ದುಬೈ: ಕನ್ನಡಿಗರ ಪರಿಶ್ರಮದಿಂದ ಸಂಕಷ್ಟದಲ್ಲಿದ್ದ ಶಶಿಕಲಾ ತಾಯ್ನಾಡಿಗೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಶಶಿಕಲಾ ಎಂಬ ಮಹಿಳೆ ದುಬೈಗೆ ಮನೆಗೆಲಸಕ್ಕಾಗಿ ತೆರಳಿ ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದು, ಹೆತ್ತವರು ಮತ್ತು ಮಕ್ಕಳ ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡು ಸ್ಥಳೀಯ ಮಾಧ್ಯಮಕ್ಕೆ ಶಶಿಕಲಾರ ತಾಯಿ ನೀಡಿದ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಎರಡು ವಾರಗಳ ಒಳಗಾಗಿ ಶಶಿಕಲಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಹೆತ್ತವರನ್ನು ಸೇರಿಕೊಂಡಿದ್ದಾರೆ.
ಶಶಿಕಲಾರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಕಳುಹಿಸಿದರ ಹಿಂದೆ ಪಟ್ಟ ಪ್ರಯತ್ನದ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, "ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಸುದ್ದಿಯನ್ನು ತಿಳಿದು ಕೆಎನ್ಆರೈ ಸದಸ್ಯರಾದ ಹರೀಶ್ ಕೋಡಿಯವರು ನನ್ನನ್ನು ಸಂಪರ್ಕಿಸಿದರು, ನಮ್ಮ ತಂಡ ಕೂಡಲೇ ಮನೆಗೆಲಸಕ್ಕೆ ಜನರನ್ನು ಕರೆತರುವ ಏಜೆಂಟ್ ಗಳ ಮೂಲಕ ಶಶಿಕಲಾರವರ ಪ್ರಸಕ್ತ ವಾಸಸ್ಥಳದ ಮಾಹಿತಿ ಕಲೆಹಾಕಿ ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ನ ಛಾಯಾ ಕೃಷ್ಣಮೂರ್ತಿಯವರಿಗೆ ಮಾಹಿತಿ ನೀಡಿದೆವು. ಛಾಯಾರವರು ಶಶಿಕಲಾರನ್ನು 24ಗಂಟೆಯೊಳಗಾಗಿ ಅಜ್ಮಾನ್ ಶೆಲ್ಟರ್ ಹೋಮ್ ಗೆ ಕರೆತಂದು ಅವರನ್ನು ತಾಯ್ನಾಡಿಗೆ ತೆರಳಲು ಬೇಕಾದ ಪ್ರಕ್ರಿಯೆಗೆ ಮುಂದಾದರು."
"ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೇ ಇದ್ದ ಶಶಿಕಲಾರವರ ವಿರುದ್ಧ ಯುಎಇಯಲ್ಲೂ ಪೊಲೀಸ್ ಕೇಸು ದಾಖಲಾಗಿತ್ತು, ಕೇಸು ದಾಖಲಾದ ಠಾಣೆಗೆ ಸಂಪರ್ಕಿಸಿ ಬಗೆಹರಿಸಲಾಯಿತು. ಅವರ ಪಾಸ್ಪೋರ್ಟ್ ಕಳೆದುಹೋಗಿತ್ತು. ಹಾಗಾಗಿ ತಾತ್ಕಾಲಿಕವಾಗಿ ತಾಯ್ನಾಡಿಗೆ ತಲುಪುವ ಸಲುವಾಗಿ 'ವೈಟ್ ಪಾಸ್ಪೋರ್ಟ್' ವ್ಯವಸ್ಥೆ ಮಾಡಿಸಲಾಯಿತು. ಎಮರ್ಜೆನ್ಸಿ ಎಕ್ಸಿಟ್ ಸರ್ಟಿಫಿಕೇಟ್ ಪಡೆದು, ಇಮಿಗ್ರೇಷನ್ ನಲ್ಲಿ ಶಶಿಕಲಾ ಮೇಲಿದ್ದ ದಂಡವನ್ನು ಪಾವತಿಸಿ, ಕೊರೋನ ಪರೀಕ್ಷೆ ನಡೆಸಿ, ಟಿಕೆಟ್ ನೀಡಿ, ವಿಮಾನ ನಿಲ್ದಾಣ ತಲುಪಿಸುವವರೆಗೂ ಕನ್ನಡತಿ ಛಾಯಾ ಕೃಷ್ಣಮೂರ್ತಿರವರು ಸಂಪೂರ್ಣವಾಗಿ ಸಹಕರಿಸಿದರು. ಸತತ 12 ದಿನಗಳ ಪ್ರಯತ್ನದ ಫಲವಾಗಿ ಶಶಿಕಲಾ ತಾಯ್ನಾಡಿಗೆ ಮರಳಿದರು'.
ಶಶಿಕಲಾ ಸಮಸ್ಯೆ ಬಗ್ಗೆ ಗಮನ ಸೆಳೆದ ಮಾಧ್ಯಮದವರು, ವಿಶೇಷವಾಗಿ ಕಾಳಜಿ ವಹಿಸಿದ ಹರೀಶ್ ಕೋಡಿ, ಮೀನಾ ಹರೀಶ್ ಕೋಡಿ, ಕೆಎನ್ಆರೈ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಇಮ್ರಾನ್ ಎರ್ಮಾಳ್ ಮತ್ತು ಅನ್ಸಾರ್ ರವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಇನ್ನು ಮುಂದೆ ಮನೆಗೆಲಸಕ್ಕೆ ಬರಲು ಇಚ್ಚಿಸುವ ಮಹಿಳೆಯರು ಇಲ್ಲಿರುವ ಕಾನೂನು, ಕೆಲಸದ ಕರಾರುಗಳನ್ನು ಪರಿಶೀಲಿಸಿದ ನಂತರವೇ ಬರಬೇಕು, ಏಜೆಂಟ್ ಗಳ ಮಾತಿಗೆ ಮರುಳಾಗಿ ಮೋಸ ಹೋಗಬಾರದು, ಶಶಿಕಲಾ ಪಟ್ಟ ಸಂಕಷ್ಟ ಪ್ರತಿಯೊಬ್ಬರಿಗೂ ಜಾಗೃತಿಯ ಪಾಠವಾಗಬೇಕು" ಎಂದು ಹಿದಾಯತ್ ಅಡ್ಡೂರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.