varthabharthi


ಮುಂಬೈ ಸ್ವಗತ

ಮುಂಬೈಯಲ್ಲಿ ‘ಭೂತಾರಾಧನೆ’ಯ ಪಲ್ಲಟಗಳು

ವಾರ್ತಾ ಭಾರತಿ : 19 Mar, 2021
ದಯಾನಂದ ಸಾಲ್ಯಾನ್

ಕೋಲ/ನೇಮ ಕಟ್ಟುವವರಾಗಲೀ, ಮಾಡಿಸುವವರಾಗಲೀ ದೈವ-ದೇವರುಗಳ ವ್ಯತ್ಯಾಸವನ್ನು ಅರಿತಿರಬೇಕು. ಸಂಕೀರ್ಣವಾದ ಆರಾಧನಾ ಕಲೆಯನ್ನು ಅದರ ವ್ಯಾಪ್ತಿಯಲ್ಲಿ ಅಂದಗೆಡದಂತೆ, ಆಡಂಬರ ರಹಿತವಾಗಿ ಆಚರಣೆಗೆ ಒಳಪಡಿಸಿದರೆ ಅಲ್ಲಿ ‘ನಂಬಿದ ಸತ್ಯಗಳು’ ಒಲಿದು ಬರಬಹುದು. ಅದನ್ನು ಬಿಟ್ಟು ಪ್ರತಿಷ್ಠೆಗಾಗಿ ನಡೆಸಿದರೆ ಅದು ಡಂಭಾಚಾರ ಹಾಗೂ ಅರ್ಥಹೀನವಾಗುತ್ತದೆ. ತನ್ನದೇ ಆದ ಸ್ವರೂಪವನ್ನು, ಅನನ್ಯತೆಯನ್ನು ಮೈಗೂಡಿಸಿಕೊಂಡಿರುವ, ಯಾವುದೇ ಸೃಜನಶೀಲತೆಗೆ ಒಗ್ಗದ ನಿಜವಾದ ‘ರಿಚುವಲ್ ಥಿಯೇಟರ್’ ಆಗಿರುವ ದೈವಾರಾಧನೆಯ ಆಚರಣೆಯ ಅಸ್ತಿತ್ವದ ಉಳಿವು ಮುಂಬೈಗರ ಮಾತ್ರವಲ್ಲ, ಸಕಲ ತುಳುವರ ಜವಾಬ್ದಾರಿಯಾಗಿದೆ.ವಿವಿಧ ಭಾಷೆ, ಹಲವಾರು ಜಾತಿ ಮತ ಧರ್ಮ, ವೈವಿಧ್ಯಮಯ ಸಂಸ್ಕೃತಿಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾ, ಸರ್ವರೊಳಗೆ ಒಂದಾಗಿ ಬಾಳುವುದು ಮುಂಬೈ ನಗರದ ಮಣ್ಣಿನ ಗುಣ. ತುಳುವರ ವಲಸೆಯ ಜೊತೆ ಜೊತೆಗೇ ತುಳು ನಾಡಿನ ‘ದೈವಗಳು ಅಥವಾ ಭೂತಗಳು’ ಮುಂಬೈ ನಗರಕ್ಕೆ ಪಯಣ ಬೆಳೆಸಿದ ಹಿನ್ನೆಲೆ ಅತ್ಯಂತ ಕುತೂಹಲಕರ. ಕಥೆಗಳಿಂದ, ಪಾಡ್ದನಗಳಿಂದ ನಾವು ತಿಳಿದಿರುವಂತೆ ಗಟ್ಟೊಡು ಬೆರಿಪತ್‌ದ್ (ಘಟ್ಟದಿಂದ ಇಳಿದು) ಬಂದ ದೈವಗಳು ಮುಂದೆ ತುಳುನಾಡು ಸೀಮೆಯನ್ನು ದಾಟಿ ನೆರೆ ಜಿಲ್ಲೆಗಳಿಗೆ ಹೋದದ್ದಿವೆ. ಹಾಗೆಯೇ ‘ಪರವೂರು’ ಮುಂಬೈಗೆ ನಮ್ಮವರು ಬಂದು ಸೇರಿದ್ದ ಇತಿಹಾಸದೊಂದಿಗೆ ಇಲ್ಲಿ ದೈವಾರಾಧನೆಯ ಇತಿಹಾಸವು ಪ್ರಾರಂಭಗೊಳ್ಳುತ್ತದೆ. ತಾನು ಉಳಿದುಕೊಳ್ಳುತ್ತಿದ್ದ ಜಾಗದಲ್ಲಿ ತನ್ನ ಪೆಟ್ಟಿಗೆಯಲ್ಲಿ ಜೋಪಾನವಾಗಿರಿಸಿದ ‘ಪ್ರಸಾದ’ದ ಕಟ್ಟಿನ ಜೊತೆ ಜೊತೆಗೆ ದೈವಾರಾಧನೆ ಇಲ್ಲಿ ಅಸ್ತಿತ್ವ ಪಡೆಯುತ್ತದೆ.

ಮುಂದೆ ದೈವ ನೀಡಿದ ಗಂಧಪ್ರಸಾದ, ತೆಂಗಿನಕಾಯಿ, ಪುರ್ಪದ ಜೊತೆಗೆ ಮುಂಬೈಗೆ ಆಗಮಿಸಿದ ದೈವ, ಇಲ್ಲಿನ ಚಿಕ್ಕ ಕೊಠಡಿಗಳಲ್ಲಿದ್ದ ದೇವರ ಮಂಟಪದಲ್ಲಿನ ದೇವರ ಫೋಟೊಗಳ ಜೊತೆಗೆ ತಾನೂ ಆರಾಧನೆಗೆ ಒಳಗಾಯಿತು. ಇಲ್ಲಿ ಅನ್ಯರ ನಡುವಿನ ತನ್ನ ಒಂಟಿ ಬದುಕಿಗೆ ಭಯ, ಅಭದ್ರತೆ ಕಾಡುತ್ತಿರುವಾಗ, ತನ್ನ ರಕ್ಷಣೆಗೆ ತಾನು ‘ನಂಬಿದ ಸತ್ಯ’ ತನ್ನ ಬೆನ್ನ ಹಿಂದಿದೆ ಎಂಬ ನಂಬಿಕೆಯೇ ಇಲ್ಲಿನ ದೈವಾರಾಧನೆಯ ಮೂಲಬೇರು. ಮುಂದೆ ಭೂಸುಧಾರಣಾ ಮಸೂದೆಯಿಂದ ಭೂಮಿ ಕಳೆದುಕೊಂಡವರು ಮುಂಬೈಗೆ ಬಂದು ಬದುಕನ್ನು ಮರು ನಿರ್ಮಿಸಲು ಒದ್ದಾಡುತ್ತಿರುವಾಗ, ಜಾಗತೀಕರಣದ ದಾಳಿಯಿಂದ ಕರಾವಳಿಯಲ್ಲಿ ನೆಲೆ ಕಳೆದುಕೊಂಡ ಹುಡುಗರು ಮುಂಬೈಗೆ ವಲಸೆ ಹೋದಾಗ ಅವರಿಗೆ ಅಭಯ ನೀಡಿ ಕೈ ನಡೆಸಿದ್ದು ದೈವಗಳೇ ಆಗಿವೆ. ಕೆಲವರು ತಮ್ಮ ಮನೆ, ತಮ್ಮ ಕುಟುಂಬದ ಮನೆ ತೊರೆದು ಬೇರೆಡೆಗೆ ಹೋಗಬೇಕಾದ ಅನಿವಾರ್ಯತೆ ಬಂದಿತ್ತು. ಆಗ ಅವರು ನಂಬಿದ ದೈವಗಳು ಅವರೊಟ್ಟಿಗೆ ಅವರ ಹೊಸ ನೆಲೆಗಳಿಗೆ ಸೇರಿದವು. ಆ ಸಂದರ್ಭದಲ್ಲಿ ಬಹಳಷ್ಟು ದೈವಗಳು ಮುಂಬೈ ನಗರವನ್ನು ಸೇರಿದ್ದರಲ್ಲಿ ಆಶ್ಚರ್ಯವಿಲ್ಲ. ಕೊನೆಗೂ ಮಾನಸಿಕ ನೆಮ್ಮದಿಗಾಗಿ ಆರಾಧಿಸಲ್ಪಡುತ್ತಿದ್ದ ಸಂಕೀರ್ಣವಾದ ದೈವಾರಾಧನೆ ಅದು ಹೇಗೆ ಪ್ರತಿಷ್ಠೆಯಾಗಿ, ತೋರಿಕೆಯಾಗಿ ಬದಲಾಯಿತೋ ತಿಳಿಯಲಾರದು. ತುಳುನಾಡಿನಲ್ಲಿ ಈ ಪರಿವರ್ತನೆ ನಡೆದಾಗ ಮುಂಬೈಗೆ ಅದರ ‘ಗಾಳಿ ತಟ್ಟು’ವುದಕ್ಕೆ ಹೆಚ್ಚು ದಿನ ಕಾಯುವ ಅಗತ್ಯವಿಲ್ಲವಲ್ಲ.

ಮುಂಬೈಯಲ್ಲಿ ದೈವಾರಾಧನೆಗೆ ನೂರೈವತ್ತು ವರ್ಷಕ್ಕಿಂತಲೂ ಹೆಚ್ಚು ಇತಿಹಾಸವಿದ್ದರೆ, ಇಲ್ಲಿನ ಕೋಲ-ನೇಮ ಇತರ ಆಚರಣೆಗೆ ಸುಮಾರು ಅರುವತ್ತು ವರ್ಷಗಳ ಇತಿಹಾಸವಿರುವುದನ್ನು ನಾವು ಗಮನಿಸುತ್ತೇವೆ. ಇಲ್ಲಿನ ಜನರು ಆರಾಧಿಸುತ್ತಿದ್ದ ದೇವಿಯ ಮಂಟಪದಲ್ಲಿ ದೈವವನ್ನು ಆರಾಧಿಸಲು ಪ್ರಾರಂಭಿಸಿದ ಜನ, ಆರಂಭದಲ್ಲಿ ಭಜನೆಯ ಮೂಲಕ ಆನಂತರ ದೈವಕ್ಕೆ ವರ್ಷಾವಧಿ ತಂಬಿಲದ ಮೂಲಕ, ಮುಂದೆ ಕೋಲ-ನೇಮಗಳ ಮೂಲಕ ತಮ್ಮ ಭಕ್ತಿಯನ್ನು ಪ್ರಕಟಿಸುತ್ತಾ ಬಂದಿದ್ದಾರೆ.
ಆದರೆ ಈ ದೈವರಾಧನೆಯ ವೈಶಿಷ್ಟವಾದ ‘ಕೋಲ’ವನ್ನು ಇಂದಿನ ಪೀಳಿಗೆ ‘ಡೆವಿಲ್ ಡ್ಯಾನ್ಸ್’ ಎಂದು ಕರೆಯುವ ಮಟ್ಟಕ್ಕೆ ಬಂದಿದ್ದು ವಿಪರ್ಯಾಸ.

 ಸುಮಾರು ಹದಿನೈದು-ಇಪ್ಪತ್ತು ವರ್ಷಗಳ ಹಿಂದಿನ ಒಂದು ಘಟನೆಯನ್ನು ಗಮನಿಸೋಣ. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮತ್ತು ಇಲ್ಲಿನ ಬಿಲ್ಲವರ ಅಸೋಸಿಯೇಶನ್ ಈ ಮೂರೂ ಎತ್ತರದ, ಮಹತ್ವದ ಸಂಸ್ಥೆಗಳು. ಅದರಲ್ಲೂ ಈ ಮೂರೂ ಸಂಸ್ಥೆಗಳು ಸೇರಿ ಕಾರ್ಯಕ್ರಮ ಮಾಡಿದರೆ ಅದರ ಮಹತ್ವವನ್ನು ನಾವು ಗಮನಿಸಬೇಕು. ಅಂತಹ ಕಾರ್ಯಕ್ರಮವೊಂದರಲ್ಲಿ ಮುಂಬೈಯ ಓರ್ವ ವಿದ್ವಾಂಸರು ‘‘ಭೂತಾರಾಧನೆ ಕರಾವಳಿ ಕರ್ನಾಟಕದ ಜನರು ಕೋಳಿಮಾಂಸ ತಿನ್ನುವುದಕ್ಕಾಗಿ ಆಚರಿಸುತ್ತಿದ್ದಾರೆ’’ ಎಂಬ ಬೀಸು ಹೇಳಿಕೆ ನೀಡಿದರು. ಅವರ ಹೇಳಿಕೆ ಅಲ್ಲಿಗೇ ನಿಂತಿದ್ದರೂ ಒಳ್ಳೆಯದಿತ್ತು. ಆ ಹೇಳಿಕೆಗೆ ಭಿನ್ನಾಭಿಪ್ರಾಯ ಬಂದಾಗ, ಆ ವಿದ್ವಾಂಸರು ಅದನ್ನೇ ಸರಿಯೆಂದು ವಾದಿಸುವುದಕ್ಕೆ ಮುಂದಾದರು. ಸೇರಿದ್ದವರಲ್ಲಿ ಡಾ. ಸುನೀತಾ ಎಂ. ಶೆಟ್ಟಿ, ಸಿಮಂತೂರು ಚಂದ್ರಹಾಸ ಸುವರ್ಣ ಮೊದಲಾದವರು ಸಾಕಷ್ಟು ವಿವರಣೆ ಕೊಟ್ಟರೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಡಾ. ವಸಂತಕುಮಾರ್ ತಾಳ್ತಜೆ ಅವರು ‘‘ನೀವು ಹೇಳುತ್ತಿರುವುದು ತಪ್ಪು. ನಿಮ್ಮ ಮಾತನ್ನು ಸಮರ್ಥಿಸಲು ಸಾಧ್ಯವಿಲ್ಲ, ನೀವು ಕುಳಿತುಕೊಳ್ಳಿ’’ ಎಂದು ಹೇಳಬೇಕಾದ ಅನಿವಾರ್ಯತೆ ಉಂಟಾಯಿತು. ಕೋಳಿಮಾಂಸ ತಿನ್ನಲು ಭೂತಾರಾಧನೆಯ ಅಗತ್ಯ ತುಳುವರಿಗೆ ಇಲ್ಲ. ಅದಕ್ಕಾಗಿ ಬೇಕಾದಷ್ಟು ಸಂದರ್ಭಗಳಿರುತ್ತವೆ. ಓರ್ವ ವಿದ್ವಾಂಸರಾದವರು ಇಂತಹ ಬಾಲಿಶ ಹೇಳಿಕೆ ನೀಡುವಾಗ, ಸಂಸ್ಕೃತಿಯ ಕುರಿತಂತೆ ಅರಿವಿರದ ಹೊಸ ತಲೆಮಾರು ಕೋಲವನ್ನು ‘ಡೆವಿಲ್ ಡ್ಯಾನ್ಸ್’ ಎಂದು ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಮುಂದೆ ಆ ವಿದ್ವಾಂಸರು ಇನ್ನೂ ಹಲವೆಡೆ ಅದೇ ಮಾತನ್ನು ಸಮರ್ಥಿಸಲು ಮುಂದಾದುದು ವಿಪರ್ಯಾಸ.

ದೈವಾರಾಧನೆ ಎಂಬುದು ಜನರ ನಂಬಿಕೆ. ಅದೊಂದು ಆಚರಣಾ ಪದ್ಧತಿ; ಅದೊಂದು ಶ್ರದ್ಧೆ. ಬಹಳ ವಾಸ್ತವಿಕವಾದ ಈ ಆಚರಣೆಯಲ್ಲಿ ಭಕ್ತಿ ಮುಖ್ಯ. ಇದನ್ನು ಭಯ ಭಕ್ತಿಯಿಂದ ಕೂಡಿದ ಆಚರಣಾ ರಂಗಭೂಮಿ ಎಂದೂ ಗುರುತಿಸಲಾಗಿದೆ. ಇಂತಹ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆಯ ಬಗ್ಗೆ ಇಂತಹ ಹೇಳಿಕೆಗಳು ಸಲ್ಲದು. ಅದ್ಭುತ ಭ್ರಮಾ ಲೋಕವನ್ನು ಸೃಷ್ಟಿಸುವ ಈ ಕಲೆಗಾರಿಕೆ ವಿದೇಶಿ ವಿದ್ವಾಂಸರನ್ನು ಆಕರ್ಷಿಸಿದ್ದ ಒಂದು ಜಾನಪದ ಆರಾಧನಾ ರಂಗಭೂಮಿ. ಮುಂಬೈಯಂತಹ ನಗರಗಳಲ್ಲಿ ದೈವಗಳನ್ನು ಮನೆಯೊಳಗೆ ಆರಾಧಿಸುವುದರಲ್ಲಿ ತಪ್ಪಿಲ್ಲ. ಆದರೆ ಕೋಲ ನೇಮೋತ್ಸವಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಸಹಜವಾಗಿದೆ. ಕೇವಲ ಆಡಂಬರಕ್ಕೆ, ತೋರಿಕೆಗೆ ಕೋಲ, ನೇಮೋತ್ಸವಗಳು ಸಲ್ಲದು. ಇದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಾ ಬಂದಿರುವುದನ್ನು ನಾವು ಕಾಣಬಹುದು. ಬೊರಿವಿಲಿಯ ರಾಜೇಂದ್ರನಗರ ಹಾಗೂ ದೇವುಲ್‌ಪಾಡಗಳಲ್ಲಿ ಕೋಟಿ ಚೆನ್ನಯರ ಆರಾಧನೆಯ ಅಂಗವಾಗಿ ವರ್ಷಂಪ್ರತಿ ನೇಮೋತ್ಸವ ನಡೆಯುತ್ತಿದ್ದರೆ, ಉಳಿದೆಡೆ ಬೇರೆಬೇರೆ ದೈವಗಳ ಕೋಲ ನಡೆಯುತ್ತಾ ಇವೆ.

ಅವುಗಳಲ್ಲಿ ಬಾಂದ್ರಾ ಖೇರ್‌ವಾಡಿಯ ಜುಮಾದಿ ದೈವ ಹಾಗೂ ಗೋವಂಡಿ ಬೈಂಗನ್‌ವಾಡಿಯ ಕಲ್ಕುಡ, ಕಲ್ಲುರ್ಟಿ ದೈವಗಳ ಕೋಲವು ಪ್ರಾರಂಭದ ಹಂತದ್ದಾದರೆ, ಮುಂದೆ ಮುಲುಂಡುನಲ್ಲಿ ಕಲ್ಲುರ್ಟಿ, ಇಂದ್ರಲೋಕ ಬೈಂದರ್‌ನಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಕಾಂದಿವಿಲಿಯಲ್ಲಿ ಕಲ್ಕುಡ, ಕಲ್ಲುರ್ಟಿ, ಗುಳಿಗ, ಘಾಟ್ಕೋಪರ್‌ನ ಅಸಲ್ಫಾದ ಚಾಮುಂಡಿ, ಗ್ರಾಂಟ್‌ರೋಡ್‌ನಲ್ಲಿ (ದೈವದ ಮಾಹಿತಿ ದೊರೆತಿಲ್ಲ), ಭೀವಂಡಿಯಲ್ಲಿ ಸತ್ಯದೇವತೆ, ಸನ್ಯಾಸ ಮಂತ್ರ ದೇವತೆ, ಗುಳಿಗ, ಕಿಂಗ್‌ಸರ್ಕಲ್‌ನಲ್ಲಿ ಕಲ್ಕುಡ, ಕಲ್ಲುರ್ಟಿ, ಪರಿವಾರ ದೈವಗಳು... ಹೀಗೆ ಹತ್ತು ಹಲವೆಡೆ ದೈವಗಳ ಆರಾಧನೆ ಜೊತೆಗೆ ವಾರ್ಷಿಕ ನೇಮ, ಕೋಲೋತ್ಸವಗಳು ಜರುಗುತ್ತವೆ. ಹೌದು ಇದು ಒಂದು ರೀತಿಯ ಉತ್ಸವವೇ ಆಗಿದೆ. ಇಲ್ಲಿ ಕೋಲ/ನೇಮಗಳನ್ನು ನಡೆಸುತ್ತಿರುವವರು ಬಿಲ್ಲವರು (ಗೋವಂಡಿಯಲ್ಲಿ ಮಾತ್ರ ಬಂಟರು) ಎನ್ನುವುದು ಚಿಂತನೆಗೆ ಗ್ರಾಸ ನೀಡುವಂತಹದ್ದು. ಇಲ್ಲಿ ಒಂದು ಕಡೆ ಕೋಲ/ನೇಮ ಕಟ್ಟಲೆಂದು ಬಂದ ವ್ಯಕ್ತಿ ‘‘ಯಾನ್ ಮೂಲು ಬತ್ತುದು ನಾಟಕ ಮಲ್ತೆ, ನನ ಯಾನ್ ಇಡೆ ಬರಯೆ’’ (ನಾನು ಇಲ್ಲಿ ಬಂದು ನಾಟಕ ಮಾಡಿದಂತಾಯಿತು. ಇನ್ನು ಇಲ್ಲಿಗೆ ಬರಲಾರೆ) ಎಂದು ಹೇಳುವುದರಲ್ಲಿ ಅದರ ಸ್ಥಿತಿಯನ್ನು ಗಮನಿಸಬಹುದು.

ದೈವಗಳನ್ನು ಮೆರವಣಿಗೆಯಲ್ಲಿ, ವೇದಿಕೆಯ ಮೇಲೆ ಮನರಂಜನೆಗಾಗಿ ಬಳಸುವುದು ತಪ್ಪು, ಆದರೆ ದೈವದ ಮೂಲ ಆಶಯಕ್ಕೆ ಧಕ್ಕೆ ತಾರದೆ ಕಥೆಗೆ ಪೂರಕವಾಗಿದ್ದಾಗ ನಾಟಕಗಳಲ್ಲಿ ರಂಗದ ಮೇಲೆ ತರುವುದು ತಪ್ಪಲ್ಲ. ನಮ್ಮ ದೈವಾರಾಧನೆ ಅಥವಾ ಕೋಲ ನೇಮಗಳನ್ನು, ದೈವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ನುರಿತವರಿಂದ ಪ್ರಾತ್ಯಕ್ಷಿಕೆ, ಬಣ್ಣ, ವೇಷ ಭೂಷಣಗಳ ಪರಿಚಯ ಮಾಡಿಸಿದರೆ ಅದುವೂ ತಪ್ಪಲ್ಲ. ಅಂತಹ ಕಾರ್ಯ ಇಲ್ಲಿ ನಡೆದದ್ದೂ ಇದೆ. ಆದರೆ ನಮ್ಮವರಲ್ಲಿ ಕೆಲವರಿಗೆ ಎಲ್ಲದಕ್ಕೂ ಪ್ರತಿಭಟಿಸುವುದೇ ಒಂದು ಹಿರಿಮೆಯಾಗಿಹೋಗಿದೆ. ಎಚ್.ಬಿ.ಎಲ್. ರಾವ್ ಅವರ ಮುಂದಾಳುತ್ವದಲ್ಲಿ ಸಾಹಿತ್ಯ ಬಳಗ ತಂದಿರುವ ‘ಅಣಿ ಅರದಲ ಸಿರಿ ಸಿಂಗಾರ’ ಒಂದು ಮಹತ್ವದ ಕೃತಿ. ಒಂದು ದೈವದ ಅರದಲ, ತರೆಪಟ್ಟಿ, ತೊಡುವ ವಸ್ತ್ರಗಳು, ಅಣಿ, ಮುಗ ಮೊದಲಾದವುಗಳ ವಿವರಗಳನ್ನು ಒಳಗೊಂಡು ಮುಂದಿನ ಪೀಳಿಗೆಗೆ ಉಪಯುಕ್ತ ಮಾಹಿತಿ ಗ್ರಂಥವಾಗಿದೆ. ಇದರ ಪ್ರಾತ್ಯಕ್ಷಿಕೆ ಮಾಡಿ ಚಿತ್ರೀಕರಣ ಮಾಡುವುದು ಬಹಳ ಮಹತ್ವದ ಕಾರ್ಯ. ಅಂತಹ ಸಂದರ್ಭದಲ್ಲಿ ಅದು ನಡೆಯಕೂಡದೆಂಬ ಪಿತೂರಿಯೂ ನಡೆದದ್ದು ಒಂದು ವಿಪರ್ಯಾಸ.

ಕೋಲ/ನೇಮ ಕಟ್ಟುವವರಾಗಲೀ, ಮಾಡಿಸುವವರಾಗಲೀ ದೈವ-ದೇವರುಗಳ ವ್ಯತ್ಯಾಸವನ್ನು ಅರಿತಿರಬೇಕು. ಸಂಕೀರ್ಣವಾದ ಆರಾಧನಾ ಕಲೆಯನ್ನು ಅದರ ವ್ಯಾಪ್ತಿಯಲ್ಲಿ ಅಂದಗೆಡದಂತೆ, ಆಡಂಬರ ರಹಿತವಾಗಿ ಆಚರಣೆಗೆ ಒಳಪಡಿಸಿದರೆ ಅಲ್ಲಿ ‘ನಂಬಿದ ಸತ್ಯಗಳು’ ಒಲಿದು ಬರಬಹುದು. ಅದನ್ನು ಬಿಟ್ಟು ಪ್ರತಿಷ್ಠೆಗಾಗಿ ನಡೆಸಿದರೆ ಅದು ಡಂಭಾಚಾರ ಹಾಗೂ ಅರ್ಥಹೀನವಾಗುತ್ತದೆ. ತನ್ನದೇ ಆದ ಸ್ವರೂಪವನ್ನು, ಅನನ್ಯತೆಯನ್ನು ಮೈಗೂಡಿಸಿಕೊಂಡಿರುವ, ಯಾವುದೇ ಸೃಜನಶೀಲತೆಗೆ ಒಗ್ಗದ ನಿಜವಾದ ‘ರಿಚುವಲ್ ಥಿಯೇಟರ್’ ಆಗಿರುವ ದೈವಾರಾಧನೆಯ ಆಚರಣೆಯ ಅಸ್ತಿತ್ವದ ಉಳಿವು ಮುಂಬೈಗರ ಮಾತ್ರವಲ್ಲ, ಸಕಲ ತುಳುವರ ಜವಾಬ್ದಾರಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)