‘ರಾಹುಲ್ ಗಾಂಧಿ ಅವಿವಾಹಿತ’ ಹೇಳಿಕೆ ವಿವಾದ: ಕ್ಷಮೆ ಕೋರಿದ ಮಾಜಿ ಸಂಸದ
ತಿರುವನಂತಪುರ, ಮಾ. 30: ಸೋಮವಾರ ನಡೆದ ಚುನಾವಣಾ ರ್ಯಾಲಿಯ ಸಂದರ್ಭ ಎಡಪಕ್ಷ ಬೆಂಬಲಿತ ಸಂಸದರು ರಾಹುಲ್ ಗಾಂಧಿ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಸಿಪಿಎಂ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಸಿಪಿಎಂ ಅಭ್ಯರ್ಥಿ ಹಾಗೂ ಹಾಲಿ ಸಚಿವ ಎಂ.ಎಂ. ಮಣಿ ಪರ ಪ್ರಚಾರ ರ್ಯಾಲಿಯ ಸಂದರ್ಭ ಇಡುಕ್ಕಿಯ ಮಾಜಿ ಸ್ವತಂತ್ರ ಸಂಸದ ಜೋಯ್ಸಿ ಜಾರ್ಜ್ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಸಿಪಿಎಂ ಅನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಾಜಿ ಸಂಸದ ಜೋಯ್ಸಿ ಜಾರ್ಜ್ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
ಇಲ್ಲಿನ ಇರಟ್ಟಯಾರ್ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುವ ಸಂದರ್ಭ ನೀಡಿದ ಅನುಚಿತ ಹೇಳಿಕೆಗಳನ್ನ ನಿಶ್ಯರ್ತವಾಗಿ ಹಿಂಪಡೆಯುತ್ತೇನೆ. ಈ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸುತ್ತೇನೆ ಎಂದು ಇಡುಕ್ಕಿಯ ಕುಮಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಹೇಳಿದ್ದಾರೆ.
ಜಾರ್ಜ್ ಅವರು ಮಾಡಿದ ಭಾಷಣದ ವೀಡಿಯೊ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅವರ ಭಾಷಣದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹೇಳಿಕೆಯಿಂದ ಸಿಪಿಎಂ ದೂರ ಉಳಿದಿತ್ತು.
‘‘ಅವರು ಮಹಿಳೆಯರ ಕಾಲೇಜಿಗೆ ಮಾತ್ರ ಹೋಗುತ್ತಾರೆ. ಯುವತಿಯರಿಗೆ ಬಾಗಲು ಹಾಗೂ ತಿರುಗಲು ಹೇಳುತ್ತಾರೆ. ನನ್ನ ಆತ್ಮೀಯ ಮಕ್ಕಳೇ ಅವರ ಎದುರು ಬಾಗಬೇಡಿ, ತಿರುಗಬೇಡಿ. ಅವರು ಅವಿವಾಹಿತ’’ ಎಂದು ವೀಡಿಯೊದ ಅಣಕು ಎಚ್ಚರಿಕೆಯಲ್ಲಿ ಜಾರ್ಜ್ ಹೇಳಿರುವುದು ಕೇಳಿ ಬಂದಿದೆ.
ಭಾಗಶಃ ಮಾತ್ರ ಕೇಳುವ ಇಂತಹ ಹಲವು ಹೇಳಿಕೆಯನ್ನು ಅವರು ನೀಡಿದ್ದರು. ಈ ಸಂದರ್ಭ ವೇದಿಕೆಯಲ್ಲಿದ್ದ ಉದುಂಬಂಚೋಲ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಜ್ಯ ವಿದ್ಯುತ್ ಖಾತೆ ಸಚಿವ ಮಣಿ ಸಹಿತ ಹಲವರು ನಾಯಕರು ಮೊದಲ ಹೇಳಿಕೆಗೆ ನಗುತ್ತಿರುವುದು ಕೇಳಿ ಬಂದಿದೆ.