ಯುಎಇ: ಎಲ್ಲಾ ದೇಶಗಳ ಪೌರರಿಗೂ ಮಲ್ಟಿಪಲ್ ಟೂರಿಸ್ಟ್ ವೀಸಾ ಸೌಲಭ್ಯ
ಪೋಟೊ ಕೃಪೆ: //twitter.com/ArborArabic/
ಅಬುಧಾಬಿ,ಮಾ.21: ಎಲ್ಲಾ ದೇಶಗಳ ಪೌರರಿಗೆ ಬಹುಪ್ರವೇಶ ಪ್ರವಾಸಿ ವೀಸಾ (ಮಲ್ಟಿಪಲ್ ಎಂಟ್ರಿ ಟೂರಿಸ್ಟ್ ವೀಸಾ)ವನ್ನು ನೀಡಲು ಯುಎಇ ಸಂಪುಟ ರವಿವಾರ ಅಂಗೀಕಾರ ನೀಡಿದೆ.
ನೂತನ ವೀಸಾ ಯೋಜನೆಯು, ಜಾಗತಿಕ ಆರ್ಥಿಕ ರಾಜ ಧಾನಿ ಯಾಗಿ ಯುಎಇನ ಸ್ಥಾನಮಾನವನ್ನು ಬಲಪಡಿಸಲಿದೆ ಎಂದು ಯುಎಇ ಪ್ರಧಾನಿ, ಉಪಾಧ್ಯಕ್ಷ ಮತ್ತು ದುಬೈನ ಆಡಳಿತಗಾರರಾದ ಶೇಖ್ ಮುಹಮ್ಮದ್ ಬಿನ್ ರಾಶೀದ್ ಅಲ್ ಮಖ್ತೂಮ್ ತಿಳಿಸಿದ್ದಾರೆ.
ಶೇಖ್ ಮುಹಮ್ಮದ್ ಬಿನ್ ರಾಶೀದ್ ಅಲ್ ಮಖ್ತೂಮ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮಲ್ಟಿಪಲ್ ಎಂಟ್ರಿ ಟೂರಿಸ್ಟ್ ವೀಸಾದಿಂದಾಗಿ ಸಾಗರೋತ್ತರ ದೇಶಗಳಲ್ಲಿದ್ದುಕೊಂಡೇ ಕೆಲಸ ಮಾಡುವ ವೃತ್ತಿಪರರಿಗೆ ಯುಎಇನಲ್ಲಿ ನೆಲೆಸಲು ಸಾಧ್ಯವಾಗಲಿದೆ ಎಂದು ಮಖ್ತೂಮ್ ತಿಳಿಸಿದರು.
ತನ್ನ ಆರ್ಥಿಕತೆಯನ್ನು ಉತ್ತೇಜಿಸಲು ಯುಎಇ ಇತ್ತೀಚೆಗೆ ಘೋಷಿಸಿದ ಹಲವಾರು ಸುಧಾರಣಾ ಕ್ರಮಗಳ ಭಾಗವಾಗಿ ನೂತನ ವೀಸಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯುಎಇ ಕಳೆದ ವರ್ಷದ ಜನವರಿಯಲ್ಲಿ ಕೆಲವು ನಿರ್ದಿಷ್ಟ ದೇಶಗಳ ಪ್ರಜೆಗಳಿಗೆ ಬಹುಪ್ರವೇಶ ಪ್ರವಾಸ ವೀಸಾ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿತ್ತು.