ರಮಝಾನ್ ಅವಧಿಯಲ್ಲಿ ಲಸಿಕೆ ಹಾಕಿಕೊಂಡರೆ ಮಾತ್ರ ಉಮ್ರಾ ಅವಕಾಶ
ರಿಯಾದ್ (ಸೌದಿ ಅರೇಬಿಯ), ಎ. 6: ಕೊರೋನ ವೈರಸ್‌ಗೆ ಲಸಿಕೆ ಹಾಕಿಕೊಂಡಿರುವವರಿಗೆ ಮಾತ್ರ ರಮಝಾನ್ ತಿಂಗಳ ಆರಂಭದಿಂದ ಹಿಡಿದು ವರ್ಷವಿಡೀ ನಡೆಯುವ ಉಮ್ರಾ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯದ ಅಧಿಕಾರಿಗಳು ಸೋಮವಾರ ಘೋಷಿಸಿದ್ದಾರೆ.
ಜನರು ಲಸಿಕೆ ಹಾಕಿಕೊಂಡಿರುವುದನ್ನು ಮೂರು ವಿಧಗಳಲ್ಲಿ ಖಚಿತಪಡಿಸಲಾಗುವುದು ಎಂದು ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ. ಅವುಗಳೆಂದರೆ, ಲಸಿಕೆಯ ಎಲ್ಲ ಎರಡು ಡೋಸ್‌ಗಳನ್ನು ಪಡೆದವರು, ಕನಿಷ್ಠ 14 ದಿನಗಳ ಹಿಂದೆ ಲಸಿಕೆಯ ಮೊದಲ ಡೋಸ್ ಪಡೆದವರು ಮತ್ತು ಕೊರೋನ ವೈರಸ್ ಸೋಂಕಿನಿಂದ ಚೇತರಿಸಿಕೊಂಡವರು.
ಈ ಮೂರು ವಿಭಾಗಗಳಿಗೆ ಸೇರಿದವರಿಗೆ ಮಾತ್ರ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗುವುದು. ಅವರು ಪವಿತ್ರ ನಗರ ಮಕ್ಕಾದಲ್ಲಿರುವ ಗ್ರಾಂಡ್ ಮಸೀದಿಯಲ್ಲಿ ನಡೆಯುವ ಪ್ರಾರ್ಥನೆಗೂ ಹಾಜರಾಗಬಹುದಾಗಿದೆ.
ಮದೀನಾದಲ್ಲಿರುವ ಪ್ರವಾದಿ ಮಸೀದಿಯ ಪ್ರವೇಶಕ್ಕೂ ಇವೇ ಮಾನದಂಡಗಳನ್ನು ಅನುಸರಿಸಲಾಗುವುದು.
ರಮಝಾನ್ ತಿಂಗಳ ಆರಂಭದೊಂದಿಗೆ ನೂತನ ಮಾನದಂಡಗಳು ಜಾರಿಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ.