ಭಾರತದಲ್ಲಿ ಹೆಚ್ಚುತ್ತಿರುವ ಯುಎಪಿಎ ಬಳಕೆ, ಹೋರಾಟಗಾರರ ಬಂಧನದ ಬಗ್ಗೆ ಅಮೆರಿಕ ಸರಕಾರದ ಮಾನವ ಹಕ್ಕು ವರದಿಯಲ್ಲಿ ಉಲ್ಲೇಖ
photo: Thewire
ಹೊಸದಿಲ್ಲಿ: ಅಮೆರಿಕಾದ ಸ್ಟೇಟ್ ಡಿಪಾರ್ಟ್ಮೆಂಟ್ ಕಳೆದ ವಾರ ಬಿಡುಗಡೆಗೊಳಿಸಿದ 2020 ಮಾನವ ಹಕ್ಕುಗಳ ವರದಿಯಲ್ಲಿನ ಭಾರತಕ್ಕೆ ಸಂಬಂಧಿಸಿದ ಅಧ್ಯಾಯದಲ್ಲಿ ಭಾರತದಲ್ಲಿ ಕಠಿಣ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ವಯ ಬಂಧಿತರಾಗಿರುವ ಹಲವು ಹೋರಾಟಗಾರರ ಕುರಿತು ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.
"ಆಗಸ್ಟ್ 2019ರಲ್ಲಿ ಭಾರತದ ಸಂಸತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ತಿದ್ದುಪಡಿಗೆ ಅನುಮೋದನೆ ನೀಡಿದೆ. ಇದು ಸರಕಾರಕ್ಕೆ ಕೆಲ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು ಹಾಗೂ ಎನ್ಐಎಗೆ ಉಗ್ರವಾದಕ್ಕೆ ಸಂಬಂಧ ಪಟ್ಟಂತಹ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನೂ ನೀಡುತ್ತದೆ. ಸೆಂಟರ್ ಫಾರ್ ಲಾ ಎಂಡ್ ಪಾಲಿಸಿ ರಿಸರ್ಚ್ ಪ್ರಕಾರ 2014ರಲ್ಲಿ ಯುಎಪಿಎ ಅನ್ವಯ ಇದ್ದ 976 ಪ್ರಕರಣಗಳು 2018ರಲ್ಲಿ 1,182ಗೆ ತಲುಪಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಮಣಿಪುರದಲ್ಲಿ ಈ ಕಾಯಿದೆಯನ್ವಯ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.
ದಿಲ್ಲಿ ಹಿಂಸಾಚಾರ ಪ್ರಚೋದಿಸಿದ ಆರೋಪದ ಮೇಲೆ ಕಳೆದ ವರ್ಷದ ಎಪ್ರಿಲ್ 10ರಂದು ಗರ್ಭಿಣಿ ವಿದ್ಯಾರ್ಥಿ ನಾಯಕಿ ಸಫೂರಾ ಝರ್ಗರ್ ಬಂಧನ, ಸಿಎಎ ವಿರುದ್ಧದ ಪ್ರತಿಭಟನೆಗಳ ವೇಳೆ ನೀಡಿದ ಭಾಷಣಕ್ಕಾಗಿ ಸೆಪ್ಟೆಂಬರ್ 13ರಂದು ಜೆಎನ್ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಳೆದ ವರ್ಷದ ಅಕ್ಟೋಬರ್ 8ರಂದು 93 ವರ್ಷದ ಜೆಸೂಟ್ ಪಾದ್ರಿ ಹಾಗೂ ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧನ ಹಾಗೂ ಅವರಿಗೆ ಜಾಮೀನು ನಿರಾಕರಿಸಿರುವುದು, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನಿರಾಕರಿಸಿರುವುದು ಹಾಗೂ ಇತ್ತೀಚೆಗೆ ಆರೋಗ್ಯ ಕಾರಣಗಳಿಗಾಗಿ ಜಾಮೀನು ಪಡೆದಿರುವ ಇನ್ನೊಬ್ಬ ಮಾನವ ಹಕ್ಕು ಹೋರಾಟಗಾರ ವರವರ ರಾವ್ ಅವರ ಬಂಧನವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.