ದೊಡ್ಡವರ ಸಣ್ಣತನ? ಬ್ರಿಟಿಷ್ ರಾಜಮನೆತನಕ್ಕೆ ಅಂಟಿದ ವರ್ಣಭೇದ ನೀತಿ!
ಪೋಟೊ ಕೃಪೆ: twitter.com/MSN
ಇಲ್ಲಿ ಗಮನಿಸಬೇಕಾದ ಒಂದು ಬಹುಮುಖ್ಯ ವಿಚಾರವೆಂದರೆ ಈ ಬಹಿರಂಗ ಸಂದರ್ಶನದಲ್ಲಿ ಪತಿ-ಪತ್ನಿಯರಿಬ್ಬರೂ ಎಲ್ಲಿಯೂ ರಾಣಿ ಎರಡನೇ ಎಲಿಜಬೆತ್ ಮತ್ತು ರಾಜಕುಮಾರ ಚಾರ್ಲ್ಸ್ ಹೆಸರನ್ನು ಹೇಳಿಲ್ಲ. ಮೇಗನ್ ರಾಜಮನೆತನದ ಯಾರ ಹೆಸರನ್ನೂ ನೇರವಾಗಿ ಹೇಳುತ್ತಿಲ್ಲ. ಆ ಮೂಲಕ ರಾಜಮನೆತನದ ಗೌರವವನ್ನು ಕಾಪಾಡಲು ಮೇಗನ್ ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಕೆಲವು ರಾಜಕೀಯ ಪಂಡಿತರು. ಆದರೆ ರಾಜಮನೆತನದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ತಾನು ರಾಣಿ ಎಲಿಜಬೆತ್ಗೆ ಹೇಳಲು ಪ್ರಯತ್ನ ಮಾಡಿದ್ದಾಗಿಯೂ ಅದಕ್ಕೆ ಆಕೆ ಕಿವುಡಿಯಂತೆ ವರ್ತಿಸಿದ್ದರು ಎಂದು ಆರೋಪಿಸಲು ಮೇಗನ್ ಮರೆತಿಲ್ಲ.
ಸೂರ್ಯ ಮುಳುಗದ ನಾಡು ಎಂದೇ ಬ್ರಿಟನ್ ಅಥವಾ ಇಂಗ್ಲೆಂಡ್ ಪ್ರಸಿದ್ಧ. ಒಂದು ಕಾಲದಲ್ಲಿ ಪ್ರಪಂಚದ ಹೆಚ್ಚು ಕಡಿಮೆ ಮುಕ್ಕಾಲು ಭಾಗ ದೇಶಗಳನ್ನು ಆಕ್ರಮಿಸಿಕೊಂಡಿದ್ದ ರಾಷ್ಟ್ರ ಇದು. ನೂರಕ್ಕೆ ನೂರರಷ್ಟು ಅಕ್ಷರಸ್ಥರ ದೇಶ. ಕೈಗಾರಿಕಾ ಕ್ರಾಂತಿಯ ತವರೂರು. ಹೆಚ್ಚು ಕಡಿಮೆ ಎಲ್ಲಾ ರೀತಿಯ ಆಧುನಿಕ ವಸ್ತುಗಳ ಅವಿಷ್ಕಾರಗಳು ನಡೆದಿದ್ದೇ ಈ ದೇಶದಲ್ಲಿ. ಇಲ್ಲಿನ ಶೇ. ತೊಂಭತ್ತರಷ್ಟು ಜನರು ಬಿಳಿ ಬಣ್ಣದವರು. ಈಗ ಬ್ರಿಟನ್ ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ಅಲ್ಲಿನ ರಾಜಮನೆತನಕ್ಕೆ ಪ್ರಪಂಚದಲ್ಲಿ ಎಲ್ಲೂ ಇರದ ಬಾರಿ ಅಂತಸ್ತು, ಗೌರವ, ಮರ್ಯಾದೆ ಇದೆ. ರಾಜ ಮನೆತನದ ಮಾತು ಎಂದರೆ ಅಲ್ಲಿನ ಸರಕಾರಕ್ಕೆ ವೇದವಾಕ್ಯ. ಅಲ್ಲಿನ ರಾಜಮನೆತನವನ್ನು ನಿರ್ವಹಿಸಲು ಅಲ್ಲಿನ ಸರಕಾರ ಪ್ರತಿವರ್ಷ ಲಕ್ಷಾಂತರ ಪೌಂಡ್ಗಳನ್ನು ಖರ್ಚು ಮಾಡುತ್ತದೆ. ಅದಕ್ಕಿಂತ ಮುಖ್ಯವಾಗಿ ಈ ರಾಜಮನೆತನದ ಸುದ್ದಿಗಳನ್ನು ಪ್ರಕಟಿಸುವುದು ಎಂದರೆ ಮಾಧ್ಯಮಗಳಿಗೆ ಒಂದು ರೀತಿ ಹಬ್ಬ.
ಇಂತಹ ರಾಜಮನೆತನದ ವಿರುದ್ಧವೇ ಅದರ ಸೊಸೆ ಮೇಗನ್ ಅಂದರೆ ರಾಜಕುಮಾರ ಹ್ಯಾರಿಯ ಪತ್ನಿ ರಾಜಮನೆತನದ ವರ್ಣಭೇದ ನೀತಿಯ ಬಗ್ಗೆ ಬಹಿರಂಗವಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಮೇಗನ್ ರಾಜಮನೆತನದ ಒಳಗೆ ನಡೆಯುತ್ತಿರುವ ವರ್ಣಭೇದ ನೀತಿಯನ್ನು ಪ್ರತಿಭಟಿಸಿ ಗಂಡನೊಂದಿಗೆ ಆ ರಾಜಮನೆತನವನ್ನೇ ತ್ಯಜಿಸಿ ಹೊರ ಬಂದ ಘಟನೆ ವಿಶ್ವಾದ್ಯಂತ ಭಾರೀ ಸುದ್ದಿ ಮಾಡಿತ್ತು. ಮೇಗನ್ ಒಂದು ಸ್ಥಳೀಯ ಟಿವಿಗೆ ನೀಡಿದ ಸಂದರ್ಶನದಲ್ಲಿ ದೊಡ್ಡ ರಾಜಮನೆತನದ ಸಣ್ಣತನವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ತನ್ನ ವಿರುದ್ಧ ಇಷ್ಟು ವರ್ಷ ಅರಮನೆಯಲ್ಲಿ ನಡೆದ ವರ್ಣಭೇದ ನೀತಿ ಮತ್ತು ಅದರಿಂದ ನೊಂದು ಆಕೆ ಹಲವಾರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಸುದ್ದಿಯನ್ನು ಸಂದರ್ಶನದಲ್ಲಿ ಹೊರಹಾಕಿ ವಿಶ್ವಕ್ಕೆ ದಿಗ್ಭ್ರಮೆ ಹುಟ್ಟಿಸಿದ್ದಾರೆ.
ಮೂಲತಃ ಮೇಗನ್ಳ ತಾಯಿ ಕಪ್ಪುವರ್ಣ ಮತ್ತು ತಂದೆ ಬಿಳಿ ವರ್ಣದವರು. ಮೇಗನ್ನ ತಂದೆ ತಾಯಿ ಪ್ರೀತಿಸಿ ಮದುವೆಯಾಗಿದ್ದರು. ಈ ತಂದೆ-ತಾಯಿಗೆ ಜನಿಸಿದ ಮೇಗನ್ ಒಂದು ರೀತಿಯಲ್ಲಿ ಗೋಧಿ ಮೈಬಣ್ಣವನ್ನು ಹೊಂದಿದ್ದರು. ಮೇಗನ್ ಮೂಲತಃ ಓರ್ವ ಚಿತ್ರನಟಿ. ಇವರು ರಾಜಕುಮಾರ ಹ್ಯಾರಿಯನ್ನು 2018ರಲ್ಲಿ ವಿವಾಹವಾಗಿ ರಾಜಮನೆತನದ ಸೊಸೆಯಾಗಿದ್ದರು. ಈ ಮದುವೆಗೆ ಬ್ರಿಟಿಷ್ ರಾಜಮನೆತನದ ಒಪ್ಪಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೂ ಮದುವೆ ಅಂತೂ ನಡೆದು ಹೋಗಿತ್ತು. ಕೆಲವರ ಪ್ರಕಾರ ಆಗಿನಿಂದಲೂ ರಾಜಮನೆತನದ ಒಳಗೆ ಮೇಗನ್ ಬಗ್ಗೆ ರಾಣಿ ಎಲಿಜಬೆತ್ಗೆ(ಹ್ಯಾರಿಯ ಅಜ್ಜಿ) ಮತ್ತು ಮಾವ ಚಾರ್ಲ್ಸ್ಗೆ ಅಷ್ಟೇನೂ ಒಲವಿರಲಿಲ್ಲ. ಅಲ್ಲಿ ಸದಾ ಮೇಗನ್ಳ ಕಂದು ಮೈಬಣ್ಣದ ಬಗ್ಗೆ ವಿಮರ್ಶೆ ನಡೆಯುತ್ತಿತ್ತು ಎಂದು ಮೇಗನ್ ಸಂದರ್ಶನದಲ್ಲಿ ಹೇಳುತ್ತಾರೆ. ಅದಕ್ಕಿಂತ ಬಹಳ ಬೇಸರದ ಸಂಗತಿಯೆಂದರೆ ಮೇಗನ್ಗೆ ಜನಿಸುವ ಮಗುವನ್ನು ಮುಂದೆ ಬ್ರಿಟನ್ ರಾಜಮನೆತನದ ಯುವರಾಜನೆಂದು ಘೋಷಿಸಬಾರದು, ಏಕೆಂದರೆ ಆ ಮಗುವಿನ ಮೈಬಣ್ಣ ಬಿಳಿಯಾಗಿರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ರಾಜಮನೆತನದಲ್ಲಿ ಚರ್ಚೆ ನಡೆದಿತ್ತು ಎಂದು ಮೇಗನ್ ಘಂಟಾಘೋಷವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.! ಹುಟ್ಟುವ ಮಗುವಿನ ಚರ್ಮದ ಬಣ್ಣ ಶೇಕಡಾ ಎಷ್ಟು ಕಪ್ಪುಇರಬಹುದು ಎನ್ನುವುದರ ಕುರಿತು ರಾಜಮನೆತನದ ಮಂದಿಯ ಸಂಭಾಷಣೆಯನ್ನು ತಾನು ಕೇಳಿಸಿ ಕೊಂಡಿರುವುದಾಗಿ ಮೇಗನ್ ಸಂದರ್ಶನದಲ್ಲಿ ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿ ನೊಂದು ತಾನು ಆತ್ಮಹತ್ಯೆಗೆ ಸಹ ಯೋಚಿಸಿದ್ದೆ ಎಂದು ಮೇಗನ್ ಅದೇ ಸಂದರ್ಶನದಲ್ಲಿ ಹೇಳಿದ್ದರು. ಇನ್ನೂ ಹುಟ್ಟದ ಮಗುವಿನ ಮೈಬಣ್ಣದ ಬಗ್ಗೆ ರಾಜಮನೆತನದಲ್ಲಿ ಈ ಮಟ್ಟಿಗೆ ಚರ್ಚೆ ನಡೆದಿತ್ತು ಎನ್ನುವುದಾದರೆ ಸುಮಾರು 500 ವರ್ಷಗಳ ಇತಿಹಾಸವಿರುವ ಇಂತಹ ವಿಶ್ವ ಪ್ರಸಿದ್ಧ ರಾಜಮನೆತನದ ಒಳಗೆ ಏನು ನಡೆಯುತ್ತಿತ್ತೋ ಅಥವಾ ಈ ಕುರಿತು ಏನು ಹೇಳಬೇಕೋ ಯಾರಿಗೂ ತಿಳಿಯುತ್ತಿಲ್ಲ. ಆದರೆ ಸದ್ಯದ ಬೆಳವಣಿಗೆ ಪ್ರಕಾರ ಬಂಕಿಂಗ್ಹ್ಯಾಮ್ ಅರಮನೆ ಮಗ ಮತ್ತು ಸೊಸೆ ಮಾಡಿರುವ ಆರೋಪಗಳನ್ನು ಒಪ್ಪಿಕೊಂಡಿಲ್ಲ ಮತ್ತು ಅಲ್ಲಗಳೆದಿಲ್ಲ ಸಹ. ಇದು ಇನ್ನೊಂದು ರೀತಿಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮೇಗನ್ನ ಆರೋಪ ಅಥವಾ ನೋವಿನ ಮಾತು ಅಲ್ಲಿಗೆ ನಿಲ್ಲುವುದಿಲ್ಲ. ಅಲ್ಲದೆ ‘‘ಗಂಡನ ಸಹೋದರ ಮತ್ತು ಆಕೆಯ ಪತ್ನಿ ಸಹ ನನ್ನ ಮೈಬಣ್ಣ ಕುರಿತು ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದರು’’ ಎನ್ನುವ ಇನ್ನೊಂದು ಗಂಭೀರ ರೀತಿಯ ಹೇಳಿಕೆಯನ್ನು ದಾಖಲಿಸುತ್ತಾರೆ. ನಾದಿನಿಯ ವರ್ತನೆಯಿಂದ ತಾನು ಸಾಕಷ್ಟು ನೊಂದಿರುವುದಾಗಿಯೂ ಸಾಕಷ್ಟು ಸಲ ಕಣ್ಣೀರು ಹಾಕಿರುವುದಾಗಿಯೂ ಮೇಗನ್ ನೇರವಾಗಿ ಸಂದರ್ಶನದಲ್ಲಿ ಹೇಳಿದ್ದರು. ರಾಜಮನೆತನದ ಜನರು ತನ್ನ ವಿರುದ್ಧ ವರ್ಣಭೇದ ಕುರಿತು ಮಾತನಾಡುತ್ತಿದ್ದುದನ್ನು ತಾನು ಹಲವು ಬಾರಿ ರಾಣಿ ಎಲಿಜಬೆತ್ ಗಮನಕ್ಕೆ ತಂದಿರುವುದಾಗಿಯೂ, ಆದರೆ ಆಕೆ ತನ್ನನ್ನು ರಕ್ಷಿಸಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಅಲ್ಲಿನ ಸಿಬ್ಬಂದಿ ರಾಣಿ ಎಲಿಜಬೆತ್ ಮಾತಿನಂತೆ ತನಗೆ ಕೆಲ ವಿಚಾರಗಳಲ್ಲಿ ಸುಳ್ಳು ಹೇಳುತ್ತಿದ್ದಾರೆ ಮತ್ತು ದಿಕ್ಕು ತಪ್ಪಿಸಲು ಯತ್ನಿಸಿದ್ದರು ಎಂದು ಮೇಗನ್ ಸಂದರ್ಶನದಲ್ಲಿ ದೂರಿದ್ದಾರೆ.
ಇದೇ ಸಂದರ್ಶನದಲ್ಲಿ ಆಕೆಯ ಪತಿ ಅಂದರೆ ರಾಜಕುಮಾರ ಹ್ಯಾರಿ ರಾಜಮನೆತನದ ವಿರುದ್ಧ ಸಿಡಿದೆದ್ದಿದ್ದು ‘‘ಒಂದು ಹಂತದಲ್ಲಿ ನನ್ನ ತಂದೆ ನನಗೆ ಮತ್ತು ನನ್ನ ಪತ್ನಿಗೆ ಸರಿಯಾದ ಹಣಕಾಸಿನ ವ್ಯವಸ್ಥೆಯನ್ನು ಮಾಡಿರಲಿಲ್ಲ ಮತ್ತು ಒಂದು ಹಂತದಲ್ಲಿ ಹಣ ನೀಡುವುದನ್ನೇ ಸಂಪೂರ್ಣ ನಿಲ್ಲಿಸಲಾಗಿತ್ತು ಅಲ್ಲದೆ ಕೆಲವೊಮ್ಮೆ ನನ್ನ ತಂದೆ ಚಾರ್ಲ್ಸ್ ನನ್ನ ದೂರವಾಣಿಯನ್ನು ಸಹ ಸ್ವೀಕರಿಸುತ್ತಿರಲಿಲ್ಲ’’ ಎಂದು ಪತ್ನಿಯೊಂದಿಗೆ ಅದೇ ಸಂದರ್ಶನದಲ್ಲಿ ಆರೋಪಿಸಿದ್ದರು. ಅಂದರೆ ಮಗನನ್ನೇ ನಿರ್ಲಕ್ಷಿಸಿದ ಮನೆತನದಲ್ಲಿ ಸೊಸೆಯ ಪರಿಸ್ಥಿತಿ ಹೇಗಿದ್ದಿರಬಹುದು?. ರಾಜಕೀಯ ಪಂಡಿತರ ಪ್ರಕಾರ ಕೆಲವು ವರ್ಷಗಳ ಹಿಂದೆ ತೀರಿಕೊಂಡ ರಾಜಕುಮಾರಿ ಡಯಾನಾ (ಅಂದರೆ ಹ್ಯಾರಿಯ ತಾಯಿ) ಸಹ ಇದೇ ಮನೆತನದಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದರು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಬಹುಮುಖ್ಯ ವಿಚಾರವೆಂದರೆ ಈ ಬಹಿರಂಗ ಸಂದರ್ಶನದಲ್ಲಿ ಪತಿ-ಪತ್ನಿಯರಿಬ್ಬರೂ ಎಲ್ಲಿಯೂ ರಾಣಿ ಎರಡನೇ ಎಲಿಜಬೆತ್ ಮತ್ತು ರಾಜಕುಮಾರ ಚಾರ್ಲ್ಸ್ ಹೆಸರನ್ನು ಹೇಳಿಲ್ಲ. ಮೇಗನ್ ರಾಜಮನೆತನದ ಯಾರ ಹೆಸರನ್ನೂ ನೇರವಾಗಿ ಹೇಳುತ್ತಿಲ್ಲ. ಆ ಮೂಲಕ ರಾಜಮನೆತನದ ಗೌರವವನ್ನು ಕಾಪಾಡಲು ಮೇಗನ್ ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಕೆಲವು ರಾಜಕೀಯ ಪಂಡಿತರು. ಆದರೆ ರಾಜಮನೆತನದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ತಾನು ರಾಣಿ ಎಲಿಜಬೆತ್ಗೆ ಹೇಳಲು ಪ್ರಯತ್ನ ಮಾಡಿದ್ದಾಗಿಯೂ ಅದಕ್ಕೆ ಆಕೆ ಕಿವುಡಿಯಂತೆ ವರ್ತಿಸಿದ್ದರು ಎಂದು ಆರೋಪಿಸಲು ಮೇಗನ್ ಮರೆತಿಲ್ಲ. ಅಂದರೆ ರಾಣಿ ಎಲಿಜಬೆತ್ ಇದೆಲ್ಲ ವಿಚಾರ ಗೊತ್ತಿದ್ದರೂ ಆಕೆ ಜಾಣ ಮೌನ ವಹಿಸಿದ್ದರು. ಆದರೆ ಅಜ್ಜಿಯ ಕುರಿತ ತನ್ನ ಪತ್ನಿಯ ಹೇಳಿಕೆಯನ್ನು ಅದೇ ಸಂದರ್ಶನದಲ್ಲಿ ಪತಿ ಹ್ಯಾರಿ ಸಂಪೂರ್ಣ ಒಪ್ಪಲಿಲ್ಲ ಮತ್ತು ನಿರಾಕರಿಸಲಿಲ್ಲ ಎನ್ನುವುದನ್ನು ಇಲ್ಲಿ ನಾವು ಗಮನಿಸಬೇಕು.
ಈ ಎಲ್ಲದಕ್ಕೂ ಇನ್ನೊಂದು ಆಯಾಮವಿದೆ. ಅದು ಮೇಗನ್ ಮತ್ತು ಪತಿ ಹ್ಯಾರಿ ವಿರುದ್ಧ ಕೇಳಿಬರುತ್ತಿರುವ ಆರೋಪಗಳು. ಅಂದರೆ ಮೇಗನ್ ರಾಜಮನೆತನದ ಯಾವುದೇ ಕಟ್ಟುಪಾಡುಗಳನ್ನು, ಆಚಾರ-ವಿಚಾರಗಳನ್ನು ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಗಂಡ-ಹೆಂಡತಿಯರ ಸ್ವಚ್ಛಂದತೆ, ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರೀತಿ ಕುರಿತು ರಾಣಿ ಎಲಿಜಬೆತ್ಗೆ ಬಹಳ ಬೇಸರವಿದೆ ಮತ್ತು ಅದು ರಾಜಮನೆತನದ ಘನತೆಯನ್ನು ಹಾಳು ಮಾಡುತ್ತಿರುವುದರ ಕುರಿತು ಸಾಕಷ್ಟು ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ ಎನ್ನಲಾಗಿದೆ. ಒಮ್ಮೆ ಈ ಕುರಿತು ರಾಜಮನೆತನ ಮೇಗನ್ ಮತ್ತು ಹ್ಯಾರಿ ಕುರಿತು ವಿಶೇಷ ತನಿಖೆಗೆ ಆದೇಶ ನೀಡುವುದಾಗಿಯೂ ಹೇಳಿಕೆ ನೀಡಿತ್ತು. ಇದರಿಂದ ಗಾಬರಿಗೆ ಬಿದ್ದ ಮೇಗನ್ ಈ ರೀತಿ ಸಂದರ್ಶನ ನೀಡುತ್ತಿದ್ದಾರೆ ಎನ್ನುವ ಪಂಡಿತರ ಸಂಖ್ಯೆಗೂ ಕಡಿಮೆ ಇಲ್ಲ. ರಾಜಮನೆತನದ ಈ ಆರೋಪವನ್ನು ಮೇಗನ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಮೇಗನ್ ಪ್ರಕಾರ ಮದುವೆಯ ಆರಂಭದಿಂದಲೂ ಬ್ರಿಟಿಷ್ ಪತ್ರಿಕೆಗಳೊಂದಿಗೆ ತನ್ನ ಸಂಬಂಧ ಅಷ್ಟೇನೂ ಸರಿ ಇಲ್ಲ. ಹಾಗಾಗಿ ಕೆಲವು ಪತ್ರಿಕೆಗಳು ತನ್ನ ವಿರುದ್ಧ ಇಲ್ಲಸಲ್ಲದ ವರದಿಗಳನ್ನು ಪ್ರಕಟಿಸಿವೆ ಎಂದು ಮರು ಆರೋಪ ಮಾಡಿದ್ದಾರೆ.
ಅದೇ ಸಂದರ್ಶನದಲ್ಲಿ ರಾಜಕುಮಾರ ಹ್ಯಾರಿ ತಾನು ರಾಜಮನೆತನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಯ ಕುರಿತು ಬಹಳ ಚಿಂತಿತನಾಗಿರುವುದಾಗಿಯೂ, ತನ್ನ ತಾಯಿ ಡಯಾನಾ ಅನುಭವಿಸಿದ ನೋವಿನಂತೆ ತನ್ನ ಜೀವನವಾಗಬಾರದು ಎಂಬ ಮುಂದಾಲೋಚನೆಯಿಂದ ಪತ್ನಿಯ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾಗಿಯೂ ಮತ್ತು ತಮ್ಮ ಮುಂದಿನ ಸ್ವತಂತ್ರ ಜೀವನವನ್ನು ಅಮೆರಿಕದಲ್ಲಿ ನಡೆಸುವುದಾಗಿಯೂ ಅದಕ್ಕೆ ಈಗಾಗಲೇ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿರುವುದಾಗಿಯೂ ಹೇಳಿದ್ದಾರೆ. ಇವರ ನಿರ್ಧಾರಕ್ಕೆ ಬಂಕಿಂಗ್ ಹ್ಯಾಮ್ ಅರಮನೆ ಸಂಪೂರ್ಣ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಈ ಕುರಿತು ಬ್ರಿಟಿಷ್ ರಾಜ-ರಾಣಿ ಏನನ್ನೂ ಹೇಳದಿದ್ದರೂ ಗಂಡ ಹೆಂಡತಿ ಕುರಿತು ತಮಗೆ ಸಹಾನುಭೂತಿಯಿದೆ ಮತ್ತು ಆರೋಪದ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಯಿಂದ ನೊಂದ ಪತಿ-ಪತ್ನಿ ಇಬ್ಬರೂ ಅಧಿಕೃತವಾಗಿ ರಾಜಮನೆತನವನ್ನು ಸಂಪೂರ್ಣವಾಗಿ ಮತ್ತು ಖಾಯಂ ಆಗಿ ತ್ಯಜಿಸಿದ್ದಾರೆ ಎನ್ನುವ ಸುದ್ದಿ ಬರುತ್ತಿದೆ. ಅಂತಿಮವಾಗಿ ಹೇಳುವುದಾದರೆ ಪ್ರಕೃತಿಯ ಸೃಷ್ಟಿಯಲ್ಲಿ ಎಲ್ಲರೂ ಒಂದೇ. ಕೆಲವರಿಗೆ ಬಿಳಿ ಬಣ್ಣದ ಚರ್ಮ ಇನ್ನು ಕೆಲವರದು ಕಪ್ಪುಬಣ್ಣದ ಚರ್ಮ. ಜನಾಂಗೀಯ ಬಣ್ಣ ಅಲ್ಲಿನ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿರುವ ಒಂದು ಅಂಶವಷ್ಟೇ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ಪ್ರಕೃತಿ ನೀಡಿರುವ ಚರ್ಮವನ್ನೇ ಮುಂದಿಟ್ಟುಕೊಂಡು ಅಮಾನವೀಯತೆ ಮೆರೆಯುವುದು ಅದರಲ್ಲೂ ತನ್ನ ಮನೆತನದ ಸೊಸೆಯ ವಿರುದ್ಧವೇ ವರ್ಣಭೇದ ನೀತಿಯನ್ನು ಅನುಸರಿಸುತ್ತಿರುವುದು (ಮೇಗನ್ ಆರೋಪ ನಿಜವಾಗಿದ್ದಲ್ಲಿ) ನಿಜಕ್ಕೂ ಬ್ರಿಟಿಷ್ ರಾಜಮನೆತನಕ್ಕೆ ಅವಮಾನಕರ ಮತ್ತು ಅದರ ಘನತೆಗೆ ಖಂಡಿತ ತಕ್ಕುದಲ್ಲ. ಅಂತಹ ರಾಜಮನೆತನದ ನಿರ್ವಹಣೆಗೆ ಅಲ್ಲಿನ ಸರಕಾರ ಬ್ರಿಟಿಷ್ ಜನರ ತೆರಿಗೆ ಹಣ ಏಕೆ ವ್ಯಯಿಸಬೇಕು? ಇಂತಹ ಮನಸ್ಥಿತಿಯವರು ನಮ್ಮ ದೇಶದಲ್ಲಿಯೂ ಇದ್ದಾರೆ. ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರೆಂದು ಭೇದ-ಭಾವ ಮಾಡುತ್ತಾರೆ. ಕೆಲವೊಮ್ಮೆ ಸುದ್ದಿಯಾಗುತ್ತದೆ ಮತ್ತು ಕೆಲವೊಮ್ಮೆ ಸುದ್ದಿಯಾಗುವುದಿಲ್ಲ ಅಷ್ಟೇ.