varthabharthi


ಕಲೆ - ಸಾಹಿತ್ಯ

ನಾಳೆ ಬಿಡುಗಡೆಯಾಗಲಿರುವ ಏ.ಕೆ. ಕುಕ್ಕಿಲರ ‘ವೈರಸ್’ ಕಾದಂಬರಿಯ ಮುನ್ನುಡಿಯಿಂದ ಆಯ್ದ ಭಾಗ

‘ವೈರಸ್’: ವರ್ತಮಾನದ ನಮ್ಮ ತಿಳಿವನ್ನು ವಿಸ್ತರಿಸುವ ಕಾದಂಬರಿ

ವಾರ್ತಾ ಭಾರತಿ : 11 Mar, 2021
ಪ್ರೊ. ಪುರುಷೋತ್ತಮ ಬಿಳಿಮಲೆ

ಏ.ಕೆ. ಕುಕ್ಕಿಲರ ವೈರಸ್ ಕಾದಂಬರಿ ಕೊರೋನ ಕಾಲದ ಕೆಲವು ದುರಿತಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತದೆ. ಹಾಗೆ ಮಾಡಲು ಕುಕ್ಕಿಲರು ನೂರ್ ಮತ್ತು ಆನಾಮಿಕ ಎಂಬ ಎರಡು ಮುಖ್ಯ ಪಾತ್ರಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇಡೀ ಕಾದಂಬರಿಯು ಈ ಎರಡು ಪಾತ್ರಗಳ ಸುತ್ತವೇ ಬೆಳೆಯುತ್ತಾ, ಇಸ್ಲಾಂ ಮತ್ತು ಹಿಂದೂ ಧರ್ಮದ ಕುರಿತಾದ ಕೆಲವು ವಿಷಯಗಳಿಗೆ ಆಗಾಗ ಮುಖಾಮುಖಿಯಾಗುತ್ತಾ ಅವರೆಡೂ ಧರ್ಮಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ. ಇಂತಹ ಪ್ರಯತ್ನಗಳ ನಡುವೆ ನೂರ್‌ನ ಅಸಾಮಾನ್ಯ ಪ್ರತಿಭೆಗೆ ಅನಾಮಿಕ ಮರುಳಾಗುತ್ತಾಳೆ ಮತ್ತು ಅನಾಮಿಕಳ ನಾಯಕತ್ವದ ಲಕ್ಷಣಗಳಿಗೆ ನೂರ್ ಮನಸೋಲುತ್ತಾನೆ.

ನೂರ್ ಕೆಲಸ ಹುಡುಕಿಕೊಂಡು ಬಂಗಾಳದಿಂದ ಬಂದವನಾದರೆ, ಅದೇ ಕಾಫಿ ಎಸ್ಟೇಟಿನಲ್ಲಿ ದುಡಿದು ಜೀವನ ಸಾಗಿಸಲು ಬಿಹಾರದಿಂದ ವಿಧವೆ ಅನಾಮಿಕಳೂ ಆಗಮಿಸಿರುತ್ತಾಳೆ. ಲಾಕ್‌ಡೌನ್ ಅವರಿಬ್ಬರ ಬದುಕಿನಲ್ಲಿ ಆರ್ಥಿಕ ಬಿಕ್ಕಟ್ಟನ್ನು ತರುತ್ತದೆ. ಆದರೆ ಎಸ್ಟೇಟ್ ಮಾಲಕ ವರದರಾಜನು ಅವರ ಸಮಸ್ಯೆಗಳಿಗೆ ಕಿವಿಯಾಗುವ ಬದಲು ಸಮಸ್ಯೆಗಳನ್ನು ಹೆಚ್ಚು ಮಾಡುತ್ತಾನೆ. ಆಗ ನೂರ್ ಮತ್ತು ಅನಾಮಿಕರಿಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ರೂಪಿಸುತ್ತಾರೆ. ಕಾದಂಬರಿ ಶುರು ಆಗುವುದೇ ಅವರಿಬ್ಬರ ಪರಾರಿ ಯೋಜನೆಯಿಂದ. ಮುಂದೆ ಕಾದಂಬರಿಯು ನೂರ್ ಮತ್ತು ಅನಾಮಿಕರ ನಡುವಣ ಸಂಬಂಧಗಳನ್ನು ಪರಿಶೋಧಿಸುತ್ತಾ ಕುತೂಹಲಕರವಾಗಿ ಬೆಳೆಯುತ್ತದೆ.

ಒಂದು ಉದಾತ್ತ ಸಂಬಂಧವನ್ನು ಮಾನವನ ಕೆಲವು ಇತಿಮಿತಿಗಳ ಚೌಕಟ್ಟಿನಲ್ಲಿ ಪರಿಶೀಲಿಸುವ ಈ ಕಾದಂಬರಿಯು ವರ್ತಮಾನ ಕಾಲದ ನಮ್ಮ ತಿಳಿವಿನ ಗಡಿರೇಖೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ ಮತ್ತು ಕೆಲವು ಅಪಕಲ್ಪನೆಗಳನ್ನು ಹೋಗಲಾಡಿಸುತ್ತದೆ. ಈ ಸಂದರ್ಭಗಳಲ್ಲಿ ಕಾದಂಬರಿಯು ಕಲಾಕೃತಿಯೊಂದರ ಕೆಲವು ಗುಣಗಳನ್ನು ಮೀರಿ ವಾಚ್ಯವಾಗುವುದೂ ಇದೆ. ಸಂದೇಶ ಮುಖ್ಯವಾದಾಗ ಇದು ಅನಿವಾರ್ಯವಾಗುತ್ತದೆ.
ಅಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು.

ಕಾದಂಬರಿಯ ಆರಂಭದಲ್ಲಿ ಕೊರೋನದಿಂದ ಮರಣ ಹೊಂದಿದ ಶಂಕರನ ವಿವರ ಬರುತ್ತದೆ. ಆ ಸಂದರ್ಭದಲ್ಲಿ ಕಾಯಿಲೆಗೆ ಮುಸ್ಲಿಮರ ಸಂಪರ್ಕದಲ್ಲಿ ಕಾರಣಗಳನ್ನು ಹುಡುಕುವುದನ್ನು ಕಾದಂಬರಿಯು ವಿಶ್ಲೇಷಿಸುತ್ತದೆ- ಯಾವ ಕೋನದಲ್ಲಿ ಯೋಚಿಸಿದರೂ ತನ್ನ ಗಂಡ ಕೊರೋನ ಪಾಸಿಟಿವ್ ಹೇಗಾದ ಅನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ ಮತ್ತು ನಡು ನಡುವೆ ಬಿಕ್ಕುವಿಕೆ, ದೀರ್ಘ ಉಸಿರಾಟ. ತುಸು ಹೊತ್ತು ಎರಡೂ ಕಡೆಯಿಂದಲೂ ಮೌನ. ಬಳಿಕ ಆತ ಮೌನ ಮುರಿದ.
ಪಕ್ಕದ ಬ್ಯಾರಿ ಮುಸಲ್ಮಾನರ ಮನೆಯಿಂದ ಯಾರಾದ್ರೂ ನಮ್ಮ ಮನೆಗೆ ಬಂದಿದ್ದರೇ?
ಯಾವಾಗ? ಆಕೆಯ ಪ್ರಶ್ನೆ.
ಕಳೆದ ಎರಡ್ಮೂರು ವಾರಗಳಲ್ಲಿ.
ಇಲ್ವಲ್ಲ? ಯಾಕೆ?
ನಂಗೆ ಕೊರೋನ ಹೇಗೆ ಬಂತೂ ಅಂತ?

ಅದೇ ನಂಗೂ ಚಿಂತೇರಿ. ಬ್ಯಾರಿಗಳೊಂದಿಗೆ ಸಂಪರ್ಕವೇ ಇಲ್ಲದ ನಿಮಗೆ ಹೇಗೆ ಬಂತೂ ಅಂತ? ಲಾಕ್‌ಡೌನ್ ಸಡಿಲಿಕೆ ಆದಾಗ ಬ್ಯಾರಿಗಳನ್ನು ಸಂಪರ್ಕಿಸಿದ್ದೀರಾ? ಬ್ಯಾರಿಗಳ ಅಂಗಡಿಯಿಂದ ಏನನ್ನಾದರೂ ಖರೀದಿಸಿದ್ದೀರಾ? ರೇವತಿ ಆತಂಕ ತೋಡಿಕೊಂಡಳು.

ಕಾದಂಬರಿಯು ಹೀಗೆ ಬೆಳೆಯುತ್ತಾ ಹೋಗುತ್ತಿದ್ದಂತೆ ಭಾರತೀಯ ಸಮಾಜದ ಅನೇಕ ಅನಿಷ್ಟಗಳ ಬಗೆಗೂ ಮಾತುಗಳು ಬರುತ್ತವೆ. ಅಮಾನುಷವಾದ ಅಸ್ಪಶ್ಯತೆಯ ಕುರಿತು, ಅಭಿವೃದ್ಧಿಯ ಫಲಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕಾದ ಅಗತ್ಯಗಳು, ಮಾಲ್ ಸಂಸ್ಕೃತಿಯು ಉಂಟು ಮಾಡಿದ ಹಾನಿಗಳು, ಕುಡಿತದ ಸಮಸ್ಯೆಗಳು, ಕಾಡನ್ನು ನಾಶ ಮಾಡಿ ಕಾಂಕ್ರಿಟ್ ಕಟ್ಟಡ ಕಟ್ಟುವವರು ಮಾಡುವ ಪರಿಸರ ವಿನಾಶ, ಕೋಮು ಜಗಳಗಳು ಸಮಾಜವನ್ನು ಒಡೆದು ಮಾನವ ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವ ರೀತಿ, ಅಂತರ್‌ಜಾತಿಯ ವಿವಾಹಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿ ವಿಷಬೀಜಗಳನ್ನು ಬಿತ್ತುವ ಪರಿ- ಮೊದಲಾದ ಅನೇಕ ಸಂಗತಿಗಳು ಕಾದಂಬರಿಯಲ್ಲಿ ಹಸಿ ಹಸಿಯಾಗಿಯೇ ಕಾಣಿಸಿಕೊಳ್ಳುತ್ತವೆ.

ಕಾದಂಬರಿಯ ಉತ್ತರಾರ್ಧವು ಬಹುತೇಕವಾಗಿ ಇಸ್ಲಾಂ ಧರ್ಮದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ನೂರ್‌ನ ವಿವರಣೆಗಳ ಮೂಲಕ ಹೋಗಲಾಡಿಸಲು ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಇದು ಬೊಳುವಾರು ಮುಹಮ್ಮದ್ ಕುಂಞಿಯವರ ಪ್ರಯತ್ನದ ಮುಂದುವರಿಕೆಯೂ ಹೌದು, ನೂರಾರು ವರ್ಷಗಳು ಜೊತೆಗೇ ಬದುಕಿದ ಹಿಂದೂ ಮುಸ್ಲಿಮರು ಪರಸ್ಪರ ತಿಳಿದುಕೊಳ್ಳಲು ಮಾಡಿದ ಪ್ರಯತ್ನಗಳು ಇಲ್ಲವೆಂಬಷ್ಟು ಕಡಿಮೆ. ದ್ವೇಷಿಸಲು ಹೇಳಿಕೊಟ್ಟಷ್ಟು ಪ್ರೀತಿಸಲು ಕಲಿಸಿದ್ದರೆ ಭಾರತದ ಇಂದಿನ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಮುಸ್ಲಿಮರ ಕುರಿತಾಗಿ ಮುಸ್ಲಿಮೇತರರಲ್ಲಿ ಇರುವ ಕೆಲವು ಜನಪ್ರಿಯ ನಂಬಿಕೆಗಳನ್ನು ಈ ಕಾದಂಬರಿ ದಿಟ್ಟವಾಗಿ ತಿರಸ್ಕರಿಸುತ್ತದೆ. ಮುಸ್ಲಿಮರ ಬಹುಪತ್ನಿತ್ವ ಮತ್ತು ಹೆಚ್ಚು ಮಕ್ಕಳ ಕಲ್ಪನೆ ಅಂತಹ ಒಂದು ಜನಪ್ರಿಯ ನಂಬಿಕೆ. ಅದರ ಕಾರಣಗಳನ್ನು ಕಾದಂಬರಿಯು ಚಾರಿತ್ರಿಕವಾಗಿ ವಿಶ್ಲೇಷಿಸುತ್ತದೆ.

ಅದೇ ರೀತಿ, ಇಸ್ಲಾಮಿನ ಸಹಿಷ್ಣು ಗುಣವನ್ನು ಕೂಡಾ ಇಲ್ಲಿ ಪ್ರತಿಪಾದಿಸಲಾಗಿದೆ. ಇಡೀ ಕಾದಂಬರಿಯನ್ನು ಓದಿ ಮುಗಿಸಿದಾಗ ನಮಗೆ ಇಸ್ಲಾಂ ಧರ್ಮದ ಕೆಲವು ಮೂಲ ತತ್ವಗಳ ಕುರಿತು ತಿಳಿವಳಿಕೆ ಹೆಚ್ಚುತ್ತದೆ. ಇದೇನೂ ಸಣ್ಣ ಸಾಧನೆಯಲ್ಲ.

ನನಗೆ ಬಹಳ ಆಪ್ತವಾಗಿ ಕಂಡ ನೂರ್‌ನ ಕವಿತೆಯಂತಹ ಒಂದು ಮಾತನ್ನು ಉದ್ಧರಿಸಿ ಈ ಮುನ್ನುಡಿಯನ್ನು ಮುಗಿಸಬಯಸುತ್ತೇನೆ. ಆತ ಹೇಳುತ್ತಾನೆ- ‘ಕಪ್ಪುಬುರ್ಖಾ ಧರಿಸಿರುವ ನೀನು ಮತ್ತು ನಾನು ಜಗಳ ಮಾಡಿದರೆ ಈ ಸಮಾಜ ಅದನ್ನು ನೋಡಿ ಮಜಾ ಪಡೆಯುತ್ತದೆ. ನಕ್ಕು ಸುಮ್ಮನಾಗುತ್ತದೆ. ಆದರೆ ಹಣೆಗೆ ಬಿಂದಿ ಹಾಕಿರುವ ನೀನು ಮತ್ತು ನಾನು ಜಗಳವಾಡಿದರೆ ಹಿಂದೂ ಮಹಿಳೆಯ ಮೇಲೆ ಮುಸ್ಲಿಮನಿಂದ ಹಲ್ಲೆ ಎಂದು ರೊಚ್ಚಿಗೇಳುತ್ತದೆ. ಘರ್ಷಣೆಗೆ ನಿಲ್ಲುತ್ತದೆ. ಬುರ್ಖಾದ ಒಳಗಿದ್ದುಕೊಂಡು ನೀನು ನನ್ನೊಂದಿಗೆ ಜಗಳ ಮಾಡಿದರೆ ಅದು ಮನರಂಜನೆ, ಬುರ್ಖಾದಿಂದ ಹೊರಬಂದು ನೀನು ಜಗಳ ಮಾಡಿದರೆ ಅದು ಧರ್ಮಗಳ ನಡುವಿನ ಸಂಘರ್ಷ, ಧರ್ಮಗಳೆಲ್ಲ ಸಂಕೇತಗಳಲ್ಲಿ ಬಂಧಿಯಾಗಿರುವುದರ ಪರಿಣಾಮ ಇದು. ನೀನು ಮುಸ್ಲಿಮ್ ಆಗುವುದು ಪರ್ದಾ ಧರಿಸಿರುವುದರಿಂದ ಅಲ್ಲ, ಗಡ್ಡ ಮತ್ತು ಟೋಪಿ ಧರಿಸಿರುವುದರಿಂದಾಗಿ ನಾನು ಮುಸ್ಲಿಮ್ ಆಗಿರುವುದೂ ಅಲ್ಲ...’

ಹೀಗೆ ಈ ಕಾದಂಬರಿಯು ಅನೇಕ ಸಮಸ್ಯೆಗಳನ್ನು ಮೈಮೇಲೆಳೆದುಕೊಂಡು ಕ್ರಿಯಾಶೀಲವಾಗಿದೆ. ಒಮ್ಮಿಮ್ಮೆ ಇವೆಲ್ಲವನ್ನೂ ತಾಳಿಕೊಳ್ಳುವ ಶಕ್ತಿ ಈ ಕೃತಿಗಿದೆಯೇ ಎಂಬ ಸಂಶಯವೂ ಬರುವುದುಂಟು. ಇಷ್ಟಿದ್ದರೂ ನಮ್ಮ ಕಾಲದ ಮುಖ್ಯ ಸಮಸ್ಯೆ ಗಳಿಗೆ ದಿಟ್ಟವಾಗಿ ಮುಖಾಮುಖಿಯಾಗುತ್ತಾ, ಓದುಗರ ಅರಿವಿನ ವಲಯಗಳನ್ನು ವಿಸ್ತರಿಸಿದ ಕುಕ್ಕಿಲರಿಗೆ ನಾವು ಅಭಿನಂದನೆಗಳನ್ನು ಹೇಳಲೇಬೇಕು.


ಪುಸ್ತಕ: ವೈರಸ್ (ಕಾದಂಬರಿ)
ಲೇಖಕರು: ಏ. ಕೆ. ಕುಕ್ಕಿಲ
ಪ್ರಕಾಶನ: ಬಿಳಿಚುಕ್ಕೆ ಪ್ರಕಾಶನ,
ತಾಜ್ ಮಂಝಿಲ್, ಸೌಹಾರ್ದ ರಸ್ತೆ, ಪಾಂಡೇಶ್ವರ ಮಂಗಳೂರು.
ಮೊ: 9880096128

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)