ಬಿಗಿಯಾದ ಶೂಗಳನ್ನು ಧರಿಸುತ್ತಿದ್ದೀರಾ, ಈ ಸಮಸ್ಯೆಗಳು ಉಂಟಾಗಬಹುದು
ನೀವು ಧರಿಸಿರುವ ಪಾದರಕ್ಷೆಗಳು ಅಥವಾ ಶೂಗಳು ಕಿರಿಕಿರಿಯನ್ನುಂಟು ಮಾಡುತ್ತಿವೆಯೇ? ಶೂಗಳು ಬಿಗಿಯಾಗಿದ್ದರೆ ಪಾದ ನೋಯುವುದು ಮಾತ್ರವಲ್ಲ,ಹಲವಾರು ಇತರ ಸಮಸ್ಯೆಗಳನ್ನೂ ಉಂಟು ಮಾಡುತ್ತದೆ.
ಬಿಗಿಯಾದ ಶೂಗಳನ್ನು ಧರಿಸುವುದರಿಂದ ಉಂಟಾಗುವ ಕೆಲವು ಸಾಮಾನ್ಯ ಸಮಸ್ಯೆಗಳ ಬಗ್ಗೆ ಚರ್ಮರೋಗ ತಜ್ಞ ಡಾ.ಕೆ.ಸ್ವರೂಪ್ ತನ್ನ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಪಾದರಕ್ಷೆಗಳನ್ನು ನಿಮ್ಮ ಅನುಕೂಲಕ್ಕಾಗಿ ತಯಾರಿಸಲಾಗುತ್ತದೆಯೇ ಹೊರತು ಪಾದಗಳಿಗೆ ತೊಂದರೆಯನ್ನುಂಟು ಮಾಡಲು ಮತ್ತು ರೋಗಗಳಿಗೆ ಕಾರಣವಾಗಲು ಅಲ್ಲ. ನೀವು ಯಾವುದೇ ಪಾದರಕ್ಷೆಯನ್ನು ಖರೀದಿಸುವಾಗ ನಿಮ್ಮ ಹಿಮ್ಮಡಿಗಳು ಮತ್ತು ಪಾದದ ಬೆರಳುಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗದಂತಿರಲು ಅದರ ತಳವು ‘ಎಸ್’ ಆಕಾರದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಪಾದರಕ್ಷೆಗಳು ನಿಮ್ಮ ಪಾದಗಳ ಆಕಾರಕ್ಕೆ ಸೂಕ್ತವಾಗಿರಬೇಕು. ಕಾಲುಚೀಲಗಳಿಲ್ಲದೆ ಶೂಗಳನ್ನು ಧರಿಸಬೇಡಿ ಮತ್ತು ಅದರ ಒಳಭಾಗವು ಹಿತಕರ ಅನುಭವ ನೀಡುವಂತಿರಬೇಕು.
ನೀವು ಬಿಗಿಯಾದ ಶೂಗಳನ್ನು ಧರಿಸಿದಾಗ ಉಂಟಾಗಬಹುದಾದ ಕೆಲವು ಸಮಸ್ಯೆಗಳು ಇಲ್ಲಿವೆ....
* ಪಾದದ ನೋವು
ನೀವು ಬಿಗಿಯಾದ ಶೂಗಳನ್ನು ಧರಿಸಿದಾಗ ಪಾದಗಳು ನೋಯುವುದು ಸಾಮಾನ್ಯವಾಗಿದೆ. ನಿಮ್ಮ ಪಾದದ ಬೆರಳುಗಳು ಶೂಗಳೊಳಗೆ ಮಡಚಿರಬಾರದು ಮತ್ತು ಶೂಗಳ ಅಗಲ ಸೂಕ್ತ ಪ್ರಮಾಣದಲ್ಲಿರಬೇಕು.
* ಪಾದದ ಹುಣ್ಣುಗಳು
ಬಿಗಿಯಾದ ಶೂ ಪಾದಗಳಲ್ಲಿ ಹುಣ್ಣುಗಳುಂಟಾಗಲು ಪ್ರಮುಖ ಕಾರಣವಾಗಿದೆ. ಮಧುಮೇಹದಿಂದ ಬಳಲುತ್ತಿರುವವರು ಈ ಅಪಾಯಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಹುಣ್ಣುಗಳು ತೆರೆದ ಗಾಯಗಳಾಗಿದ್ದು,ಶೂಗಳ ನಿರಂತರ ಸಂಪರ್ಕದಲ್ಲಿರುತ್ತವೆ ಮತ್ತು ಅವುಗಳಿಗೆ ಉಜ್ಜಲ್ಪಡುತ್ತವೆ. ಇದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ಸರಿಯಾದ ಶೂಗಳನ್ನು ಆಯ್ಕೆ ಮಾಡುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು.
* ಯಾತನೆ
ಸಾಮಾನ್ಯವಾಗಿ ಹೈ ಹೀಲ್ಡ್ ಶೂಗಳನ್ನು ಧರಿಸಿದಾಗ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಶರೀರದ ಇತರ ಭಾಗಗಳಲ್ಲಿಯೂ ನೋವು ಕಾಣಿಸಿಕೊಳ್ಳಬಲ್ಲದು. ಸಾಮಾನ್ಯವಾಗಿ ಕೆಳಬೆನ್ನು,ಪೃಷ್ಠಗಳು ಮತ್ತು ಕಾಲುಗಳು ನೋಯುತ್ತವೆ. ಬಿಗಿಯಾದ ಶೂಗಳಿಂದಾಗಿ ನೀವು ಪಾದ ಮತ್ತು ಭಂಗಿಯನ್ನು ಹೊಂದಿಸಿಕೊಂಡಾಗ ಶರೀರದ ಅಲೈನ್‌ಮೆಂಟ್ ಅಥವಾ ಪಂಕ್ತೀಕರಣವು ವ್ಯತ್ಯಯಗೊಳ್ಳುತ್ತದೆ ಮತ್ತು ಇದು ಸಮಸ್ಯೆಗೆ ಕಾರಣವಾಗುತ್ತದೆ.
* ಅಥ್ಲೆಟ್ಸ್ ಫೂಟ್
ಇದು ಮೂಲತಃ ತೇವದಿಂದ ಉಂಟಾಗುವ ಶಿಲೀಂಧ್ರ ಸೋಂಕು ಆಗಿದೆ. ಇದು ಸಾಮಾನ್ಯವಾಗಿ ಕಾಲ್ಬೆರಳುಗಳ ಬಳಿಯ ಜಾಗ ಮತ್ತು ಪಾದದ ಅಡಿಭಾಗವನ್ನು ಬಾಧಿಸುತ್ತದೆ. ಅಥ್ಲೆಟ್ಸ್ ಫೂಟ್ ಚರ್ಮದ ಉರಿಯೂತ,ಕಲೆಗಳು,ದದ್ದುಗಳು ಇತ್ಯಾದಿಗಳಿಗೆ ಕಾರಣವಾಗುತ್ತದೆ. ತುರಿಕೆ,ಚರ್ಮ ಸುಲಿಯುವಿಕೆ ಮತ್ತು ಕೆಟ್ಟ ವಾಸನೆ ಇವು ಅಥ್ಲೆಟ್ಸ್ ಫೂಟ್‌ನ ಪ್ರಮುಖ ಲಕ್ಷಣಗಳಾಗಿವೆ. ಶೂಗಳು ಮತ್ತು ಕಾಲುಚೀಲಗಳನ್ನು ನಿಯಮಿತವಾಗಿ ಬದಲಿಸುವುದರಿಂದ ಮತ್ತು ಪಾದಗಳನ್ನು ಒಣದಾಗಿ ಇರಿಸಿಕೊಳ್ಳುವ ಮೂಲಕ ಅಥ್ಲೆಟ್ಸ್ ಫೂಟ್ ಸಮಸ್ಯೆಯನ್ನು ತಡೆಯಬಹುದು.
* ಗುಳ್ಳೆಗಳು
ಪಾದದ ಹಿಂಭಾಗದ ಚರ್ಮ ಮತ್ತು ಶೂಗಳ ಒಳಭಾಗದ ನಡುವಿನ ಘರ್ಷಣೆಯು ಗುಳ್ಳೆಗಳನ್ನುಂಟು ಮಾಡುತ್ತದೆ. ಮೃದುವಾದ ಫ್ಯಾಬ್ರಿಕ್ ಇರದ ಬಿಗಿಯಾದ ಶೂಗಳನ್ನು ಧರಿಸಿದಾಗ ದ್ರವ ತುಂಬಿದ ಗುಳ್ಳೆಗಳುಂಟಾಗುವುದು ಸಾಮಾನ್ಯವಾಗಿದೆ. ಅನುಕೂಲಕರವಾದ ಶೂಗಳು ಮತ್ತು ಕಾಲುಚೀಲಗಳನ್ನು ಧರಿಸುವುದರಿಂದ ಗುಳ್ಳೆಗಳುಂಟಾಗುವುದನ್ನು ತಡೆಯಬಹುದು. ಈಗಾಗಲೇ ಗುಳ್ಳೆಗಳು ಎದ್ದಿದ್ದರೆ ಅದಕ್ಕೊಂದು ಬ್ಯಾಂಡೇಜ್ ಹಾಕಿ. ಕಲೆಗಳು ಮತ್ತು ನೋವನ್ನು ತಡೆಯಲು ಈ ಗುಳ್ಳೆಗಳು ನೈಸರ್ಗಿಕವಾಗಿ ಒಡೆಯಲು ಅವಕಾಶ ನೀಡಿ.
* ಕುರುಗಳು
ಪಾದದ ಹೆಬ್ಬೆರಳು ಇತರ ಬೆರಳುಗಳತ್ತ ಬಾಗಿಕೊಂಡಾಗ ಒಂದು ರೀತಿಯ ಗಂಟಿನಂತಹ ರಚನೆ ಸೃಷ್ಟಿಯಾಗುತ್ತದೆ. ಇಂತಹ ಕುರುಗಳು ಬಳಿಕ ತೀವ್ರ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಆನುವಂಶಿಕ ಕಾರಣಗಳು,ಸಂಧಿವಾತ ಇತ್ಯಾದಿಗಳಿಂದಾಗಿ ಮತ್ತು ಬಿಗಿಯಾದ ಶೂಗಳನ್ನು ಧರಿಸಿದಾಗ ಪಾದಗಳಲ್ಲಿ ಇಂತಹ ಕುರುಗಳು ಏಳುತ್ತವೆ. ಎತ್ತರದ ಹಿಮ್ಮಡಿಯ ಚೂಪಾದ ಶೂಗಳನ್ನು ಧರಿಸುತ್ತಿದ್ದರೆ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ.
* ಒಳಮುಖವಾಗಿ ಬೆಳೆದ ಉಗುರುಗಳು
ಉಗುರುಗಳ ಅಂಚು ಪಾದದ ಚರ್ಮದೊಳಗೆ ಬೆಳೆದಾಗ ಈ ಸಮಸ್ಯೆಯುಂಟಾಗುತ್ತದೆ. ಇದು ತೀವ್ರ ನೋವನ್ನುಂಟು ಮಾಡುವ ಜೊತೆಗೆ ಸೋಂಕಿಗೂ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಹೆಬ್ಬೆರಳಿನಲ್ಲಿ ಉಂಟಾಗುತ್ತದೆ ಮತ್ತು ನೋವು,ಊತ ಹಾಗೂ ಸೋಂಕನ್ನುಂಟು ಮಾಡುತ್ತದೆ. ಬೆರಳುಗಳನ್ನು ಬಿಗಿಯಾಗಿ ನಿರ್ಬಂಧಿಸುವ ಶೂಗಳನ್ನು ಧರಿಸುತ್ತಿದ್ದರೆ ಉಗುರಿಗೆ ಬೆಳೆಯಲು ಜಾಗವಿಲ್ಲದೆ ಅದು ಚರ್ಮದೊಳಗೆ ಬೆಳೆಯಲು ಆರಂಭಿಸುತ್ತದೆ.
* ಆಣಿಗಳು ಮತ್ತು ಜಡ್ಡುಗಳು
ನಿಮ್ಮ ಪಾದಗಳ ಮೂಳೆ ಪದೇ ಪದೇ ಶೂಗಳಿಗೆ ಉಜ್ಜಲ್ಪಡುತ್ತಿದ್ದರೆ ಆಣಿಗಳು ಅಥವಾ ಒತ್ತುಗಂಟುಗಳು ಮತ್ತು ಜಡ್ಡುಗಳು ಉಂಟಾಗುತ್ತವೆ. ಒತ್ತುಗಂಟುಗಳು ಬೆರಳುಗಳ ಮೇಲೆ ಮತ್ತು ಅವುಗಳ ತುಸು ಅಂಚಿನಲ್ಲಿಯೂ ಕಾಣಿಸಿಕೊಳ್ಳುತ್ತವೆ. ಜಡ್ಡುಗಳು ಬೆರಳುಗಳ ಅಡಿಯಲ್ಲಿ ಉಂಟಾಗುತ್ತವೆ. ಇವು ಮೂಲತಃ ಮೃತ ಚರ್ಮವಾಗಿದ್ದು ಗಟ್ಟಿಯಾಗಿರುತ್ತವೆ ಮತ್ತು ನಡೆಯುವಾಗ ನೋವನ್ನುಂಟು ಮಾಡುತ್ತವೆ.
* ಹೆಬ್ಬೆರಳಿನ ಶಿಲೀಂಧ್ರ
ಇದು ತೀವ್ರ ನೋವನ್ನುಂಟು ಮಾಡುವ ಜೊತೆಗೆ ಉಗುರಿನ ನೋಟವನ್ನೂ ಕೆಡಿಸುತ್ತದೆ. ಹೆಬ್ಬೆರಳಿನ ಶಿಲೀಂಧ್ರವು ಇತರ ಬೆರಳುಗಳಿಗೂ ಹರಡುತ್ತದೆ ಮತ್ತು ಉಗುರುಗಳು ವಿರೂಪವಾಗಿ ಕಾಣುವಂತೆ ಮಾಡುತ್ತದೆ. ಯಾವುದಾದರೂ ಕಾರಣದಿಂದ ಹೆಬ್ಬೆರಳಿಗೆ ಆಗಾಗ್ಗೆ ಹಾನಿಯುಂಟಾಗುತ್ತಿರುತ್ತದೆ ಮತ್ತು ಹೆಬ್ಬೆರಳು ಹಾಗೂ ಚರ್ಮದ ನಡುವಿನ ಸಂದಿಯಲ್ಲಿ ಶಿಲೀಂಧ್ರವು ರೂಪುಗೊಳ್ಳುತ್ತದೆ. ಪಾದದ ಅಳತೆಗೆ ಸರಿಯಾಗಿರದ ಶೂ ಈ ಸಮಸ್ಯೆಗೆ ಕಾರಣಗಳಲ್ಲೊಂದಾಗಿದೆ.
* ಪುರು ಬನ್ಸಾಲ್
* ಪೂರಕ ಮಾಹಿತಿ: ಡಾ.ಕೆ.ಸ್ವರೂಪ್,ಚರ್ಮರೋಗ ತಜ್ಞರು
ಕೃಪೆ:Onlymyhealth