varthabharthi


ಕರಾವಳಿ

‘ಪರೀಕ್ಷಾ ಪೆ ಚರ್ಚಾ'ದಲ್ಲಿ ಪ್ರಶ್ನೆ ಕೇಳಲು ಸಿಗದ ಅವಕಾಶದಿಂದ ತುಂಬಾ ನಿರಾಶೆಯಾಗಿದೆ : ಅನುಷಾ

ವಾರ್ತಾ ಭಾರತಿ : 7 Apr, 2021

 ಅನುಷಾ

ಉಡುಪಿ, ಎ.7: ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಆಯ್ದ 30 ಮಕ್ಕಳೊಂದಿಗೆ ಇಂದು ಸಂಜೆ ನಡೆಸಿಕೊಟ್ಟ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ತನಗೆ ಪ್ರಶ್ನೆ ಕೇಳಲು ಅವಕಾಶ ಸಿಗದ ಬಗ್ಗೆ ಹಾಗೂ ತಾನು ಕಲಿಯುತ್ತಿರುವ ಕುಂದಾಪುರ ತಾಲೂಕು ಅಲ್ಬಾಡಿ-ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಉಲ್ಲೇಖವಾಗದ ಬಗ್ಗೆ ತನಗೆ ತೀವ್ರ ನಿರಾಶೆಯಾಗಿದೆ ಎಂದು ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಅನುಷಾ ಕೃಷ್ಣ ಕುಲಾಲ್ ತಿಳಿಸಿದ್ದಾರೆ.

‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇವರಲ್ಲಿ ಕುಂದಾಪುರದ ಗ್ರಾಮೀಣ ಪ್ರದೇಶದ ಬಡ ಗಾರೆ ಕಾರ್ಮಿಕನ ಮಗಳಾದ ಅನುಷಾ ಸಹ ಒಬ್ಬಳು. ರಾಜ್ಯದ ಇಬ್ಬರು ವಿದ್ಯಾರ್ಥಿಗಳಿಗೂ ಇಂದು ಪ್ರಧಾನಿಯೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿರಲಿಲ್ಲ. ಶಾಲೆಯ ಬಗ್ಗೆ ಕಿರುಚಿತ್ರ ಹಾಗೂ ಪ್ರಧಾನಿಗೆ ತಾನು ಕೇಳುವ ಪ್ರಶ್ನೆಯನ್ನು ಕಳೆದ ಮಾ.19ರಂದು ಹೊಸದಿಲ್ಲಿಯಿಂದ ಬಂದಿದ್ದ ಕೇಂದ್ರದ ಎಂಎಚ್‌ಆರ್‌ಡಿ ಇಲಾಖೆಯ ತಂಡವೊಂದು ದಾಖಲಿಸಿಕೊಂಡು ಹೋಗಿತ್ತು. ಆದರೆ ಅದು ಇಂದು ಪ್ರಸಾರವಾಗಲಿಲ್ಲ ಎಂದವರು ನುಡಿದರು.

ಪ್ರಧಾನಿಗೆ ನೀವು ಏನು ಪ್ರಶ್ನೆ ಕೇಳುವವರಿದ್ದೀರಿ ಎಂದು ಅನುಷಾರನ್ನು ಪ್ರಶ್ನಿಸಿದಾಗ, ಅದನ್ನು ಈಗ ನಾನು ಯಾರಿಗೂ ಹೇಳುವುದಿಲ್ಲ. ಮತ್ತೊಮ್ಮೆ ಪ್ರಧಾನಿಯೊಂದಿಗೆ ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದರೆ ಅದನ್ನು ಕೇಳುತ್ತೇನೆ ಎಂದು ಅನುಷಾ ತಿಳಿಸಿದರು.

ಕಾರ್ಯಕ್ರಮದ ನೇರ ಪ್ರಸಾರವನ್ನು ತಾನು ತನ್ನ ಮನೆಯಲ್ಲಿ ಹೆತ್ತವರು ಹಾಗೂ ಶಾಲೆಯ ಶಿಕ್ಷಕರಾದ ಸುರೇಶ್ ಸರ್ ಹಾಗೂ ಶ್ರೀಕಾಂತ್ ಸರ್ ಅವರೊಂದಿಗೆ ವೀಕ್ಷಿಸಿದೆ. ಕಾರ್ಯಕ್ರಮ ಚೆನ್ನಾಗಿ ಮೂಡಿಬಂತು. ಆದರೆ ನನಗೆ ಪ್ರಶ್ನೆ ಕೇಳಲು ಹಾಗೂ ಶಾಲೆಯ ಪರಿಚಯ ಮಾಡುವ ಅವಕಾಶ ತಪ್ಪಿದ ಬಗ್ಗೆ ನಿರಾಶೆಯಾಯಿತು ಎಂದರು.

ಗುಡ್ಡೆಯಂಗಡಿ ಕೆಸ್ಕರಜೆಡ್ಡು ನಿವಾಸಿ ಗಾರೆ ಕೆಲಸ ಮಾಡುವ ಕೃಷ್ಣ ಕುಲಾಲ್ ಹಾಗೂ ಊರಿನ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುವ ಜಯಲಕ್ಷ್ಮೀ ದಂಪತಿಗಳ ಪುತ್ರಿಯಾದ ಅನುಷಾ, ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ. ತನ್ನಂತೆ ತನ್ನ ಹೆತ್ತವರಿಗೂ ತುಂಬಾ ನಿರಾಶೆಯಾಗಿದೆ ಎಂದು ಅನುಷಾ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)