ಸಾರಿಗೆ ದಟ್ಟಣೆ ನಿಯಂತ್ರಣಕ್ಕೆ ಜಲಮಾರ್ಗವೊಂದೇ ಪರಿಹಾರ
ಕೇರಳದಲ್ಲಿ ಸಾಧ್ಯವಾದದ್ದು ಕರ್ನಾಟಕದಲ್ಲೇಕೆ ಸಾಧ್ಯವಾಗುತ್ತಿಲ್ಲ?
ಹತ್ತು ಹದಿನೈದು ವರ್ಷಗಳ ಹಿಂದೆ ಬಸ್ ಸಂಚಾರ ಪ್ರಾರಂಭಗೊಂಡ ಬಳಿಕವೂ ಅಂಬ್ಲಮೊಗರಿನ ಗಟ್ಟಿಕುದ್ರು ಕಡೆಯ ವ್ಯಾಪಾರಿಗಳ ಸರಕುಗಳನ್ನು ಜಲಸಾರಿಗೆ ಮೂಲಕವೇ ಸಾಗಿಸಲಾಗುತ್ತಿತ್ತು. ಕಾರಣ ಬಸ್ ಸುತ್ತಿ ಬಳಸಿ ಮಂಗಳೂರು ತಲುಪುವ ಮೊದಲೇ ದೋಣಿ ತಲುಪುತ್ತಿತ್ತು.
ಮಂಗಳೂರು : ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ರಸ್ತೆ ಸಾರಿಗೆಗೆ ಪರ್ಯಾಯವಾಗಿ ಜಲ ಸಾರಿಗೆಯನ್ನು ಪರಿಣಾಮಕಾರಿಯಾಗಿ ಬಳಸುವ ಅವಕಾಶವಿದ್ದರೂ, ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಜಲಸಾರಿಗೆಯನ್ನು ಬಳಸಿಕೊಳ್ಳುವ ಮೂಲಕ ಮಂಗಳೂರಿನಂತಹ ನಗರಗಳ ಸಾರಿಗೆ ಒತ್ತಡವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಬಹುದು ಎನ್ನುವುದು ಜನಸಾಮಾನ್ಯರ ಅನಿಸಿಕೆಯಾಗಿದೆ. ರಸ್ತೆ ಸಾರಿಗೆಯು ಸಾರ್ವತ್ರಿಕ ವಾಗುವ ಮುಂಚೆ ಕರಾವಳಿಗರಿಗೆ ಜಲಸಾರಿಗೆ ನಿತ್ಯ ಜೀವನದ ಭಾಗವಾಗಿತ್ತು. ಆದರೆ, ಆಧುನಿಕ ಸೌಕರ್ಯಗಳು ಆವರಿಸಿಕೊಂಡಾಗ ಪರಿಸರ ಸ್ನೇಹಿ ಜಲಮಾರ್ಗವನ್ನು ನಾವು ಮರೆತು ಬಿಟ್ಟೆವು. ಜನಸಂಚಾರವು ಅಪರೂಪಗೊಂಡ ಕಾರಣ ನಮ್ಮ ನದಿಗಳು ಕೂಡ ಮಲಿನವಾಗತೊಡಗಿದವು. ಜನರು ತಮಗೆ ಬೇಡವಾದ ವಸ್ತುಗಳನ್ನು ಎಲ್ಲೆಂದರಲ್ಲಿ ನದಿಗೆ ಎಸೆಯಲಾರಂಭಿಸಿದರು. ಜಲ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ಇಡೀ ಭಾರತ ಸಜ್ಜ್ಜಾಗುತ್ತಿದ್ದರೂ, ಕರಾವಳಿ ಇನ್ನೂ ಎಚ್ಚರಗೊಂಡಂತಿಲ್ಲ. ವಿಶೇಷವಾಗಿ ಮಂಗಳೂರು ಮುಂದುವರಿಯುತ್ತಿರುವ ನಗರವಾ ಗಿದ್ದು, ಇನ್ನೇನು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗುವ ತಯಾರಿಯಲ್ಲಿದೆ.
ಇಲ್ಲಿ ದಿನ ನಿತ್ಯ ವಾಹನ ದಟ್ಟಣೆಯ ಸಮಸ್ಯೆ ಕಾಡುತ್ತಿರುತ್ತದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ಮಕ್ಕಳು, ವ್ಯಾಪಾರಿ ಗಳು, ಕಾರ್ಮಿಕರು ಪರದಾಡುವ ಸ್ಥಿತಿ ಹೇಳತೀರದ್ದು. ಒಂದು ವೇಳೆ ಜಲಸಾರಿಗೆ ಜಾರಿಯಾದರೆ ನದಿ ದಂಡೆಯಲ್ಲಿರುವ ಕರಾವಳಿಯ ಚಿತ್ರಣವೇ ಸಂಪೂರ್ಣ ಬದಲಾಗಲಿದೆ ಎಂಬುದರಲ್ಲಿ ಅನುಮಾ ನವೇ ಇಲ್ಲ. ತೈಲ ದರವು ದಿನನಿತ್ಯ ದುಬಾರಿಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಜಲಸಾರಿಗೆಯು ಬಡವರ ಪಾಲಿಗೆ ನೆಮ್ಮದಿಯನ್ನು ನೀಡಲಿದೆ.
ಸುಮಾರು ಒಂದು ಗಂಟೆಯ ಪ್ರಯಾಣ ಅರ್ಧ ತಾಸಿನಲ್ಲೇ ಗುರಿಮುಟ್ಟಲಿದೆ. ಅದೇ ರೀತಿ ಪ್ರವಾಸೋದ್ಯಮವು ಆಡಳಿತ ವ್ಯವಸ್ಥೆಗೆ ಪೂರಕ ವಾತಾವರಣ, ಉದ್ಯೋಗಾವಕಾಶಗಳನ್ನು ಕೂಡ ಸೃಷ್ಟಿಸಲಿದೆ. ಹಲವಾರು ಗ್ರಾಮಗಳನ್ನು ಮರು ಜೋಡಿಸುವ ಪ್ರಕ್ರಿಯೆಯನ್ನು ನಿಸರ್ಗವೇ ಕೊಡ ಮಾಡಿದ ನದಿಗಳ ಮೂಲಕ ಕಾರ್ಯರೂಪಕ್ಕೆ ತರಬಹುದು. ಸರಕು ಸಾಗಣೆ, ಸಾರಿಗೆಗಳಿಗಾಗಿ ಪ್ರತ್ಯೇಕ ಬೋಟುಗಳನ್ನು ನೀರಿಗೆ ಇಳಿಸಿ ಆ ಮೂಲಕ ಜಿಲ್ಲಾಡಳಿದ ಬೊಕ್ಕಸಕ್ಕೆ ಇನ್ನಷ್ಟು ಶಕ್ತಿ ತುಂಬಲೂ ಬಹುದು. ಉತ್ತರಕ್ಕೆ ಬೈಕಂಪಾಡಿ ಪರಿಸರದ ಹಲವಾರು ಗ್ರಾಮಗಳನ್ನು ಪರಸ್ಪರ ಜೋಡಿಸಬಹುದಾದರೆ, ದಕ್ಷಿಣದ ಉಳ್ಳಾಲ, ನೇತ್ರಾವತಿ ಮೂಲಕ ಅಡ್ಯಾರು, ಫರಂಗಿಪೇಟೆ, ತುಂಬೆ, ಸಜೀಪ, ಪಾವೂರು ಮತ್ತಿತರ ಪ್ರದೇಶಗಳನ್ನೂ ತಲುಪಬಹುದು. ಜೊತೆಗೆ ನಿತ್ಯ ಜನಸಂಚಾರ ಇರುವ ಕಾರಣ ನದಿಗಳ ಮಾಲಿನ್ಯ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ.
ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಭಾರತದ ಹಲವು ರಾಜ್ಯಗಳು ಮುಂದಡಿ ಇಡುತ್ತಿವೆ. ಕರಾವಳಿಯ ಮಟ್ಟಿಗೆ ಹೇಳುವುದಾದರೆ, ಪ್ರಕೃತಿಯೇ ಕೊಡಮಾಡಿದ ನದಿಗಳು ಪ್ರವಾಸಿಗಳನ್ನು ಕೈಬೀಸಿ ಕರೆಯುತ್ತಿದ್ದರೂ, ಜಿಲ್ಲಾಡಳಿತ ಇನ್ನೂ ಕಣ್ಣು ತೆರೆದಿಲ್ಲ.
ಕೇಂದ್ರ ಸರಕಾರ 106 ರಾಷ್ಟ್ರೀಯ ಒಳನಾಡು ಜಲಮಾರ್ಗವನ್ನು ಗುರುತಿಸಿ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ 11 ರಾಷ್ಟ್ರೀಯ ಒಳನಾಡು ಜಲಮಾರ್ಗಗಳು ಒಳಗೊಂಡಿವೆ. ಆ ಪೈಕಿ ನೇತ್ರಾವತಿ ನದಿಯು 30 ಕಿ.ಮೀ. ಇದ್ದರೆ, ಗುರುಪುರ ನದಿಯು ಸುಮಾರು ಹತ್ತು ಕಿ.ಮೀ. ಒಟ್ಟು ಸುಮಾರು 40 ಕಿ.ಮೀ. ಜಲಹಾದಿಯು ಜಲಸಾರಿಗೆಗೆ ಯೋಗ್ಯವಾಗಿದೆ.
ನೆರೆಯ ಕೇರಳವು ಮಹತ್ವ ಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಲ್ಲಿ ಬರೋಬ್ಬರಿ 616 ಕಿ.ಮೀ. (ಕೋವಳಂ- ಬೇಕಲ) ಉದ್ದದ ಜಲಮಾರ್ಗ ಕಾಮಗಾರಿಯು ಪ್ರಗತಿಯಲ್ಲಿದ್ದು, ಕೊರೋನ ಲಾಕ್ಡೌನ್ನಿಂದಾಗಿ ತುಸು ಹಿನ್ನಡೆಯುಂಟಾಗಿದೆ. ಇಲ್ಲವಾದರೆ ಈ ಹೊತ್ತಿಗೆ ಅದು ಲೋಕಾರ್ಪಣೆಯಾಗಿ ಬಿಡುತ್ತಿತ್ತು. ಕೇರಳದ ಪ್ರವಾಸೋದ್ಯಮಕ್ಕೆ ಜಲಮಾರ್ಗವು ನೀಡುತ್ತಿರುವ ಕೊಡುಗೆ ಸಣ್ಣದೇನೂ ಅಲ್ಲ. ಪ್ರವಾಸೋದ್ಯಮದ ಭಾಗವಾಗಿ ಹೌಸ್ ಬೋಟುಗಳು, ತೇಲುವ ಭೋಜನಾಲಯಗಳು, ಐಷಾರಾಮಿ ತೆಪ್ಪಗಳನ್ನು ನೀರಿಗಿಳಿಸಲಾಗಿದೆ. ಎಲ್ಲಾ ವಿಭಾಗದ ಜನರಿಗೂ ಕೈಗೆಟಕುವ ದರದಲ್ಲಿ ಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರಸಿದ್ಧ ಬೀಚುಗಳನ್ನು ಜೋಡಿಸುವ ಯೋಜನೆಗಳ ಕಾಮಗಾರಿಗಳು ಕೂಡ ಪ್ರಗತಿಯಲ್ಲಿವೆ. ಒಳನಾಡಿನ ಜಲಮಾರ್ಗಗಳನ್ನು ಪೂರಕ, ಪರಿಸರ ಸ್ನೇಹಿ ಮತ್ತು ಅಗ್ಗದ ಸಾರಿಗೆ ಸಾಧನವಾಗಿ ಉತ್ತೇಜಿಸಲು ಕೇಂದ್ರ ಸರಕಾರವು ಕಳೆದ ವರ್ಷ ಜಲಮಾರ್ಗ ಬಳಕೆಯ ಶುಲ್ಕವನ್ನು ಮನ್ನಾ ಮಾಡಲು ಹಡಗು ಸಚಿವಾಲಯ ನಿರ್ಧರಿಸಿತ್ತು. ಜಲ ಸಾರಿಗೆ ಇಲಾಖೆ ಕಳೆದ ಮೇ ತಿಂಗಳಲ್ಲಿ ಈ ಕುರಿತಂತೆ ಆದೇಶವನ್ನು ಪ್ರಕಟಿಸಿತ್ತು. ಮೂರು ವರ್ಷಗಳಿಂದ ಬಳಕೆಯ ಶುಲ್ಕ ಮನ್ನಾ ಮಾಡಲಾಗಿದ್ದು, ಒಟ್ಟು ಸಾಗಣೆ ಸಂಚಾರಕ್ಕೆ ಕೇವಲ ಶೇ.2ರಷ್ಟು ಮಾತ್ರ ಜಲಮಾರ್ಗಗಳನ್ನು ಬಳಸಲಾಗುತ್ತಿದೆ. ಜಲಸಾರಿಗೆ ವಿಧಾನವು ಪರಿಸರ ಸ್ನೇಹಿ ಮತ್ತು ಅಗ್ಗವಾಗಿರುವುದರಿಂದ ಇತರ ಸಾರಿಗೆ ವಿಧಾನಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ. ಈ ಹಿಂದೆ ಒಳನಾಡು ಸರಕು ಸಾಗಣೆ ಹಡಗುಗಳನ್ನು ಸಾಗಿಸಲು ಪ್ರತಿ ಕಿಲೋಮೀಟರಿಗೆ ನೋಂದಾಯಿತ ಟನ್ಗೆ (ಜಿಆರ್ಟಿ) 2 ಪೈಸೆ ಮತ್ತು ರಾಷ್ಟ್ರೀಯ ಜಲಮಾರ್ಗಗಳಲ್ಲಿ ಕ್ರೂಸ್ ಹಡಗುಗಳ ಸಂಚಾರದ ಪ್ರತಿ ಕಿ.ಮೀ.ಗೆ 5 ಪೈಸೆ ದರದಲ್ಲಿ ಒಳನಾಡು ಜಲಮಾರ್ಗ ಪ್ರಾಧಿಕಾರವು ಶುಲ್ಕ ವಿಧಿಸುತ್ತಿತ್ತು.
2014ರಲ್ಲಿ 870 ಮಿಲಿಯನ್ ಟನ್ಗಳಿದ್ದ ಪ್ರಮುಖ ಬಂದರ್ಗಳ ಸಾಮರ್ಥ್ಯವನ್ನು ಈಗ ವಾರ್ಷಿಕ 1,550 ಹೆಚ್ಚಿಸಲಾಗಿದೆ ಎಂದು ಇತ್ತೀಚೆಗೆ ನಡೆದ ‘ಸಾಗರ ಶೃಂಗಸಭೆ’ಯಲ್ಲಿ ಪ್ರಧಾನಿ ಮೋದಿಯವರು ಹೇಳಿದ್ದರು. ಅದೇ ರೀತಿ ಮಹಾರಾಷ್ಟ್ರದ ವಾಧ್ವ್ವಾನ್, ಒಡಿಸಾದ ಪಾರಾದೀಪ್ ಮತ್ತು ಗುಜರಾತ್ನ ದೀನದಯಾಳ್ನಲ್ಲಿ ಬೃಹತ್ ಬಂದರ್ಗಳನ್ನು ಅಭಿವೃದ್ಧಿಗೊಳಿಸಿ, ಸರಕಾರವು ಮುಂದಿನ 2030ರ ವೇಳೆಗೆ 23 ಜಲಮಾರ್ಗಗಳನ್ನು ವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಶೃಂಗಸಭೆಯಲ್ಲಿ ಹೇಳಿದ್ದರು.
ನದಿ, ಜಲಾಶಯಗಳ ಮೂಲಕ ಸುಮಾರು 14,500 ಕಿ.ಮೀ.ನಷ್ಟು ಜಲಸಾರಿಗೆ ಮಾರ್ಗ ಭಾರತದಲ್ಲಿದ್ದು, ಆ ಮೂಲಕ 4.4 ಕೋಟಿ ಟನ್ಗಳಷ್ಟು ಸರಕುಗಳ ಸಾಗಾಟ ನಡೆಯುತ್ತಿದೆ ಎನ್ನಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಸಾಗಾಟ ನಡೆಯುವ ಕಾರಣ ಹೆಚ್ಚಿನ ಇಂಧನ ಲಾಭ ಕೂಡ ಈ ಮೂಲಕ ಉಂಟಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ. ರಾಜ್ಯದ ಬೊಕ್ಕಸಕ್ಕೂ ಲಾಭ ನೀಡಬಲ್ಲ ಜಲಸಾರಿಗೆಯನ್ನು ಉತ್ತೇಜಿಸಿದರೆ, ಇಡೀ ಕರಾವಳಿಯ ಚಿತ್ರಣವೇ ಸಂಪೂರ್ಣ ಬದಲಾಗಲಿದೆ.
ನೇತ್ರಾವತಿ ಸೇತುವೆ ಉದ್ಘಾಟನೆಗೊಳ್ಳುವ ವರೆಗೂ ವ್ಯಾಪಾರ ವಹಿವಾಟುಗಳಿಗೆ ಜಲಸಾರಿಗೆ ವ್ಯಾಪಕವಾಗಿತ್ತು. ಸಜಿಪ, ಅಮ್ಮೆಂಬಳ, ಇನೋಳಿ, ಅರ್ಕುಳ, ವಲಚ್ಚಿಲ್, ಅರೇಕಳ ಪಾವೂರು, ಬಜಾಲ್, ಜೆಪ್ಪು (ಈಗ ನೇತ್ರಾವತಿ ಸೇತುವೆ ಇರುವ ಸ್ಥಳ), ಬೋಳಾರ, ಬಂದರ್, ಕೂಳೂರು, ತೋಕೂರು, ಮರವೂರು, ಗುರುಪುರ, ಮುಳ್ಳರಪಟ್ಣ ಮತ್ತಿತರ ಕಡೆಗೆ ಸುಲಭವಾಗಿ ತಲುಪುವ ಏಕೈಕ ವಿಧಾನವಾಗಿತ್ತು ಜಲಸಾರಿಗೆ. ನನ್ನ ತಂದೆ ಸಾದು ಬ್ಯಾರಿ ವ್ಯಾಪಾರಕ್ಕಾಗಿ ತೆರಳುತ್ತಿದ್ದ ಕಡೆಗೆ ಬಾಲಕನಾಗಿದ್ದ ನಾನು ಕೂಡ ಸಂಚರಿಸುತ್ತಿದ್ದೆ. ಹತ್ತುವರ್ಷಗಳ ಹಿಂದೆವರೆಗೂ ಗುರುಪುರ ಕಡೆೆಗೆ ವ್ಯಾಪಾರ ನಿಮಿತ್ತ ನಾವು ಹೋಗುತ್ತಿದ್ದೆವು. ರಸ್ತೆ ಸಾರಿಗೆ ಸಾರ್ವತ್ರಿಕವಾದ ನಂತರ ಜಲಸಾರಿಗೆ ನಿಂತರೂ ಈಗಲೂ ಸೌಕರ್ಯಕ್ಕಾಗಿ ಜಲಮಾರ್ಗವನ್ನು ಬಳಸುವವರು ಧಾರಾಳ ಇದ್ದಾರೆ.
ಆದಂ ಬ್ಯಾರಿ, ಸಜಿಪ
ಬಸ್ ಸಾರಿಗೆ ಸಾರ್ವತ್ರಿಕವಾಗುವ ಮೊದಲು ಕೃಷಿಕರಾದ ನಾವು ಅಡಿಕೆ, ಮತ್ತಿತರ ಕೃಷಿ ಉತ್ಪನ್ನಗಳನ್ನು ಮಂಗಳೂರಿಗೆ ತಲೆ ಹೊರೆಯಾಗಿ ಹೊತ್ತು ಸಾಗುತ್ತಿದ್ದೆವು. ಕೆಲವೊಮ್ಮೆ ಕುತ್ತ್ತಾರು ಅಥವಾ ಉಳ್ಳಾಲ ಜೆಟ್ಟಿಯಿಂದ ಜೆಪ್ಪುವರೆಗೆ ದೋಣಿ ಮೂಲಕ ಸಾಗಿಸಿ, ಅಲ್ಲಿಂದ ಕಾಲ್ನಡಿಗೆ ಮೂಲಕ ಮಂಗಳೂರಿಗೆ ತಲುಪುತ್ತಿದ್ದೆವು. ಆ ಕಾಲದಲ್ಲಿ ಅಡ್ಯಾರ್ ಕಣ್ಣೂರು, ಅರೇಕಳ, ಇನೋಳಿ ಮತ್ತಿತರ ಕಡೆಗಳಲ್ಲೂ ದೋಣಿ ಜೆಟ್ಟಿಗಳು ಇದ್ದವು. ನಂತರ 1977ರಲ್ಲಿ ಪುತ್ತೂರು ಮತ್ತು ಸಾಲೆತ್ತೂರು ಕಡೆಗಳಿಂದ ತಲಾ ಒಂದೊಂದು ಬಸ್ ಪ್ರಾರಂಭಗೊಂಡ ಬಳಿಕ ಜಲಸಾರಿಗೆ ನಿಧಾನವಾಗಿ ನೇಪಥ್ಯಕ್ಕೆ ಸೇರಿತು.
ಮೊಯ್ದಿನ್ ಕುಂಞಿ ಸಾಗ್, ಕೃಷಿಕ