ಅರಣ್ಯ ಪ್ರದೇಶದಲ್ಲಿ ಎನ್ಕೌಂಟರ್: ಮಹಿಳೆಯರು ಸೇರಿದಂತೆ ಐವರು ನಕ್ಸಲರು ಬಲಿ
ಸಾಂದರ್ಭಿಕ ಚಿತ್ರ
ಮುಂಬೈ, ಮಾ.29: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಖೋಬ್ರಮೆಂಢ ಅರಣ್ಯದಲ್ಲಿ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಮಹಿಳೆಯರ ಸಹಿತ 5 ನಕ್ಸಲರು ಬಲಿಯಾಗಿರುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.
ಖೋಬ್ರಮೆಂಡ ಅರಣ್ಯ ಪ್ರದೇಶದಲ್ಲಿ ನಕ್ಸಲರ ಚಲನವಲನದ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು ಬಳಿಕ ನಕ್ಸಲರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮದ್ದುಗುಂಡು, 3 ಪ್ರೆಷರ್ ಕುಕರ್ ಬಾಂಬ್, ಇಲೆಕ್ಟ್ರಿಕ್ ವಯರ್ನ ಬಂಡಲ್, ಸೋಲಾರ್ ಪ್ಲೇಟ್ಗಳು, ಪಟಾಕಿ ಬಾಂಬ್ ಹಾಗೂ ದಿನಬಳಕೆಯ ವಸ್ತುಗಳು ಪತ್ತೆಯಾಗಿದ್ದು ಅವನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ಬೆಳಿಗ್ಗೆ ಅದೇ ಸ್ಥಳದಲ್ಲಿ ಸುಮಾರು 25 ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡು ಕಾರ್ಯಾಚರಣೆ ಮುಂದುವರಿಸಲಾಗಿದೆ. ಗುಂಡಿನ ಚಕಮಕಿ ಬಳಿಕ ನಕ್ಸಲರು ಪರಾರಿಯಾಗಿದ್ದು ಸ್ಥಳದಲ್ಲಿ ಇಬ್ಬರು ಮಹಿಳೆಯರ ಸಹಿತ 5 ನಕ್ಸಲರ ಮೃತದೇಹ ಪತ್ತೆಯಾಗಿದೆ ಎಂದು ಗಡ್ಚಿರೋಲಿ ವಲಯ ಡಿಐಜಿ ಸಂದೀಪ್ ಪಾಟೀಲ್ ಹೇಳಿದ್ದಾರೆ.