ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನೆರವಾಗುವ ಹೊಸ ವೈಬ್ ಸೈಟ್ ತಯಾರಿಸಿದ ಶಿವಮೊಗ್ಗದ ಯುವತಿ
www.iasbhavan.com ಮೂಲಕ ಉಚಿತ ಮಾಹಿತಿ, ತರಬೇತಿ
ಶಿವಮೊಗ್ಗ,ಮಾ.29: ಕೊರೋನ ಲಾಕ್ ಡೌನ್ ಆದಾಗ ಕೋಚಿಂಗ್ ಸೆಂಟರ್ ಗಳು ಬಾಗಿಲು ಮುಚ್ಚಿದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದವರಿಗೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಶಿವಮೊಗ್ಗದ ಯುವತಿಯೊಬ್ಬಳು ರೂಪಿಸಿದ ಯೋಜನೆಯೊಂದು ಸಾವಿರಾರು ಆಕಾಂಕ್ಷಿಗಳಿಗೆ ನೆರವಾಗಿದೆ.
ಕೊರೋನ ಲಾಕ್ ಡೌನ್ ಆದಾಗ ಎಲ್ಲ ಕೋಚಿಂಗ್ ಸೆಂಟರ್ ಗಳು ಮುಚ್ಚಿದ್ದರಿಂದ ಯುಪಿಎಸ್ ಸಿ, ಕೆಪಿಎಸ್ಸಿ, ಪಿಎಸ್ಐ, ಎಫ್ ಡಿಎ, ಎಸ್ ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರಿಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಮೂಲದ ಐಶ್ವರ್ಯ ಎಂಬ ಯುವತಿಯು ಆರಂಭಿಸಿದ ವೆಬ್ ಸೈಟ್ ಇದೀಗ ಸುಮಾರು 58 ಸಾವಿರ ಸ್ಪರ್ಧಾಕಾಂಕ್ಷಿಗಳಿಗೆ ಉಚಿತವಾಗಿ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ.
ಐಶ್ವರ್ಯ ಶಿವಮೊಗ್ಗದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದಾರೆ. ಇದರ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಬಾಗಿಲು ಹಾಕಲಾಗಿತ್ತು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ಇಲ್ಲದೆ, ಅಧ್ಯಯನ ಸಾಮಾಗ್ರಿಗಳಿಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ಆದರೆ ಲಕ್ಷಾಂತರ ಆಕಾಂಕ್ಷಿಗಳು ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಐಶ್ವರ್ಯ ಅವರು http://www.iasbhavan.com ವೆಬ್ ಸೈಟ್ ತಯಾರಿಸಿದ್ದಾರೆ.
ಬಳಿಕ 15 ದಿನಗಳ ಕಾಲ ತಾವು ಹಾಗೂ ತಮ್ಮ ಸ್ನೇಹಿತರು ಚೆಕ್ ಮಾಡಿದ್ದಾರೆ. ವೆಬ್ ಸೈಟ್ ನಿಂದ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುದು ತಿಳಿಯುತ್ತಿದ್ದಂತೆ ಅದನ್ನು ಪರೀಕ್ಷಾರ್ಥಿಗಳಿಗೆ ತಲುಪಿಸಿದ್ದಾರೆ. ಈ ವೆಬ್ ಸೈಟ್ ನಲ್ಲಿ ಪ್ರತಿದಿನದ ಸಾಮಾನ್ಯ ಜ್ಞಾನದ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಹಾಗೂ ಸ್ಪರ್ಧಾಕಾಂಕ್ಷಿಗಳಿಗೆ ಬೇಕಾಗುವ ಎಲ್ಲಾ ಮಾಹಿತಿಯನ್ನೂ ಪ್ರತಿದಿನ ನೀಡಲಾಗುತ್ತಿದೆ. ಇದೆಲ್ಲವನ್ನೂ ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ.
ಕನ್ನಡದ ಏಕೈಕ ವೆಬ್ ಸೈಟ್: http://www.iasbhavan.com ಯುಪಿಎಸ್ಸಿಗೆ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕನ್ನಡದ ಏಕೈಕ ವೆಬ್ ಸೈಟ್ ಆಗಿದೆ. ಹೀಗಾಗಿ ವೆಬ್ ಸೈಟ್ ಹಿಂಬಾಲಕರ ಸಂಖ್ಯೆಯೂ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿದೆ.
ಅನ್ಲೈನ್ ನಲ್ಲಿ ಪರೀಕ್ಷೆ: ಪ್ರತಿ ರವಿವಾರ ಹಾಗೂ ತಿಂಗಳಲ್ಲಿ ಒಂದು ಬಾರಿ ಆನ್ ಲೈನ್ ನಲ್ಲಿಯೇ ಪರೀಕ್ಷೆಯನ್ನೂ ಉಚಿತವಾಗಿ ನಡೆಸಲಾಗುತ್ತಿದೆ. ಈಗಾಗಲೇ 58 ಸಾವಿರ ಸ್ಪರ್ಧಾಕಾಂಕ್ಷಿಗಳು ಈ ವೆಬ್ ಸೈಟ್ ಗೆ ಸಬ್ ಸ್ಕ್ರೈಬ್ ಆಗಿ ಉಚಿತವಾಗಿ ತರಬೇತಿ ಪಡೆಯುತ್ತಿದ್ದಾರೆ. ಸ್ಪರ್ಧಾಕಾಂಕ್ಷಿಗಳಿಗೆ ಮಾಹಿತಿಯ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ 20 ಜನರ ತಂಡ ಪ್ರತಿ ದಿನ ವೆಬ್ ಸೈಟ್ ನಲ್ಲಿ ಮಾಹಿತಿ ಅಪ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಕೊರೋನ ಸಮಯದಲ್ಲಿ ಎಲ್ಲಾ ಕೋಚಿಂಗ್ ಸೆಂಟರ್ಗಳು ಬಂದ್ ಆಗಿದ್ದವು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡವರಿಗೆ ತೊಂದರೆಯಾಗುತ್ತಿತ್ತು. ಹಾಗಾಗಿ ನಾವು ಒಂದು ಯೋಚನೆ ಮಾಡಿ ಒಂದು ತಿಂಗಳಲ್ಲಿ ನಮ್ಮ ವೆಬ್ಸೈಟ್ ಡೆವಲ್ಪೆಂಟ್ ಮಾಡಿದೆವು. ಎಲ್ಲಾ ಆಕಾಂಕ್ಷಿಗಳಿಗೆ ಉಚಿತವಾಗಿ ಮಾಹಿತಿ ನೀಡುತ್ತಿದ್ದೇವು. ಈಗಾಗಲೇ 58 ಸಾವಿರಕ್ಕೂ ಹೆಚ್ಚು ಸಬ್ ಸ್ಕ್ರೈಬ್ ಆಗಿದ್ದಾರೆ. ಪ್ರತಿದಿನದ ಘಟನಾವಳಿಗಳನ್ನು ನೀಡುತ್ತೇವೆ. ವಾರದ ಕೊನೆಯ ದಿನ ಟೆಸ್ಟ್ ಹಾಗೂ ತಿಂಗಳ ಕೊನೆಗೆ ಪರೀಕ್ಷೆ ಮಾಡುತ್ತೇವೆ. ಗ್ರಾಮೀಣ ಅಭ್ಯರ್ಥಿಗಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ.
-ಐಶ್ವರ್ಯ, ಐಎಎಸ್ ಭವನ್.ಕಾಮ್ ವೆಬ್ಸೈಟ್ ಅಡ್ಮಿನ್
ಕೊರೋನ ಬಂದಾಗಿನಿಂದ ಪ್ರತಿಯೊಂದು ಕೋಚಿಂಗ್ ಸೆಂಟರ್ ಗಳು ಬಾಗಿಲು ಹಾಕಲಾಗಿತ್ತು. ಮನೆಯಲ್ಲಿ ಕುಳಿತುಕೊಂಡು ಓದುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಸ್ನೇಹಿತರು ಐಎಎಸ್.ಕಾಮ್ ಬಗ್ಗೆ ಮಾಹಿತಿ ನೀಡಿದ್ದರು. ಐಎಎಸ್.ಕಾಮ್ ಲಾಗಿನ್ ಆಗಿದ್ದೇನೆ. ಪರೀಕ್ಷೆಗೆ ಪೂರಕವಾದ ಮಾಹಿತಿ ದೊರೆಯುತ್ತಿದೆ.
-ಪ್ರತಾಪ್, ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿ
ಕ್ವಿಝ್, ಪ್ರಚಲಿತ ಘಟನೆಗಳ ಮಾಹಿತಿ ಸೇರಿದಂತೆ ಪರೀಕ್ಷೆಗೆ ಅನುಕೂಲವಾಗುವ ಎಲ್ಲಾ ಮಾಹಿತಿಗಳು ಐಎಎಸ್.ಕಾಮ್ ನಲ್ಲಿ ದೊರೆಯುತ್ತಿದೆ. ವಾರದ ಕೊನೆಯ ದಿನ ಪರೀಕ್ಷೆ ನಡೆಯುತ್ತವೆ. ಇದರಿಂದ ನಮಗೆ ಅನುಕೂಲವಾಗುತ್ತಿದೆ.
-ತಾಹಿರ್, ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿ