ಚಿಕ್ಕಮಗಳೂರು: ವರ್ಷ ಕಳೆದರೂ ಬಾಗಿಲು ತೆರೆಯದ ಕೆಎಸ್‌ಆರ್‌ಟಿಸಿ ಉಪಹಾರ ಮಂದಿರ
ಊಟ ತಿಂಡಿಗಾಗಿ ಪ್ರಯಾಣಿಕರು, ಸಿಬ್ಬಂದಿಗೆ ತಪ್ಪದ ಪರದಾಟ
ಚಿಕ್ಕಮಗಳೂರು, ಎ.2: ಇಲ್ಲಿನ ಕೆಎಸ್‌ಆರ್‌ಟಿಸಿ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿತನದಿಂದಾಗಿ ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ಹೊಟೇಲ್ ಸೌಲಭ್ಯ ಹಾಗೂ ವಾಹನಗಳ ಪಾರ್ಕಿಂಗ್ ಸೌಲಭ್ಯ ಇಲ್ಲದೇ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಐಜಿ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಟ್ಟಡದಲ್ಲೇ ಉಪಾಹಾರ ಮಂದಿರಕ್ಕೆಂದೇ ನಿರ್ಮಿಸಲಾದ ಕಟ್ಟಡವಿದೆ. ಕಳೆದೊಂದು ವರ್ಷದ ಹಿಂದೆ ಈ ಉಪಾಹಾರ ಮಂದಿರ ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್ ಚಾಲಕರು, ನಿರ್ವಾಹಕರು, ಸಿಬ್ಬಂದಿ ಸೇರಿದಂತೆ ದೂರದ ಊರುಗಳ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದ ಸಾರ್ವಜನಿಕರ ಉತ್ತಮ ಆಹಾರ ಒದಗಿಸುವ ಮೂಲಕ ಉತ್ತಮ ನಿರ್ವಹಣೆಯಿಂದಾಗಿ ನಗರದ ಪ್ರಮುಖ ಹೊಟೇಲ್ ಎಂದೇ ಗುರುತಿಸಿಕೊಂಡಿತ್ತು. ಆದರೆ ಈ ಹೊಟೇಲ್‍ನ ಬಾಗಿಲು ಮುಚ್ಚಿ ಒಂದು ವರ್ಷ ಕಳೆದಿದ್ದು, ಇನ್ನೂ ಬಾಗಿಲು ತೆರೆಯದ ಪರಿಣಾಮ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಬರುವ ದೂರದ ಪ್ರವಾಸಿಗರು ಉಪಹಾರಕ್ಕಾಗಿ ನಗರದಾದ್ಯಂತ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಉಪಾಹಾರ ಮಂದಿರವನ್ನು ಈ ಹಿಂದೆ ಗುತ್ತಿಗೆ ಪಡೆದು ಹೊಟೇಲ್ ನಡೆಸುತ್ತಿದ್ದ ಉಡುಪಿ ಮೂಲದ ಮಾಲಕರು ಲಾಕ್‍ಡೌನ್‍ಗೂ ಮುನ್ನ ಅತ್ಯುತ್ತಮವಾಗಿ ನಡೆಸಿದ್ದರು. ಕೊಂಚ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಊಟ, ತಿಂಡಿ, ಕಾಫಿ, ಟೀ ಸೇರಿದಂತೆ ಬಗೆ ಬಗೆಯ ಆಹಾರವನ್ನು ಪ್ರಯಾಣಿಕರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿದ್ದ ಪರಿಣಾಮ ಈ ಹೊಟೇಲ್ ನಗರದ ಇತರ ಹೊಟೇಲ್‍ಗಳಿಗಿಂತಲೂ ಹೆಚ್ಚು ಜನರನ್ನು ಆಕರ್ಷಿಸಿತ್ತು. ಈ ಹೊಟೇಲ್ ಬೆಳಗ್ಗೆ 6ಕ್ಕೆ ಬಾಗಿಲು ತೆರದು ರಾತ್ರಿ 10.30ರವರೆಗೂ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಅಧಿಕಾರಿಗಳು ಹೊಟೇಲ್ ಕಟ್ಟಡದ ಬಾಡಿಗೆಯನ್ನು ಪದೇ ಪದೇ ಏರಿಕೆ ಮಾಡಿದ ಪರಿಣಾಮ ಹೊಟೇಲ್ ಮಾಲಕರು ನಷ್ಟದ ಭೀತಿಯಿಂದ ಹೊಟೇಲ್ ನಡೆಸಲು ಹಿಂದೇಟು ಹಾಕಿದ್ದರು.
ಇದೇ ಸಮಯದಲ್ಲಿ ಕೊರೋನ ಸೋಂಕಿನ ಭೀತಿಯಿಂದಾಗಿ ಕೇಂದ್ರ ಸರಕಾರ ಲಾಕ್‍ಡೌನ್ ಹೇರಿದ್ದರಿಂದ ದೇಶಾದ್ಯಂತ ಸಾರಿಗೆ ಬಸ್‍ಗಳ ಓಡಾಟ ಸೇರಿದಂತೆ ಎಲ್ಲ ವ್ಯಾಪಾರ, ವಹಿವಾಟುಗಳು ಬಂದ್ ಆಗಿತ್ತು. ಲಾಕ್‍ಡೌನ್ ತೆರವು ಮಾಡಿದ ಬಳಿಕ ದೇಶಾದ್ಯಂತ ಎಲ್ಲ ವ್ಯಾಪಾರ ವಹಿವಾಟುಗಳು ಮತ್ತೆ ಆರಂಭವಾಗಿ ಕೆಲವು ತಿಂಗಳುಗಳೇ ಕಳೆದಿದ್ದು, ಸದ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಾರ್ವಜನಿಕರಿಗೆ ಮುಕ್ತಗೊಂಡು ಹಲವು ತಿಂಗಳು ಕಳೆದಿದ್ದರೂ ಬಸ್‍ನಿಲ್ದಾಣದ ಕಟ್ಟಡದಲ್ಲೇ ಇದ್ದ ಉಪಹಾರ ಮಂದಿರದ ಮುಚ್ಚಿದ ಬಾಗಿಲು ಮಾತ್ರ ಇನ್ನೂ ತೆರೆಯದ ಪರಿಣಾಮ ನಿಲ್ದಾಣಕ್ಕೆ ದೂರದ ಊರುಗಳಿಂದ ಬೆಳಗ್ಗೆ, ರಾತ್ರಿ ಬರುವ ಪ್ರಯಾಣಿಕರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ, ರಾತ್ರಿ ಊಟಕ್ಕಾಗಿ ನಗರದ ಇತರ ಭಾಗದಲ್ಲಿರುವ ಹೊಟೇಲ್‍ಗಳನ್ನು ಹುಡುಕಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಹೊಟೇಲ್ ಹೊರತಾಗಿ ಇತರ ನಾಲ್ಕು ವಾಣಿಜ್ಯ ಮಳಿಗೆಗಳಿದ್ದು, ಈ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ ಉಪಹಾರ ಮಂದಿರ ಮಾತ್ರ ಇಂದಿಗೂ ಬಾಗಿಲು ಮುಚ್ಚಿರುವುದರಿಂದ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರು ತಿಂಡಿ, ಊಟಕ್ಕಾಗಿ ಅಲೆದಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಉಪಹಾರ ಮಂದಿರ ಬಾಡಿಗೆ ಪಡೆದು ಹೊಟೇಲ್ ಆರಂಭಿಸಲು ಕೆಲವರು ಮುಂದೆ ಬಂದಿದ್ದರೂ ಸಂಸ್ಥೆಯ ಅಧಿಕಾರಿಗಳು ಕಟ್ಟಡದ ಬಾಡಿಗೆಯಲ್ಲಿ ಭಾರೀ ಏರಿಕೆ ಮಾಡಿರುವುದರಿಂದ ಹೊಟೇಲ್ ನಡೆಸಲು ಯಾರೂ ಮುಂದಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಸ್ ನಿಲ್ದಾಣದ ಹೊಟೇಲ್ ಕಟ್ಟಡ ಶಾಶ್ವತವಾಗಿ ಮುಚ್ಚುವ ಹಂತಕ್ಕೆ ಬಂದಿದೆ ಎಂದು ಸಂಸ್ಥೆಯ ಕೆಲ ಸಿಬ್ಬಂದಿಯೇ ಆರೋಪಿಸುತ್ತಿದ್ದಾರೆ.
ಬಸ್ ನಿಲ್ದಾಣದ ಆವರಣದಲ್ಲಿ ಹೊಟೇಲ್ ಇಲ್ಲದಿರುವುದರಿಂದ ಪ್ರಯಾಣಿಕರು ಊಟ, ತಿಂಡಿಗಾಗಿ ನಿಲ್ದಾಣದ ಎದುರಿಗಿನ ರಸ್ತೆ ದಾಟಿ ಮತ್ತೊಂದು ಬದಿಯಲ್ಲಿರುವ ಅಥವಾ ದೂರದ ಹೊಟೇಲ್‍ಗಳಿಗೆ ಹೋಗಬೇಕಿದೆ. ಆದರೆ ಬಸ್ ನಿಲ್ದಾಣದ ಎದುರಿನ ಐಜಿ ರಸ್ತೆಯಲ್ಲಿ ರಸ್ತೆ ವಿಭಜಕ ಅಳವಡಿಸಿರುವುದರಿಂದ ಪ್ರಯಾಣಿಕರು, ಸಾರ್ವಜನಿಕರು ಹೊಟೇಲ್‍ಗಳಿಗೆ ಹೋಗಲು ಸುಖಾಸುಮ್ಮನೆ ಅಲೆದಾಡಬೇಕಿದ್ದು, ಸದಾ ವಾಹನ ದಟ್ಟಣೆಯಿಂದ ತುಂಬಿರುವ ಐಜಿ ರಸ್ತೆ ದಾಟಲು ಪ್ರಯಾಣಿಕರು ಭಾರೀ ಕಸರತ್ತು ಮಾಡುವಂತಾಗಿದೆ.
ಇನ್ನು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಈ ಹಿಂದೆ ಸಾರ್ವಜನಿಕರ ವಾಹನಗಳ ಪಾರ್ಕಿಂಗ್‍ಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಲಾಕ್‍ಡೌನ್ ತೆರವಿನ ಬಳಿಕ ಈ ಪಾರ್ಕಿಂಗ್ ಜಾಗದಲ್ಲಿ ಸಾರ್ವಜನಿಕರ ವಾಹನಗಳಿಗೆ ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಬಸ್‍ಗಳ ಸಂಚಾರಕ್ಕೆ ತೊಂದರೆಯಾಗುವ ನೆಪವೊಡ್ಡಿ ವಾಹನಗಳ ನಿಲುಗಡೆಗೆ ಅವಕಾಶ ನೀಡದ ಅಧಿಕಾರಿಗಳು ಖಾಸಗಿ ವಾಹನಗಳು ನಿಲ್ದಾಣದ ಎದುರು ಬಾರದಂತೆ ಕಾವಲುಗಾರರ ಮೂಲಕ ನಿರ್ಬಂಧ ಹೇರುತ್ತಿದ್ದಾರೆ. ಪರಿಣಾಮ ಕಾರು, ಬೈಕ್‍ಗಳಲ್ಲಿ ಲಗೇಜು ಸಹಿತ ಬರುವ ಪ್ರಯಾಣಿಕರು ನಿಲ್ದಾಣದ ಕಾಪೌಂಡ್ ಹೊರಗಿನ ಐಜಿ ರಸ್ತೆ ಬದಿಯಲ್ಲಿ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ವಾಹನಗಳನ್ನು ನಿಲ್ಲಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಾದರೂ ಸಂಸ್ಥೆಯ ಅಧಿಕಾರಿಗಳು ನಿಲ್ದಾಣದ ಆವರಣದಲ್ಲೆ ಇರುವ ಕೆಎಸ್‌ಆರ್‌ಟಿಸಿ ಉಪಹಾರ ಮಂದಿರದ ಆರಂಭಕ್ಕೆ ಕ್ರಮವಹಿಸಬೇಕು ಹಾಗೂ ಪ್ರಯಾಣಿಕರನ್ನು ನಿಲ್ದಾಣಕ್ಕೆ ಬಿಡಲು ಬರುವ ವಾಹನಗಳಿಗೆ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಪಾರ್ಕಿಂಗ್‍ಗೆ ಸ್ಥಳಾವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ನಿಲ್ದಾಣದ ಆವರಣದಲ್ಲಿದ್ದ ಹೊಟೇಲ್‍ನಿಂದಾಗಿ ಪ್ರಯಾಣಿಕರಿಗಲ್ಲದೇ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನಗರದ ನಾಗರಿಕರಿಗೂ ಸಕಾಲದಲ್ಲಿ ಊಟ ತಿಂದಿ ಸಿಗುತ್ತಿತ್ತು. ಆದರೆ ಕಳೆದೊಂದು ವರ್ಷದಿಂದ ಹೊಟೇಲ್ ಬಾಗಿಲು ಮುಚ್ಚಿದ್ದು, ಹೊಟೇಲ್ ಆರಂಭಕ್ಕೆ ಇಲಾಖಾಧಿಕಾರಿಗಳು ಅಗತ್ಯಕ್ರಮವಹಿಸುತ್ತಿಲ್ಲ. ಅಲ್ಲದೇ ನಿಲ್ದಾಣದ ಆವರಣದ ಖಾಲಿ ಜಾಗದಲ್ಲಿ ವಾಹನಗಳ ಪಾರ್ಕಿಂಗ್‍ಗೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಇದರಿಂದ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ, ಪ್ರಯಾಣಿಕರ ವಾಹನ ನಿಲ್ಲಿಸಲು ಜಾಗ ಇಲ್ಲದಂತಾಗಿದೆ. ಅಧಿಕಾರಿಗಳು ಈ ಸಂಬಂಧ ಅಗತ್ಯಕ್ರಮವಹಿಸಬೇಕು.
- ರಸೂಲ್ ಖಾನ್, ಸಾಮಾಜಿಕ ಕಾರ್ಯಕರ್ತ