varthabharthi


ಕಾಲಂ 9

Places Of Worship Act–1991 ಸುಪ್ರೀಂ ಪರಿಶೀಲನೆ!

ಮತ್ತಷ್ಟು ಮಸೀದಿಗಳನ್ನು ಕೆಡವಲು ಪರವಾನಿಗೆಯೇ?

ವಾರ್ತಾ ಭಾರತಿ : 31 Mar, 2021
ಶಿವಸುಂದರ್

ಸುಪ್ರೀಂ ಕೋರ್ಟ್ ಯಾವ ದೀರ್ಘಕಾಲೀನ ಶಾಂತಿಯ ನೆಪ ಹೇಳಿ ಬಾಬರಿ ಮಸೀದಿ ನಾಶಕ್ಕೆ ಶಿಕ್ಷೆ ಕೊಡದೆ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕೊಟ್ಟಿತೋ, ಅದನ್ನೇ ಇಂದು ಸಂಘ ಪರಿವಾರಿಗರು ತಮ್ಮ ಮುಂದಿನ ಕೋಮು ಧ್ರುವೀಕರಣ ರಾಜಕಾರಣಕ್ಕೆ ಸಾಧನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆರೆಸ್ಸೆಸ್ ತನ್ನ ರಾಮಮಂದಿರಕ್ಕೆ ಮಾತ್ರ ಈ ಹೋರಾಟ ಸೀಮಿತ ಎಂಬ ತನ್ನ ಹುಸಿ ಭರವಸೆಯನ್ನು ರಾಜಾರೋಷವಾಗಿ ಬದಲಿಸಿಕೊಳ್ಳುತ್ತಿದ್ದಂತೆ ಅದರ ಅಂಗಸಂಸ್ಥೆಗಳು ಕೋರ್ಟ್ ಗಳನ್ನೇ ತಮ್ಮ ಮುಂದಿನ ರಕ್ತರಾಜಕಾರಣದ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ.

ಬಾಬರಿ ಮಸೀದಿಯನ್ನು ನಾಶ ಮಾಡಿ ರಾಮಮಂದಿರವನ್ನು ಕಟ್ಟಲು ಹೊರಟಿರುವ ಸಂಘ ಪರಿವಾರಿಗರು ಹಾಗೂ ಅವರ ಬಿಜೆಪಿ ಸರಕಾರಗಳು ಇದೀಗ ದೇಶದಲ್ಲಿರುವ ಎಲ್ಲಾ ಚಾರಿತ್ರಿಕ ಮಸೀದಿಗಳ ನಾಶಕ್ಕೂ ಸಂಘಟಿತ ಸಂಚನ್ನು ನಡೆಸತೊಡಗಿವೆ ಮತ್ತು ಇದೇ ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೂಡಾ ಅಂತಹ ಸಂಚಿಗೆ ಸಾಂವಿಧಾನಿಕ ಮನ್ನಣೆ ಕೊಡುವ ಪ್ರಮಾದವನ್ನು ಎಸಗಿದೆ.

ಭಾರತದಲ್ಲಿ ಮತ್ತೊಂದು ಬಾಬರಿ ಮಸೀದಿ ನಾಶದಂತಹ ಕೋಮುವಾದಿ ರಕ್ತರಾಜಕಾರಣಕ್ಕೆ ಅವಕಾಶ ಮಾಡಿಕೊಡಬಾರದೆಂಬ ಉದ್ದೇಶದಿಂದ 1991ರಲ್ಲಿ ಭಾರತದ ಸಂಸತ್ತು ಜಾರಿ ಮಾಡಿದ್ದ ಹಾಗೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದ ‘"Places Of Worship Act (Special Provisions)-1991' ಕಾಯ್ದೆಯನ್ನು ಮರುಪರಿಶೀಲಿಸಬೇಕೆಂಬ ಅರ್ಜಿಗೆ ಇದೇ ಮಾರ್ಚ್ -12 ಸುಪ್ರೀಂ ಕೋರ್ಟ್ ಮನ್ನಣೆ ನೀಡಿದೆ ಹಾಗೂ ಅದರ ಬಗ್ಗೆ ಉತ್ತರ ನೀಡಲು ಬಾಬರಿ ಮಸೀದಿ ನಾಶದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿ ಸರಕಾರಕ್ಕೆ ನೋಟಿಸನ್ನೂ ಜಾರಿ ಮಾಡಿದೆ. ಸುಪ್ರೀಂ ಕೋರ್ಟಿನ ಈ ನಡೆ ಅತ್ಯಂತ ದುರದೃಷ್ಟಕರ ಮಾತ್ರವಲ್ಲ. ಬರಲಿರುವ ದಿನಗಳಲ್ಲಿ ಭಾರತದ ರಾಜಕಾರಣ ಇನ್ನಷ್ಟು ರಕ್ತಸಿಕ್ತವಾಗಲಿರುವ ಮುನ್ಸೂಚನೆಯೂ ಆಗಿದೆ.

Places Of Worship Act- ಸೆಕ್ಯುಲರ್ ಕತ್ತಿ-ಗುರಾಣಿ

1990ರಲ್ಲಿ ಸಂಘ ಪರಿವಾರ-ಬಿಜೆಪಿ ಕೂಟವು ರಾಮಜನ್ಮಭೂಮಿ ಹೆಸರಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ದುರ್ಬಳಕೆ ಮಾಡಿಕೊಂಡು ಬಾಬರಿ ಮಸೀದಿ ನಾಶಕ್ಕೆ ತಯಾರಿ ನಡೆಸುತ್ತಿದ್ದಾಗ ಭಾರತದ ಸಂಸತ್ತು Places Of Worship Act (Special Provisions)-1991’ ಕಾಯ್ದೆಯನ್ನು ಜಾರಿ ಮಾಡಿತು. ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಒಕ್ಕೊರಲಿಂದ ಅದನ್ನು ಕಾಯ್ದೆಯಾಗಿ ಅನುಮೋದಿಸಿದ್ದವು.

ಕಾಯ್ದೆಯ ಸೆಕ್ಷನ್ 4ರ ಪ್ರಕಾರ:

1) It is hereby declared that the religious character of a place of worship existing on the 15th day of August, 1947 shall continue to be the same as it existed on that day.

(ಎಲ್ಲಾ ಧಾರ್ಮಿಕ-ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು 1947ರ ಆಗಸ್ಟ್ 15ರಂದು ಯಾವ ಸ್ವರೂಪದಲ್ಲಿತ್ತೋ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕು.)

ಇದೇ ಕಾಯ್ದೆಯ ಸೆಕ್ಷನ್ 4ರ ಪ್ರಕಾರ 

3. Bar of conversion of places of worship. No person shall convert any place of worship of any religious denomination or any section thereof into a place of worship of a different section of the same religious denomination or of a different religious denomination or any section thereof

(ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಸ್ವರೂಪದ ಬದಲಾವಣೆಯ ನಿಷೇಧ: ಯಾವುದೇ ವ್ಯಕ್ತಿಯು ಯಾವುದೇ ಧಾರ್ಮಿಕ ಶ್ರದ್ಧ್ಧಾ ಕೇಂದ್ರಗಳ ಧಾರ್ಮಿಕ ಸ್ವರೂಪವನ್ನು ಮತ್ತೊಂದು ಧಾರ್ಮಿಕ ಲಕ್ಷಣವುಳ್ಳ ಅಥವಾ ಅದೇ ಧರ್ಮದ ಮತ್ತೊಂದು ಭಿನ್ನ ಸ್ವರೂಪದ ಶ್ರದ್ಧಾ ಕೇಂದ್ರವನ್ನಾಗಿ ಪರಿವರ್ತಿಸುವಂತಿಲ್ಲ)

ಸೆಕ್ಷನ್ 6 ಅಂತಹ ಧಾರ್ಮಿಕ ಸ್ಥಳಗಳ ಸ್ವರೂಪ ಪರಿವರ್ತನೆಗೆ ಶಿಕ್ಷೆಯನ್ನು ನಿಗದಿ ಮಾಡುತ್ತದೆ.

(1) Punishment for contravention of section 3. Whoever contravenes the provisions of section 3 shall be punishable with imprisonment for a term which may extend to three years and shall also be liable to fine.

(ಈ ಕಾಯ್ದೆಯಲ್ಲಿ ಸ್ಪಷ್ಟೀಕರಿಸಲಾದ ಸೆಕ್ಷನ್ 3ರ ಉಲ್ಲಂಘನೆಗೆ ಮೂರು ವರ್ಷಗಳಷ್ಟು ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.)

ಅಲ್ಲದೆ ಸೆಕ್ಷನ್ 4 (2)ರ ಪ್ರಕಾರ  ಈ ಕಾಯ್ದೆಯು ಜಾರಿಗೆ ಬಂದ ನಂತರ ಯಾವುದೇ ಕೋರ್ಟ್‌ಗಳಲ್ಲಿ ಇಂತಹ ಧಾರ್ಮಿಕ ಸ್ವರೂಪ ಪರಿವರ್ತನೆಯ ವಿವಾದಗಳನ್ನು ಕೈಗೆತ್ತುಕೊಳ್ಳುವಂತಿಲ್ಲವೆಂತಲೂ, ಈಗಾಗಲೇ ಕೋರ್ಟ್ ಗಳಲ್ಲಿ ಅಂತಹ ವಿವಾದವಿದ್ದಲ್ಲಿ ಅವು ಈ ಕಾಯ್ದೆಯ ಆಶಯಗಳಿಗೆ ತಕ್ಕಂತೆ ನಿರ್ವಹಿಸತಕ್ಕದ್ದೆಂದು ಆದೇಶಿಸುತ್ತದೆ.

ಹಾಗೂ ಅಂದು ಇದ್ದ ಕೋಮುವಾದಿ-ಉನ್ಮತ್ತ ಸಂದರ್ಭವು ಹೊರಿಸಿದ್ದ ಒತ್ತಡಕ್ಕೆ ಮಣಿದು ಸಂಸತ್ತು ಈ ಕಾಯ್ದೆಯು ರಾಮಜನ್ಮಭೂಮಿ-ಬಾಬರಿ ಮಸೀದಿ- ವಿವಾದಕ್ಕೆ ಮಾತ್ರ ಅನ್ವಯವಾಗುವುದಿಲ್ಲವೆಂಬ ಸೆಕ್ಷನ್ 5ನ್ನು ಸೇರಿಸಿತ್ತು. 

(ಕಾಯ್ದೆಯ ಪೂರ್ಣ ಪಾಠವನ್ನು ಈ ವೆಬ್ ಲಿಂಕಿನಲ್ಲಿ ಓದಬಹುದು :https://www.mha.gov.in/sites/default/files/PlaceWorshipAct1991_0.pdf)

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ 'Places Of Worship Act (Special Provisions)- 1991' ಕಾಯ್ದೆಯು ಹಿಂದುತ್ವವಾದಿಗಳು ಎಲ್ಲಾ ಹಿಂದೂಯೇತರ ಪೂಜಾ ಸ್ಥಳಗಳನ್ನು ವಿಮೋಚನೆ ಮಾಡುವ ಹೆಸರಿನಲ್ಲಿ ಸಮಾಜವನ್ನು ಕೋಮುವಾದೀಕರಿಸುತ್ತಿರುವಾಗ ಹಿಂದುತ್ವವಾದಿಗಳ ಆಕ್ರಮಣಕ್ಕೆ ಸ್ವಲ್ಪಮಟ್ಟದ ತಡೆಯನ್ನಾದರೂ ಒಡ್ಡುವ ಅವಕಾಶವನ್ನು ಹೊಂದಿತ್ತು. ಕರ್ನಾಟಕದಲ್ಲಿ ಬಾಬಾಬುಡಾನ್ ಗಿರಿ ದರ್ಗಾದ ಕಾನೂನು ಹೋರಾಟವು ಸಹ ಪ್ರಧಾನವಾಗಿ ಈ ಕಾಯ್ದೆಯನ್ನೇ ಆಧರಿಸಿದೆ. ಬನಾರಸ್‌ನ ಗ್ಯಾನ್ ವ್ಯಾಪಿ ಮಸೀದಿಯಿಂದ ಹಿಡಿದು ನೂರಾರು ಹಿಂದೂಯೇತರ ಪೂಜಾ ಕೇಂದ್ರಗಳ ಧಾರ್ಮಿಕ ಅಸ್ತಿತ್ವವು ಈ ಕಾನೂನನ್ನೇ ಆಧರಿಸಿಯೇ ರಕ್ಷಣೆಯನ್ನು ಪಡೆದುಕೊಂಡಿವೆ.

1991ರ ಕಾಯ್ದೆ ಸಿಂಧು ಹಾಗೂ ಮಹತ್ವದ್ದು- ಸುಪ್ರೀಂ ಸಾಂವಿಧಾನಿಕ ಪೀಠ

ವಾಸ್ತವವಾಗಿ 2019ರಲ್ಲಿ ಸುಪ್ರೀಂ ಕೋರ್ಟಿನ ಐದು ಜನ ನ್ಯಾಯಾಧೀಶರ ಪೀಠ ಯಾವುದೇ ಸಾಕ್ಷಿ-ಪುರಾವೆಗಳಿಲ್ಲದಿದ್ದರೂ ಬಾಬರಿ ಮಸೀದಿ ಇದ್ದ ಸ್ಥಳವನ್ನು ರಾಮಮಂದಿರ ಕಟ್ಟಲು ಮಸೀದಿ ನಾಶ ಮಾಡಿದವರಿಗೇ ಕೊಟ್ಟು ಸಾಂವಿಧಾನಿಕ ಅಪಚಾರ ಹಾಗೂ ಚಾರಿತ್ರಿಕ ಅನ್ಯಾಯವನ್ನು ಎಸಗಿತು. ಆದರೂ ಅದು ತನ್ನ ತೀರ್ಪಿನಲ್ಲಿ 'Places Of Worship Act (Special Provisions)-&1991'  ಕಾಯ್ದೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ ಹಾಗೂ ಅದನ್ನು ಆಧರಿಸಿಯೇ ಬಾಬರಿ ಮಸೀದಿಯ ನಾಶವನ್ನು ಹೀನಾಯ ಅಪರಾಧವೆಂದು ತನ್ನ ತೀರ್ಪಿನಲ್ಲಿ ಖಂಡಿಸಿದೆ. ಅಷ್ಟು ಮಾತ್ರವಲ್ಲ, ಐದು ನ್ಯಾಯಾಧೀಶರ ಆ ಸಾಂವಿಧಾನಿಕ ಪೀಠವು ಈ ಕಾಯ್ದೆಯ ಸಿಂಧುತ್ವ ಹಾಗೂ ಮಹತ್ವವನ್ನು ಎತ್ತಿಹಿಡಿಯುತ್ತಾ:

‘‘ಚಾರಿತ್ರಿಕ ಪ್ರಮಾದಗಳನ್ನು ಕಾನೂನನ್ನು ಕೈಗೆತ್ತಿಕೊಳ್ಳುವುದರಿಂದ ಪರಿಹರಿಸಲಾಗುವುದಿಲ್ಲ. ಸಾರ್ವಜನಿಕ ಪೂಜಾ ಸ್ಥಳಗಳ ಸ್ವರೂಪವನ್ನು ರಕ್ಷಿಸುವ ಈ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಇತಿಹಾಸ ಮತ್ತದರ ಪ್ರಮಾದಗಳನ್ನು ವರ್ತಮಾನ ಹಾಗೂ ಭವಿಷ್ಯವನ್ನು ದಮನಿಸುವ ಸಾಧನಗಳನ್ನಾಗಿ ಬಳಸಿಕೊಳ್ಳುವಂತಿಲ್ಲವೆಂದು ಸಂಸತ್ತು ಸ್ಪಷ್ಟಪಡಿಸಿದೆ’’ ಎಂದು ತೀರ್ಪಿನ ಪ್ಯಾರಾ 83ರಲ್ಲಿ ಹೇಳಿದೆ.

991ರ ಕಾಯ್ದೆ-ಸಾಂವಿಧಾನಿಕ ಬದ್ಧತೆಯ ದ್ಯೋತಕ -ಸುಪ್ರೀಂ 

ಅದೇ ತೀರ್ಪಿನ ಪ್ಯಾರಾ 82ರಲ್ಲಿ: 

"Places Of Worship Act (Special Provisions)- ಕಾಯ್ದೆಯು ಭಾರತದ ಸಂವಿಧಾನದ ಮೂಲಭೂತ ಮೌಲ್ಯಗಳನ್ನು ರಕ್ಷಿಸುತ್ತದೆ ಮತ್ತು ಎತ್ತಿಹಿಡಿಯುತ್ತದೆ’’ ಎಂದು ಸಾಂವಿಧಾನಿಕ ಪೀಠ ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದೆ.

ಹಾಗೂ ತೀರ್ಪಿನ ಪುಟ 124ರಲ್ಲಿ:  "Places Of Worship Act (Special 1991’ ಕಾಯ್ದೆಯು ಒಂದು ಧರ್ಮನಿರಪೇಕ್ಷ ಪ್ರಭುತ್ವದ ಹೊಣೆಗಾರಿಕೆಯೊಂದಿಗೆ ಬೆಸೆದುಕೊಂಡಿದೆ. ಅದು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಭಾರತದ ಬದ್ಧತೆಯನ್ನು ಪ್ರತಿಫಲಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಕಾಯ್ದೆಯು, ಎಲ್ಲಾ ಧಾರ್ಮಿಕ ಶ್ರದ್ಧೆಗಳನ್ನು ಸಮಾನವಾಗಿ ಕಾಣುವುದನ್ನು ಒಂದು ಅತ್ಯಗತ್ಯ ಸಾಂವಿಧಾನಿಕ ಮೌಲ್ಯವಾಗಿ ರಕ್ಷಿಸಬೇಕೆಂಬ ಘನಗಂಭೀರ ಕರ್ತವ್ಯದ ಪಾಲನೆಯೂ ಆಗಿದೆ. ಈ ಮೌಲ್ಯವು ಭಾರತದ ಸಂವಿಧಾನದ ಮೂಲ ರಚನೆಯ ಭಾಗವೂ ಆಗಿದೆ.’’ ಎಂದು ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ "Places Of Worship Act (Special Provisions)-  1991’ ಕಾಯ್ದೆಯನ್ನು ಎತ್ತಿಹಿಡಿಯುತ್ತದೆ. 

 (ಆಸಕ್ತರು ತೀರ್ಪನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://main.sci.gov.in/supremecourt/2010/36350/ 36350_2010_1_1502_18205_Judgement_09-Nov-2019.pdf)

ಈ ರೀತಿ 'Places Of Worship Act (Special Provisions' 1991’ ಕಾಯ್ದೆಯನ್ನು ಎತ್ತಿಹಿಡಿದ ಮತ್ತದರ ಸಾಂವಿಧಾನಿಕ ಮಹತ್ವವನ್ನು ಮನಗಾಣಿಸಿದ ಸರ್ವಸಮ್ಮತ ತೀರ್ಪನ್ನು ನೀಡಿದ ಸುಪ್ರೀಂ ಕೋರ್ಟಿನ ಐದು ಜನರ ಪೀಠದಲ್ಲಿ ಹಾಲಿ ಮುಖ್ಯ ನ್ಯಾಯಾಧೀಶರಾಗಿರುವ ಬೋಬ್ಡೆಯವರೂ ಇದ್ದರೆಂಬುದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವ ಸಂಗತಿ

ಎಲುಬಿಲ್ಲದ ನಾಲಗೆ! 

 ರಾಮಮಂದಿರವೆಂಬುದು ಈ ದೇಶದ ರಾಷ್ಟ್ರ ನಿರ್ಮಾಣ ಹಾಗೂ ಬಹುಸಂಖ್ಯಾತರ ಶ್ರದ್ಧೆಗೆ ಸಂಬಂಧಿಸಿದ ವಿಷಯವೆಂದೂ, ಇದನ್ನು ಮುಸ್ಲಿಮರು ಅರ್ಥಮಾಡಿಕೊಂಡು ಸಹಕರಿಸಿದರೆ ಮುಂದೆ ಬೇರೆ ಯಾವ ಧಾರ್ಮಿಕ ಕೇಂದ್ರಗಳ ಬಗ್ಗೆಯೂ ವಿವಾದವಿರುವುದಿಲ್ಲವೆಂದು ಬಾಬರಿ ಮಸೀದಿಯ ನಾಶದ ನಂತರ ಆರೆಸ್ಸೆಸ್‌ನ ಸರಸಂಘಚಾಲಕ ಭಾಗವತ್ ಹಾಗೂ ಬಿಜೆಪಿ ಮುಖ್ಯಸ್ಥರು ಪ್ರಾರಂಭದ ದಿನಗಳಲ್ಲಿ ಭರವಸೆ ಕೊಟ್ಟಿದ್ದರು. ಆದರೆ ರಾಮಮಂದಿರದ ಭೂಮಿಪೂಜೆ ಮಾಡುವ ದಿನವೇ ಆರೆಸ್ಸೆಸ್ ಭಾಗವತರು ತಮ್ಮ ವರಸೆ ಬದಲಿಸಿದರು. ದೇಶದ ಜನರ ಅಭಿಲಾಶೆ ಹೇಗಿರುತ್ತದೋ ಅದೇ ರೀತಿ ಸಂಘದ ನಿಲುವೂ ಇರುತ್ತದೆಂದು ಸ್ಪಷ್ಟವಾಗಿ ಘೋಷಿಸಿದರು. ಆ ಮೂಲಕ ಭಾರತದ ಅಲ್ಪಸಂಖ್ಯಾತರಿಗೆ ಬರಲಿರುವ ದಿನಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದರು.

ಅದಾದ ಕೆಲವೇ ದಿನಗಳ ಮುಂಚೆ ‘ವಿಶ್ವ ಭದ್ರ ಪೂಜಾರಿ ಪುರೋಹಿತ್ ಮಹಾಸಂಘ್’ ಎಂಬ ಸಂಸ್ಥೆಯು 'Places Of Worship Act (Special Provisions)-1991)1991 ’ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಒಂದು ರಿಟ್ ಪಿಟಿಶನ್ (Writ Petition (Civil) 559/2020) ದಾಖಲಿಸಿತು.

  ತನ್ನ ಅಹವಾಲಿನಲ್ಲಿ ಅದು ಸದರಿ ಕಾಯ್ದೆಯು ಹಿಂದೂಗಳ ಮೇಲೆ ಆಗಿರುವ ಚಾರಿತ್ರಿಕ ಅನ್ಯಾಯವನ್ನು ಮುಂದುವರಿಯುವಂತೆ ಮಾಡುತ್ತದೆಂದೂ, ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಇನ್ನಿತರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಸಂವಿಧಾನದ ಆರ್ಟಿಕಲ್ 32ರಡಿ ಸುಪ್ರೀಂ ಕೋರ್ಟ್ ತನ್ನ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸದರಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಕೋರಿತ್ತು. ದಾವೆಯನ್ನು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಅದರ ಬಗ್ಗೆ ಇನ್ನೂ ಯಾವ ಕ್ರಮಗಳನ್ನೂ ತೆಗೆದುಕೊಂಡಿರಲಿಲ್ಲ.

ಆದರೆ ಮಾರ್ಚ್ 12ನೇ ತಾರೀಕು ಬಿಜೆಪಿಯ ಅಶ್ವಿನ್ ಕುಮಾರ್ ಉಪಾಧ್ಯ ಎಂಬುವರು "Places Of Worship Act (Special Provisions) 1991’ ಕಾಯ್ದೆಯ ಸೆಕ್ಷನ್ 2, 3, 4 ಭಾರತೀಯ ಹಿಂದೂಗಳ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಗಳಿಗೆ ಧಕ್ಕೆ ಉಂಟುಮಾಡುತ್ತದಾದ್ದರಿಂದ ಅದನ್ನು ರದ್ದುಗೊಳಿಸಬೇಕೆಂದು ಹಾಕಿದ್ದ ದಾವೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ!

ಮತ್ತು ಈ ದಾವೆಗೆ ಉತ್ತರಿಸಬೇಕೆಂದು ಕೇಂದ್ರ ಸರಕಾರಕ್ಕೆ ನೋಟಿಸನ್ನು ಜಾರಿ ಮಾಡಿದೆ.

ಅಶ್ವಿನ್ ಕುಮಾರ್ ಉಪಾಧ್ಯ ಅವರು ತಮ್ಮ ದಾವೆಯಲ್ಲಿ ‘‘ಭಾರತದ ಮೇಲೆ ಕ್ರಿ.ಶ. 1192-1947ರ ವರೆಗೆ ದಾಳಿ ಮಾಡಿದ ವಿದೇಶೀಯರು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದ ಪೂಜಾ ಹಾಗೂ ಯಾತ್ರಾ ಸ್ಥಳಗಳನ್ನು ಹಾನಿಗೊಳಿಸಿ, ನಾಶಮಾಡಿ, ಅಪವಿತ್ರೀಕರಿಸಿದ್ದು ಮಾತ್ರವಲ್ಲದೆ ಅವನ್ನು ತಮ್ಮ ಸೈನಿಕ ಶಕ್ತಿಯ ಮೂಲಕ ಅಕ್ರಮಿಸಿದ್ದರು. ಹೀಗಾಗಿ Places Of Worship Act (Special Provisions)-&1991'  ಕಾಯ್ದೆಯ ಕಲಮುಗಳು ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಗೆ ಧಕ್ಕೆಯುಂಟು ಮಾಡುತ್ತವೆ...’’ 

‘‘ಈ ಕಾಯ್ದೆಯು ಅಯೋಧ್ಯೆಯ ರಾಮಮಂದಿರ ವಿವಾದವನ್ನು ವ್ಯಾಪ್ತಿಯಿಂದ ಹೊರಗಿಡುತ್ತದೆ. ಆದರೆ ರಾಮನಂತೆ ವಿಷ್ಣುವಿನ ಅವತಾರವೇ ಆಗಿರುವ ಕೃಷ್ಣನ ಜನ್ಮಸ್ಥಾನದ ವಿಮೋಚನೆಗೂ ಹಿಂದೂಗಳು ಹೋರಾಡುತ್ತಿದ್ದಾರೆ. ಅದನ್ನೇಕೆ ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಟ್ಟಿಲ್ಲ?...’’

‘‘ಅಲ್ಲದೆ, ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರ ಹಲವಾರು ಪವಿತ್ರಸ್ಥಳಗಳು 1947ಕ್ಕೆ ಮುಂಚೆ ಪರಕೀಯರ ವಶವಾಗಿವೆ. ಆದ್ದರಿಂದ ಅವುಗಳೆಲ್ಲದರ ಹಕ್ಕುದಾರಿಕೆಯನ್ನು ಕೇಳುವುದು ಹಿಂದೂ, ಜೈನ್, ಬೌದ್ಧ ಹಾಗೂ ಸಿಖ್ಕರ ಮೂಲಭೂತ ಹಕ್ಕಾಗಿದ್ದು,  "Places Of Worship Act (Special Provisions)- 1991' ಕಾಯ್ದೆಯು ಆ ಹಕ್ಕನ್ನು ಮೊಟಕುಗೊಳಿಸುತ್ತದೆ. ಆದ್ದರಿಂದ ಸದರಿ ಕಾಯ್ದೆಯನ್ನು ರದ್ದುಗೊಳಿಸಬೇಕು’’ ಎಂದು ವಾದಿಸಿದ್ದಾರೆ.

(ಹೆಚ್ಚಿನ ವಿವರಗಳಿಗೆ: https://images.assettype.com/barandbench/2021-03/7a5fcc9f-51fd-40a9-a59e-fe227b57591c/Places_of_Worship_Act_Petition.pdf)

ಅಂದರೆ, ಸುಪ್ರೀಂ ಕೋರ್ಟ್ ಯಾವ ದೀರ್ಘಕಾಲೀನ ಶಾಂತಿಯ ನೆಪ ಹೇಳಿ ಬಾಬರಿ ಮಸೀದಿ ನಾಶಕ್ಕೆ ಶಿಕ್ಷೆ ಕೊಡದೆ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕೊಟ್ಟಿತೋ, ಅದನ್ನೇ ಇಂದು ಸಂಘ ಪರಿವಾರಿಗರು ತಮ್ಮ ಮುಂದಿನ ಕೋಮು ಧ್ರುವೀಕರಣ ರಾಜಕಾರಣಕ್ಕೆ ಸಾಧನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆರೆಸ್ಸೆಸ್ ತನ್ನ ರಾಮಮಂದಿರಕ್ಕೆ ಮಾತ್ರ ಈ ಹೋರಾಟ ಸೀಮಿತ ಎಂಬ ತನ್ನ ಹುಸಿ ಭರವಸೆಯನ್ನು ರಾಜಾರೋಷವಾಗಿ ಬದಲಿಸಿಕೊಳ್ಳುತ್ತಿದ್ದಂತೆ ಅದರ ಅಂಗಸಂಸ್ಥೆಗಳು ಕೋರ್ಟ್‌ಗಳನ್ನೇ ತಮ್ಮ ಮುಂದಿನ ರಕ್ತರಾಜಕಾರಣದ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ. ಆದರೆ ಅತ್ಯಂತ ಆಘಾತಕಾರಿ ವಿಷಯವೆಂದರೆ ಆರೆಸ್ಸೆಸ್ ತನ್ನ ಬಹಿರಂಗ ನಿಲುವನ್ನು ಬದಲಿಸಿಕೊಳ್ಳುತ್ತಿದ್ದಂತೆ ಸುಪ್ರೀಂ ಕೋರ್ಟ್ ಕೂಡಾ ತನ್ನ ನಿಲುವನ್ನು ಸಡಿಲಗೊಳಿಸಿಕೊಳ್ಳುತ್ತಿರುವುದು!

ಏಕೆಂದರೆ, ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು Places Of Worship Act (Special Provisions)-&1991 ಕಾಯ್ದೆಯ ಮಹತ್ವ, ಸಿಂಧುತ್ವ ಹಾಗೂ ಹೇಗೆ ಅದು ಭಾರತದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಿಕೊಳ್ಳಲು ಅತ್ಯಗತ್ಯ ಎಂದು ಸ್ಪಷ್ಟವಾಗಿ ಆದೇಶಿಸಿರುವುದನ್ನು ಮೇಲೆ ಗಮನಿಸಿದ್ದೇವೆ. ಆ ಆದೇಶ ಕೊಟ್ಟ ಐವರು ನ್ಯಾಯಾಧೀಶರಲ್ಲಿ ಹಾಲಿ ಮುಖ್ಯ ನ್ಯಾಯಾಧೀಶ ಬೋಬ್ಡೆಯವರೂ ಒಬ್ಬರು. ಆದರೆ, ಅಶ್ವಿನ್ ಕುಮಾರ್ ಅವರು ತಮ್ಮ ಅಹವಾಲಿನಲ್ಲಿ ಸಾಂವಿಧಾನಿಕ ಪೀಠದ ಎಲ್ಲಾ ಆದೇಶಗಳನ್ನೂ ಅವಗಣನೆ ಮಾಡಿದ್ದಾರೆ. ಆದರೂ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ಆ ಅಹವಾಲನ್ನು ವಿಚಾರಣೆಗೆ ಸಮ್ಮತಿಸಿ ಉತ್ತರಿಸಲು ಇದೇ ಸರಕಾರಕ್ಕೆ ನೋಟಿಸ್ ನೀಡುತ್ತದೆ.

ವಿಪರ್ಯಾಸದ ಸಂಗತಿಯೆಂದರೆ, ಈ ಆಘಾತಕಾರಿ ಕ್ರಮವನ್ನು ಕೈಗೊಂಡಿರುವ ದ್ವಿಸದಸ್ಯ ಪೀಠದಲ್ಲಿ ಬೋಬ್ಡೆಯವರೇ ಲೀಡಿಂಗ್ ನ್ಯಾಯಾಧೀಶರು!!

ಫ್ಯಾಶಿಸಂ ಆವರಿಸಿಕೊಳ್ಳುತ್ತಿರುವಾಗ ಚುನಾವಣೆಗಳು, ಸಂಸತ್ತು, ಕೋರ್ಟ್ ಗಳು ಸಂವಿಧಾನವನ್ನು ಹಾಗೂ ಪ್ರಜಾತಂತ್ರವನ್ನು ರಕ್ಷಿಸಲಾರವು ಎಂಬುದಕ್ಕೆ ಇನ್ನೂ ಎಷ್ಟು ಪುರಾವೆಗಳು ಬೇಕು?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)