varthabharthi


ಆರೋಗ್ಯ

ರಾತ್ರಿ ಪಾಳಿಯಲ್ಲಿ ಕೆಲಸ ಈ ಮಾರಣಾಂತಿಕ ಕಾಯಿಲೆಗೆ ಕಾರಣವಾಗಬಲ್ಲದು

ವಾರ್ತಾ ಭಾರತಿ : 20 Mar, 2021

ಹಲವಾರು ಜನರು ರಾತ್ರಿ ಪಾಳಿಗಳಲ್ಲಿ ದುಡಿಯುತ್ತಾರೆ. ಇದು ಜೈವಿಕ ಗಡಿಯಾರ ಮತ್ತು ನಿದ್ರಾ ಆವರ್ತಗಳನ್ನು ವ್ಯತ್ಯಯಗೊಳಿಸುವುದು ಮಾತ್ರವಲ್ಲ,ಶರೀರದ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನೂ ಉಂಟು ಮಾಡುತ್ತದೆ. ರಾತ್ರಿ ಪಾಳಿಗಳಲ್ಲಿ ದುಡಿಯುವವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಮತ್ತು ಈಗ ಸಂಶೋಧಕರು ಇನ್ನೊಂದು ದೀರ್ಘಕಾಲಿಕ ರೋಗವನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ. ಹೌದು,ರಾತ್ರಿ ಪಾಳಿಗಳಲ್ಲಿ ದುಡಿಯುವವರು ಭವಿಷ್ಯದಲ್ಲಿ ಕ್ಯಾನ್ಸರ್‌ಗೆ ಗುರಿಯಾಗುವ ಹೆಚ್ಚಿನ ಅಪಾಯದಲ್ಲಿರುತ್ತಾರೆ ಎನ್ನುವುದನ್ನು ವಾಷಿಂಗ್ಟನ್ ಸ್ಟೇಟ್ ವಿವಿಯು ನಡೆಸಿದ ಅಧ್ಯಯನವು ಬಹಿರಂಗಗೊಳಿಸಿದೆ. ಈ ಅಪಾಯವನ್ನು ಹಗಲು ಪಾಳಿಗಳಲ್ಲಿ ದುಡಿಯುವವರೊಂದಿಗೆ ಹೋಲಿಸಿ ಅಧ್ಯಯನವು ಈ ನಿರ್ಧಾರಕ್ಕೆ ಬಂದಿದೆ. ನೀವು ರಾತ್ರಿಪಾಳಿಯಲ್ಲಿ ದುಡಿಯುವ ವ್ಯಕ್ತಿಯಾಗಿದ್ದರೆ ನಿಮ್ಮ ಅನಿವಾರ್ಯತೆಯ ಸಂಭಾವ್ಯ ಅಪಾಯಗಳೂ ನಿಮಗೆ ಗೊತ್ತಿರಬೇಕು. ಜರ್ನಲ್ ಆಫ್ ಪಿನಿಯಲ್ ರೀಸರ್ಚ್‌ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ರಾತ್ರಿ ಪಾಳಿಗಳು ಸಿರ್ಕಾಡಿಯನ್ ರಿದಮ್ ಅಥವಾ ಮರುಕಳಿಸುವ ಲಯಕ್ಕೆ ವ್ಯತ್ಯಯಗಳೊಂದಿಗೆ ತಳುಕು ಹಾಕಿಕೊಂಡಿವೆ. ಸಿರ್ಕಾಡಿಯನ್ ರಿದಮ್ ಎನ್ನುವುದು ಶರೀರವು ಅನುಸರಿಸುವ ನೈಸರ್ಗಿಕ ನಿದ್ರೆ-ಎಚ್ಚರ ಚಕ್ರವಾಗಿದೆ. ನಮ್ಮ ಶರೀರವು ಹಗಲಿನಲ್ಲಿ ಎಚ್ಚರಕ್ಕೆ ಮತ್ತು ಮೆಲಾಟೋನಿನ್ ಹಾರ್ಮೋನ್‌ಗಳು ಬಿಡುಗಡೆಗೊಳ್ಳುವ ರಾತ್ರಿ ಸಮಯದಲ್ಲಿ ನಿದ್ರೆಗೆ ಹೊಂದಿಕೊಂಡಿರುತ್ತದೆ. ರಾತ್ರಿ ಪಾಳಿಯಲ್ಲಿ ದುಡಿಯುವವರು ಇದಕ್ಕೆ ತದ್ವಿರುದ್ಧವಾದ ಪದ್ಧತಿಯನ್ನು ಹೊಂದಿರುತ್ತಾರೆ ಮತ್ತು ಇದು ಅವರ ಶರೀರದಲ್ಲಿಯ ಜೈವಿಕ ಗಡಿಯಾರವನ್ನು ತೀವ್ರವಾಗಿ ವ್ಯತ್ಯಯಗೊಳಿಸುತ್ತದೆ. ಇದು ಅವರನ್ನು ಡಿಎನ್‌ಎ ಹಾನಿಗೆ ಮತ್ತು ಹಾನಿಯನ್ನು ಸರಿಪಡಿಸುವ ವ್ಯವಸ್ಥೆಯು ಕ್ರಮ ತಪ್ಪುವ ಅಪಾಯಕ್ಕೆ ಸುಲಭಭೇದ್ಯರನ್ನಾಗಿ ಮಾಡುತ್ತದೆ.

ರಾತ್ರಿ ಪಾಳಿಗಳಲ್ಲಿ ದುಡಿಮೆಯ ಅಪಾಯವನ್ನು ವಿಶ್ಲೇಷಿಸಲು ಸಂಶೋಧಕರು ರಾತ್ರಿ ಕೆಲಸಗಾರರು ಮತ್ತು ಹಗಲು ಕೆಲಸಗಾರರ ಜೀವಕೋಶ ವ್ಯವಸ್ಥೆಯನ್ನು ಅಧ್ಯಯನ ಮಾಡಿದ್ದರು. ರಾತ್ರಿ ಪಾಳಿಗಳಲ್ಲಿ ದುಡಿಯುತ್ತಿರುವವರಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚು ಎನ್ನುವುದಕ್ಕೆ ಸಾಕಷ್ಟು ಸಾಕ್ಷಗಳಿವೆ ಮತ್ತು ಇದೇ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ರಾತ್ರಿ ಪಾಳಿಯ ಕೆಲಸವನ್ನು ಸಂಭಾವ್ಯ ಕ್ಯಾನ್ಸರ್ ಜನಕವೆಂದು ವರ್ಗೀಕರಿಸಿದೆ. ಆದರೆ ರಾತ್ರಿ ಪಾಳಿಗಳಲ್ಲಿ ಕೆಲಸವು ಹೇಗೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಸ್ಪಷ್ಟವಾಗಿರಲಿಲ್ಲ ಮತ್ತು ಇದನ್ನು ತಿಳಿದುಕೊಳ್ಳಲು ನಾವು ಬಯಸಿದ್ದೆವು ಎಂದು ಅಧ್ಯಯನ ವರದಿಯ ಅಗ್ರಲೇಖಕ ಶೋಭನ್ ಗದ್ದಮೀಧಿ ಅವರು ಹೇಳಿದ್ದಾರೆ.

ಜೈವಿಕ ಗಡಿಯಾರದ ವಂಶವಾಹಿಗಳ ಲಯಬದ್ಧತೆಯ ಅಧ್ಯಯನಕ್ಕಾಗಿ ಸಂಶೋಧಕರು ವ್ಯಾಪಕ ಪ್ರಯೋಗಗಳನ್ನು ಕೈಗೊಂಡಿದ್ದರು. ತೀವ್ರ ಅಧ್ಯಯನದ ಬಳಿಕ ಹಗಲು ಪಾಳಿಗಳಲ್ಲಿ ಕೆಲಸ ಮಾಡುವವರಿಗೆ ಹೋಲಿಸಿದರೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವವರಲ್ಲಿ ಕ್ಯಾನ್ಸರ್ ಸಂಬಂಧಿ ವಂಶವಾಹಿಗಳು ವಿಭಿನ್ನ ಲಯಗಳನ್ನು ಹೊಂದಿರುವುದು ಬೆಳಕಿಗೆ ಬಂದಿತ್ತು. ಅಂದರೆ ಡಿಎನ್‌ಎ ಹಾನಿಯು ಕಂಡು ಬಂದಿತ್ತು.

  ರಾತ್ರಿ ಪಾಳಿಯ ಕೆಲಸಗಾರರಲ್ಲಿ ವಿಕಿರಣದಿಂದ ಬಿಳಿಯ ರಕ್ತಕಣಗಳಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದನ್ನು ಅಧ್ಯಯನವು ತೋರಿಸಿದೆ. ಇದು ಡಿಎನ್‌ಎ ಹಾನಿ ಮತ್ತು ಕ್ಯಾನ್ಸರ್‌ನಲ್ಲಿಯ ಪ್ರಮುಖ ಅಪಾಯದ ಅಂಶವಾಗಿದೆ ಎಂದು ವರದಿಯು ಹೇಳಿದೆ. ಎಲ್ಲವನ್ನು ಒಟ್ಟಾಗಿ ಪರಿಗಣಿಸಿದರೆ ಅಧ್ಯಯನದಲ್ಲಿ ಕಂಡು ಬಂದಿರುವ ಅಂಶಗಳು ರಾತ್ರಿಪಾಳಿಯು ಕ್ಯಾನ್ಸರ್ ಸಂಬಂಧಿ ವಂಶವಾಹಿಗಳ ಪ್ರಕಟ ಸಮಯವನ್ನು ಏರುಪೇರುಗೊಳಿಸುತ್ತವೆ ಮತ್ತ ಇದರಿಂದ ಹೆಚ್ಚು ಅಗತ್ಯವಿರುವಾಗಲೇ ಶರೀರದ ಡಿಎನ್‌ಎ ರಿಪೇರಿ ಪ್ರಕ್ರಿಯೆಯ ಪರಿಣಾಮಕಾರಿತ್ವವು ಕಡಿಮೆಯಾಗುತ್ತದೆ ಎಂದು ವರದಿಯ ಸಹಲೇಖಕ ಜೇಸನ್ ಮೆಕ್‌ಡರ್ಮಾಟ್‌ ಹೇಳಿದ್ದಾರೆ.

ರಾತ್ರಿ ಪಾಳಿಗಳಲ್ಲಿ ದುಡಿಯುವವರು ಚಯಾಪಚಯ ಮತ್ತು ಹೃದಯ ರಕ್ತನಾಳ ರೋಗಗಳಿಂದ ಹಿಡಿದು,ಮಾನಸಿಕ ಅಸ್ವಸ್ಥ ಮತ್ತು ಕ್ಯಾನ್ಸರ್‌ವರೆಗೆ ಹಲವಾರು ಅನಾರೋಗ್ಯಗಳ ಸಾಧ್ಯತೆಯ ಅಪಾಯವನ್ನು ಎದುರಿಸುತ್ತಿರುತ್ತಾರೆ ಎಂದು ವರದಿಯು ಹೇಳಿದೆ.

ರಾತ್ರಿ ಪಾಳಿಗಳ ಕೆಲಸಗಾರರು ಹಲವಾರು ಅನಾರೋಗ್ಯಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಅವರು ಪ್ರತಿಯೊಂದು ಲಕ್ಷಣವನ್ನು ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು. ಯಾವುದೆ ತೊಂದರೆಗಳನ್ನು ಆರಂಭದಲ್ಲಿಯೇ ನಿವಾರಿಸಲು ನಿಯಮಿತವಾಗಿ ತಮ್ಮ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವರದಿಯು ಒತ್ತಿ ಹೇಳಿದೆ.
 

*ಚಂಚಲ ಸೆಂಗಾರ್

ಕೃಪೆ:Onlymyhealth

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)