ ರಾಜಕಾರಣದಲ್ಲಿ ರೂಪುಗೊಳ್ಳುತ್ತಿರುವ ಬಿಜೆಪಿ ಪ್ರಾಧಾನ್ಯತೆಯ ಅವಧಿಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನುಸರಿಸಿದ ಕುತಂತ್ರಗಳನ್ನು ಇನ್ನಷ್ಟು ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ. ಕಾರ್ಪೊರೇಟ್ ಕಪ್ಪುಹಣದ ಬಲದೊಂದಿಗೆ ಅದು ಪ್ರಾರಂಭಿಸಿರುವ ಆಪರೇಷನ್ ಕಮಲದ ಕುತಂತ್ರವು ಸಾಂವಿಧಾನಿಕ ಪ್ರಜಾತಂತ್ರಕ್ಕೆ ದೊಡ್ದ ಸವಾಲಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಮೇಲೆ ಹೇಳಿದ ಎಲ್ಲಾ ಕಾರಣಗಳಿಂದಾಗಿ ಲೋಕಸಭೆ ಹಾಗೂ ಶಾಸನಸಭೆಗಳ ವೇಳಾಪಟ್ಟಿ ಭಿನ್ನವಾದವು.

ಸರ್ವಾಧಿಕಾರಿ ಸ್ಥಿರತೆಯೋ? ಉತ್ತರದಾಯಿ ಅಸ್ಥಿರತೆಯೋ?   
ಆದರೆ ಈ ಬೆಳವಣಿಗೆಯನ್ನು ಹೇಗೆ ನೋಡಬೇಕು? ಸರಕಾರದ ಸ್ಥಿರತೆಯ ದೃಷ್ಟಿಯಿಂದ ನೋಡಿದರೆ ಇದು ಸಮಸ್ಯಾತ್ಮಕ. ಆದರೆ ಪ್ರಜಾತಂತ್ರವೆಂದರೆ ಪ್ರಜೆಗಳ ಅಭಿಪ್ರಾಯಕ್ಕೆ ತಕ್ಕಂತೆ ಸರಕಾರ ಮಾಡುವುದೋ? ಅಥವಾ ಜನರ ಅಭಿಪ್ರಾಯವನ್ನು ಔಪಚಾರಿಕಗೊಳಿಸಿ ಸ್ಥಿರ ಸರ್ವಾಧಿಕಾರಿ ಸರಕಾರವನ್ನು ರಚಿಸುವುದೋ?

ಪ್ರಜಾತಂತ್ರದ ಬಗೆಗಿನ ಈ ಮೂಲಭೂತ ಪ್ರಶ್ನೆಗಳನ್ನು ಗಣನೆಗೂ ತೆಗೆದುಕೊಳ್ಳದ ಮೋದಿ ಸರಕಾರ ಏಕಕಾಲಿಕ ಚುನಾವಣೆಗಳ ಬಗ್ಗೆ ಈ ಸರ್ವಾಧಿಕಾರಿ-ತಾಂತ್ರಿಕ ವಾದಗಳನ್ನು ಮಂಡಿಸುತ್ತಿದೆ.

ಅ) ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ಮುಗಿದುಹೋದರೆ ಸರಕಾರಗಳು ನಿರಾತಂಕವಾಗಿ ಆಡಳಿತದ ಕಡೆ ಗಮನಹರಿಸಬಹುದು ಮತ್ತು ಪ್ರತಿ ಚುನಾವಣೆ ಘೋಷಿಸಿದಾಗ ‘ಮಾದರಿ ನೀತಿ ಸಂಹಿತೆ’ಗಳು ಜಾರಿಗೆ ಬಂದು ಹಲವಾರು ತಿಂಗಳು ಅಭಿವೃದ್ಧಿ ಕೆಲಸಗಳು ನಿಂತುಹೋಗುವುದನ್ನು ತಡೆಯಬಹುದು.

ಸರಕಾರದ ಈ ವಾದದ ಹಿಂದೆ ಚುನಾವಣೆಗಳು ಅರ್ಥಾತ್ ಜನರನ್ನು ಪದೇಪದೇ ಮುಖಾಮುಖಿಯಾಗುವುದು ಸರಕಾರ ನಡೆಸಲು ಅಡ್ಡಿಯೆಂಬ ಸರ್ವಾಧಿಕಾರಿ-ಫ್ಯಾಶಿಸ್ಟ್ ತಿಳುವಳಿಕೆ ಇದೆ. ವಾಸ್ತವದಲ್ಲಿ ಪ್ರಬುದ್ಧ ಪ್ರಜಾತಂತ್ರಗಳು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ಜನರ ಬದುಕನ್ನು ಪ್ರಭಾವಿಸುವ ಯಾವುದೇ ನೀತಿಗಳನ್ನು ಜಾರಿ ಮಾಡುವಾಗಲೂ ಜನಮತಗಣನೆ ನಡೆಸುತ್ತವೆ. ಆದರೆ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟವು ಜನರು ಒಮ್ಮೆ ಚುನಾವಣೆಯಲ್ಲಿ ವೋಟು ಕೊಟ್ಟ ನಂತರ ಉಳಿದ ಐದು ವರ್ಷಗಳ ಕಾಲ ತಟಸ್ಥ ಪ್ರೇಕ್ಷಕರಾಗಿ ಉಳಿಯಬೇಕೆಂದು ನಿರೀಕ್ಷಿಸುತ್ತವೆ.

ಎರಡನೆಯದಾಗಿ ಮಾದರಿ ನೀತಿ ಸಂಹಿತೆಯಿಂದಾಗಿ ಕೆಲವು ತಿಂಗಳು ಕಾಲ ಆಡಳಿತ ಯಂತ್ರಾಂಗ ನಿಷ್ಕ್ರಿಯವಾಗುತ್ತದೆ ಎಂಬ ವಾದವನ್ನು ಆಡಳಿತಾರೂಢ ಪಕ್ಷವು ತಮ್ಮ ಐದು ವರ್ಷಗಳ ನಿಷ್ಕ್ರಿಯತೆಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ ಎಂಬುದು ಎಳೆ ಮಕ್ಕಳಿಗೂ ಅರ್ಥವಾಗುತ್ತದೆ. ಇಷ್ಟಾಗಿ ಅದು ತೊಡಕಾಗಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿಯಾಗಿ ಪರಿಹರಿಸಿಕೊಳ್ಳಬಹುದಾದಷ್ಟು ಚಿಲ್ಲರೆ ಸಮಸ್ಯೆ. ಹಾಗೆ ನೋಡಿದರೆ, ಮಾದರಿ ಸಂಹಿತೆ ಇದ್ದರೂ ಬಾಲಾಕೋಟ್ ದಾಳಿಯಾಗ ಲಿಲ್ಲವೇ? ಸೈನಿಕ ವಿಜಯವನ್ನು ಮೋದಿ ವಿಜಯ ವೆಂದು ಪ್ರಚಾರ ಮಾಡಲಿಲ್ಲವೇ?

ಆ) ವೆಚ್ಚಗಳು ಕಡಿಮೆಯಾಗುತ್ತವೆ! 
ಮೋದಿ ಸರಕಾರದ ಪ್ರಕಾರ 2014ರ ಚುನಾವಣೆ ನಡೆಸಲು ಭಾರತ ಸರಕಾರಕ್ಕೆ ಅಧಿಕೃತವಾಗಿ ರೂ. 3,870 ಕೋಟಿ ವೆಚ್ಚವಾಯಿತು. ಆಗಲೇ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ನಡೆದಿದ್ದರೆ ಹೆಚ್ಚುವರಿಯಾಗಿ 500 ಕೋಟಿ ಮಾತ್ರ ಖರ್ಚಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ರೂ. 3ರಿಂದ 4 ಸಾವಿರ ಕೋಟಿ ವೆಚ್ಚ ಹೆಚ್ಚುವರಿಯಾಗಿದೆ. ಆದರೆ ಇದೊಂದು ಹಸಿ ಸುಳ್ಳು.

ಚುನಾವಣಾ ಆಯೋಗದ ಮತ್ತೊಂದು ಲೆಕ್ಕಾಚಾರದ ಪ್ರಕಾರವೇ ಏಕಕಾಲದಲ್ಲಿ ಚುನಾವಣೆ ನಡೆದರೆ 2019ರ ಲೆಕ್ಕಾಚಾರದಲ್ಲಿ 10 ಲಕ್ಷ ಬೂತುಗಳಲ್ಲಿ ಎರಡೆರಡು EVM ಯಂತ್ರಗಳಂತೆ 20 ಲಕ್ಷ ಯಂತ್ರಗಳು ಹಾಗೂ 3-4 ಲಕ್ಷ VVPAT ಯಂತ್ರಗಳಿಗಾಗಿ ಒಟ್ಟಾರೆಯಾಗಿ 10,000 ಕೋಟಿ ರೂಪಾಯಿಗಳು ಬೇಕಾಗುತ್ತವೆ. ಈ ಎಲ್ಲಾ ಯಂತ್ರಗಳನ್ನು ಪ್ರತಿ 15 ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ!
ಇ) ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬರುತ್ತದೆ.

ಬಿಜೆಪಿ ಈ ವಾದವನ್ನು ಮುಂದಿಡುತ್ತಿರುವುದೇ ಅತ್ಯಂತ ಹಾಸ್ಯಾಸ್ಪದವಾದ ಸಂಗತಿ. ಇಂದು ಚುನಾವಣೆಗಳಲ್ಲಿ ಅಪಾರವಾದ ಕಪ್ಪುಹಣವನ್ನು ಬಳಸುತ್ತಿರುವ ಪಕ್ಷಗಳಲ್ಲಿ ಬೆಜೆಪಿ ಕಾಂಗ್ರೆಸನ್ನು ತುಂಬಾ ಹಿಂದಕ್ಕೆ ಹಾಕಿದೆ. ಕಾರ್ಪೊರೇಟ್ ಶಕ್ತಿಗಳು ತಮ್ಮ ಪರವಾದ ಸರಕಾರ-ನೀತಿಗಳು ಜಾರಿಗೆ ಬರಲು ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಎಲೆಕ್ಟೋರಲ್ ಬಾಂಡ್ ಯೋಜನೆಯ ಮೂಲಕ ಅಪಾರದರ್ಶಕಗೊಳಿಸಿದ್ದು ಮತ್ತು ಅದರ ಅತ್ಯಂತ ದೊಡ್ಡ ಫಲಾನುಭವಿಯಾಗಿರುವುದೂ ಬಿಜೆಪಿ ಪಕ್ಷವೇ ಆಗಿದೆ. ಐದು ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಕಪ್ಪುಹಣದ ಹೊಳೆ ಹರಿಸಿದ ಕೀರ್ತಿ ಬಿಜೆಪಿಗೆ ಸಲ್ಲಬೇಕು. ಎಲ್ಲಿಯತನಕ ಎಲೆಕ್ಟೋರಲ್ ಬಾಂಡ್ ಪದ್ಧತಿ ರದ್ದಾಗುವುದಿಲ್ಲವೋ, ಪಕ್ಷಗಳು ಮಾಡುವ ಎಲ್ಲಾ ಚುನಾವಣಾ ವೆಚ್ಚಗಳು ರದ್ದಾಗುವುದಿಲ್ಲವೋ ಮತ್ತು ಸರಕಾರವೇ ಪಕ್ಷಗಳ ವೆಚ್ಚವನ್ನು ವಹಿಸಿಕೊಳ್ಳುವುದಿಲ್ಲವೋ ಅಲ್ಲಿಯತನಕ ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ನಿಲ್ಲುವುದಿಲ್ಲ. ಅದು ಏಕಕಾಲಿಕ ಚುನಾವಣೆಯಾದರೂ ಅಷ್ಟೆ...ಭಿನ್ನ ಚುನಾವಣೆಯಾದರೂ ಅಷ್ಟೆ. ಹೀಗೆ ಏಕಕಾಲಿಕ ಚುನಾವಣೆಗಳ ಬಗ್ಗೆ ಸರಕಾರ ಮುಂದಿಡುತ್ತಿರುವ ಎಲ್ಲಾ ವಾದಗಳೂ ಅಸಂಬದ್ಧವಾಗಿವೆ. ಅಸಂಗತವಾಗಿವೆ. ಆದರೆ ಏಕಕಾಲಿಕ ಚುನಾವಣೆಗಳು ಸಾಂವಿಧಾನಿಕ ಪ್ರಜಾತಂತ್ರಕ್ಕೆ ಮತ್ತು ಭಾರತದ ಫೆಡರಲ್ ವ್ಯವಸ್ಥೆಗೆ ಮಾಡುವ ಅಪಾಯ ಮಾತ್ರ ಅಪಾರವಾಗಿದೆ.

ಸಂವಿಧಾನ ನಾಶಕ ಪರಿಹಾರಗಳು 
 ಏಕಕಾಲಿಕ ಚುನಾವಣೆ ನಡೆದರೂ ಚುನಾಯಿತ ಪಕ್ಷ ಸದನದ ವಿಶ್ವಾಸ ಕಳೆದುಕೊಂಡಾಗ ಏಕಕಾಲಿಕ ವ್ಯವಸ್ಥೆ ಮುರಿಯುತ್ತದೆ. ಅದನ್ನು ತಡೆಯಲು ಚುನಾವಣಾ ಆಯೋಗ ಮತ್ತು ನೀತಿ ಆಯೋಗ ಹಾಗೂ ಬಿಜೆಪಿ ಮುಂದಿಡುತ್ತಿರುವ ಪರಿಹಾರ ಸಮಸ್ಯೆಗಿಂತ ಭೀಕರವಾಗಿದೆ.

ಅ) ವಿಶ್ವಾಸ ಇದ್ದರೆ ಮಾತ್ರ ಅವಿಶ್ವಾಸ?
ಈಗಿರುವ ಪ್ರಜಾತಾಂತ್ರಿಕ ನಿಯಮಗಳಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಚುನಾಯಿತವಾದ ಸರಕಾರವೊಂದು ಶಾಸನಸಭೆಯ ವಿಶ್ವಾಸವನ್ನು ಕಳೆದುಕೊಂಡರೆ ಅದು ಬಹುಮತವನ್ನು ಸಾಬೀತುಪಡಿಸಬೇಕು ಅಥವಾ ಅಧಿಕಾರ ಬಿಟ್ಟುಕೊಡಬೇಕು. ಬೇರೊಂದು ಪಕ್ಷದ ನಾಯಕರ ನೇತೃತ್ವದಲ್ಲಿ ಬಹುಮತವಿರುವ ಸರಕಾರ ಸ್ಥಾಪನೆಯಾಗಬೇಕು. ಅದಾಗದಿದ್ದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಆಡಳಿತ ಜಾರಿಯಾಗಿ ಆದಷ್ಟು ಬೇಗ ಮರುಚುನಾವಣೆ ನಡೆಯುತ್ತದೆ. ಅದರಲ್ಲಿ ಗೆದ್ದುಬಂದವರು ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ.

ಆದರೆ ‘ಒಂದು ದೇಶ-ಒಂದು ಚುನಾವಣೆ’ ಜಾರಿಗೆ ಬರಬೇಕೆಂದರೆ ವಿಧಾನಮಂಡಲದ ಅವಧಿ ಚುನಾವಣೆಗಳಿಗೆ ತಕ್ಕಂತೆ ನಿಗದಿಯಾಗದೆ, ಪೂರ್ವ ನಿಗದಿಯಾದ ಅವಧಿಗೆ ತಕ್ಕಂತೆ ಚುನಾವಣೆಗಳು ನಡೆಯಬೇಕೆಂದು ಲಾ ಕಮಿಷನ್‌ನ 170ನೇ ವರದಿ ಸಲಹೆ ಮಾಡುತ್ತದೆ.

(https://lawcommissionofindia.nic.in/lc170.htm)

ಚುನಾವಣಾ ಆಯೋಗ ಹಾಗೂ ಲಾ ಕಮಿಷನ್ 2018ರಲ್ಲಿ ಕೊಟ್ಟ ವರದಿಯಲ್ಲಿ ಒಂದು ವೇಳೆ ಸದನದಲ್ಲಿ ಆಳುವ ಸರಕಾರದ ಬಗ್ಗೆ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದರೆ ಕಡ್ಡಾಯವಾಗಿ ಅದರ ಜೊತೆಗೆ ಯಾರ ನೇತೃತ್ವದ ಸರಕಾರದ ಬಗ್ಗೆ ವಿಶ್ವಾಸ ಇದೆಯೆಂಬುದನ್ನು ಕೂಡಿಸಿ ಮಂಡಿಸಬೇಕೆಂದು ಸಲಹೆ ಮಾಡಿದೆ.

(http://164.100.47.5/newcommittee/reports/EnglishCommittees/Committee%20on%20Personnel,%20PublicGrievances,%20Law%20and%20Justice/79.pdf)
NITI ಆಯೋಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 14 ದಿನಗಳ ಒಳಗೆ ಬದಲಿ ಸರಕಾರವನ್ನು ರಚಿಸುವ ಸಾಧ್ಯತೆ ಇಲ್ಲದಿದ್ದರೆ ಅವಿಶ್ವಾಸ ಗೊತ್ತುವಳಿಗೆ ಅವಕಾಶವೇ ಕೊಡಕೂಡದೆಂದು ಸಲಹೆ ಮಾಡಿದೆ.

(http://niti.gov.in/writereaddata/files/document_publication/Note%20on%20Simultaneous%20Elections.pdf)

ಅವಧಿ ಕಡಿತ- ಸರಕಾರದ ತಪ್ಪು-ಜನರಿಗೆ ಶಿಕ್ಷೆ
ಒಂದು ವೇಳೆ ಬದಲಿ ಸರಕಾರ ರಚಿಸಲು ಸಾಧ್ಯವೇ ಆಗದೆ ಹೋದಲ್ಲಿ ಏನು ಮಾಡಬೇಕು? ಆಗ ಆ ಸದನದ ಅವಧಿ ಮುಗಿದುಹೋಗಲು ಕಡಿಮೆ ಕಾಲಾವಧಿ ಇದ್ದಲ್ಲಿ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾರಿಯಾಗಬೇಕು. ಒಂದು ವೇಳೆ ಆಯಾ ಲೋಕಸಭಾ/ಶಾಸನಸಭಾ ಅವಧಿ ಇನ್ನೂ ಹೆಚ್ಚು ಕಾಲವಿದ್ದರೆ ಹೊಸ ಚುನಾವಣೆ ನಡೆಯಬೇಕು. ಆದರೆ ಆಗ ಚುನಾಯಿತವಾಗುವ ಸರಕಾರದ ಅವಧಿ ಐದು ವರ್ಷಗಳಾಗಿರುವುದಿಲ್ಲ. ಬದಲಿಗೆ ಉಳಿಕೆ ಅವಧಿಗೆ ಮಾತ್ರ ಹೊಸ ಸರಕಾರದ ಆಡಳಿತ ಅವಧಿ ಸೀಮಿತವಾಗಿರುತ್ತದೆ!

ಆದರೆ ಏಕಕಾಲಿಕ ಚುನಾವಣೆಯನ್ನು ಸಾಧ್ಯಗೊಳಿಸಲು ಈ ಬಗೆಯ ಅಪಾಯಕಾರಿ ತಾಂತ್ರಿಕ ಪರಿಹಾರಗಳನ್ನು ಒದಗಿಸುತ್ತಿರುವ ಬಿಜೆಪಿ ಸರಕಾರ ಇದರಿಂದ ಜನರ ಸಾಂವಿಧಾನಿಕ ಹಕ್ಕುಗಳು ಹೇಗೆ ಬಲಿಯಾಗುತ್ತಿವೆ ಎಂಬುದನ್ನು ಮರೆಸುತ್ತಿದೆ.

ಸಾಂವಿಧಾನಿಕ ಸರ್ವಾಧಿಕಾರದ ಹುನ್ನಾರಗಳು

ಅಸಲು ಬಿಜೆಪಿ ಸರಕಾರಕ್ಕೆ ‘ಒಂದು ದೇಶ ಒಂದು ಚುನಾವಣೆ’ಯ ವಿಷಯದ ಏಕೆ ಮುಖ್ಯವಾಗಿದೆ? IDFC Institute ಎಂಬ ಸಂಸ್ಥೆಯು 1999, 2004, 2009 ಮತ್ತು 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕಾಕಾಲದಲ್ಲಿ ಚುನಾವಣೆ ನಡೆದ ರಾಜ್ಯಗಳ ಮತದಾನದ ಸ್ವರೂಪವನ್ನು ಅಧ್ಯಯನ ಮಾಡಿದೆ. ಅದರ ಪ್ರಕಾರ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆದರೆ ಮತದಾರರು ಒಂದೇ ಪಕ್ಷಕ್ಕೆ ವೋಟು ಹಾಕುವ ಸಾಧ್ಯತೆ ಶೇ.77ರಷ್ಟು ಹೆಚ್ಚು. ಕೆಲವು ರಾಜ್ಯಗಳಲ್ಲಿ ಅದು ಶೇ.85ರಷ್ಟು!! 1967ರ ಪೂರ್ವದ ಅವಧಿಯಲ್ಲೂ ಇದೇ ಸ್ವರೂಪದಲ್ಲೇ ಮತದಾನವಾಗಿವೆ.

ಅಮೆರಿಕದ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜೊತೆಗೇ ಎಲ್ಲಾ ರಾಜ್ಯಗಳ ಶಾಸನಸಭಾ ಚುನಾವಣೆಗಳು ನಡೆದಿದ್ದರೆ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಅಪಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಒಂದು ವರ್ಷದ ನಂತರ ದಿಲ್ಲಿ ವಿಧಾನಸಭೆಗೆ ಮತ್ತು ಬಿಹಾರ ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ಆ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಅಪಾರ ಬಹುಮತ ಪಡೆದಿದ್ದ ಬಿಜೆಪಿಗೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ವೋಟು ಮತ್ತು ಸೀಟುಗಳು ಮಾತ್ರ ದಕ್ಕಿದವು. ಇದಕ್ಕೆ ಮುಖ್ಯ ಕಾರಣ ಲೋಕಸಭೆಯ ಚುನಾವಣೆಗಳಲ್ಲಿ ರಾಷ್ಟ್ರ, ಧರ್ಮ, ಭದ್ರತೆಯಂತಹ ಭಾವನಾತ್ಮಕ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದರೆ, ಸಾಮಾನ್ಯವಾಗಿ ರಾಜ್ಯಗಳ ಶಾಸನಸಭಾ ಚುನಾವಣೆಗಳಲ್ಲಿ ಬದುಕಿಗೆ ಸಂಬಂಧಪಟ್ಟ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದಾಗ ಬದುಕಿಗೆ ಸಂಬಂಧಪಟ್ಟ ವಿಷಯಗಳನ್ನು ಭಾವನಾತ್ಮಕ ವಿಷಯಗಳು ನುಂಗಿಹಾಕುತ್ತವೆ ಹಾಗೂ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳೇ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಇದು ಪ್ರಜಾತಂತ್ರದಲ್ಲಿ ಪ್ರಬುದ್ಧ ಮತದಾರರ ಪಾತ್ರವನ್ನು ಮತ್ತಷ್ಟು ಗೌಣಗೊಳಿಸಿ ಸರ್ವಾಧಿಕಾರಿ, ಹುಸಿ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.

2024ರಲ್ಲಿ ಚುನಾಯಿತ ಸರ್ವಾಧಿಕಾರದ ಗುರಿ? 
ಆರೆಸ್ಸೆಸ್-ಬಿಜೆಪಿ ಪಕ್ಷಗಳು ಮತ್ತು ಮೋದಿ ಸರಕಾರ ಈ ವ್ಯವಸ್ಥೆಯನ್ನು 2019ರ ಚುನಾವಣೆಯಲ್ಲೇ ಜಾರಿಗೆ ತರಬೇಕೆಂದಿದ್ದವು. ಆದರೆ ಅವು ಜಾರಿಯಾಗಬೇಕೆಂದರೆ ಸಂವಿಧಾನದ 83, 172ನೇ ವಿಧಿಗಳಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನೂ ತರಬೇಕಾಗುತ್ತದೆ. ಆದರೆ ಇದು ಭಾರತದ ಸಂವಿಧಾನದ ಮೂಲರಚನೆಯಾಗಿರುವ ಫೆಡರಲ್ ವ್ಯವಸ್ಥೆಯನ್ನೂ ಬದಲಿಸುತ್ತದೆ. ಸಂಸತ್ತಿಗೆ ಸಂವಿಧಾನದ ಮೂಲರಚನೆಯನ್ನು ಬದಲಿಸುವ ಅವಕಾಶವಿಲ್ಲ. ಹೀಗಾಗಿ 2019ರಲ್ಲಿ ಅದು ಸಾಧ್ಯವಾಗಲಿಲ್ಲ.

ಈಗ 2024ಕ್ಕಾದರೂ ‘ಒಂದು ದೇಶ ಒಂದು ಚುನಾವಣೆ’ಯೆಂಬ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿ ಮಾಡಲು ಆರೆಸ್ಸೆಸ್-ಬಿಜೆಪಿ-ಕಾರ್ಪೊರೇಟ್ ಕೂಟವು 2019ರಲ್ಲಿ ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಒಂದು ತಿಂಗಳಿಂದಲೇ ಪ್ರಯತ್ನಗಳನ್ನು ಪ್ರಾರಂಭಿಸಿವೆ. ಕರ್ನಾಟಕ ವಿಧಾನಸಭೆಯಲ್ಲಿ ನಡೆಸಲೆತ್ನಿಸಿದ ಚರ್ಚೆ ಅದರ ಭಾಗ. ವಿಧಾನಮಂಡಲದಲ್ಲಿ ಚರ್ಚೆ ನಡೆಸಲಾಗದಿದ್ದರೂ ಹಿಮ್ಮೆಟ್ಟದ ಬಿಜೆಪಿ ಸದನದ ಹೊರಗೆ ವಿಷಯದ ಬಗ್ಗೆ ಸಾಲು ಸಾಲು ಸಭೆಗಳನ್ನು ಏರ್ಪಡಿಸಿ ಜನಮಾನಸವನ್ನು ಸಾಂವಿಧಾನಿಕ ಸರ್ವಾಧಿಕಾರಕ್ಕೆ ಸಿದ್ಧಗೊಳಿಸುತ್ತಿದೆ. ಕಾಂಗ್ರೆಸ್‌ನ ಜಡ-ಅವಕಾಶವಾದಿ ರಾಜಕಾರಣಕ್ಕೂ ಬಿಜೆಪಿಯ ಫ್ಯಾಶಿಸ್ಟ್ ರಾಜಕಾರಣಕ್ಕೂ ದೊಡ್ಡ ವ್ಯತ್ಯಾಸ ಇರುವುದು ಇಲ್ಲೇ. ಫ್ಯಾಶಿಸ್ಟ್ ಕಥನಕ್ಕೆ ಪ್ರತಿಯಾಗಿ ಪ್ರಜಾತಾಂತ್ರಿಕ ‘ಪ್ರತಿಕಥನವನ್ನು’ ರೂಪಿಸುತ್ತಾ ಜನಪರಶಕ್ತಿಗಳು ಸಾಂವಿಧಾನಿಕ ಸರ್ವಾಧಿಕಾರ ಜಾರಿಯಾಗದಂತೆ ತಡೆಯಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)