varthabharthi


ವಿಶೇಷ-ವರದಿಗಳು

ಕಾರ್ಪೋರೇಟ್ ಪರ ಕೇಂದ್ರ - ಬೆಲೆ ಏರಿಕೆ ನರಕದಲ್ಲಿ ಜನರು

ವಾರ್ತಾ ಭಾರತಿ : 7 Apr, 2021
ಸಿದ್ದರಾಮಯ್ಯ (ವಿರೋಧ ಪಕ್ಷದ ನಾಯಕರು)

  ಜನಪರವಾದ ಸರ್ಕಾರವೊಂದು ಜನರ ಜೀವನಾವಶ್ಯಕ ಸಂಗತಿಗಳಾದ ಗ್ಯಾಸ್, ಪೆಟ್ರೋಲ್, ಡೀಸೆಲ್, ವಿದ್ಯುತ್, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಶಿಕ್ಷಣ, ಆರೋಗ್ಯ ಮುಂತಾದವುಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬಾರದು.  ಸರ್ಕಾರ  ಇವುಗಳ ನಿಯಂತ್ರಣ ಕಳೆದುಕೊಳ್ಳುವುದೆಂದರೆ ಜನರೂ ಸಹ ಅವುಗಳ ಮೇಲಿನ ಅಧಿಕಾರ ಕಳೆದುಕೊಳ್ಳುವುದು ಎಂದರ್ಥ. ಖಾಸಗಿ ಕಾರ್ಪೊರೇಟ್ ಬಂಡವಾಳಿಗರ ಕೈಗೆ ಇವುಗಳು ಹೋಗುವುದೆಂದರೆ ದೇಶದ ಜನರು ಮತ್ತೊಮ್ಮೆ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದ್ದಾರೆ ಎಂದೇ ಗ್ರಹಿಸಬೇಕು. ಜನರ ಬದುಕಿನ ದಾರಿಯನ್ನು ನಿರ್ಧರಿಸುವ ಈ ಸಂಗತಿಗಳನ್ನು ಜನರ ಕೈಯಿಂದ ತಪ್ಪಿಸಲು  ಯಾವುದೇ ಸರ್ಕಾರ ಪ್ರಯತ್ನಿಸಿದರೂ ಜನರು ಅದನ್ನು ತೀವ್ರವಾಗಿ ವಿರೋಧಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೆ ಜನರು  ಜನಪ್ರತಿನಿಧಿಗಳನ್ನು ಆರಿಸಿ ಕಳಿಸುವುದಷ್ಟೆ ಅಲ್ಲ. ದೇಶದ ಸಂಪನ್ಮೂಲಗಳ ಮೇಲೆ, ದೇಶದ ಆರ್ಥಿಕತೆಯ ಮೇಲೆ, ಉತ್ಪಾದನೆ, ವಿತರಣೆಗಳ ಮೇಲೆ ಅಧಿಕಾರ ಹೊಂದಿರುವುದೂ ಆಗಿದೆ. 

 ಜೀವನಾವಶ್ಯಕ ವಸ್ತು, ವಿಷಯಗಳ ಮೇಲಿನ ಜನರ  ಅಧಿಕಾರವನ್ನು  ಕಳೆದುಕೊಂಡ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಯಾವ ದೇಶದಲ್ಲಿ ಯುವಜನರು ಮತ್ತು ಮಧ್ಯಮ ವರ್ಗ ಕ್ರಿಯಾಶೀಲವಾಗಿದ್ದುಕೊಂಡು ಸರ್ಕಾರದ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸುತ್ತಾರೋಅಲ್ಲಿಯವರೆಗೆ ಆ ದೇಶದ ಚೈತನ್ಯ ಉಳಿದಿರುತ್ತದೆ. ಪ್ರಶ್ನೆ ಮತ್ತು ಪ್ರತಿಭಟನೆಗಳೇ ಪ್ರಜಾಪ್ರಭುತ್ವದ ಮೂಲ ಮಂತ್ರಗಳು. ಆದ್ದರಿಂದ ದೇಶದ ಜನರು ಶತಾಯ ಗತಾಯ ಈ ಹಕ್ಕುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.

 ಬೆಲೆ ಏರಿಕೆಯಿಂದ ದೇಶ ತತ್ತರಿಸುತ್ತಿದೆ. ಪೆಟ್ರೋಲ್ ಬೆಲೆ ನೂರು ರೂಪಾಯಿಗಳ ಗಡಿ ಮುಟ್ಟಿದೆ. ಗ್ಯಾಸ್ ಸಿಲಿಂಡರ್ ನ ಬೆಲೆ 850 ರೂಪಾಯಿಗಳಾಗಿವೆ.ತೊಗರಿಬೇಳೆ 130, ಅಡುಗೆ ಎಣ್ಣೆ 170 ರೂಪಾಯಿಗಳಾಗಿವೆ. ಬಡವರು, ಮಧ್ಯಮವರ್ಗದವರು ಹಗಲಿರುಳೆನ್ನದೆ ದುಡಿದ ಪುಡಿಗಾಸುಗಳು ಯಾವುದಕ್ಕೂ ಸಾಲುತ್ತಿಲ್ಲ. ಹೊಟ್ಟೆ ಬ್ಟೆಗೆ ಹೊಂದಿಸಿಕೊಂಡು ಬದುಕುವ ಬಡವ ದುಡಿಮೆಯಲ್ಲಿ ಒಂದಿಷ್ಟು ಉಳಿತಾಯ ಮಾಡಿ ವ್ಯಾಪಾರ ಮುಂತಾದ ಹೊಸ ಸಾಹಸಗಳಿಗೆ ಕೈ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದುಡಿಮೆಯಲ್ಲೂ ಆತನಿಗೆ ಉತ್ಸಾಹವಿಲ್ಲದಂತಾಗಿದೆ. ಬಡವರ ಇಂಥ ವರ್ತನೆಯು ಕೆಲವರಿಗೆ ಸೋಮಾರಿತನದಂತೆ ಕಾಣುತ್ತದೆ.

  ಎಪ್ಪತ್ತು, ಎಂಬತ್ತರ ದಶಕಗಳಲ್ಲಿವಿದ್ಯಾರ್ಥಿ,ಯುವಜನ ಮತ್ತು ಮಧ್ಯಮ ವರ್ಗದ ಜನರುತೀವ್ರ ಕ್ರಿಯಾಶೀಲತೆ ಹೊಂದಿದ್ದರು. ಮಧ್ಯಮವರ್ಗ ಸಹ ಅಷ್ಟೇ ಕ್ರಿಯಾಶೀಲವಾಗಿತ್ತು. ಹೋಟೆಲ್‌ಗಳಲ್ಲಿ ಕಾಫಿ, ಟೀ, ತಿಂಡಿ ಮುಂತಾದವುಗಳ ಬೆಲೆ ಕೆಲ ಪೈಸೆಗಳಷ್ಟು ಹೆಚ್ಚಾದರೂ ಅದನ್ನು ಪ್ರತಿಭಟಿಸುತ್ತಿದ್ದರು. ಈಗ ಅಂಥ ಪ್ರತಿಭಟನಾ ಮನೋಭಾವ ತುಸು ಕಡಿಮೆಯಾದಂತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಕಾರ್ಪೊರೇಟ್ ಬಂಡವಾಳಿಗರಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ತಂದು ಬಡವರ ಅನ್ನ, ರೈಲ್ವೆ, ಜೀವನಾವಶ್ಯಕ ವಸ್ತುಗಳು ಮುಂತಾದವುಗಳೆಲ್ಲದರ ಮೇಲಿನ ನಿಯಂತ್ರಣವನ್ನು ಸರ್ಕಾರ ಬಿಟ್ಟು ಕೊಡುತ್ತಿದೆ.  ಪೆಟ್ರೋಲ್, ಡೀಸೆಲ್‌ಗಳ ಮೇಲಿನ ಹಿಡಿತವನ್ನೂ ಖಾಸಗಿಯವರಿಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

 2012-13 ರಲ್ಲೂ ಬಿ ಜೆ ಪಿ ಪಕ್ಷವು ಅಂದಿನ ಯುಪಿ ಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಯಿತೆಂದು  ತೀವ್ರ ಪ್ರತಿಭಟನೆ ಮಾಡಿತ್ತು. ಆಗ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದ ಶ್ರೀಯುತ ನರೇಂದ್ರ ಮೋದಿಯವರೇ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದರು. ಅಂದು ಅವರು  ನೀಡಿದ್ದ ಹೇಳಿಕೆಗಳನ್ನು ಒಮ್ಮೆ ರಿವೈಂಡು ಮಾಡಿ ನೋಡಿ. ಅಂದಿನ ಯುಪಿಎ ಸರ್ಕಾರವನ್ನು, ಮನಮೋಹನಸಿಂಗರನ್ನು ಕೆಟ್ಟದಾಗಿ ಟೀಕಿಸಿದ್ದರು. ತಾವು  ಅಧಿಕಾರಕ್ಕೆ ಬಂದ ಕೂಡಲೇ ದೇಶದ ಸಂಕಷ್ಟವನ್ನೆಲ್ಲ ತೊಡೆದು ಹಾಕಿ ಸ್ವರ್ಗ ಸೃಷ್ಟಿಸುತ್ತೇವೆ ಎಂದು ಪದೇ ಪದೇ ಹೇಳಿದರು. ಹುಸಿ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದೂ ಆಯಿತು.  ಅಧಿಕಾರಕ್ಕೆ ಬಂದ ಮೇಲೆ ದೇಶವನ್ನೇ ಮಾರತೊಡಗಿದ ಮೋದಿಯವರು   ಜನರಿಗೆ ಎಷ್ಟು ದೊಡ್ಡ ಮಕ್ಮಲ್ ಟೋಪಿ ಹಾಕಿಬಿಟ್ಟರಲ್ಲ ಎಂದುಜನರಿಗೆ ನಿಧಾನಕ್ಕೆ ಅರಿವಾಗುತ್ತಿದೆ.

 ಬೆಲೆ ಏರಿಕೆ, ನಿರುದ್ಯೋಗ, ಕಪ್ಪು ಹಣ, ಭ್ರಷ್ಟಾಚಾರ ಮುಂತಾದ ಸಂಗತಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮೋದಿಯವರು ಪ್ರಧಾನಿಯಾದ ಮೇಲೆ ಮಾಡಿದ್ದೇನು? 3.45 ರೂ.ಗಳಿದ್ದ ಡೀಸೆಲ್ ಮೇಲಿನ  ಕೇಂದ್ರ ಸರ್ಕಾರದ ಹೆಚ್ಚುವರಿ ಎಕ್ಸೈಜ್ ಸುಂಕವನ್ನು31.84 ರೂಪಾಯಿಗೆ ಏರಿಸಿದರು. 9.21 ರೂಗಳಿದ್ದ ಪೆಟ್ರೋಲ್ ಮೇಲಿನ ಸುಂಕವನ್ನು 32.98 ರೂಗಳಿಗೆ ಏರಿಸಿದರು. ಅಂದರೆ ಒಂದು ಲೀಟರ್ ಡೀಸೆಲ್ ಮೇಲೆ 28.39 ರೂಪಾಯಿಗಳಷ್ಟು ಸುಂಕವನ್ನು ಹೆಚ್ಚಿಗೆ ಸಂಗ್ರಹಿಸಿದರು. ಪೆಟ್ರೋಲ್ ಮೇಲೆ 23.77 ರೂಗಳಷ್ಟು ಹೆಚ್ಚಿಗೆ ಸಂಗ್ರಹಿಸಿದರು. ಜನ ಕೊರೋನಾದಿಂದ ಬಳಲುತ್ತಿದ್ದರೂ ಸುಂಕಗಳನ್ನು ಹೆಚ್ಚು ಮಾಡಿದರೇ ಹೊರತು ಕಡಿಮೆ ಮಾಡಲಿಲ್ಲ. ಇದನ್ನು ಜನ ಪರ ಆಡಳಿತವೆಂದು, ದೇಶ ಪ್ರೇಮಿ ಕೃತ್ಯವೆಂದುಕರೆಯುವುದಾದರೂ ಹೇಗೆ ಎಂು ಜನರೇ ತೀರ್ಮಾನಿಸಬೇಕು.

 ಹಾಗೆಯೇ 14.2 ಕೆ.ಜಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 2013 ರಲ್ಲಿ 416.50 ರೂಪಾಯಿ ಇತ್ತು. ಈಗ 850 ರೂಪಾಯಿ ಆಗಿದೆ. 2013 ರಲ್ಲಿ ಮನಮೋಹನಸಿಂಗರು ಒಂದು ಸಿಲಿಂಡರ್ ಮೇಲೆ 604.50 ರೂಪಾಯಿಗಳಷ್ಟು ಸಬ್ಸಿಡಿ ನೀಡುತ್ತಿದ್ದರು. ಈಗ ಕಳೆದ ವರ್ಷದಿಂದ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಈ ವರ್ಷ ಕೊರೋನ ಸಂದರ್ಭದಲ್ಲೂಡೀಸೆಲ್, ಪೆಟ್ರೋಲ್ ಮೇಲಿನ ಹೆಚ್ಚುವರಿ ಸುಂಕಗಳಿಂದಕರ್ನಾಟಕವೊಂದರಿಂದಲೇಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ದೋಚಿಕೊಂಡಿದೆ. ಇದರಲ್ಲಿ ನಮಗೆ ವಾಪಸ್ಸು ನೀಡಿರುವುದು ಕೇವಲ 713 ಕೋಟಿ ರೂಪಾಯಿಗಳು ಮಾತ್ರ.ಪೆಟ್ರೋಲ್, ಡೀಸೆಲ್ ಬಾಬತ್ತಿನಿಂದಲೇ ನರೇಂದ್ರ ಮೋದಿಯವರ ಆರು ವರ್ಷಗಳ ಆಡಳಿತದಲ್ಲಿ ಸುಮಾರು 20 ಲಕ್ಷ ಕೋಟಿ ರೂಪಾಯಿಗಳಷ್ಟು  ಸುಂಕವನ್ನು ಜನರಿಂದ ಸಂಗ್ರಹಿಸಲಾಗಿದೆ. ಕರ್ನಾಟಕವೊಂದರಿಂದಲೇ ಸುಮಾರು 1 ಲಕ್ಷ ಕೋಟಿಗೂ  ಹೆಚ್ಚಿನ ಜನರ ಸಂಪತ್ತನ್ನು ಕಸಿದುಕೊಳ್ಳಲಾಗಿದೆ.

 ಯಾಕೆ ಹೀಗೆ ಎಂದು ಕೇಳಿದರೆ ಪ್ರಧಾನಿಯವರ ಸಮರ್ಥಕರು ಉತ್ತರಿಸುತ್ತಾರೆ. ಪ್ರಧಾನಿಯವರು ಈ ಹಣವನ್ನು ದೇಶದ ಅಭಿವೃದ್ಧಿಗೆ ಬಳಸುತ್ತಿದ್ದಾರಲ್ಲ ಎನ್ನುತ್ತಾರೆ. ದೇಶ ಎಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರೆ ತಡವರಿಸುತ್ತಾರೆ. ನಿಮಗೆ ತಿಳಿದಿರಲಿ ಮನಮೋಹನಸಿಂಗರು 2013 ರಲ್ಲಿ ಅಧಿಕಾರದಿಂದ ಕೆಳಗೆ ಇಳಿದಾಗ ದೇಶದ ಸಾಲ 53.11 ಲಕ್ಷ ಕೋಟಿ ರೂಗಳಷ್ಟಿತ್ತು. 2021 ರ ಕೊನೆಗೆ ಅದು 135 ಲಕ್ಷ ಕೋಟಿ ರೂಗಳಾಗುತ್ತದೆ. ಅಂದರೆ ಕಳೆದ ಆರು ವರ್ಷಗಳಲ್ಲಿ ದೇಶದ ಸಾಲ 82 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದೆ.

 ಹಿಂದಿನ ವರ್ಷಗಳಲ್ಲಿ ನಮ್ಮ ರಾಜ್ಯಕ್ಕೆ 55 ರಿಂದ 60 ಸಾವಿರ ಕೋಟಿ ರೂಪಾಯಿಗಳ ವರೆಗೆ ತೆರಿಗೆ ಹಂಚಿಕೆ ಮತ್ತು ಸಹಾಯನಗಳ ಮೂಲಕ ಬರುತ್ತಿತ್ತು. 2020-21 ರಲ್ಲಿಕೇವಲ 35 ಸಾವಿರ ಕೋಟಿಗೆ ಇಳಿದಿದೆ. ನಮ್ಮ ರಾಜ್ಯದ ಜನರು ಸುಮಾರು 2.5 ಲಕ್ಷ ಕೋಟಿ ರೂಗಳಷ್ಟು ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತಿದ್ದಾರೆ. ಶೇ. 42 ರಷ್ಟು ತೆರಿಗೆ ರಾಜ್ಯಕ್ಕೆ ಹಂಚಿಕೆಯಾಗಬೇಕು. ಅದರಂತೆ ಹಂಚಿಕೆಯಾದರೆ ನಮಗೆ ಕನಿಷ್ಟ ಅಂದರೂ 1.05 ಲಕ್ಷ ಕೋಟಿ ರೂಗಳು ಬರಬೇಕು.  ನಮಗೆ ಬರಬೇಕಾದ್ದನ್ನು ನಮಗೆ ಕೊಡಿ ಎಂದರೆ ಬಡರಾಜ್ಯಗಳ ಅಭಿವೃದ್ಧಿಗೆ ಖರ್ಚು ಮಾಡುತ್ತೇವೆ ಎನ್ನುತ್ತಾರೆ.

   ಮೊನ್ನೆ ರಾಜ್ಯದ ಸಣ್ಣ ನೀರಾವರಿ ಇಲಾಖೆ ಸಚಿವರಾದ ಮಾಧುಸ್ವಾಮಿಯವರು ಸಭೆಯೊಂದರಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಸ್ವಾಯತ್ತತೆಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಅಲ್ಲೇ ಇದ್ದ ರಾಜ್ಯದ ಸಂಸದರೊಬ್ಬರು ಮಾಧುಸ್ವಾಮಿಯವರಿಗೇ ಬುದ್ಧಿ ಹೇಳುವಂತೆ ವರ್ತಿಸಿದ್ದಾರೆ. ರಾಜ್ಯ ಭಿಕಾರಿಯಾಗುತ್ತಿದೆ. ಭೀಕರ ಸಾಲದ ಸುಳಿಗೆ ಸಿಕ್ಕಿಕೊಳ್ಳುತ್ತಿದೆ. ತನ್ನ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಇಂಥ ಹೊತ್ತಲ್ಲಿ ಸಂಸದರಾಗಿ ಕೇಂದ್ರದ ದೊಡ್ಡಣ್ಣನ ಧೋರಣೆಯನ್ನು ಪ್ರತಿಭಟಿಸಿ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾದ, ರಾಜ್ಯದ ದಮನಕ್ಕೆ ಸಾಥ್ ನೀಡಿದ ಬಿಜೆಪಿ ಸಂಸದರನ್ನು ಏನೆಂದು ಕರೆಯುವುದು? ಕೇಂದ್ರ ಸರ್ಕಾರಕ್ಕೆ ನರೇಂದ್ರ ಮೋದಿಯವರಿಗೆ ಹೇಳಬೇಕು.ನಾವು ಬಡರಾಜ್ಯಗಳ ಜನರ ವಿರೋಧಿಗಳಲ್ಲ. ಕೇಂದ್ರದ ಒಟ್ಟಾರೆ ತೆರಿಗೆಯಲ್ಲಿ ರಾಜ್ಯಗಳಿಗೆ ನೀಡುತ್ತಿರುವುದು ಕೇವಲ ಶೇ 34 ರಿಂದ 35 ಮಾತ್ರ. ಉಳಿಕೆ 65 ಶೇ ಹಣವನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ಅದರಲ್ಲಿ ಆ ರಾಜ್ಯಗಳಿಗೆ ಧಾರಾಳವಾಗಿ ಕೊಡಿ ಎಂದು ಹೇಳಿ. ಅದರ ಬದಲಿಗೆ ನಮ್ಮ ಹಕ್ಕಿನ ಹಣವನ್ನು ಕೇಂದ್ರವು ನುಂಗಿ ಬಿಟ್ಟರೆ ನಾವು ಜನರಿಗೆ ಅನ್ನ, ನೀರು, ನೆರಳು, ರಸ್ತೆ ಮುಂತಾದವನ್ನೂ ನೀಡಲಾಗದ ಸ್ಥಿತಿಗೆ ತಲುಪುತ್ತೇವೆ.

 ಪೆಟ್ರೋಲ್ ಡೀಸೆಲ್ ಗಳ ಮೇಲೆ ಹೀಗೆಲ್ಲ ಸುಂಕವನ್ನು ಜನರಿಂದ ಸುಲಿದುಕೊಂಡರೂ ಕೇಂದ್ರ ದಿವಾಳಿಯಾಗುತ್ತಿದೆ. ಇದಕ್ಕೆ ಕಾರಣ ಅದರ ತೆರಿಗೆ ನೀತಿಗಳೇ ಕಾರಣ. ಇರಲಿ ಅದನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕು.

 ಯುಪಿಎ ಸರ್ಕಾರದ ವಿರುದ್ಧ ದೊಡ್ಡ ಗಂಟಲಲ್ಲಿ ಪ್ರತಿಭಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತದರ ನಾಯಕ ನರೇಂದ್ರ ಮೋದಿಯವರ ಸಾಧನೆ ಈ ಕೆಳಗಿನಂತಿದೆ ನೋಡಿ 

► ರಾಜಸ್ಥಾನ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ ರೂ.100/- ದಾಟಿದೆ.

  2012 ರಲ್ಲಿ ಕಚ್ಚಾ ತೈಲದ ಬೆಲೆ 125.45 ಡಾಲರ್ ಇದ್ದಾಗ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.41.91/-, ಪ್ರತಿ ಲೀಟರ್ ಪೆಟ್ರೋಲ್ ರೂ.78.57/- ಇತ್ತು. 2014 ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಕಚ್ಛಾ ತೈಲದ ದರ ಇಳಿಯುತ್ತಾ ಹೋಯಿತು. 2017 ರಲ್ಲಿ ಪ್ರತಿ ಬ್ಯಾರಲ್ ಕಚ್ಛಾತೈಲದ ಬೆಲೆ 47.56 ಡಾಲರ್‌ಗೆ ಇಳಿಯಿತು. ಆದರೆ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರ ವಿಧಿಸುವ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಡೀಸೆಲ್ ಮೇಲೆ ರೂ.15.83/- ಏರಿಸಿದರು, ಪೆಟ್ರೋಲ್ ಮೇಲೆ ರೂ.19.98/- ಗೆ ಏರಿಸಿದರು. ಅದಕ್ಕೂ ಮೊದಲು 2013 ರಲ್ಲಿ ಡೀಸೆಲ್ ಮೇಲೆ ರೂ.3.45/-, ಪೆಟ್ರೋಲ್ ಮೇಲೆ ರೂ.9.21/- ಗಳನ್ನು ಅಡಿಷನಲ್ ಎಕ್ಸೈಜ್ ಡ್ಯೂಟಿ ಎಂದು ಸಂಗ್ರಹ ಮಾಡಲಾಗುತ್ತಿತ್ತು.

   ಪ್ರಸ್ತುತ ಪೆಟ್ರೋಲ್, ಡೀಸೆಲ್‌ಗಳ ಮೇಲಿನ ಮೂಲ ದರ 34 ರಿಂದ 35 ರೂಪಾಯಿ ಮಾತ್ರ. ಉಳಿದದ್ದೆಲ್ಲ ಕೇಂದ್ರ ರಾಜ್ಯಗಳ ತೆರಿಗೆ ಮತ್ತು ಸುಂಕಗಳು ಹಾಗೂ ತುಸು ಮಾತ್ರ ಡೀಲರ್ ಗಳ ಕಮಿಷನ್ನು ಸೇರಿದೆ. ಹಾಗಾಗಿ ದೇಶದಲ್ಲಿ ಪ್ರತಿ ಲೀಟರ್ ಡೀಸೆಲ್ ರೂ.90/- ಗಳನ್ನು ಮೀರಿದೆ. ಪ್ರತಿ ಲೀಟರ್ ಪೆಟ್ರೋಲ್ ರೂ.100/- ಗಳನ್ನುಮುಟ್ಟಿದೆ.  ಆದರೆ ಎಕನಾಮಿಕ್ ಟೈಮ್ಸ್ ಪತ್ರಿಕೆಯು ವರದಿ ಮಾಡಿರುವ ಪ್ರಕಾರ ನಮ್ಮ ಅಕ್ಕ ಪಕ್ಕದ ರಾಷ್ಟ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ಈ ರೀತಿ ಇದೆ.

 ಆದರೆ ಈ ಕುರಿತು ಬಿ.ಜೆ.ಪಿ. ರಾಜ್ಯ ಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ರವರು ದಿನಾಂಕ: 02-02-2021 ರಂದು ಈ ರೀತಿ ಟ್ವೀಟ್ ಮಾಡಿದ್ದಾರೆ. Rs.93/- in Ram’s India, Rs.53/- in Sita’s Nepal, Rs.51/- in Ravan’s Lanka”ಎಂದು ಹೇಳಿದ್ದಾರೆ. ಮೋದಿಯವರ ದುಷ್ಟ ಆರ್ಥಿಕ ನೀತಿಗಳ ವಿರುದ್ಧ ಬಿ.ಜೆ.ಪಿ.ಯ ಹಿರಿಯ ಸದಸ್ಯರುಗಳು ಒಬ್ಬೊಬ್ಬರೇ ಗೊಣಗಾಡುತ್ತಿದ್ದಾರೆ. ಸುಬ್ರಮಣಿಯನ್ ಸ್ವಾಮಿ ರೀತಿಯವರು ಜೋರಾಗಿ ಹೇಳಲು ಪ್ರಾರಂಭಿಸಿದ್ದಾರೆ. ಜನರ ಸಿಟ್ಟಿನ ದಿಕ್ಕು ತಪ್ಪಿಸಲು ಪ್ರಧಾನಿ ಮೋದಿಯವರು ಮಾಮೂಲಿ ದಾರಿಗಳನ್ನು ಬಳಸುತ್ತಿದ್ದಾರೆ. ಜನರು ತಮ್ಮ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದಾಗಲೆಲ್ಲ ಅವರು ಬಚ್ಚಿಟ್ಟುಕೊಳ್ಳಲು ಹೇಳುವ ಮಾತುಗಳು ಎರಡು,ನೆಹರೂ ಹಾಗೂ ಕಾಂಗ್ರೆಸ್ಸು. ಇನ್ನೊಂದು ಪಾಕಿಸ್ತಾನ. ಇಷ್ಟು ಹೇಳಿಕೊಂಡೇ ಆರು ವರ್ಷ ಕಳೆದಿದ್ದಾರೆ. ನೀವು ಏನು ಮಾಡಿದ್ರಿ ಅಂದರೂ ಅವರು ತೋರಿಸುವುದು ಇವುಗಳನ್ನೇ.

        ದಿನಾಂಕ: 17-02-2021 ರಂದು ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾಗ ಬೆಲೆ ಏರಿಕೆ ಕುರಿತು ಮೊಟ್ಟ ಮೊದಲ ಬಾರಿಗೆ ಬಾಯಿಯನ್ನು ಬಿಚ್ಚಿದರು. ಅಲ್ಲಿ ಅವರು ಹೇಳಿದ ಮಾತು ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ. ಇಂಧನದ ಆಮದಿನ  ಮೇಲೆ ಭಾರತದ ಅವಲಂಬನೆಯನ್ನು ಕಡಿಮೆಗೊಳಿಸುವ ಬಗ್ಗೆ ಹಿಂದಿನ ಸರ್ಕಾರಗಳು ಗಮನಹರಿಸಿರಲಿಲ್ಲ, ಅದರಿಂದಾಗಿ ಪೆಟ್ರೊೀಲ್, ಡೀಸೆಲ್‌ಗಳ ಬೆಲೆ ಜಾಸ್ತಿಯಾಗಿವೆ.ಎಂಬಆತ್ಮಘಾತುಕ ಮಾತುಗಳನ್ನಾಡಿದ್ದಾರೆ. ಪ್ರತಿಯೊಂದಕ್ಕೂ ಹಿಂದಿನ ಸರ್ಕಾರಗಳನ್ನೇ ದೂಷಿಸುವ ಮೋದಿಯವರು ಹಿಂದೆ ಕಾಂಗ್ರೆಸ್ ಮತ್ತು ಯು.ಪಿ.ಎ. ಸರ್ಕಾರಗಳು ಕಟ್ಟಿದ್ದ ಭಾರತವನ್ನು ಜನರ ಕಣ್ಣ ಮುಂದೆಯೇ ನಾಶ ಮಾಡುತ್ತಿದ್ದಾರೆ. ಸುಳ್ಳು ಹೇಳುವುದು, ಹುಸಿ ಘೋಷಣೆ ಮಾಡುವುದು, ತಮ್ಮ ವೈಫಲ್ಯಗಳಿಗೆ ಕಾರಣ ಹಿಂದಿನ ಸರ್ಕಾರಗಳು ಎಂದು ಹೇಳುವ ಅಪ್ರಾಮಾಣಿಕತೆಯನ್ನು ಪ್ರಧಾನಿ ಮೋದಿಯವರು ಬೆಳೆಸಿಕೊಂಡಿದ್ದಾರೆ. ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳು ಕಾರಣ ಎಂಬ ಪ್ರಧಾನಿಗಳ ಮಾತಿನಲ್ಲಿ ಏನಾದರೂ ಸತ್ಯಾಂಶವಿದೆಯೇ ಎಂದು ನೋಡಿದರೆ ಅದು ಕೂಡ ಹುಸಿ ಸುಳ್ಳಿನಿಂದಲೇ ಕೂಡಿದೆ. ದೇಶ ಆಮದು ಮಾಡಿಕೊಂಡ ಕಚ್ಛಾ ತೈಲದ ವಿವರಗಳಿವು.

ಈ ಅಂಕಿ ಅಂಶಗಳನ್ನು ನೋಡಿದರೆ ನರೇಂದ್ರ ಮೋದಿಯವರು ದೇಶದ ಜನರಿಗೆ ಎಂಥಾ ಸುಳ್ಳು ಹೇಳುತ್ತಿದ್ದಾರೆಂದು ಅರ್ಥವಾಗುತ್ತದೆ. 2013-14 ಕ್ಕೆ ಹೋಲಿಸಿದರೆ 43.81 ಮಿಲಿಯನ್ ಟನ್ನುಗಳಷ್ಟು ಹೆಚ್ಚಿನ ಚ್ಚಾ ತೈಲವನ್ನು 2019-20 ರಲ್ಲಿ ಆಮದು ಮಾಡಿಕೊಳ್ಳಲಾಗಿದೆ. 2013-14 ರಲ್ಲಿ 184.79 ಟನ್ನು ಕಚ್ಛಾತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದರೆ 2019-20ರಲ್ಲಿ ಇದರ ಪ್ರಮಾಣ 228.6 ಮಿಲಿಯನ್  ಟನ್ನುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರಧಾನಮಂತ್ರಿಯವರು ಮಾರ್ಚ್  2015 ರಲ್ಲಿ ಕೊಚ್ಚಿಯಲ್ಲಿ ನಿಂತು ಮಾತನಾಡುವಾಗ ದೇಶವು ಶೇ78.6 ರಷ್ಟು ಕಚ್ಛಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಮದನ್ನು  ಶೇ 10 ರಷ್ಟು ಕಡಿಮೆ ಮಾಡಿ ದೇಶವನ್ನು 2022 ರ ಒಳಗೆ ಉದ್ಧಾರ ಮಾಡಿಬಿಡುತ್ತೇವೆ ಎಂದು ಭಾಷಣ ಮಾಡಿದ್ದರು. ಅವರು ಹಾಗೆ ಹೇಳುವಾಗ ದೇಶದಲ್ಲಿ 37,788 ಸಾವಿರಟನ್ನುಗಳಷ್ಟು ಕಚ್ಛಾತೈಲ ಉತ್ಪಾದನೆಯಾಗುತ್ತಿತ್ತು. ಆದರೆ 2019-20 ಕ್ಕೆ ಬರುವ ಹೊತ್ತಿಗೆ ಉತ್ಪಾದನೆಯ ಪ್ರಮಾಣ 32,173  ಸಾವಿರ ಟನ್ನುಗಳಿಗೆ ಕುಸಿಯಿತು. ಅಂದರೆ 5615 ಸಾವಿರ ಟನ್ನುಗಳಷ್ಟು ಕಚ್ಛಾತೈಲದ ಉತ್ಪಾದನೆ ಕಡಿಮೆಯಾಯಿತು. ಯಾಕೆ ಕಡಿಮೆಯಾಯಿತು? ಉತ್ಪಾದನೆ ಕಡಿಮೆ ಮಾಡಿ ಎಂದು ಅವರಿಗೆ ಆಜ್ಞೆ ಮಾಡಿದವರು ಯಾರು?

ಈಗ ದೇಶದಲ್ಲಿ ಅತ್ಯುತ್ತಮ ಪ್ರಗತಿ ತೋರಿಸುತ್ತಿರುವ, ದೇಶದ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ  ಹಿಂದೂಸ್ತಾನ್ ಪೆಟ್ರೋಲಿಯಮ್, ಭಾರತ್ ಪೆಟ್ರೋಲಿಯಮ್ ಮುಂತಾದ ತೈಲ ಕಂಪೆನಿಗಳನ್ನು ಖಾಸಗೀಕರಿಸುವ ಯೋಜನೆ ಪ್ರಾರಂಭಿಸಿದ್ದಾರೆ. ಈ ಕಂಪೆನಿಗಳನ್ನು ಕೊಂಡುಕೊಳ್ಳಲು ಅಂಬಾನಿಯವರ ರಿಲಯನ್ಸ್, ಸೌದಿ ದೇಶದ ಆರಾಮ್ಕೋ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ ಕಂಪೆನಿಗಳು ಇನ್ನಿಲ್ಲದ ಹುನ್ನಾರ ಮಾಡುತ್ತಿವೆ.. ಆಹಾರ, ಇಂಧನ, ಸಾರಿಗೆ, ಬಂದರು, ರಕ್ಷಣೆ, ವಿದ್ಯುತ್ಮುಂತಾದವುಗಳನ್ನು ಪ್ರಜ್ಞೆ ಇರುವ ಯಾವುದಾದರೂ ದೇಶವೊಂದು  ಖಾಸಗಿಯವರಿಗೆ ವಹಿಸಿಕೊಡಲು ಸಾಧ್ಯವೇ? ಈಗ ಪ್ರಮುಖ ಶಕ್ತಿ ಎನ್ನಿಸಿದ ಇಂಧನವನ್ನು ಖಾಸಗಿಯವರಿಗೆ ಕೊಡಲು ಹೊರಟಿದ್ದಾರೆ. ಇದರಿಂದ ಇಡೀ ದೇಶದ ವ್ಯವಸ್ಥೆಯೇ ಅಲುಗಾಡತೊಡಗುತ್ತದೆ. ಇವೆಲ್ಲವುಗಳನ್ನು ಸೂಕ್ಷ್ಮವಾಗಿ ನಾನು ಗಮನಿಸುವುದರಿಂದಲೇ ಪ್ರಧಾನಿಯವರ ಮಾತುಗಳನ್ನು ನೇರವಾಗಿ ನಂಬಬೇಡಿ. ಅವರು ಹೇಳಿದ್ದಕ್ಕೆ ವಿರುದ್ಧವಾದದ್ದರಲ್ಲಿಸತ್ಯ ಅಡಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಯುವಕರಿಗೂ, ಜನರಿಗೂ ಹೇಳುತ್ತಿದ್ದೇನೆ. ನರೇಂದ್ರ ಮೋದಿಯವರ ಕಾಲದಲ್ಲಿ ಕಚ್ಛಾತೈಲದ ಆಮದೂ ಹೆಚ್ಚಾಗಿದೆ. ಆಂತರಿಕ ಉತ್ಪತ್ತಿಯನ್ನೂ ಕಡಿಮೆ ಮಾಡಿದ್ದಾರೆ. ಆದರೆ ಈಗಿನ ಬೆಲೆಯೇರಿಕೆಗೆ ಹಿಂದಿನ ಸರ್ಕಾರಗಳ ತೈಲ ಆಮದು ಕಾರಣ ಎಂದು ಜನರ ಕಿವಿಯ ಮೇಲೆ ಹೂ ಇಡುತ್ತಿದ್ದಾರೆ.

        ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಕೃಷ್ಣ, ಗೋದಾವರಿ ನದಿ ಮುಖಜ ಭೂಮಿಗಳಲ್ಲಿವ್ಯಾಪಕ ಪ್ರಮಾಣದ ತೈಲ ನಿಕ್ಷೇಪಗಳಿವೆ ಎಂಬುದನ್ನು ಪತ್ತೆ ಹಚ್ಚಿಸಿದ್ದರು. ಇದರ ಮೇಲೂ ಅಂಬಾನಿಯ ಕಣ್ಣು ಬಿದ್ದಿದೆ ಎಂಬ ಮಾಹಿತಿ ಇದೆ. ಹಾಗಾಗಿ ಮೋದಿಯವರು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಲು ಪ್ರಾರಂಭಿಸಿದ್ದಾರೆ. ಇಡೀ ದೇಶವನ್ನು ಮೋದಿಯವರು ಮಾರಿಯಾದ ಮೇಲೆ ಬಿಜೆಪಿಯವರಿಗೆ ಪ್ರಜ್ಞಾವಂತರು  ಹೇಳಿದ್ದು ಸತ್ಯ ಎಂದು ಅರಿವಿಗೆ ಬರುತ್ತದೋ ಇಲ್ಲವೋ ನೋಡಬೇಕು. ದಿನೇ ದಿನೇ ಏರಿಕೆಯಾಗುತ್ತಿರುವ ಇಂಧನ ದರಗಳಿಂದಾಗಿ ಜನರ ಬದುಕು ಅತ್ಯಂತ ದುರ್ಬರವಾಗುತ್ತಿದೆ. ಪತ್ರಿಕೆಯೊಂದು ದಿನಾಂಕ: 21-02-2021 ವರದಿ ಮಾಡಿದ ಹಾಗೆ ಟ್ರಕ್‌ಗಳ ಬಾಡಿಗೆ ಒಂದೂವರೆ ತಿಂಗಳಲ್ಲಿ ಶೇ.13 ರಷ್ಟು ಹೆಚ್ಚಾಗಿದೆ. ದಿಲ್ಲಿಯಿಂದ ಚೆನ್ನೈಗೆ ಜನವರಿ-2020 ರ ಮೊದಲ ವಾರದಲ್ಲಿ ಟ್ರಕ್‌ವೊಂದರ ಬಾಡಿಗೆ ರೂ.1.2 ಲಕ್ಷಗಳಿದ್ದದ್ದು. ಫೆಬ್ರವರಿ 16 ಕ್ಕೆ ರೂ.1.4 ಲಕ್ಷಗಳಿಗೆ ಏರಿಕೆಯಾಗಿದೆಯಂತೆ.  ಈಗ 1.5 ಲಕ್ಷಗಳಿಗೆ ಏರಿಕೆಯಾಗಿರಬೇಕು. ಒಂದು ಟ್ರಿಪ್ ಸರಕು ಸಾಗಾಣಿಕೆಗೆ ಈ ಮಟ್ಟದ ಬೆಲೆ ಹೆಚ್ಚಾದರೆ ಇನ್ನುಳಿದಂತೆ ಅಗತ್ಯ ವಸ್ತುಗಳ ಬೆಲೆ ಎಷ್ಟು ಹೆಚ್ಚಾಗಬಹುದು ಎಂಬುದನ್ನು ನಾವುಗಳು ಊಹಿಸಬಹುದಾಗಿದೆ. ಡೀಸಲ್ ಬೆಲೆ ಲೀಟರ್‌ಗೆ ರೂ.100/- ಗಳವರೆಗೆ ಮುಟ್ಟಿರುವುದರಿಂದ 50,000 ಕ್ಕೂ ಸಣ್ಣ ಟ್ರಕ್‌ಗಳು ಸರಕು ಸಾಗಾಣಿಕೆ ಉದ್ಯಮದಿಂದ ಹೊರಗೆ ಉಳಿಯುವ ಅಪಾಯವನ್ನು ಎದುರಿಸುತ್ತಿದೆ.  ಪೆಟ್ರೋಲ್, ಡೀಸೆಲ್‌ಗಳ ಮೇಲೆ ಸುಂಕ ಕಡಿಮೆ ಮಾಡಿದರೂ ಸರ್ಕಾರಕ್ಕೆ ನಷ್ಟವಾಗುವುದಿಲ್ಲವೆಂದು ತಜ್ಞರ ಸಮಿತಿಗಳು ಹೇಳುತ್ತಿವೆ. ಆದರೂ ಕಡಿಮೆ ಮಾಡುತ್ತಿಲ್ಲ. ಲಕ್ಷಾಂತರ ಕ್ಯಾಬ್‌ಗಳು, ಆಟೋಗಳಿಗೆ ದುಡಿಮೆಯಾಗದೆ ಅವುಗಳನ್ನು ನಂಬಿಕೊಂಡ ಕುಟುಂಬಗಳು ಬೀದಿ ಪಾಲಾಗುತ್ತವೆ.

ಗ್ಯಾಸ್ ಸಿಲಿಂಡರ್ ಅಥವಾ ಅಡುಗೆ ಅನಿಲದ ಬೆಲೆ ಏರಿಕೆ:

        ದಿನಾಂಕ: 19-02-2021 ರಂದು ಕರ್ನಾಟಕದ ರಾಜ್ಯದವರೆ ಆದ ಈಗ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಯವರು ಟ್ವೀಟ್ ಮಾಡಿ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್‌ಗಳ ಬೆಲೆಯನ್ನು 2011 ರಿಂದ 2021 ರವರೆಗೆ ಲಗತ್ತಿಸಿದ್ದರು. ಆದರೆ ಮನಮೋಹನ್ ಸಿಂಗ್ ರವರು ಪ್ರಧಾನಿ ಮಂತ್ರಿಯಾಗಿದ್ದಾಗ ವಾಣಿಜ್ಯ ಉದ್ದೇಶಕ್ಕೆ ಹೋಟೆಲ್ ಮುಂತಾದ ಕಡೆ ಬಳಸುವ ಸಿಲಿಂಡರ್ಳಿಗೆ ಸಬ್ಸಿಡಿ ಇರಲಿಲ್ಲ. ಉಳಿದಂತೆ ಸಿ.ಟಿ.ರವಿಯವರು, ಯಡಿಯೂರಪ್ಪನವರಾದಿಯಾಗಿ ಎಲ್ಲರೂ  ಮನಮೋಹನಸಿಂಗರು ನೀಡುತ್ತಿದ್ದ ಸಬ್ಸಿಡಿ ಸಿಲಿಂಡರುಗಳನ್ನು ಬಳಸಿಯೇ ಅನ್ನ ಬೇಯಿಸಿ ತಿಂದಿದ್ದಾರೆ. ಸಿ.ಟಿ ರವಿಯವರಿಗೆ ಈ ಕುರಿತು ಗೊಂದಲಗಳಿದ್ದರೆ ಹಿಂದಿನ ಬಿಲ್ಲುಗಳನ್ನೊಮ್ಮೆ ಪರಿಶೀಲಿಸಿದರೆ ತಿಳಿಯುತ್ತದೆ. ಮೋದಿಯವರು ಕೂಡ ಅದೇ ಸಬ್ಸಿಡಿ ದರದ ಸಿಲಿಂಡರ್‌ಗಳನ್ನೆ ಬಳಸಿ ಅಡುಗೆ ಮಾಡಿಸಿ ಊಟ ಮಾಡಿರಬೇಕು.  ಅಂದರೆ ಅರ್ಥ ಕಮರ್ಷಿಯಲ್ ಉದ್ದೇಶದ ಸಿಲಿಂಡರ್‌ಗಳನ್ನು ಹೊರತುಪಡಿಸಿ ಉಳಿದಂತೆ ಪ್ರತಿಯೊಬ್ಬರು ಸಬ್ಸಿಡಿ ಸಹಿತವಾದ ಸಿಲಿಂಡರ್‌ಗಳನ್ನೇ ಬಳಸಿದ್ದರು. ಮನಮೋಹನ್ ಸಿಂಗ್ ರವರು ಅಧಿಕಾರದಿಂದ ಇಳಿದಾಗ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರೂ.1,241/- ಇದ್ದರೆ, ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ರೂ.414/- ಇತ್ತು. ಕೇಂದ್ರ ಸರ್ಕಾರ ರೂ.827/- ಹಣವನ್ನು ಪ್ರತಿ ಸಿಲಿಂಡರ್ ಮೇಲೆ ಸಬ್ಸಿಡಿ ರೂಪದಲ್ಲಿ ನೀಡುತ್ತಿತ್ತು. ಹೋಟೆಲ್ ಮುಂತಾದ ಕಡೆ ಬಿಟ್ಟು ಮನೆಗಳಲ್ಲಿ ಬಳಸುತ್ತಿದ್ದ ಪ್ರತಿ ಸಿಲಿಂಡರ್‌ಗೂ ಸಬ್ಸಿಡಿ ನೀಡಲಾಗಿದೆ.

14.2 ಕೆ.ಜಿ. ಗ್ಯಾಸ್ ಸಿಲಿಂಡರ್ ಬೆಲೆ

ಪ್ರಧಾನಿಯವರು ಅಧಿಕಾರಕ್ಕೆ ಏರಿದ ಕೂಡಲೇ ಸಬ್ಸಿಡಿ ನೀಡಿದ ಪ್ರಮಾಣ 2015 ರಲ್ಲಿ ರೂ.154/-ನೀಡಿದರು. ಆನಂತರ ಮೋದಿಯವರು ಮಾಡಿದ ಕೆಲಸ ಏನೆಂದರೆ ಸಬ್ಸಿಡಿ ಬಿಟ್ಟುಕೊಡುವುದು ದೇಶ ಪ್ರೇಮ ಎಂದು ಹೇಳಿದ್ದರಿಂದ ಅನೇಕರು ಸಬ್ಸಿಡಿ ಬಿಟ್ಟುಕೊಟ್ಟರು. ಆದರೂ  ದೇಶದಲ್ಲಿ  ಗಣನೀಯ ಉತ್ಸಾಹವೇನು ತೋರಿಬರಲಿಲ್ಲ. ಆದುದರಿಂದ, 2020 ರ ನಂತರ ಸಬ್ಸಿಡಿ ನೀಡುವುದನ್ನೆ ನಿಲ್ಲಿಸಿ ಬಿಟ್ಟರು. ಈಗ ದೇಶದ ಅನೇಕ ರಾಜ್ಯಗಳಲ್ಲಿ ಜನ ಪ್ರತಿ ಸಿಲಿಂಡರ್‌ಗೆ ರೂ.900/- ಗಳಿಗೂ ಅಧಿಕ ಹಣವನ್ನು ನೀಡಿ ಸಿಲಿಂಡರ್ ಖರೀದಿಸುತ್ತಿದ್ದಾರೆ. ರಾಜ್ಯದಲ್ಲಿ 1 ಕೋಟಿ 46 ಲಕ್ಷ ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ.ಇವುಗಳಲ್ಲಿಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748, ಬಿಪಿಸಿಎಲ್ 7,40,897 ಹಾಗೂ ಎಚ್‌ಪಿಸಿಎಲ್‌ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ. ಈ ಎಲ್ಲ ಗ್ರಾಹಕರು ಈಗ  850 ರೂಗಳಷ್ಟು ದುಬಾರಿ ಬೆಲೆಯನ್ನು ನೀಡಿಯೇ ಸಿಲಿಂಡರ್‌ಗಳನ್ನು ಖರೀದಿಸಬೇಕಾಗಿದೆ. ಸಿಲಿಂಡರ್ ಗಳ ಬೆಲೆ ಏರಿಕೆಯಿಂದಾಗಿ ಉಜ್ವಲಾ ಯೋಜನೆಯಲ್ಲಿ ಸಂಪರ್ಕ ಪಡೆದವರೂ ಸಹ ರೀಫಿಲ್ ಮಾಡಿಸಲಾಗದೆ ಮತ್ತೆ ಸೌದೆ, ಬೆರಣಿಗಳ ಮೂಲಕ ಅಡುಗೆ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ ಹೋಟೆಲ್‌ನ ತಿನಿಸುಗಳ ಬೆಲೆಯೂ ಸಹ ಶೇ.15 ರಿಂದ ಶೇ20 ರಷ್ಟು ಹೆಚ್ಚಾಗಿವೆ ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ.

        ರಾಜ್ಯದ ಸಾರಿಗೆ ನಿಗಮಗಳು ಕೂಡ ರೂ.2,566.71 ಕೋಟಿಗಳಿಗಿಂತ ಹೆಚ್ಚು ನಷ್ಟ ಅನುಭವಿಸಿವೆ ಎಂದು ಸಚಿವರೆ ಹೇಳುತ್ತಿದ್ದಾರೆ. (ಇದರಲ್ಲಿ ಲಾಕ್‌ಡೌನ್ ಅವಧಿ ಕೂಡ ಸೇರಿದೆ) ಬೆಲೆ ಏರಿಕೆಯ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ಬಂದರೆ ಬೆಲೆ ಇಳಿಕೆಯಾಗುತ್ತದೆ ಎಂಬ ಸುಳ್ಳು ಅಭಿಪ್ರಾಯವನ್ನು ತೇಲಿ ಬಿಟ್ಟಿದೆ. ಅಂದರೆ ಅದರ ಅರ್ಥ ಮೊದಲು ಜಿ.ಎಸ್.ಟಿಯನ್ನು ಜಾರಿಗೆ ತಂದು ಆನಂತರ ತೈಲ ಉತ್ಪಾದನೆ ಮತ್ತು ಮಾರಾಟವನ್ನು ಅಂಬಾನಿ ಮುಂತಾದವರಿಗೆ ನೀಡುವ ಹುನ್ನಾರ ಇದರ ಹಿಂದೆ ಇದೆ.ಈ ಹಿಂದೆ ಜಿ.ಎಸ್.ಟಿ. ತಂದಾಗಲೂ ಬಹುಶ: ಇದೇ ಶಕ್ತಿಗಳು ಪ್ರಭಾವಿಸಿದ್ದವು ಎಂದು ಕಾಣುತ್ತದೆ. ಅದರಿಂದಾಗಿಯೆ ಜಿ.ಎಸ್.ಟಿ. ಮೂಲಕ ಪರೋಕ್ಷ ತೆರಿಗೆಯನ್ನು ಹೆಚ್ಚಿಸಿ ಆದಾಯ ತೆರಿಗೆ ಮತ್ತು ಕಾರ್ಪೋರೇಟ್ ತೆರಿಗೆಗಳನ್ನು ಕಡಿಮೆ ಮಾಡಿ ಸಂಪತ್ತಿನ ಮೇಲಿನ ತೆರಿಗೆಯನ್ನು ನಿಲ್ಲಿಸಿ ಅವರಿಗೆ ಅನುಕೂಲ ಮಾಡಿಕೊಟ್ಟಿರುವುದು. ಈ ವಿಚಾರ ಇಂದು ಗುಟ್ಟಾಗಿ ಏನು ಉಳಿದಿಲ್ಲ. ಜಿ.ಎಸ್.ಟಿ. ವ್ಯಾಪ್ತಿಗೆ ತೈಲ ದರವು ಸೇರಿ ಬಿಟ್ಟರೆ ರಾಜ್ಯಗಳು ಕೈಯಲಿ್ಲ ಚಿಪ್ಪು ಹಿಡಿದು ಭಿಕ್ಷೆ ಬೇಡ ಬೇಕಾದ ಸ್ಥಿತಿ ಬರುತ್ತದೆ. ಜಿ.ಎಸ್.ಟಿ. ತಂದಿದ್ದರಿಂದ ಈಗಾಗಲೇ ನಾವು ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿ ಬಿಟ್ಟಿದ್ದೇವೆ. ನಮ್ಮಿಂದ ಸಂಗ್ರಹವಾದ ತೆರಿಗೆಯ ಶೇ.6 ರಿಂದ ಶೇ.7 ರಷ್ಟು ಮಾತ್ರ ನಮಗೆ ವಾಪಸ್ಸು ನೀಡುತ್ತಿದ್ದಾರೆ. ಪರಿಸ್ಥಿತಿ ಉತ್ತಮವಾಗಿದ್ದಾಗ ಶೇ.10 ರಿಂದ ಶೇ.12 ರಷ್ಟು ಮಾತ್ರ ತೆರಿಗೆ ಹಂಚಿಕೆಯಾಗುತ್ತಿದೆ.ಹೀಗಿರುವಾಗ ಇಂಧನದ ಮೇಲಿನ ತೆರಿಗೆಯನ್ನು ಜಿ.ಎಸ್.ಟಿ ವ್ಯಾಪ್ತಿಗೆ ತಂದು ಬಿಟ್ಟರೆ ರಾಜ್ಯಗಳು ಜನರಿಗೆ ಕುಡಿಯುವ, ನೀರು, ರಸ್ತೆ ವಿದ್ಯುತ್ ಇತ್ಯಾದಿಗಳನ್ನು ನಿಭಾಯಿಸಲಾಗದ ಸ್ಥಿತಿಗೆ ಬಂದು ಬಿಡುತ್ತವೆ.  ಕೆಲ ಪತ್ರಿಕೆಗಳು ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಕುಟುಂಬಕ್ಕೆ ಕಳೆದ ವರ್ಷ ಪ್ರತಿ ತಿಂಗಳಿಗೆ ಬರುತ್ತಿದ್ದ ಖರ್ಚಿಗೆ ಹೋಲಿಸಿದರೆ ಈ ವರ್ಷ 4 ಜನರಿರುವ ಒಂದು ಕುಟುಂಬಕ್ಕೆ ರೂ.4,000/- ಹೆಚ್ಚು ಖರ್ಚು ಬರುತ್ತಿದೆಯಂತೆ. ಅಂದರೆ ಈ ಹಿಂದೆ ಸಾಮಾನ್ಯವಾಗಿ ರೂ.4,000/- ಗಳ ಖರ್ಚು ಬರುತ್ತಿದ್ದರೆ, ಬೆಲೆ ಏರಿಕೆಯಿಂದ ರೂ.4,000 + ರೂ.4,000/- = ರೂ.8,000/- ಖರ್ಚು ಬರುತ್ತಿದೆ ಎಂದರ್ಥ

 ಬೆಲೆಗಳು ಸದ್ಯಕ್ಕೆ ಕಡಿಮೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ತೊಗರಿ ಬೇಳೆ ರೂ.80/- ರಿಂದ ರೂ.85/- ಇತ್ತು.ಈಗ 125 ರಿಂದ 130 ರೂ ಗಳಾಗಿವೆ.ಕಳೆದ ಮುಂಗಾರಿನಲ್ಲಿ ಇಡೀ ದೇಶದ ಉದ್ದಗಲಕ್ಕೂ  ಮಳೆ ಚೆನ್ನಾಗಿದ್ದ ಕಾರಣ ಉತ್ತಮ ಬೆಳೆಯೂ ಬಂದಿದೆ.  ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.16 ರಷ್ಟು ತೊಗರಿ ಉತ್ಪಾದನೆ ಹೆಚ್ಚಾಗಿದೆ. ಆದರೂ ಬೆಲೆ ಮಾತ್ರ ಅಸಹಜವಾಗಿ ಏರಿಕೆಯಾಗಿದೆ. ಇದೇ ರೀತಿ ಮುಂದುವರಿದರೆ  ತೊಗರಿ ಬೇಳಡೆಯ ಬೆಲೆ 150-160 ರೂಗಳಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ.  ದೇಶದಲ್ಲಿ ಸುಮಾರು 50 ಮಿಲಿಯನ್ ಟನ್‌ಗಳಷ್ಟುತೊಗರಿ ಬೇಳೆಯ ಬಳಕೆಯಿದೆ. ಒಂದು ಕೆ.ಜಿ.ಯ ಮೇಲೆ ರೂ.30/- ಗಳಷ್ಟು ಬೆಲೆ ಜಾಸ್ತಿಯಾದರೂ ಸುಮಾರು ರೂ.1.50 ಲಕ್ಷ ಕೋಟಿಗಳಷ್ಟು ಹಣ ಜನರ ಜೇಬಿನಿಂದ ಕಾರ್ಪೋರೇಟ್ ಕಂಪೆನಿಗಳ ಜೇಬಿಗೆ ಹೋಗುತ್ತದೆ. 2015-16 ರಲ್ಲಿ ಸಹ ಬೆಳೆ ಉತ್ತಮವಾಗಿದ್ದರೂ ತೊಗರಿ ಬೇಳೆಯ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಾಗಿತ್ತು. ಆಗ ಆದಾಯ ತೆರಿಗೆ ಇಲಾಖೆಯವರು ಅದಾನಿ, ಜಿಂದಾಲ್, ವಿಲ್‌ಮಾರ್ ಮುಂತಾದ ಕಂಪೆನಿಗಳ ಮೇಲೆ ದಾಳಿ ಮಾಡಿ ಸುಮಾರು 75,000 ಟನ್‌ಗಳಷ್ಟು ಅಕ್ರಮ ದಾಸ್ತಾನು ಮಾಡಿದ್ದ ತೊಗರಿ ಬೇಳೆಯನ್ನು ವಶಪಡಿಸಿಕೊಂಡಿದ್ದರು. ಅಗತ್ಯ ವಸ್ತುಗಳ ಕಾಯ್ದೆ ಇದ್ದ ಕಾರಣಕ್ಕೆ ಹೀಗೆ ದಾಳಿ ಮಾಡಲು ಸಾಧ್ಯವಾಯಿತು. ಅಕ್ರಮ ದಾಸ್ತಾನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಯಿತು. ಅದರಿಂದ ಬೆಲೆಗಳು ಕಡಿಮೆಯಾದವು. ಇದನ್ನು ಮನಗಂಡ ಮೋದಿ ಸರ್ಕಾರವು ಅದಾನಿ ಮುಂತಾದವರಿಗೆ ಅನುಕೂಲ ಮಾಡಿಕೊಡಲು ಈ ಕಾಯ್ದೆಯನ್ನೆ ತಿದ್ದುಪಡಿ ಮಾಡಿ ಯಾರು ಎಷ್ಟು ಬೇಕಾದರೂ ದಾಸ್ತಾನು ಮಾಡಬಹುದು ಎಂದು ಮಾಡಿದ್ದಾರೆ. ಹಾಗಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ ಇಂಧನಗಳಮೇಲಿನ ದರವು ಹೆಚ್ಚಾಗುತ್ತಿದೆ. ಈ ವರ್ಷ ಎಣ್ಣೆ ಕಾಳುಗಳು ಹಾಗೂ ಧಾನ್ಯಗಳ ಉತ್ಪಾದನೆ ಸಹ ಉತ್ತಮವಾಗಿಯೇ ಇದೆ. ಆದರೆ ಬೆಲೆ ಮಾತ್ರ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇತ್ತ ರೈತರಿಗೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ದೇಶದ ಜನರಿಗೆ ಎಲ್ಲ ಕಡೆಯಿಂದಲೂ ಬೆಂಕಿ ಹೊತ್ತಿಕೊಂಡಿದೆ. ಅದೇ ರೀತಿ ಕಳೆದ ವರ್ಷ 90 ರೂ ಗಳಿದ್ದ ಹೆಸರು ಕಾಳು ಈಗ 140 ರೂಗಳಾಗಿವೆ. ಅಡುಗೆ ಎಣ್ಣೆ 85 ರೂ ಗಳಿದ್ದದ್ದು 165-170 ರೂಪಾಯಿಗಳಿಗೆ ಏರಿಕೆಯಾಗಿದೆ. ಈ ಎಲ್ಲದರ ಪರಿಣಾಮವಾಗಿ ಹೋಟೆಲ್ ಗಳಲ್ಲಿ ಕಾಫಿ, ಟೀ, ಊಟ, ತಿಂಡಿಗಳ ಬೆಲೆ ಶೇ. 40 ರವರೆಗೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರಗಳ ದುರಾಡಳಿತದಿಂದಾಗಿ ಜನ ಸೋತು ಹೋಗಿದ್ದಾರೆ. ಹಿಂದೆ ಜನಪದರು ಹಾಡುತ್ತಿದ್ದರು  ಬಡವರು ಸತ್ತರೆ ಸುಡಲಿಕ್ಕೆ ಸೌದೆ ಇಲ್ಲ, ದೇವರೆ ಬಡವರಿಗೆ ಸಾವ ಕೊಡಬ್ಯಾಡ ಅಂತ. ಈಗಲೂ ಅಂತದೇ ಪರಿಸ್ಥಿತಿಯತ್ತ ದೇಶವನ್ನು ಕೊಂಡೊಯ್ಯಲಾಗುತ್ತಿದೆ.

 ಆದರೆ ಬೆಲೆ ಏರಿಕೆ, ಕೊರೋನಾ ಇವುಗಳು ದೇಶವನ್ನು ಭೀಕರವಾಗಿ ಬಾಧಿಸುತ್ತಿರುವ ಸಂದರ್ಭದಲ್ಲೆ ಕಾರ್ಪೋರೇಟ್ ಕಂಪೆನಿಗಳ ಸಂಪತ್ತು ಸುಮಾರು ರೂ.12 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಮೋದಿಯವರು ಜನಪರವಾಗಿದ್ದರೆ ಈ ಹೆಚ್ಚಾದ ರೂ.12 ಲಕ್ಷ ಕೋಟಿಗಳ ಮೇಲೆ ಶೇ.5 ರಷ್ಟು ತೆರಿಗೆ ಹಾಕಿದ್ದರೆ ದೇಶಕ್ಕೆ ರೂ.60,000 ಕೋಟಿ ಆದಾಯ ಬರುತ್ತಿತ್ತು. ದೇಶದ ಬಂಡವಾಳಿಗರ ಮೇಲೆ ಶೇ.5 ರಷ್ಟು ತೆರಿಗೆ ವಿಧಿಸಿದ್ದರೆ ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್‌ಗಳನ್ನು ಈಗ ಮಾರುತ್ತಿರುವ ದರಗಳ ಅರ್ಧ ದರದಲ್ಲಿ ನೀಡಬಹುದಿತ್ತು. ಆದರೆ ಬಿ.ಜೆ.ಪಿ. ಸರ್ಕಾರಗಳು ಬಡವರ ಮೇಲಿನ ತೆರಿಗೆಯನ್ನು ಹೆಚ್ಚಿಸುತ್ತಿವೆ. ಕಾರ್ಪೋರೇಟ್ ಕುಳಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತಿವೆ. ಇದೆಲ್ಲವೂ ಸೇರಿ ಜನರ ಸಾಮಾನ್ಯರ ಬದುಕು ನರಕ ಸದೃಶವಾಗುತ್ತಿದೆ.ಸುಗ್ಗಿಯ ಸಂದರ್ಭದಲ್ಲೇ ಜನರು ಅಡುಗೆ ಎಣ್ಣೆ, ತೊಗರಿಬೇಳೆಯನ್ನು ಕೊಂಡು ತಿನ್ನಲಾಗದಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಭೀಕರವಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)