ಮುಕ್ತ ಚಿಂತನೆಗೆ ಅಪಾಯ ಕಟ್ಟಾ ಬಲಪಂಥೀಯರಿಂದ ಕಟ್ಟಾ ಎಡಪಂಥೀಯರ ಅನುಕರಣೆ
ಡೋರಾ ರಸ್ಸೆಲ್ ಬರೆದಿರುವ ಈ ವಾಕ್ಯ: ‘‘ಭವಿಷ್ಯತ್ತಿನ ಕಮ್ಯೂನಿಸ್ಟ್ ರಾಷ್ಟ್ರದ ನಿರ್ಮಾಣದಲ್ಲಿ ಕಮ್ಯೂನಿಸಂನ ಬೋಧನೆಯು ಅಗತ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ, ಭಾವನಾತ್ಮಕವಾಗಿ ಮತ್ತು ಕರ್ಮಠತನದಿಂದ ಅದನ್ನು ಕಾರ್ಯಗತಗೊಳಿಸುವುದು ದುಷ್ಟತನವೆಂಬುದಾಗಿ ಭಾಸವಾಗುತ್ತದೆ. ಇದು ಮುಕ್ತ ಬೌದ್ಧಿಕತೆಯನ್ನು ಹಾಗೂ ಕಾರ್ಯೋನ್ಮುಖತೆಯನ್ನು ನಾಶಪಡಿಸುತ್ತದೆ’’. ಕಮ್ಯೂನಿಸಂಗೆ ಹಿಂದುತ್ವವನ್ನು ಪರ್ಯಾಯಗೊಳಿಸುವುದು, ಇಂದಿನ ಭಾರತದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಬಯಸುತ್ತಿರುವುದಕ್ಕೆ ಅತ್ಯಂತ ಮರ್ಮಭೇದಕವಾದಂತಹ ನಿಖರ ವಿವರಣೆ ಇದಾಗಿದೆ.
ಸಕ್ರಿಯ ಬ್ರಿಟಿಶ್ ಸ್ತ್ರೀವಾದಿ ಹಾಗೂ ಶಿಕ್ಷಣತಜ್ಞೆ ಡೋರಾ ರಸ್ಸೆಲ್ ಅವರ ಜೀವನ ಅನುಭವಗಳನ್ನು ನಾನು ಓದುತ್ತಿದ್ದೆ. ಅವುಗಳನ್ನು ಮೂರು ಸಂಪುಟಗಳಾಗಿ ಪ್ರಕಟಿಸ ಲಾಗಿದ್ದು, ಆ ಪೈಕಿ ಮೊದಲನೆಯದನ್ನು ಓದಿ ಪೂರ್ತಿಗೊಳಿಸಿದ್ದೇನೆ. ದೊರೆ 7ನೇ ಎಡ್ವರ್ಡ್ ಕಾಲದ ಇಂಗ್ಲೆಂಡ್‌ನಲ್ಲಿ ಆಕೆಯ ಬಾಲ್ಯ, ಕೇಂಬ್ರಿಜ್‌ನಲ್ಲಿ ಶಿಕ್ಷಣ, ಲಿಂಗ ಸಮಾನತೆ ಕುರಿತಾಗಿ ಆಕೆ ಬೆಳೆಸಿಕೊಂಡ ದೃಷ್ಟಿಕೋನ, ಆಕೆ ಸ್ಥಾಪಿಸಿದ ಪ್ರಾಯೋಗಿಕ ವಿದ್ಯಾಲಯ ಮತ್ತು ಪ್ರತಿಭಾವಂತ ಹಾಗೂ ವಿವಾದಾತ್ಮಕ ತತ್ವಜ್ಞಾನಿ ಬರ್ಟ್ರಾಂಡ್ ರಸ್ಸೆಲ್ ಜೊತೆಗಿನ ಆಕೆಯ ವಿವಾಹದ ಕುರಿತ ಸ್ಮರಣೆಗಳನ್ನು ಅವು ಒಳಗೊಂಡಿದ್ದವು.
ಆಕೆಯ ತಲೆಮಾರಿನ ಇತರರಂತೆ ಡೊರಾ ರಸ್ಸೆಲ್ ಕೂಡಾ 20ರ ಹರೆಯದ ಆರಂಭದಲ್ಲಿ ಸಂಭವಿಸಿದ ಬೊಲ್ಶೆವಿಕ್ (ರಶ್ಯದ ತೀವ್ರವಾದಿ ಕಮ್ಯೂನಿಸ್ಟರು) ಕ್ರಾಂತಿಯಿಂದ ಗಾಢವಾಗಿ ಪ್ರೇರಿತರಾಗಿದ್ದರು. ಕ್ರಾಂತಿ ನಡೆದ ಕೆಲವೇ ಸಮಯದ ಬಳಿಕ ಆಕೆ ಅದರ ಪರಿಣಾಮವನ್ನು ಖುದ್ದಾಗಿ ಅಧ್ಯಯನ ಮಾಡಲೆಂದೇ ರಶ್ಯದಾದ್ಯಂತ ಪ್ರಯಾಣಿಸಿದರು. 1918-19ರಲ್ಲಿ ರಶ್ಯದಲ್ಲಿ ಕಟ್ಟಾ ಬೊಲ್ಶೆವಿಕ್‌ಗಳ ಜೊತೆ ಮಾತನಾಡಿದ ಡೋರಾಗೆ, ಕ್ರೈಸ್ತ ಧರ್ಮಶಾಸ್ತ್ರಜ್ಞರ ಕನಸಿನ ದೇವರ ಸಾಮ್ರಾಜ್ಯದ ನೆನಪಾಯಿತು. ಈ ವಿಶ್ವದ ನಿಯಾಮಕನು, ಗ್ರಹ, ನಕ್ಷತ್ರಗಳನ್ನು ಶಾಶ್ವತ ಚಲನೆಯಲ್ಲಿರಿಸಿದ್ದಾನೆಂಬ ಕ್ರೈಸ್ತ ಧರ್ಮಶಾಸ್ತ್ರಜ್ಞರ ನಂಬಿಕೆಯ ಮಾದರಿಯಲ್ಲೇ ಬೊಲ್ಶೆವಿಕ್‌ಗಳು ಕೂಡಾ ಕೈಗಾರಿಕಾ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಆಧರಿಸಿದ ನವಸಮಾಜದ ನೀಲನಕ್ಷೆಯನ್ನು ತಯಾರಿಸಲಿದ್ದಾರೆ. ಆ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆ ಉದ್ಯೋಗದ ಅವಕಾಶವನ್ನು ಪಡೆದುಕೊಳ್ಳುವರು ಹಾಗೂ ಸಮಗ್ರವಾಗಿ ಇಡೀ ಸಮಾಜಕ್ಕೆ ಕೊಡುಗೆಯನ್ನು ನೀಡುವರು. ಒಮ್ಮೆ ಈ ವ್ಯವಸ್ಥೆಯ ಚಲನೆಗೆ ಬಂದಾಗ, ನೂತನ ವೈಚಾರಿಕತೆಯ ಸಾಮಾಜಿಕ ವ್ಯವಸ್ಥೆಯು ತನ್ನದೇ ಆದಂತಹ ವೇಗವನ್ನು ಪಡೆದುಕೊಳ್ಳಲಿದೆ.
ಸೋವಿಯತ್ ರಶ್ಯದ ಜೊತೆಗಿನ ತನ್ನ ಒಡನಾಟದಲ್ಲಿ ಡೋರಾ ರಸ್ಸೆಲ್‌ಗೆ ಬೊಲ್ಶೆವಿಕ್‌ಗಳ ಉಗ್ರವಾದ ಸಿದ್ಧಾಂತ ಪ್ರಾಮಾಣ್ಯವಾದ(ಟಜಞಠಿಜಿಞ)ವು ಮೆಚ್ಚುಗೆಯ ಜೊತೆ ಆತಂಕವನ್ನು ಕೂಡಾ ಉಂಟು ಮಾಡಿತ್ತು. ‘‘ಭವಿಷ್ಯತ್ತಿನ ಕಮ್ಯೂನಿಸ್ಟ್ ರಾಷ್ಟ್ರದ ನಿರ್ಮಾಣದಲ್ಲಿ ಕಮ್ಯೂನಿಸಂನ ಬೋಧನೆಯು ಅಗತ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ, ಭಾವನಾತ್ಮಕವಾಗಿ ಮತ್ತು ಕರ್ಮಠತನದಿಂದ ಅದನ್ನು ಕಾರ್ಯಗತಗೊಳಿಸುವುದು ದುಷ್ಟತನವೆಂಬುದಾಗಿ ಭಾಸವಾಗುತ್ತದೆ. ಇದು ಮುಕ್ತ ಬೌದ್ಧಿಕತೆಯನ್ನು ಹಾಗೂ ಕಾರ್ಯೋನ್ಮುಖತೆಯನ್ನು ನಾಶಪಡಿಸುತ್ತದೆ’’ ಎಂಬುದಾಗಿ ಆಕೆ ಅಭಿಪ್ರಾಯಿಸಿದ್ದರು.
ಡೋರಾ ರಸ್ಸೆಲ್ ಆನಂತರದ ಒಂದು ದಶಕದ ಬಳಿಕ ರವೀಂದ್ರನಾಥ ಠಾಗೋರ್ ಅವರು ಸೋವಿಯತ್ ರಶ್ಯಕ್ಕೆ ಭೇಟಿ ನೀಡಿದರು. ಆ ದೇಶದಲ್ಲಿ ಠಾಗೋರ್ ಅವರು ಎರಡು ವಾರಗಳನ್ನು ಕಳೆದರು. ಶಾಲೆಗಳು ಹಾಗೂ ಕಾರ್ಖಾನೆಗಳಿಗೆ ಭೇಟಿ ನೀಡಿದ ಅವರು ಪ್ರಜೆಗಳ ಒಂದು ದೊಡ್ಡ ಸಮೂಹದೊಂದಿಗೆ ಸಂವಾದಿಸಿದರು. ಸೋವಿಯತ್ ರಶ್ಯದಿಂದ ನಿರ್ಗಮಿಸುವ ಕೆಲವೇ ಸಮಯದ ಮೊದಲು ಠಾಗೋರ್ ಅವರು ಪಕ್ಷದ ಸುದ್ದಿಪತ್ರಿಕೆ ‘ಇಝೆವೆಸ್ಟಿಯಾ’ಗೆ ಸಂದರ್ಶನ ನೀಡಿದ್ದರು. ಸೋವಿಯತಿಯನ್ನರು ಅಚ್ಚರಿಕರವಾದ ಶ್ರದ್ಧೆಯೊಂದಿಗೆ ಶಿಕ್ಷಣವನ್ನು ಹರಡಿದ್ದನ್ನು ಶ್ಲಾಘಿಸಿದ್ದರು. ಇದರ ಜೊತೆಗೆ ಕಮ್ಯೂನಿಸ್ಟರಿಗೆ ಹೀಗೊಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದರು.‘‘ನಾನು ನಿಮ್ಮನ್ನು ಕೇಳಬೇಕಾಗಿದೆ. ನಿಮ್ಮ ಕೈಕೆಳಗೆ ತರಬೇತಿ ಹೊಂದಿದವರ ಮನಸ್ಸಿನಲ್ಲಿ ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳದವರ ವಿರುದ್ಧ ಹಾಗೂ ನಿಮ್ಮನ್ನು ಶತ್ರುಗಳೆಂದು ಪರಿಗಣಿಸುವವರ ವಿರುದ್ಧ ಕ್ರೋಧ, ವರ್ಗದ್ವೇಷ ಹಾಗೂ ಸೇಡಿನ ಮನೋಭಾವವನ್ನು ಪ್ರಚೋದಿಸುವಿರಾ?. ಅಡೆತಡೆಗಳ ವಿರುದ್ಧ ನೀವು ಹೋರಾಡಬೇಕಾದುದು ನಿಜ. ನೀವು ಅಜ್ಞಾನ ಹಾಗೂ ಅನುಕಂಪದ ಕೊರತೆಯನ್ನು ಮೀರಿನಿಲ್ಲಬೇಕಾಗಿದೆ. ಆದರೆ ನಿಮ್ಮ ದೌತ್ಯ (ಞಜಿಜಿಟ್ಞ)ವು ನಿಮ್ಮ ದೇಶ ಅಥವಾ ನಿಮ್ಮದೇ ಪಕ್ಷಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಾನವತೆಯ ಒಳಿತಿಗೆ ಇದು ಅಗತ್ಯವಾಗಿದೆಯೆಂಬುದು ನಿಮ್ಮ ಸಿದ್ಧಾಂತವಾಗಿದೆ. ಆದರೆ ನಿಮ್ಮ ಗುರಿಯನ್ನು ಒಪ್ಪದವರನ್ನು ಕೂಡಾ ಇದರಲ್ಲಿ ಬಲವಂತವಾಗಿ ಒಳಪಡಿಸುವುದು ಮಾನವತೆಯಲ್ಲ’’ ಎಂದಿದ್ದರು.
ಠಾಗೋರ್ ಅನಿಸಿಕೆಯ ಪ್ರಕಾರ, ‘‘ಪ್ರಬುದ್ಧ ರಾಜಕೀಯ ವ್ಯವಸ್ಥೆಯು, ಮನಸ್ಸುಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶವಿರುವಲ್ಲಿ ಭಿನ್ನಮತಕ್ಕೆ ಅನುಮತಿಯನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಎಲ್ಲಾ ಅಭಿಪ್ರಾಯಗಳನ್ನು ಬಲವಂತವಾಗಿ ಸರ್ವವ್ಯಾಪಿಗೊಳಿಸಲು ಹೊರಟಲ್ಲಿ ಅದು ಅನಾಸಕ್ತಿದಾಯಕವಾಗಲಿದೆ ಅಲ್ಲದೆ ಯಾಂತ್ರಿಕವಾದ ಬಂಜರು ಜಗತ್ತು ರೂಪುಗೊಳ್ಳಲಿದೆ. ಅಭಿಪ್ರಾಯಗಳು ನಿರಂತರವಾಗಿ ಬದಲಾಗುತ್ತವೆ ಹಾಗೂ ಬೌದ್ಧಿಕ ಶಕ್ತಿಗಳು ಮತ್ತು ನೈತಿಕ ಮನವೊಲಿಕೆಯ ಮುಕ್ತ ಪ್ರಸಾರದಿಂದ ಮಾತ್ರವೇ ಅವು ಬದಲಾಗಬಹುದಾಗಿದೆ. ಹಿಂಸಾಚಾರವು ಪ್ರತಿಹಿಂಸೆ ಹಾಗೂ ಕುರುಡು ಮೂರ್ಖತನವನ್ನು ಸೃಷ್ಟಿಸುತ್ತದೆ. ಸತ್ಯವನ್ನು ಸನ್ಮಾನಿಸಲು ಮಾನಸಿಕ ಸ್ವಾತಂತ್ರದ ಅಗತ್ಯವಿದೆ. ಭಯೋತ್ಪಾದನೆಯು ಆಶಾರಹಿತವಾಗಿ ಅದನ್ನು ಕೊಂದುಬಿಡುತ್ತದೆ’’.
ಠಾಗೋರ್ ಅವರ ಈ ಅನಿಸಿಕೆಗಳನ್ನು ಆ ವರ್ಷವೇ ವಿಶ್ವಭಾರತಿಯು ಪ್ರಕಟಿಸಿದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಕವಿ ರವೀಂದ್ರನಾಥ ಠಾಗೋರ್ ಅವರ ಪ್ರವಾಸದುದ್ದಕ್ಕೂ ಜೊತೆಗಿದ್ದ ವಿಜ್ಞಾನಿ ಪಿ. ಸಿ. ಮಹಾಲೊನೊಬಿಸ್ ಅವರು ಈ ಪುಸ್ತಕದ ಸಂಕಲನ ಮಾಡಿದ್ದರು.
ಠಾಗೋರ್ ಅವರ ಈ ಸಂದರ್ಶನವನ್ನು ‘ಇಝೆವೆಸ್ಟಿಯಾ’ ಸಮಗ್ರವಾಗಿ ಮರುಪ್ರಕಟಿಸುವ ಸಾಧ್ಯತೆ ತೀರಾ ವಿರಳವಾಗಿದೆ. ಪಕ್ಷದ ದಿನಪತ್ರಿಕೆಯಾಗಿರುವುದರಿಂದ ಅದಕ್ಕೆ ಸೋವಿಯತ್ ಆಡಳಿತದ ವಿರುದ್ಧದ ಟೀಕೆಯನ್ನು ಮುದ್ರಿಸಲು ಸಾಧ್ಯವಿಲ್ಲ. ಆದಾಗ್ಯೂ ಅದೃಷ್ಟವಶಾತ್ ಕಮ್ಯೂನಿಸ್ಟ್ ಸಿದ್ಧಾಂತದ ಸ್ವರೂಪವಾದ (ಈಗಲೂ ಕೂಡಾ) ದ್ವೇಷ ಹಾಗೂ ಪ್ರತೀಕಾರದ ಭಾವನೆ ವಿರುದ್ಧ ಠಾಗೋರ್ ಅವರ ಖಂಡನಾತ್ಮಕವಾದ ನಿಲುವನ್ನು ಮಹಾಲೊನೊಬಿಸ್ ಅವರು ಈ ಪುಸ್ತಕದಲ್ಲಿ ಮುಂದಿನ ಪೀಳಿಗೆಗಾಗಿ ದಾಖಲಿಸಿದ್ದಾರೆ.
ಈಗ ಡೋರಾ ರಸ್ಸೆಲ್ ಅವರ ವಿಚಾರಕ್ಕೆ ಬರೋಣ. ಸೋವಿಯತ್ ರಶ್ಯಕ್ಕೆ ಪ್ರಯಾಣಿಸಿದ ಒಂದೆರಡು ವರ್ಷಗಳ ಬಳಿಕ ಆಕೆ ಚೀನಾಗೆ ಭೇಟಿ ನೀಡಿದ್ದರು ಹಾಗೂ ಅಲ್ಲಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರ ಜೊತೆ ವಿಚಾರವಿನಿಮಯ ನಡೆಸಿದರು. ಅಲ್ಲಿನ ಕಮ್ಯೂನಿಸ್ಟರ ಸಿದ್ಧಾಂತ ಹಾಗೂ ಕರ್ಮಠತನವು ಅವರ ರಶ್ಯನ್ ಸಂಗಾತಿಗಳನ್ನು ಕೂಡಾ ಮೀರಿಸಿತ್ತು. 1921ರಲ್ಲಿ ಡೋರಾ ಅವರು ಬೀಜಿಂಗ್‌ನಿಂದ ತನ್ನ ಆತ್ಮೀಯರೊಬ್ಬ್ಬರಿಗೆ ಬರೆದ ಪತ್ರದಲ್ಲಿ ಹೀಗೆಂದು ಅಭಿಪ್ರಾಯಿಸಿದ್ದರು. ‘‘ರಶ್ಯ ಹಾಗೂ ಚೀನಾದಲ್ಲಿ ಕಮ್ಯೂನಿಸಂ ದಿಢೀರ್ ಆದಿಪತ್ಯವನ್ನು ಸಾಧಿಸಲಿದ್ದು, ಅಲ್ಲಿ ಅದು ಧರ್ಮಕ್ಕಿಂತ ಬೇರೆಯೇ ಆಗಿಯೇನೂ ಉಳಿದಿಲ್ಲ. ಕಮ್ಯೂನಿಸಂ, ರೂಪುಗೊಳ್ಳುವ ಹಂತದಲ್ಲಿರುವ ದೇಶಗಳಲ್ಲಿ ಧರ್ಮಗಳಿಗಿರುವ ಪ್ರಯೋಜನಗಳನ್ನು ಅಂದರೆ, ಒಂದು ಸಮುದಾಯವಾಗಿ ಜನರನ್ನು ಒಗ್ಗೂಡಿಸುವುದು ಹಾಗೂ ಅವರಲ್ಲಿ ಸಾಮೂಹಿಕತೆಯ ಭಾವನೆಯನ್ನು ಅಭಿವ್ಯಕ್ತಿಗೊಳಿಸುವುದು ಇತ್ಯಾದಿ ಮಾಡಬಹುದಾಗಿದೆ. ಬದಲಾವಣೆಗಾಗಿ ಪಶ್ಚಿಮವು ಪೂರ್ವದ ದೇಶಗಳಿಗೆ ಧರ್ಮವೊಂದನ್ನು ಪೂರೈಕೆ ಮಾಡುತ್ತಿರುವುದು ವಿಸ್ಮಯವಾಗಿದೆ.’’
ಇದೇ ಪತ್ರದಲ್ಲಿ ಆಕೆ ‘‘ದಬ್ಬಾಳಿಕೆಯಿಂದ ಸಿದ್ಧಾಂತವನ್ನು ಹೇರುವುದು ಕೊಬ್ಬಿದ ಬಂಡವಾಳಶಾಹಿಗಿಂತಲೂ ತುಂಬಾ ಕೆಟ್ಟದ್ದಾಗಿದೆ... ವಿಜ್ಞಾನದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಈ ಎಲ್ಲಾ ವ್ಯಕ್ತಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನದ ಕೊರತೆಯಿರುವುದನ್ನು ಕಂಡು ನನಗೆ ಹುಚ್ಚೆನಿಸಿದೆ.’’
ಗಮನಾರ್ಹವೆಂದರೆ, ನಮ್ಮ ದೇಶದ ಸಮಕಾಲೀನ ಇತಿಹಾಸವು ತೋರಿಸಿಕೊಡುವಂತೆ, ತೀವ್ರವಾದಿ ಬಲಪಂಥೀಯರು, ಕಟ್ಟಾ ಎಡಪಂಥೀಯರ ಹಲವಾರು ಗುಣಲಕ್ಷಣಗಳನ್ನು ಹೊಂದಿದ್ದಾರೆ. ಕೆಟ್ಟಮಾರ್ಗದ ಮೂಲಕವಾದರೂ ಗುರಿಯನ್ನು ಸಾಧಿಸಲೇಬೇಕೆಂಬ ನಿಲುವನ್ನು ಇವರಿಬ್ಬರೂ ಹೊಂದಿದ್ದಾರೆ. ಅಧಿಕಾರರೂಢ ರಾಜಕಾರಣಿಗಳು ಅಧಿಕಾರಶಾಹಿ ಹಾಗೂ ನ್ಯಾಯಾಂಗದ ಮೇಲೆ ನಿಯಂತ್ರಣ ಹೊಂದಿರಬೇಕು. ರಾಜ್ಯ ಹಾಗೂ ಆಡಳಿತ ಪಕ್ಷವು ನಿಯಂತ್ರಣ ಅಧಿಕಾರವನ್ನು ಹೊಂದಿರಬೇಕು ಹಾಗೂ ಕಾದಂಬರಿಗಳನ್ನು ಹೇಗೆ ಬರೆಯಬೇಕು, ಹಾಡುಗಳನ್ನು ಹೇಗೆ ಹಾಡಬೇಕು, ಯಾವ ಘೋಷಣೆಗಳನ್ನು ಉತ್ತೇಜಿಸಬೇಕು ಹಾಗೂ ಯಾವುದನ್ನು ನಿಷೇಧಿಸಬೇಕು ಇತ್ಯಾದಿ ನಿಲುವುಗಳನ್ನು ಇವರಿಬ್ಬರೂ ಹೊಂದಿದ್ದಾರೆ. ಕಟ್ಟರ್ ಬಲಪಂಥೀಯರು ಕೂಡಾ ವೈಜ್ಞಾನಿಕ ದೃಷ್ಟಿಕೋನದ ಬಗ್ಗೆ ಅನಾದರವನ್ನು ಹೊಂದಿದ್ದಾರೆ ಹಾಗೂ ಅವರು ತಮ್ಮದೇ ಧರ್ಮದ ಅತೀಂದ್ರೀಯಾತ್ಮಕ, ಅವೈಚಾರಿಕ ಅಂಶಗಳಿಂದ ಪ್ರೇರಿತರಾಗಿರುತ್ತಾರೆ.
ಬಲಪಂಥೀಯರು ಹಾಗೂ ಎಡಪಂಥೀಯರ ನಿರಂಕುಶವಾದವನ್ನು ಫ್ರೆಂಚ್ ಇತಿಹಾಸಕಾರ ಫ್ರಾಂಕೊಯಿಸ್ ಫುರೆಟ್ ಅವರು ತನ್ನ ಪುಸ್ತಕಕೃತಿ ‘ದಿ ಪಾಸಿಂಗ್ ಆಫ್ ಆ್ಯನ್ ಇಲ್ಯೂಶನ್’ನಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ. ಅದರಲ್ಲಿ ಫುರೆಟ್ ಹೀಗೆ ಬರೆದಿದ್ದಾರೆ. ‘‘ಸೋವಿಯತ್ ಜನತೆಯಂತೆಯೇ, ರಾಷ್ಟ್ರೀಯ ಸಮಾಜವಾದಿ ಜನರೂ ಇದ್ದಾರೆ. ಅದರ ಹೊರಗೆ ಇರುವವರೆಲ್ಲಾ ಸಮಾಜವಾದಿ ವ್ಯಕ್ತಿಗಳೆನಿಸುತ್ತಾರೆ. ಏಕತೆಯನ್ನು ನಿರಂತರವಾಗಿ ಸಂಭ್ರಮಿಸಬೇಕಿದೆ ಹಾಗೂ ಬಹಿರಂಗವಾಗಿ ದೃಢಪಡಿಸಬೇಕಾಗಿದೆ. ಸೈದ್ಧಾಂತಿಕ ಘೋಷಣೆಗಳಿಗಿಂತಲೂ ಸರ್ವೋಚ್ಚ ನಾಯಕನ ವ್ಯಕ್ತಿಪೂಜೆ ಮುಖ್ಯವಾಗಿರುತ್ತದೆ. ಜನರು ಹೀಗೆ ಪಕ್ಷ ಹಾಗೂ ರಾಜ್ಯದ ಜೊತೆ ಕಡ್ಡಾಯವಾಗಿ ಹಾಗೂ ಶಾಶ್ವತವಾಗಿ ಸಂಪರ್ಕದಲ್ಲಿರುತ್ತಾರೆ. ಇದಕ್ಕಿಂತಲೂ ಮಿಗಿಲಾಗಿ ಜನಸಮೂಹವೊಂದನ್ನು ಶತ್ರುಗಳಾಗಿ ಅವರು ಬಿಂಬಿಸುತ್ತಾರೆ. ಉದಾಹರಣೆಗೆ ಲೆನಿನ್‌ಗೆ ಬಂಡವಾಳಶಾಹಿ ವರ್ಗವು ವಿರೋಧಿಗಳಾಗಿದ್ದರೆ, ಹಿಟ್ಲರ್‌ಗೆ ಯೆಹೂದ್ಯರು ವಿರೋಧಿಗಳಾಗುತ್ತಾರೆ. ಜನರನ್ನು ಸದಾ ಕಾಲ ಜಾಗೃತಾವಸ್ಥೆಯಲ್ಲಿರಿಸಲು ಹಾಗೂ ಆಳ್ವಿಕೆಯನ್ನು ಶಾಶ್ವತವಾಗಿ ಉಳಿಸುವುದಕ್ಕಾಗಿ ಇಂತಹ ಸಂಚಿನ ಅಸ್ತಿತ್ವವನ್ನು ಪ್ರತಿಪಾದಿಸಲಾಗುತ್ತದೆ.’’
‘‘ಫ್ಯಾಶಿಸಂ ಆಗಿರಲಿ ಅಥವಾ ಕಮ್ಯೂನಿಸಂ ಇವೆರಡೂ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಅತ್ಯಂತ ಹಿಂಸಾತ್ಮಕ ಹಾಗೂ ಅನೈತಿಕ ಮಾರ್ಗಗಳನ್ನು ಅನುಸರಿಸುವುದು ಅಸ್ವೀಕಾರಾರ್ಹವಾದುದು’’ ಎಂದು ಫುರೆಟ್ ಹೇಳುತ್ತಾರೆ. ಲೆನಿನ್ ಹಾಗೂ ಹಿಟ್ಲರ್‌ರನ್ನು ಉದ್ದೇಶಿಸಿ ಆತ ಹೀಗೆ ಬರೆದಿದ್ದಾನೆ. ‘‘ನೀವು ನಿಮ್ಮ ಸಹ ನಾಗರಿಕರನ್ನು, ಅವರು ಕೇವಲ ನಿಮ್ಮ ವಿರೋಧಿ ವರ್ಗದವರು ಅಥವಾ ಎದುರಾಳಿಗಳೆಂಬ ಕಾರಣಕ್ಕಾಗಿ ಅವರನ್ನು ಯುದ್ಧ ಶತ್ರುಗಳಂತೆ ಹತ್ಯೆಗೈಯುತ್ತೀರಿ.’’ ‘‘ಏಕಪಕ್ಷೀಯ ಅಧಿಕಾರ ಚಲಾಯಿಸಲು ಹಾಗೂ ಭಯವನ್ನು ಬಿತ್ತಲು ಕಾನೂನಿನ ಉಲ್ಲಂಘನೆಯಾಗಿರುವ ಸುಳ್ಳು ನೆಪವನ್ನು ಬಳಸಿಕೊಳ್ಳಲಾಗುತ್ತದೆ.’’
ಫುರೆಟ್ ಅವರ ಪುಸ್ತಕ ಕೃತಿಯು ಯುರೋಪ್‌ನ ಅಂತರ್ಯುದ್ಧದ ವಿವರಗಳನ್ನು ಕೂಡಾ ಒಳಗೊಂಡಿದೆ. ಎರಡನೇ ಮಹಾಯುದ್ಧಾನಂತರದ ಏಶ್ಯದ ಕುರಿತಾಗಿ ಭವಿಷ್ಯದ ಇತಿಹಾಸಕಾರನು ಚೀನಾದಲ್ಲಿ ಕಮ್ಯೂನಿಸಂನ ಉತ್ಥಾನ ಹಾಗೂ ಭಾರತದಲ್ಲಿ ಹಿಂದುತ್ವವಾದಿ ಸರ್ವಾಧಿಕಾರ ಆಳ್ವಿಕೆಯ ನಡುವೆ ಅದರಲ್ಲೂ ವಿಶೇಷವಾಗಿ ಮಾವೋ ಬೆಂಬಲಿಗರ ಪಂಥ ಹಾಗೂ ಮೋದಿ ಬೆಂಬಲಿಗರ ಪಂಥದ ನಡುವೆ ಸಮಾನಾಂತರ ರೇಖೆಯನ್ನು ಕಾಣಬಹುದಾಗಿದೆ. ಖಂಡಿತವಾಗಿಯೂ ಫುರೆಟ್ ಭಾರತಕ್ಕೂ ಭೇಟಿ ನೀಡದಿದ್ದರೂ ಮತ್ತು ಈ ದೇಶದ ಇತಿಹಾಸದ ಬಗ್ಗೆ ಹೆಚ್ಚೇನೂ ಓದಿರಲಿಕ್ಕಿಲ್ಲ. ಆದರೆ ನಾನು ಉಲ್ಲೇಖಿಸಿರುವ ಈ ವಾಕ್ಯ ವೃಂದವು ಇಂದಿನ ಭಾರತದ ವಿಲಕ್ಷಣ ಭವಿಷ್ಯದ ಕುರಿತಾಗಿದೆ. ಮಾವೋ ಆಡಳಿತದಲ್ಲಿನ ಚೀನಿ ಕಮ್ಯೂನಿಸ್ಟರಂತೆ, ಮೋದಿ ನಾಯಕತ್ವದ ಬಿಜೆಪಿಯು ಪಕ್ಷ ಆಧಾರಿತ ದೇಶವನ್ನು ನಿರ್ಮಿಸಲು ಬಯಸುತ್ತಿದೆ. ಅದು ನಿಸ್ಸಂಶಯವಾಗಿ ‘ಮಹಾನ್ ಹಾಗೂ ದೋಷರಹಿತ’ ನಾಯಕನ ಆರಾಧಕ ಪಂಥವನ್ನು ಸೃಷ್ಟಿಸಿದೆ. ಆತನನ್ನು ವಿರೋಧಿಸುವವರನ್ನು ಮತ್ತು ಟೀಕಿಸುವವರನ್ನು ರಾಕ್ಷಸೀಕರಣಗೊಳಿಸಲಾಗುತ್ತದೆ. ಕೆಲವೊಂದು ಮಧ್ಯಂತರ ಅವಧಿಯಲ್ಲಿ ಪ್ರಧಾನಿ ವಿರುದ್ಧ ಹತ್ಯೆ ಸಂಚು ನಡೆಸಲಾಗಿದೆ ಎಂದು ಅದು ಆರೋಪಿಸುತ್ತದೆ ಮತ್ತು ಇನ್ನೂ ಕಳವಳಕಾರಿಯೆಂದರೆ ಚೀನಾದಲ್ಲಿ ಕಮ್ಯೂನಿಸ್ಟರ್ ಹಾನ್‌ಯೇತರ ಜನಾಂಗೀಯರನ್ನು ರಾಕ್ಷಸೀಕರಣಗೊಳಿಸಿದಂತೆಯೇ, ಅದು ಭಾರತೀಯ ಮುಸ್ಲಿಮರನ್ನು ರಾಕ್ಷಸೀಕರಣಗೊಳಿಸಿದೆ.
ಅದನ್ನು ಈ ಎರಡೂ ತಂಡಗಳು ಒಪ್ಪಿಕೊಳ್ಳದೆ ಇದ್ದರೂ, ತಮ್ಮಲ್ಲಿ ಬಹಳಷ್ಟು ಸಾಮ್ಯತೆಗಳಿರುವುದನ್ನು ಕಟ್ಟಾ ಎಡಪಂಥೀಯ ಹಾಗೂ ಕಟ್ಟಾ ಬಲಪಂಥೀಯರು ಒಪ್ಪಿಕೊಳ್ಳುವುದಿಲ್ಲ. ಡೋರಾ ರಸ್ಸೆಲ್ ಬರೆದಿರುವ ಈ ವಾಕ್ಯಗಳನ್ನು ಮತ್ತೊಮ್ಮೆ ಗಮನಿಸುವ: ‘‘ಭವಿಷ್ಯತ್ತಿನ ಕಮ್ಯೂನಿಸ್ಟ್ ರಾಷ್ಟ್ರದ ನಿರ್ಮಾಣದಲ್ಲಿ ಕಮ್ಯೂನಿಸಂನ ಬೋಧನೆಯು ಅಗತ್ಯವೆಂದು ಮೇಲ್ನೋಟಕ್ಕೆ ಕಂಡುಬಂದರೂ, ಭಾವನಾತ್ಮಕವಾಗಿ ಮತ್ತು ಕರ್ಮಠತನದಿಂದ ಅದನ್ನು ಕಾರ್ಯಗತಗೊಳಿಸುವುದು ದುಷ್ಟತನವೆಂಬುದಾಗಿ ಭಾಸವಾಗುತ್ತದೆ. ಇದು ಮುಕ್ತ ಬೌದ್ಧಿಕತೆಯನ್ನು ಹಾಗೂ ಕಾರ್ಯೋನ್ಮುಖತೆಯನ್ನು ನಾಶಪಡಿಸುತ್ತದೆ’’. ಕಮ್ಯೂನಿಸಂಗೆ ಹಿಂದುತ್ವವನ್ನು ಪರ್ಯಾಯಗೊಳಿಸುವುದು, ಇಂದಿನ ಭಾರತದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಬಯಸುತ್ತಿರುವುದಕ್ಕೆ ಅತ್ಯಂತ ಮರ್ಮಭೇದಕವಾದಂತಹ ನಿಖರ ವಿವರಣೆ ಇದಾಗಿದೆ.