ಬ್ಯಾಂಕುಗಳ ಖಾಸಗೀಕರಣ ಎಲ್ಲಾ ಸಮಸ್ಯೆಗಳಿಗೂ ಉತ್ತರವೇ?
ಇತ್ತೀಚಿನ ಕೇಂದ್ರ ಬಜೆಟ್ನಲ್ಲಿ ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮೊದಲು ಸಣ್ಣ ಸಣ್ಣ ಬ್ಯಾಂಕುಗಳನ್ನು ಮತ್ತು ನಷ್ಟದಲ್ಲಿರುವ ಬ್ಯಾಂಕುಗಳನ್ನು ದೊಡ್ಡದಾದ ಬ್ಯಾಂಕುಗಳೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ನಡೆದಿದ್ದು, ಈಗ ಹಲವಾರು ಬ್ಯಾಂಕುಗಳನ್ನು ಒಂದೇ ಬಾರಿಗೆ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಸರಕಾರ ಕೈ ಹಾಕಿದೆ. ಇದಕ್ಕೆ ಅದು ಕೊಡುತ್ತಿರುವ ಕಾರಣ ನಷ್ಟದಲ್ಲಿ ನಡೆಯುತ್ತಿರುವ ಬ್ಯಾಂಕಿನ ವ್ಯವಹಾರ.
ಬ್ಯಾಂಕುಗಳು ಜನಸಾಮಾನ್ಯನ ಇತ್ತೀಚಿನ ದಿನನಿತ್ಯದ ಅವಿಭಾಜ್ಯ ಅಂಗ. ಒಂದು ಕಾಲದಲ್ಲಿ ಬ್ಯಾಂಕಿನಲ್ಲಿ ಅಕೌಂಟ್ ತೆರೆಯುವುದು ಒಂದು ಸಾಹಸ ಮತ್ತು ಸಾಮಾಜಿಕ ಪ್ರತಿಷ್ಠೆಯ ವಿಷಯವಾಗಿತ್ತು. ಖಾಸಗೀಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಬ್ಯಾಂಕುಗಳು ತಮ್ಮ ದಂತ ಗೋಪುರಗಳನ್ನು ಬಿಟ್ಟು ಸಾಮಾನ್ಯನ ಮನೆಬಾಗಿಲಿಗೆ ಎಟಿಎಂಗಳ ಮೂಲಕ ಬಂದವು. ಈಗ ಸಂಮೋಹನ ತಂತ್ರಜ್ಞಾನ ಬೆಳೆದಂತೆ ಬ್ಯಾಂಕುಗಳು ಸೀದಾ ನಮ್ಮ ಮೊಬೈಲ್ನಲ್ಲೇ ಬಂದು ಕುಳಿತಿವೆ. 1969ನೇ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಬ್ಯಾಂಕುಗಳು ರಾಷ್ಟ್ರದ ಅಭಿವೃದ್ಧಿಯಲ್ಲಿ ತೀರ ನೇರಾನೇರ ಪಾತ್ರವನ್ನು ವಹಿಸುತ್ತವೆ. ಇದರ ಮಧ್ಯೆ ಇತ್ತೀಚೆಗೆ ಖಾಸಗಿ ಬ್ಯಾಂಕುಗಳು ಸಹ ರಾಷ್ಟ್ರೀಯ ಬ್ಯಾಂಕುಗಳಿಗೆ ತೀರ ಪೈಪೋಟಿ ನೀಡುತ್ತಿವೆ. ಪ್ರತಿ ವರ್ಷ ಖಾಸಗಿ ಬ್ಯಾಂಕುಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಯಾಕೋ ಇತ್ತೀಚಿನ ದಿನಗಳಲ್ಲಿ ಸರಕಾರಿ ಬ್ಯಾಂಕುಗಳ ಮೇಲೆ ಸರಕಾರಗಳ ವಕ್ರದೃಷ್ಟಿ ಬೀಳಲಾರಂಭಿಸಿದೆ. ಕನಿಷ್ಠ ತಿಂಗಳಲ್ಲಿ ಒಂದು ಅಥವಾ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ ಸಾಮಾನ್ಯ ಅನ್ನುವ ಮಟ್ಟಿಗೆ ಇಂದು ಪರಿಸ್ಥಿತಿ ಬಂದು ನಿಂತಿದೆ. 2015ರಲ್ಲಿ ಬ್ಯಾಂಕುಗಳ ಖಾಸಗೀಕರಣಕ್ಕೆ ಸರಕಾರ ಕೈ ಹಾಕಿದಾಗ ಅದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸಿತ್ತು. ಕಳೆದ ಇಪ್ಪತ್ತು ವರ್ಷಗಳಲ್ಲಿ ಹಲವು ಸರಕಾರಗಳು ಬ್ಯಾಂಕುಗಳ ಖಾಸಗೀಕರಣಕ್ಕೆ ಮನಸ್ಸು ಮಾಡಿದಾಗ ಬಹಳಷ್ಟು ಪರ ಮತ್ತು ವಿರೋಧ ಎರಡನ್ನೂ ಅನುಭವಿಸಿವೆ. ಈ ವಿಚಾರದಲ್ಲಿ ನರಸಿಂಹನ್ ಕಮಿಟಿ ಸರಕಾರಿ ಬ್ಯಾಂಕುಗಳಲ್ಲಿ ಸರಕಾರದ ಶೇರನ್ನು ಶೇ. 33ಕ್ಕೆ ಇಳಿಸಲು ಸಲಹೆ ನೀಡಿತ್ತು. ನಂತರ ಪಿ.ಜಿ. ನಾಯಕ್ ಸಮಿತಿ ಸಹ ಯಾವುದೇ ಬ್ಯಾಂಕಿನಲ್ಲಿ ಸರಕಾರದ ಶೇರು ಪಾಲುದಾರಿಕೆ ಶೇ. 50ಕ್ಕಿಂತ ಕೆಳಗಿರಬೇಕು ಎಂದು ಸಲಹೆ ನೀಡಿತ್ತು.
ಇತ್ತೀಚಿನ ಕೇಂದ್ರ ಬಜೆಟ್ನಲ್ಲಿ ಬ್ಯಾಂಕುಗಳ ಖಾಸಗೀಕರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮೊದಲು ಸಣ್ಣ ಸಣ್ಣ ಬ್ಯಾಂಕುಗಳನ್ನು ಮತ್ತು ನಷ್ಟದಲ್ಲಿರುವ ಬ್ಯಾಂಕುಗಳನ್ನು ದೊಡ್ಡದಾದ ಬ್ಯಾಂಕುಗಳೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ನಡೆದಿದ್ದು, ಈಗ ಹಲವಾರು ಬ್ಯಾಂಕುಗಳನ್ನು ಒಂದೇ ಬಾರಿಗೆ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಸರಕಾರ ಕೈ ಹಾಕಿದೆ. ಇದಕ್ಕೆ ಅದು ಕೊಡುತ್ತಿರುವ ಕಾರಣ ನಷ್ಟದಲ್ಲಿ ನಡೆಯುತ್ತಿರುವ ಬ್ಯಾಂಕಿನ ವ್ಯವಹಾರ.
ಮೊದಲ ಹಂತದಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ -ಈ ನಾಲ್ಕು ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ನಿಧಾನವಾಗಿ ಆರಂಭವಾಗಿದೆ. ನಂತರದ ಹಂತದಲ್ಲಿ ಐಡಿಬಿಐ, ಯುಕೋ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸುವ ಯೋಚನೆಯಲ್ಲಿದೆ. ಬಜೆಟ್ನಲ್ಲಿ ಸರಕಾರ ಈ ಬಗ್ಗೆ ಸುಳಿವು ನೀಡಿದ್ದರೂ ಅದು ಏಕಾಏಕಿ ಖಾಸಗೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಕೈಹಾಕುವ ಸಾಹಸ ಮಾಡಲಾರದು ಎನ್ನುತ್ತಾರೆ ತಜ್ಞರು. ಏಕೆಂದರೆ ಈ ಸುದ್ದಿ ಹೊರಬಂದ ನಂತರ ಅದಕ್ಕೆ ಬ್ಯಾಂಕ್ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡುವ ತಂತ್ರವನ್ನು ಕೇಂದ್ರ ಸರಕಾರ ಅನುಸರಿಸುತ್ತಿದೆ ಎಂದರೂ ತಪ್ಪಲ್ಲ. ಅಲ್ಲಲ್ಲಿ ಬ್ಯಾಂಕ್ ಖಾಸಗೀಕರಣದ ಬಗ್ಗೆ ಗುಸುಗುಸು 2017ರಲ್ಲಿ ಆರಂಭವಾಗಿತ್ತು. ಆದರೆ ಬ್ಯಾಂಕಿಂಗ್ ಒಕ್ಕೂಟಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸ್ವಲ್ಪಕಾಲ ಅದನ್ನು ತಡೆ ಹಿಡಿಯಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಗುಪ್ತವಾಗಿ ಸರಕಾರದೊಳಗೆ ಖಾಸಗೀಕರಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ನಡೆಯುತ್ತಿದೆ ಎನ್ನಲಾಗಿದೆ.
ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಹಲವಾರು ಪರ ಮತ್ತು ವಿರೋಧ ಚರ್ಚೆಗಳು ಹುಟ್ಟುಹಾಕಿದೆ. ಇತ್ತೀಚೆಗೆ ಹೆಚ್ಚಿನ ಸರಕಾರಿ ಬ್ಯಾಂಕುಗಳು ತೀರಾ ನಷ್ಟದಲ್ಲಿ ನಡೆಯುತ್ತಿವೆ ಮತ್ತು ಅವುಗಳು ನೀಡಿದ ಸಾಲಗಳೂ ಸರಿಯಾಗಿ ಮರುಪಾವತಿ ಆಗುತ್ತಿಲ್ಲ ಮತ್ತು ಅವುಗಳಲ್ಲಿ ಲಾಭರಹಿತ ಆಸ್ತಿಗಳ ಮೊತ್ತವು ಬೆಟ್ಟದಷ್ಟು ಬೆಳೆಯುತ್ತಿದೆ. ಮತ್ತೊಂದು ವಾದವೆಂದರೆ ಖಾಸಗಿ ಕಂಪೆನಿಗಳ ಮಾರುಕಟ್ಟೆಯ ಸಾಲದ ಪಾಲು ಶೇ. 21.6ರಿಂದ (2020)ರಿಂದ ಶೇ. 36ಕ್ಕೆ (2021) ಏರಿದೆ. ಆದರೆ ಸರಕಾರಿ ಬ್ಯಾಂಕುಗಳ ಪಾಲು ಶೇ. 74.28ರಿಂದ 59.8ಕ್ಕೆ ಇಳಿದಿದೆ. ಅಲ್ಲದೆ ಅಲ್ಪಸ್ವಲ್ಪ ಲಾಭಗಳು ಸಹ ಬ್ಯಾಂಕುಗಳ ಉದ್ಯೋಗಿಗಳ ಸೌಲಭ್ಯಗಳಿಗೆ ಹೋಗುತ್ತಿದೆ. ಈಗಾಗಲೇ ನಷ್ಟದಲ್ಲಿರುವ ಕೆಲವು ಸರಕಾರಿ ಬ್ಯಾಂಕುಗಳನ್ನು ನಡೆಸಲು ತೆರಿಗೆದಾರರ ಹೆಚ್ಚು ಕಡಿಮೆ ಎರಡು ಬಿಲಿಯನ್ ಹಣವನ್ನು ಸರಕಾರ ಖರ್ಚು ಮಾಡಿದೆ. ಅಲ್ಲದೆ ಹೆಚ್ಚಿನ ಸರಕಾರಿ ಬ್ಯಾಂಕುಗಳಲ್ಲಿ ಹೊಸ ತಂತ್ರಜ್ಞಾನ, ಉತ್ಪನ್ನಗಳು ಮತ್ತು ಸೇವೆಯ ವಿಚಾರದಲ್ಲಿ ಆಧುನಿಕತೆಯ ಸ್ಪರ್ಶವನ್ನು ಅಷ್ಟಾಗಿ ಪಡೆದಿಲ್ಲ. ಈ ವಿಚಾರದಲ್ಲಿ ಖಾಸಗಿ ಬ್ಯಾಂಕುಗಳು ಬಹಳ ಮುಂದಿವೆೆ. ಕೋಟ್ಯಂತರ ಸಾಲ ಪಡೆದ ಉದ್ಯಮಿಗಳು ಸರಿಯಾಗಿ ಸಾಲವನ್ನು ಬಡ್ಡಿ ಸಮೇತ ಮರು ಪಾವತಿ ಮಾಡುತ್ತಿಲ್ಲ. ಸರಕಾರವೂ ಸಹ ಬ್ಯಾಂಕುಗಳಿಂದ ಪಡೆಯುತ್ತಿರುವ ಲಾಭದ ಅಂಶವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿದೆ. ಸರಕಾರಿ ಬ್ಯಾಂಕುಗಳು ಪ್ರತಿಯೊಂದಕ್ಕೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಕೇಂದ್ರ ಸರಕಾರವನ್ನು ಅವಲಂಬಿಸಬೇಕಾಗುತ್ತದೆ.
ಈ ಎಲ್ಲಾ ಸಮಸ್ಯೆಗಳಿಗೆ ಖಾಸಗೀಕರಣವೇ ಒಂದು ಪರಿಹಾರ ಅಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ದೇಶದ ಹೆಮ್ಮೆಯಾದ ರಾಷ್ಟ್ರೀಯ ಬ್ಯಾಂಕುಗಳನ್ನು ಏಕಾಏಕಿ ಖಾಸಗೀಕರಣಗೊಳಿಸುವುದು ಒಂದು ಭಾವನಾತ್ಮಕ ವಿಚಾರ ಎಂದರೂ ತಪ್ಪಲ್ಲ. ಈಗ ಖಾಸಗೀಕರಣಗೊಳಿಸಲು ಹೊರಟಿರುವ ಬ್ಯಾಂಕುಗಳಲ್ಲಿ ಲಾಭರಹಿತ ಆಸ್ತಿಗಳ ಮೊತ್ತವು ಹೆಚ್ಚಾಗಿರುವುದರಿಂದ ಅವುಗಳನ್ನು ಕೊಳ್ಳಲು ಖಾಸಗಿಯವರು ಮುಂದೆ ಬರುತ್ತಾರೆಯೇ ಎನ್ನುವುದು ಮೊದಲ ಪ್ರಶ್ನೆ. ಏಕೆಂದರೆ ಒಂದೊಮ್ಮೆ ಅಂತಹ ಬ್ಯಾಂಕುಗಳನ್ನು ಕೊಳ್ಳಬೇಕಾದರೆ (ಅಂದರೆ ಆ ಬ್ಯಾಂಕುಗಳಲ್ಲಿ ಹೆಚ್ಚಿನ ಶೇರುಗಳನ್ನು ಖಾಸಗಿಯವರು ಖರೀದಿಸಬೇಕಾದರೆ)ಅವರು ಸಹ ಕೋಟ್ಯಂತರ ಬಂಡವಾಳ ಬ್ಯಾಂಕಿನ ಮೇಲೆ ಹೂಡಬೇಕಾಗುತ್ತದೆ. ಎಲ್ಲ ಬ್ಯಾಂಕುಗಳನ್ನು ಹೀಗೆ ನಿಧಾನವಾಗಿ ಖಾಸಗೀಕರಣಗೊಳಿಸುತ್ತ ಹೋದರೆ ಭಾರತದ ಆರ್ಥಿಕರಂಗದಲ್ಲಿ ವಿದೇಶಿ ಹೂಡಿಕೆದಾರರ ಹಿಡಿತ ಹೆಚ್ಚಾಗಬಹುದು. ಆಗ ವಿದೇಶದ ಬಂಡವಾಳದ ಮೇಲೆ ನಾವು ಅವಲಂಬಿತವಾಗ ಬೇಕಾಗುತ್ತದೆ. ಕೆಲವು ಆರ್ಥಿಕ ತಜ್ಞರ ಪ್ರಕಾರ 2008ರಲ್ಲಿ ಇಡೀ ವಿಶ್ವವೇ ಅನುಭವಿಸಿದ ಆರ್ಥಿಕ ಹಿಂಜರಿತದಿಂದ ಭಾರತವು ತಪ್ಪಿಸಿಕೊಂಡಿದ್ದು ಸರಕಾರಿ ಬ್ಯಾಂಕುಗಳ ಕಾರ್ಯಕ್ಷಮತೆಯಿಂದ.
ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರಿಂದ ಎಷ್ಟು ಲಾಭವಿದೆಯೋ ಅಷ್ಟೇ ಸಮಸ್ಯೆಗಳು ಉಂಟಾಗುತ್ತದೆ. ಮೊದಲು ಇಂತಹ ಬ್ಯಾಂಕ್ಗಳಿಗೆ ಸಂಬಂಧಿಸಿದ ನೀತಿ ನಿಯಮಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬೇಕಾಗಿದೆ. ಸಂಪೂರ್ಣ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಬದಲಾಗಿ ಖಾಸಗಿ ಸಹಭಾಗಿತ್ವದಲ್ಲಿ ಅಂತಹ ಬ್ಯಾಂಕುಗಳನ್ನು ಲಾಭದ ಹಾದಿಗೆ ತರಬಹುದು. ಅತಿಯಾಗಿ ನಷ್ಟದಲ್ಲಿರುವ ದೇಶ ಮತ್ತು ವಿದೇಶಗಳಲ್ಲಿರುವ ಕೆಲವು ಶಾಖೆಗಳನ್ನು ಮುಚ್ಚಬಹುದು. ಹೆಚ್ಚಿನ ಉದ್ಯೋಗಿಗಳು ವೈಯಕ್ತಿಕ ನಿವೃತ್ತಿಯೋಜನೆಯನ್ನು ಆಯ್ದುಕೊಳ್ಳುವಂತೆ ಮಾಡಬಹುದು. ತೀರಾ ನಷ್ಟದಲ್ಲಿದ್ದರೆ ಅದನ್ನು ದೊಡ್ಡ ಮತ್ತು ಲಾಭದಲ್ಲಿರುವ ಬ್ಯಾಂಕುಗಳೊಂದಿಗೆ ವಿಲೀನ ಮಾಡುವುದು ಉತ್ತಮ ಎನ್ನುತ್ತಾರೆ ಕೆಲವು ಆರ್ಥಿಕ ತಜ್ಞರು.
ಇತ್ತೀಚೆಗೆ ಐಸಿಐಸಿಐ ಬ್ಯಾಂಕ್ನಲ್ಲಿ ನಡೆದ ದೊಡ್ಡ ಮೋಸದ ಹಗರಣ, ಎಸ್ ಬ್ಯಾಂಕ್ ಸಾಲದ ಸುಳಿಯಲ್ಲಿ ಸಿಲುಕಿದ್ದು ಮತ್ತು ಲಕ್ಷ್ಮೀವಿಲಾಸ್ ಬ್ಯಾಂಕ್ನ ನಷ್ಟವನ್ನು ತಪ್ಪಿಸಲು ಅದನ್ನು ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನ ಮಾಡಿದ್ದು ಇವೆಲ್ಲವನ್ನು ಗಮನಿಸಿದರೆ ಬ್ಯಾಂಕುಗಳ ಖಾಸಗೀಕರಣ ಮುಂದಿನ ದಿನಗಳಲ್ಲಿ ಬಹಳಷ್ಟು ಇಂತಹ ಪ್ರಕರಣಗಳಿಗೆ ದಾರಿ ಮಾಡಿಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ. ಸರಕಾರಿ ಬ್ಯಾಂಕುಗಳಲ್ಲೇ ಇತ್ತೀಚಿನ ದಿನಗಳಲ್ಲಿ ನಡೆಯುವ ಮೋಸವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ಖಾಸಗಿಯವರ ಕಥೆಯೇನು? ಒಂದೊಮ್ಮೆ ಮೋಸದ ಹಗರಣಗಳು ನಡೆದರೆ ಇಲ್ಲಿಟ್ಟಿರುವ ಸಾರ್ವಜನಿಕ ಹಣಕ್ಕೆ ಯಾರು ರಕ್ಷಣೆ ನೀಡುತ್ತಾರೆ? ಸರಕಾರಿ ಬ್ಯಾಂಕುಗಳ ಸೇವೆ ಮತ್ತಿತರ ವಿಚಾರಗಳಲ್ಲಿ ಬದಲಾವಣೆಯನ್ನು ತರುವಲ್ಲಿ ಡಿಜೆ ನಾಯಕ್ ಸಮಿತಿಯ ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕೆ ಕೆಲವರು ಒತ್ತಾಯಿಸುತ್ತಾರೆ. ಅಲ್ಲದೆ ಸರಕಾರಿ ಬ್ಯಾಂಕುಗಳನ್ನು ಸಾರಾಸಗಟಾಗಿ ಖಾಸಗೀಕರಣಗೊಳಿಸುವುದರ ಬದಲಾಗಿ ನಷ್ಟದಲ್ಲಿರುವ ಬ್ಯಾಂಕುಗಳನ್ನು ಎಲ್ಐಸಿ ಮಾದರಿಯಲ್ಲಿ ಪರಿವರ್ತನೆಗೊಳಿಸುವುದು ಒಳ್ಳೆಯದು. ಇದರಿಂದ ಸಂಪೂರ್ಣ ಆಡಳಿತ ಸರಕಾರದ ಕೈಯಲ್ಲಿ ಇದ್ದರೂ ಸಹ ಆಂತರಿಕ ಸ್ವಾಯತ್ತತೆ ಇದ್ದೇ ಇರುತ್ತದೆ ಎನ್ನುತ್ತಾರೆ ಆರ್ಥಿಕತಜ್ಞರು.
ಈಗ ಖಾಸಗೀಕರಣಗೊಳಿಸಲು ಹೊರಟಿರುವ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಗಮನಿಸಿದರೆ ಸದ್ಯಕ್ಕೆ ಯಾವುದೇ ಖಾಸಗಿಯವರು ನಷ್ಟದಲ್ಲಿರುವ ಬ್ಯಾಂಕುಗಳನ್ನು ಕೊಳ್ಳಲು ಮುಂದೆ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇಂತಹ ಬ್ಯಾಂಕುಗಳು ವಿಪರೀತವಾದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿವೆ. ಇದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ಅಲ್ಲದೆ ಈ ಬ್ಯಾಂಕುಗಳಲ್ಲಿ ಲಕ್ಷಾಂತರ ಜನರು ಕಾರ್ಯನಿರ್ವಹಿಸುತ್ತಿದ್ದು ಖಾಸಗೀಕರಣಕ್ಕೆ ಅವರೆಲ್ಲರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ವರ್ಷ ಸರಕಾರಿ ನೌಕರರಾಗಿದ್ದ ಇವರನ್ನು ನಿಭಾಯಿಸುವುದು ಖಾಸಗಿಯವರಿಗೆ ಅಷ್ಟು ಸುಲಭದ ವಿಚಾರವಾಗುವುದಿಲ್ಲ. ಒಂದೊಮ್ಮೆ ಅಂತಹ ಬ್ಯಾಂಕುಗಳನ್ನು ಖಾಸಗಿಯವರು ಕೊಂಡುಕೊಂಡರೂ ಅಧಿಕ ಪ್ರಮಾಣದಲ್ಲಿರುವ ಉದ್ಯೋಗಿಗಳ ಸಂಬಳ ಮತ್ತು ಮತ್ತಿತರ ಸೌಲಭ್ಯಗಳನ್ನು ಏಕಾಏಕಿ ಕಡಿತಗೊಳಿಸಲು ಸಾಧ್ಯವಿಲ್ಲ.
ಏಕೆಂದರೆ ಈ ಬ್ಯಾಂಕುಗಳ ಅಲ್ಪಸ್ವಲ್ಪಲಾಭವು ಉದ್ಯೋಗಿಗಳ ಸಂಬಳ ಮತ್ತು ಸೌಲಭ್ಯಗಳಿಗೆ ಹೋಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಲಾಭದ ಹಾದಿಯಲ್ಲಿ ಬ್ಯಾಂಕುಗಳನ್ನು ಕೊಂಡೊಯ್ಯಲು ಇನ್ನು ಹತ್ತಾರು ವರ್ಷಗಳೇ ಖಾಸಗಿಯವರಿಗೆ ಬೇಕಾಗಬಹುದು. ಅಲ್ಲದೆ ಏಕಾಏಕಿ ಬ್ಯಾಂಕುಗಳ ಖಾಸಗೀಕರಣ ರಾಜಕೀಯ ವಿಪ್ಲವವನ್ನು ಸಹ ಮುಂದಿನ ದಿನಗಳಲ್ಲಿ ಉಂಟುಮಾಡಬಹುದು. ಇನ್ನು ಕೆಲವು ತಜ್ಞರ ಪ್ರಕಾರ ಬ್ಯಾಂಕುಗಳ ಖಾಸಗೀಕರಣವನ್ನು ಒಂದು ಪ್ರಯೋಗಾತ್ಮಕ ದೃಷ್ಟಿಯಿಂದ ನೋಡಬೇಕಾಗುತ್ತದೆ. ವಿದೇಶಗಳಲ್ಲಿ ಖಾಸಗಿ ಬ್ಯಾಂಕುಗಳು ಸಂಪೂರ್ಣ ಯಶಸ್ಸನ್ನು ಕಂಡಿದ್ದರೂ ಭಾರತದಲ್ಲಿ ಬ್ಯಾಂಕುಗಳ ಖಾಸಗೀಕರಣ ಮುಂದಿನ ದಿನಗಳಲ್ಲಿ ಸಂಪೂರ್ಣ ಯಶಸ್ಸು ಕಾಣುವುದರ ಕುರಿತು ಆರ್ಥಿಕತಜ್ಞರಲ್ಲಿ ಹಲವಾರು ಅನುಮಾನಗಳಿವೆ.