varthabharthi


ವಿಶೇಷ-ವರದಿಗಳು

► ಪ್ರಯಾಣಿಕರಿಗೆ ಜಿಎಸ್‌ಟಿ, ಟೋಲ್ ಶುಲ್ಕದ ಹೊರೆ ► ಇಂಧನ, ವಾಹನ ಬಿಡಿಭಾಗಗಳ ದರ ಹೆಚ್ಚಳ

ವಾಹನ ಉದ್ಯಮದ ಚೇತರಿಕೆಗಾಗಿ ಪ್ರಯಾಣಿಕರಿಗೆ ಬರೆ: ಪ್ರಯಾಣ ದರ ಏರಿಕೆ ಭೀತಿ, ಶ್ರೀಸಾಮಾನ್ಯನ ಜೇಬಿಗೆ ಬೀಳಲಿದೆ ಕತ್ತರಿ

ವಾರ್ತಾ ಭಾರತಿ : 7 Apr, 2021
ರಹಿಮಾನ್ ತಲಪಾಡಿ

ಮಂಗಳೂರು: ಕೊರೋನ, ಲಾಕ್‌ಡೌನ್, ಇಂಧನಗಳ ದರ ಏರಿಕೆ, ವಾಹನ ಬಿಡಿಭಾಗಗಳ ದರ ಹೆಚ್ಚಳ, ನಿರ್ವಹಣೆ ದುಬಾರಿ ಸೇರಿದಂತೆ ವಿವಿಧ ಕಾರಣಗಳಿಂದ ವಾಹನ ಚಾಲಕರು ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ನಡುವೆ ಕೊರೋನ ಎರಡನೇ ಅಲೆ ಎದುರಾಗಿದ್ದು, ಜನಸಾಮಾನ್ಯರ ಜೀವನದ ಮೇಲೆ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಲಿದೆ. ಕೊರೋನ ಸಂಕಷ್ಟದಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ವಾಹನ ಚಾಲಕರು, ಮಾಲಕರು ಚೇತರಿಕೆಗಾಗಿ ಮತ್ತೊಮ್ಮೆ ಪ್ರಯಾಣ ದರ ಏರಿಕೆಗೆ ಪ್ರಸ್ತಾವ ಸಲ್ಲಿಸಿದ್ದು, ಇದರಿಂದ ಗ್ರಾಹಕರಿಗೆ ಬರೆ ಮೇಲೆ ಬರೆ ಎಳೆದಂತಾಗಿದೆ.

 ತೈಲ ಬೆಲೆ ಏರಿಕೆಯಿಂದಾಗಿ ಸರಕಾರಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿ ಬಸ್, ಆಟೊ, ಟ್ಯಾಕ್ಸಿ, ಕೆಎಸ್‌ಟಿಡಿಸಿ ಟ್ಯಾಕ್ಸಿ, ಮಿನಿ ವ್ಯಾನ್-ಬಸ್‌ಗಳ ಪ್ರಯಾಣದರವನ್ನು ಹಿಂದಿನ ದರಕ್ಕಿಂತ ಶೇ.5ರಿಂದ 10ರಷ್ಟು ಹೆಚ್ಚಳ ಮಾಡಲಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ವಾಹನ ಚಾಲಕರ ಆದಾಯದ ಮೇಲೆ ನೇರ ಪರಿಣಾಮ ಬೀರಿದೆ. ಇದನ್ನು ಸರಿದೂಗಿಸಲು ಪ್ರಯಾಣ ಹೆಚ್ಚಳಕ್ಕೆ ಅನುಮತಿ ಕೋರಿ ವಿವಿಧ ವಾಹನ ಚಾಲಕರ ಸಂಘಗಳು ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿವೆ.

ಸಾರಿಗೆ ಬಸ್‌ಗಳಿಗೆ ಕೊಟ್ಯಂತರ ರೂ. ನಷ್ಟ:

ರಾಜ್ಯದಾದ್ಯಂತ ಪ್ರತಿದಿನ ಸಾವಿರಾರು ಬಸ್‌ಗಳು ಕಾರ್ಯಾಚರಿಸುತ್ತಿದ್ದರೂ ಕೋರೋನ ಸಂಕಷ್ಟ ಹಾಗೂ ಪ್ರಯಾಣಿಕರ ಕೊರತೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ 4 ಸಾವಿರ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದ್ದು, ಇದರಿಂದ ಅಧಿಕಾರಿ, ಸಿಬ್ಬಂದಿಗೆವೇತನ ನೀಡಲು, ಇಂಧನ, ಬಿಡಿಭಾಗಗಳ ಪೂರೈಕೆದಾರರಿಗೆ ಬಿಲ್ ಪಾವತಿಸಲು ಸಾರಿಗೆ ಇಲಾಖೆ ಪರದಾಡುತ್ತಿದೆ.

ಸಾರಿಗೆ ಪ್ರಯಾಣದರ, ಸಿಬ್ಬಂದಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಪ್ರಯಾಣದರ ಹೆಚ್ಚಿಸುವ ಪ್ರಸ್ತಾವವೂ ಸರಕಾರದ ಮುಂದಿದೆ.

ಕ್ಯಾಬ್‌ಗಳ ದರ ಮತ್ತಷ್ಟು ದುಬಾರಿ: ಮೂರು ವರ್ಷದ ಬಳಿಕ ಟ್ಯಾಕ್ಸಿ ದರ ಪರಿಷ್ಕರಿಸಿದ್ದು, ಅಗ್ರಿಗೇಟರ್ ನಿಯಮದಡಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ (ಓಲಾ, ಉಬರ್, ಸಿಟಿ ಟ್ಯಾಕ್ಸಿ, ಕೆಎಸ್‌ಟಿಡಿಸಿ ಟ್ಯಾಕ್ಸಿ ಇತ್ಯಾದಿ) ಈ ಪರಿಷ್ಕೃತ ಏಕರೂಪದ ದರ ಅನ್ವಯವಾಗಲಿದೆ. ಪರಿಷ್ಕೃತ ಪ್ರಯಾಣ ದರದ ಅನ್ವಯ ಮೊದಲ 4 ಕಿ.ಮೀ.ಗೆ ಕನಿಷ್ಠ 31 ರೂ. ಹಾಗೂ ಗರಿಷ್ಠ 70 ರೂ. ಹೆಚ್ಚಳವಾಗಿದೆ. ನಂತರದ ಪ್ರತಿ ಕಿ.ಮೀ.ಗೆ ಕನಿಷ್ಠ ದರ 7 ರೂ. ಹಾಗೂ ಗರಿಷ್ಠ ದರ 9 ರೂ. ಏರಿಕೆಯಾಗಿದೆ. ಹೊಸ ಪರಿಷ್ಕೃತ ದರ ಜಾರಿಯಲ್ಲಿದೆ.

ಆಟೊ ಪ್ರಯಾಣ ದರ ಮತ್ತೆ ಏರಿಕೆ ಸಾಧ್ಯತೆ:

ರಾಜ್ಯ ಸರಕಾರ ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಿಸಿದ ಬೆನ್ನಲ್ಲೇ ಶೀಘ್ರದಲ್ಲಿ ಆಟೊ ಪ್ರಯಾಣ ದರವನ್ನೂ ಪರಿಷ್ಕರಿಸುವ ಸಾಧ್ಯತೆಯಿದೆ. 2013ರಲ್ಲಿ ಕಡೆಯದಾಗಿ ಆಟೊ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಇಂಧನ, ಆಟೊ ಎಲ್‌ಪಿಜಿ ದರ ಏರಿಕೆಯಿಂದ ತತ್ತರಿಸಿರುವ ಆಟೊ ಚಾಲಕರು, ಪ್ರಯಾಣ ದರ ಪರಿಷ್ಕರಿಸುವಂತೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದಾರೆ. ಪ್ರಸ್ತುತ ಆಟೊ ಪ್ರಯಾಣ ದರ ಆರಂಭದ ಮೊದಲ 1.9 ಕಿ.ಮೀ.ಗೆ 25 ರೂ. ಹಾಗೂನಂತರದ ಪ್ರತಿ ಕಿ.ಮೀ.ಗೆ 13 ರೂ. ಪ್ರಯಾಣ ದರವಿದೆ. ಇದನ್ನು ಮೊದಲ ಎರಡು ಕಿ.ಮೀ.ಗೆ 36 ರೂ. ಹಾಗೂ ನಂತರದ ಪ್ರತಿ ಕಿ.ಮೀ.ಗೆ 15 ರೂ.ಗೆ ಹೆಚ್ಚಳಕ್ಕೆ ಆಟೊ ಚಾಲಕರ ಸಂಘಟನೆಗಳು ಸರಕಾರಕ್ಕೆ ಮನವಿ ಮಾಡಿವೆ.

ಆದರೆ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಆಟೊಗಳ ಪ್ರಯಾಣದರ 30 ರೂ. ಚಾಲ್ತಿಯಲ್ಲಿದೆ. ಈ ಜಿಲ್ಲೆಗಳ ಪ್ರಸ್ತುತದರವನ್ನು 35-40ಕ್ಕೆ ಹೆಚ್ಚಿಸುವಂತೆ ಆಟೊ ಚಾಲಕರು ಒತ್ತಾಯಿಸುತ್ತಿದ್ದು, ಶೀಘ್ರದಲ್ಲೇ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

ಹೊಸ ಅಧಿಸೂಚನೆ ಪ್ರಕಾರ ಕ್ಯಾಬ್‌ಗಳ ಮೌಲ್ಯದ ಆಧಾರದ ವಾಹನಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. 16 ಲಕ್ಷಕ್ಕೂ ಮೇಲ್ಪಟ್ಟ ವಾಹನಗಳನ್ನು ಎ, 10 ಲಕ್ಷಕ್ಕೂ ಮೇಲ್ಪಟ್ಟ ವಾಹನಗಳನ್ನು ಬಿ, 5 ಲಕ್ಷಕ್ಕೂ ಮೇಲ್ಪಟ್ಟ ವಾಹನಗಳನ್ನು ಸಿ ಹಾಗೂ 5ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳನ್ನು ಡಿ ವರ್ಗದ ವಾಹನಗಳಾಗಿ ವಿಂಗಡಿಸಲಾಗಿದೆ. ಅವುಗಳ ಹಿಂದಿನ ಟ್ಯಾಕ್ಸಿ ದರ ಹಾಗೂ ಪರಿಷ್ಕೃತ ದರ ಈ ಕೆಳಗಿನಂತಿವೆ.

ವಾಹನ ಹಳೆದರ ಪರಿಷ್ಕೃತ ದರ

ಖಾಸಗಿ ಬಸ್ 10 ರೂ., 15-20 ರೂ.

ಆಟೊ 25ರೂ., 30-40 ರೂ.,

ಪ್ರಯಾಣಿಕರಿಗೆ ಜಿಎಸ್‌ಟಿ, ಟೋಲ್ ಶುಲ್ಕದ ಹೊರೆ

ಟ್ಯಾಕ್ಸಿ ಚಾಲಕರು ಸರಕಾರ ನಿಗದಿಗೊಳಿಸಿರುವ ಪ್ರಯಾಣ ದರ ಮಾತ್ರ ಪಡೆಯಬೇಕು. ಜಿಎಸ್‌ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಿ.ಮೀ. ಆಧಾರದಲ್ಲಿ ನಿಗದಿಗೊಳಿಸಿರುವ ಪ್ರಯಾಣ ದರ ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪಡೆಯುವಂತಿಲ್ಲ ಎಂದು ಸರಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಕಾಯುವಿಕೆ ದರ ಮೊದಲಿನ 20 ನಿಮಿಷದ (ಪ್ರಸ್ತುತ 15 ನಿಮಿಷ) ವರೆಗೆ ಉಚಿತ, ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ನಿಗದಿಪಡಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಸಮಯಕ್ಕೆ ಬಾರದ ಬಸ್, ಆಟೊಗಳ ಮೊರೆ

ಕೋವಿಡ್‌ನಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬಸ್‌ಗಳ ಸೇವೆ ಅಪರೂಪ. ಮುಖ್ಯ ರಸ್ತೆಗಳು ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಕಡೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್ ಸೇವೆ ಆರಂಭಗೊಂಡಿಲ್ಲ. ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದ ಹಿನ್ನೆಲೆ ಯಲ್ಲಿ ರಸ್ತೆ ಬದಿಯಲ್ಲಿ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ಆಟೊಗಳಿಗೆ 30 ರೂ. ಕೊಟ್ಟು ನಗರ ಪ್ರದೇಶಗಳಿಗೆ ಹೋಗಬೇಕಾ ಗುತ್ತದೆ ಎಂದು ಪ್ರಯಾಣಿಕರು ದೂರಿದ್ದಾರೆ.

ತೆಲ ಹಾಗೂ ಗ್ಯಾಸ್‌ನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ಮೊದಲು ಲೀ.30 ರೂ.ವಿದ್ದ ಆಟೊ ಗ್ಯಾಸ್‌ಗೆ ಈಗ 50 ರೂ. ಆಗಿದೆ. ಆದರೆ, ಲಾಕ್‌ಡೌನ್ ನಂತರದ ದಿನಗಳಲ್ಲಿಯೂ ಪ್ರಯಾಣದರಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. ದಿನದ ಖರ್ಚು ಕಳೆದು 300 ಉಳಿಯುತ್ತಿತ್ತು. ಈಗ ಅದೂ ಸಾಧ್ಯವಾಗುತ್ತಿಲ್ಲ. ಹೊಟ್ಟೆಪಾಡಿಗಾಗಿ ದಿನದೂಡುತ್ತಿದ್ದೇವೆ.

-ಅರ್ಷದ್, ಆಟೊ ಚಾಲಕರ ಯೂನಿಯನ್ ಅಧ್ಯಕ್ಷ (ಎಸ್ಡಿಟಿಯು)

ಕೊರೋನ ಲಾಕ್‌ಡೌನ್‌ನಿಂದಾಗಿ ರಾಜ್ಯದಾದ್ಯಂತ ಪ್ರವಾಸಿಗರ ದಂಡು ಕಡಿಮೆಯಾಗಿದೆ. ಇದರಿಂದ ಟ್ಯಾಕ್ಸಿ ಚಾಲಕರ ಸಂಕಷ್ಟ ಹೇಳತೀರದು. ಪ್ರಯಾಣಿಕರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿದರೆ ಅಲ್ಲಲ್ಲಿ ಟೋಲ್‌ಗೇಟ್‌ಗಳ ಹಾವಳಿ. ಇದರಿಂದ ಸುಮಾರು 2 ಸಾವಿರ ರೂ. ಟೋಲ್ ನೀಡಬೇಕಾಗುತ್ತದೆ.ಸ್ವಂತ ಟ್ಯಾಕ್ಸಿಯಿದ್ದರೆ ಅಲ್ಪಸ್ವಲ್ಪಉಳಿತಾಯ ವಾಗಬಹುದು. ನಮ್ಮಂತವರಿಗೆ ದಿನವಿಡಿ ದುಡಿದಊ ಉಳಿತಾಯ ಆಗುವುದಿಲ್ಲ. ಇನ್ನೂ ಬಾಡಿಗೆ ವಾಹನ ಚಾಲಕರ ಪರಿಸ್ಥಿತಿ ಶೋಚನೀಯ. ಮನೆ ಬಾಡಿಗೆ, ಇತರ ಖರ್ಚು, ಬ್ಯಾಂಕ್ ಇಎಂಐ-ಬಡ್ಡಿ, ಮಾಲಕರ ಕಂತು ಕೂಡ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಟ್ಯಾಕ್ಸಿ ಚಾಲಕರು ತಮ್ಮ ಕಾರುಗಳನ್ನು ಮಾರಾಟ ಮಾಡಿದರೆ, ಇನ್ನು ಕೆಲವರ ವಾಹನಗಳು ಬ್ಯಾಂಕ್, ಫೈನಾನ್ಸ್‌ಗಳ ಪಾಲಾಗಿವೆ.

-ಪ್ರಭಾಕರ್ ದೈವಗುಡ್ಡೆ,

ಟೂರಿಸ್ಟ್ ಕಾರು/ವ್ಯಾನ್ ಚಾಲಕರ ಸಂಘದ ದ.ಕ. ಜಿಲ್ಲಾಧ್ಯಕ್ಷ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)