varthabharthi


ಆರೋಗ್ಯ

ಖಾಲಿಹೊಟ್ಟೆಯಲ್ಲೆಂದೂ ಮಲಗಬೇಡಿ, ಅದು ಆರೋಗ್ಯಕ್ಕೆ ಅಪಾಯಕರ

ವಾರ್ತಾ ಭಾರತಿ : 7 Apr, 2021
ಚಂಚಲ್ ಸೆಂಗಾರ್

ಬ್ರೇಕ್‌ಫಾಸ್ಟ್, ಮಧ್ಯಾಹ್ನದೂಟ ಅಥವಾ ರಾತ್ರಿಯ ಊಟವಾಗಿರಲಿ, ಪ್ರತಿಯೊಬ್ಬರೂ ದಿನದ ಆಹಾರವನ್ನು ಸರಿಯಾಗಿ ಸೇವಿಸಬೇಕು. ಯಾವುದೇ ಊಟವನ್ನು ತಪ್ಪಿಸಿದರೂ ಅದು ನಿಮ್ಮ ಚಯಾಪಚಯ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ? ಕಡಿಮೆ ಆಹಾರ ಸೇವನೆಯು ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಎಂದು ಹಲವರು ಭಾವಿಸಿರುತ್ತಾರೆ,ಆದರೆ ಇದು ಕೇವಲ ಮಿಥ್ಯೆಯಾಗಿದೆ. ಬದಲಿಗೆ ಆಹಾರ ಸೇವನೆಯನ್ನು ತಪ್ಪಿಸಿಕೊಳ್ಳುವುದು ತೂಕವನ್ನು ಹೆಚ್ಚಿಸುತ್ತದೆ. ಅಲ್ಲದೆ ಆಹಾರ ಸೇವನೆಯನ್ನು,ವಿಶೇಷವಾಗಿ ರಾತ್ರಿ ಊಟವನ್ನು ತಪ್ಪಿಸುವುದು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ರಾತ್ರಿ ಖಾಲಿಹೊಟ್ಟೆಯಲ್ಲಿ ಮಲಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿಗಳು ಇಲ್ಲಿವೆ....

► ತೂಕ ಏರಿಕೆ

ಹೆಚ್ಚು ಆಹಾರವನ್ನು ಸೇವಿಸದಿದ್ದರೆ ತೂಕ ಕಡಿಮೆಯಾಗುತ್ತದೆ ಎನ್ನುವ ಭಾವನೆ ಹಲವರಲ್ಲಿದೆ,ಇದನ್ನು ಅವರು ಡಯಟಿಂಗ್ ಎಂದು ಕರೆಯುತ್ತಾರೆ. ಆದರೆ ಇದು ತಪ್ಪು,ಏಕೆಂದರೆ ಡಯಟಿಂಗ್ ಎಂದರೆ ಆಹಾರವನ್ನು ಸೇವನೆಯನ್ನು ತಪ್ಪಿಸುವುದಲ್ಲ,ಆದರೆ ಸರಿಯಾದ ಆಹಾರವನ್ನು ಸೇವಿಸಬೇಕು ಎನ್ನುವುದು ಅದರ ಅರ್ಥ. ಖಾಲಿಹೊಟ್ಟೆಯಲ್ಲಿ ಮಲಗಿದರೆ ನಿಮ್ಮ ಬೊಜ್ಜು ಇನ್ನಷ್ಟು ಹೆಚ್ಚಬಹುದು ಎಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ವಾಸ್ತವದಲ್ಲಿ ತುಂಬಾ ಹೊತ್ತು ಹಸಿದಿರುವುದರಿಂದ ಶರೀರದ ಚಯಾಪಚಯವು ಅತಿಯಾಗಿ ಕುಸಿಯುತ್ತದೆ. ಇದು ನಿಮ್ಮ ಶರೀರವು ಅತ್ಯಂತ ಸ್ವಲ್ಪ ಪ್ರಮಾಣದಲ್ಲಿ ಕೊಬ್ಬನ್ನು ಕರಗಿಸುವಂತೆ ಮಾಡುತ್ತದೆ. ಅಲ್ಲದೆ ಹೆಚ್ಚಿನವರು ಸುದೀರ್ಘ ವಿರಾಮದ ಬಳಿಕ ಆಹಾರವನ್ನು ಸೇವಿಸುತ್ತಾರೆ ಮತ್ತು ಅತಿಯಾಗಿ ತಿನ್ನುತ್ತಾರೆ. ಇದು ಶರೀರದ ತೂಕವನ್ನು ಹೆಚ್ಚಿಸುತ್ತದೆ ಅಷ್ಟೇ.

► ಹೆಚ್ಚಿನ ಒತ್ತಡ

ರಾತ್ರಿ ಖಾಲಿಹೊಟ್ಟೆಯಲ್ಲಿ ಮಲಗುವುದರಿಂದ ಮಿದುಳಿನ ಮೇಲಿನ ಒತ್ತಡವು ಹೆಚ್ಚುತ್ತದೆ. ಇದರಿಂದಾಗಿ ನಿದ್ರಾರಹಿತ ರಾತ್ರಿಗಳನ್ನೂ ಕಳೆಯಬೇಕಾಗಬಹುದು. ಸಾಮಾನ್ಯ ಮನುಷ್ಯನಿಗೆ ದಿನಕ್ಕೆ 7ರಿಂದ 9 ಗಂಟೆಗಳ ನಿದ್ರೆಯು ಅಗತ್ಯವಾಗಿದೆ. ಶರೀರದಲ್ಲಿ ಗ್ಲುಕೋಸ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದಾಗ ಮಿದುಳು ಒತ್ತಡದ ಹಾರ್ಮೋನ್‌ಗಳನ್ನು ಬಿಡುಗಡೆಗೊಳಿಸಲು ಆರಂಭಿಸುತ್ತದೆ ಮತ್ತು ಇದು ನಿದ್ರೆಯ ಮಂಪರನ್ನುಂಟು ಮಾಡುತ್ತದೆ.

► ಮೂಡ್ ಬದಲಾವಣೆ

ಮೂಡ್ ಬದಲಾವಣೆಯನ್ನು ಸರಳವಾದ ಭಾಷೆಯಲ್ಲಿ ಕೆರಳುವಿಕೆ ಎನ್ನಬಹುದು. ಅಂದರೆ ಮನಃಸ್ಥಿತಿ ಒಮ್ಮೆ ಸಹಜವಾಗಿರುತ್ತದೆ ಮತ್ತು ಮುಂದಿನ ಕ್ಷಣದಲ್ಲಿಯೇ ಸಣ್ಣ ಮಾತಿನಿಂದಲೂ ತುಂಬ ಸಿಟ್ಟು ಬರುತ್ತದೆ. ಹೆಚ್ಚಾಗಿ ಹಸಿದ ಹೊಟ್ಟೆಯು ಜನರಲ್ಲಿ ಈ ಸಮಸ್ಯೆಗೆ ಕಾರಣವಾಗುತ್ತದೆ. ವಾಸ್ತವದಲ್ಲಿ ನಮ್ಮ ಮನಃಸ್ಥಿತಿ ಸಮತೋಲನದಲ್ಲಿರಲು ಕಾರ್ಬೊಹೈಡ್ರೇಟ್‌ಗಳು ಅಗತ್ಯವಾಗಿವೆ. ಕಾರ್ಬೊಹೈಡ್ರೇಟ್‌ಗಳು ಶರೀರವನ್ನು ಸೇರಿದಾಗ ಸಂತೋಷದ ಹಾರ್ಮೋನ್‌ಗಳು ಬಿಡುಗಡೆಗೊಳ್ಳುತ್ತವೆ. ಆದರೆ ಖಾಲಿಹೊಟ್ಟೆಯಲ್ಲಿ ಮಲಗಿದರೆ ಮೂಡ್ ಬದಲಾವಣೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

► ಬೊಜ್ಜು

ಬೊಜ್ಜನ್ನು ಇಳಿಸಿಕೊಳ್ಳಲೆಂದು ನೀವು ರಾತ್ರಿಯ ಊಟವನ್ನು ತಪ್ಪಿಸಿಕೊಳ್ಳುತ್ತಿದ್ದರೆ ಆ ತಪ್ಪನ್ನು ಮಾಡಬೇಡಿ,ಬದಲಿಗೆ ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ಗಮನ ಹರಿಸಿ.

ಪ್ರೋಟಿನ್ ಮತ್ತು ವಿಟಾಮಿನ್‌ಗಳನ್ನು ಒಳಗೊಂಡ ಸಂಪೂರ್ಣ ಬ್ರೇಕ್‌ಫಾಸ್ಟ್ ಅನ್ನು ಸೇವಿಸಿ. ತರಕಾರಿ ಉಪ್ಪಿಟ್ಟು,ಆಮ್ಲೆಟ್‌ನಿಂದ ಹಿಡಿದು ಚಿಕನ್ ಸ್ಯಾಂಡ್‌ವಿಚ್‌ ವರೆಗೆ ಹಲವಾರು ಬ್ರೇಕ್‌ಫಾಸ್ಟ್ ಆಯ್ಕೆಗಳಿವೆ.

ಮಧ್ಯಾಹ್ನದ ಊಟದಲ್ಲಿ ಕಡಿಮೆ ಕಾರ್ಬೊಹೈಡ್ರೇಟ್‌ಗಳು ಹಾಗೂ ಹೆಚ್ಚು ಪ್ರೋಟಿನ್,ಬೇಳೆಗಳು,ಸಲಾಡ್,ಬಹುಧಾನ್ಯಗಳ ಹಿಟ್ಟಿನ ಚಪಾತಿ,ಕುಚ್ಚಿಗೆ ಅಕ್ಕಿ ಇತ್ಯಾದಿಗಳನ್ನು ಸೇವಿಸಬೇಕು. ಮಧ್ಯಾಹ್ನದ ಮತ್ತು ರಾತ್ರಿ ಊಟಗಳ ನಡುವೆ ಆರೋಗ್ಯಕರ ತಿನಿಸುಗಳನ್ನು, ಬದಾಮನಂತಹ ಬೀಜಗಳನ್ನು ಸೇವಿಸಬಹುದು.

ಯಾವಾಗಲೂ ರಾತ್ರಿ ನಿದ್ರೆಗೆ ತೆರಳುವ 2-3 ಗಂಟೆ ಮೊದಲು ಊಟವನ್ನು ಮಾಡಿ. ರಾತ್ರಿ ಊಟ ಆದಷ್ಟು ಲಘುವಾಗಿರಲಿ. ದಿನದ ಕೊನೆಯ ಊಟವು ರಾತ್ರಿ ಚಯಾಪಚಯ ವ್ಯವಸ್ಥೆ ಕ್ರಿಯಾಶೀಲವಾಗಿರಲು ನೆರವಾಗುವುದರಿಂದ ಅದನ್ನೆಂದಿಗೂ ತಪ್ಪಿಸಬೇಡಿ.

ಕೃಪೆ: Onlymyhealth

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)