ಕತರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ರಕ್ತದಾನ ಶಿಬಿರ
ದೋಹ: ಕತರ್ ಇಂಡಿಯನ್ ಸೋಷಿಯಲ್ ಫೋರಂ (ಕ್ಯೂಐಎಸ್ಎಫ್) ವತಿಯಿಂದ ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ ಹಮದ್ ಆಸ್ಪತ್ರೆಯ ರಕ್ತದಾನ ಕೇಂದ್ರದಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಮದ್ ಮೆಡಿಕಲ್ ಕಾರ್ಪೋರೇಷನ್ ಪಿಎಚ್ ಸಿಸಿ, ರಾವ್ದತ್ ಅಲ್ ಖೈರ್ ನ ಖ್ಯಾತ ವೈದ್ಯ ಅಮಿತ್ ವರ್ಮ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ರಕ್ತದಾನದ ಮಹತ್ವವನ್ನು ವಿವರಿಸಿ, ಒಬ್ಬ ವ್ಯಕ್ತಿಯು ರಕ್ತದಾನ ಮಾಡಿದರೆ, ಒಬ್ಬನ ರಕ್ತದಿಂದ 3 ಜೀವಗಳನ್ನು ಉಳಿಸಲು ಸಾಧ್ಯ. ಏಕೆಂದರೆ, ದಾನ ಮಾಡಿದ ರಕ್ತವನ್ನು, ಬೇರೆಯವರಿಗೆ ಕೊಡುವ ಮೊದಲು, ಅದನ್ನು 3 ಭಾಗಗಳಲ್ಲಿ ವಿಂಗಡಿಸಲಾಗುತ್ತದೆ ಎಂದು ಹೇಳಿ ರಕ್ತದಾನಿಗಳಿಗೆ ಸ್ಫೂರ್ತಿ ನೀಡಿದರು.
'ಕ್ಯೂಐಎಸ್ಎಫ್' ಕೇಂದ್ರ ಸಮೀತಿಯ ಅಧ್ಯಕ್ಷರಾದ ಸಯೀದ್ ಕೋಮಾಚಿ ಅವರು ರಕ್ತದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ವಿವರಿಸಿ, ಕ್ಯೂಐಎಸ್ಎಫ್ ಎಲ್ಲಾ ಸಂದರ್ಭದಲ್ಲೂ ಸಮಾಜ ಸೇವೆ ಮತ್ತು ಉದಾತ್ತ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮತ್ತೋರ್ವ ಅತಿಥಿ, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್ ನ ಅಬ್ದುಲ್ ಮಜೀದ್ ಅವರು ಕ್ಯೂಐಎಸ್ಎಫ್ ನ ಕಾರ್ಯವೈಖರಿಯ ಬಗ್ಗೆ ಮತ್ತು ಆಗಿಂದ್ದಾಗೆ ಆಯೋಜಿಸುವ ರಕ್ತದಾನ ಶಿಬಿರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇಂಡಿಯಾ ಫ್ರೆಟರ್ನಿಟಿ ಫೋರಂ ನ ಅಧ್ಯಕ್ಷ ಇರ್ಫಾನ್ ಕಾಪು ಮಾತನಾಡಿ, ಒಬ್ಬ ವ್ಯಕ್ತಿ ರಕ್ತದಾನ ಮಾಡಿ, ಯಾರಾದರೊಬ್ಬರ ಜೀವ ಉಳಿಸಿದರೆ, ಆತನು ಸಂಪೂರ್ಣ ಮಾನವಕುಲಕ್ಕೆ ರಕ್ತದಾನ ಮಾಡಿದಂತೆ ಎಂದು ಹೇಳಿ ಪವಿತ್ರ ಕುರ್ ಆನ್ ಕೂಡ ನಮಗೆ ಇದನ್ನೇ ಹೇಳುತ್ತದೆ ಎಂದು ವಿವರಿಸಿದರು. ಸಮಾಜ ಸೇವೆಗೆ ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಕರೆಕೊಟ್ಟರು.
ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ನೊಂದಾಯಿಸಿದ್ದ 138 ಮಂದಿಯಲ್ಲಿ, 114 ಮಂದಿ ರಕ್ತದಾನ ಮಾಡಿದರು.
ಕ್ಯೂಐಎಸ್ಎಫ್ ಕೇಂದ್ರ ಸಮಿತಿಯ ಮುಖ್ಯ ಕಾರ್ಯದರ್ಶಿ ಬಶೀರ್ ಅಹ್ಮದ್, ಕ್ಯೂಐಎಸ್ಎಫ್ ರಾಜ್ಯ ಮತ್ತು ಶಾಖೆಗಳ ಪದಾಧಿಕಾರಿಗಳಾದ ಝಕರೀಯ ಪಾಂಡೇಶ್ವರ, ಸಲೀಂ ಬಂಗಾಡಿ, ಅಶ್ರಫ್ ಪುತ್ತೂರು, ಇಬ್ರಾಹಿಂ ಯುಬಿ, ಇರ್ಷಾದ್ ಕುಳಾಯಿ, ಅನ್ವರ್ ಅಂಗರಗುಂಡಿ, ರಿಝ್ವಾನ್ ಕಲ್ಲಡ್ಕ, ಆಸಿಫ್ ಬನ್ನೂರು, ಇಮ್ತಿಯಾಝ್ ಕಾರ್ನಾಡ್, ಝಮೀರ್ ಕಾರ್ನಾಡ್, ಅಬ್ದುಲ್ ಮೊಹ್ಸಿನ್, ಮೊಹಮ್ಮದ್ ಫಹದ್, ಅನ್ವರ್ ಬೊಲ್ಯಾರ್, ಜಲೀಲ್ ಕಲ್ಲಡ್ಕ, ಖಾಲಿದ್ ಬೆಳಪು, ಗುಲಾಬ್ ಸಾಬ್, ಶಫೀಕ್ ಪುತ್ತೂರು, ಶಾಫಿ, ಸತ್ತಾರ್, ಇಮ್ರಾನ್ ಹೆಚ್ಕಲ್, ಜುನೈದ್ ಕುಂಜತ್ತೂರ್, ಆಶ್ರಫ್ ಹಳೆಯಂಗಡಿ, ಇಸ್ಮಾಯಿಲ್ ಕಾಪು ಹಾಗೂ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಯೂಐಎಸ್ಎಫ್ ಕರ್ನಾಟಕ ರಾಜ್ಯಧ್ಯಕ್ಷ ನಝೀರ್ ಪಾಷ ಅವರು ಅತಿಥಿಗಳನ್ನು ಮತ್ತು ರಕ್ತದಾನಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.