varthabharthi


ರಾಷ್ಟ್ರೀಯ

‘ಫ್ರಾನ್ಸ್ ಹಿತಾಸಕ್ತಿ’ಯ ನೆಪ

ಸಹೋದ್ಯೋಗಿಯ ಆಕ್ಷೇಪವನ್ನು ಕಡೆಗಣಿಸಿ ರಫೇಲ್ ತನಿಖೆ ನಡೆಸದಿರಲು ನಿರ್ಧರಿಸಿದ್ದ ಫ್ರೆಂಚ್ ಪ್ರಾಸಿಕ್ಯೂಟರ್

ವಾರ್ತಾ ಭಾರತಿ : 7 Apr, 2021

ಹೊಸದಿಲ್ಲಿ, ಎ.7: ಫ್ರಾನ್ಸ್‌ನ ಸಾರ್ವಜನಿಕ ಅಭಿಯೋಜನೆ ಸೇವೆಗಳ ಆರ್ಥಿಕ ಅಪರಾಧಗಳ ವಿಭಾಗದ ಮಾಜಿ ಮುಖ್ಯಸ್ಥೆ ಎಲಿನೆ ಹೌಲೆಟ್ ಅವರು ಭಾರತಕ್ಕೆ 36 ರಫೇಲ್ ಯುದ್ಧವಿಮಾನಗಳ ವಿವಾದಾತ್ಮಕ ಮಾರಾಟದಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ವಿಧ್ಯುಕ್ತ ತನಿಖೆ ನಡೆಸದಿರಲು ನಿರ್ಧರಿಸುವಾಗ ಉಪ ಮುಖ್ಯಸ್ಥ ಜೀನ್ ವೆಸ್ ಲರ್ಗೊಲಿಕ್ಸ್ ಅವರು ಎತ್ತಿದ್ದ ಆಕ್ಷೇಪವನ್ನು ಕಡೆಗಣಿಸಿದ್ದರು ಎಂದು ರಫೇಲ್ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದಂತೆ ಡಸಾಲ್ಟ್ ಏವಿಯೇಷನ್ ಭಾರತೀಯ ಮಧ್ಯವರ್ತಿ ಸುಶೇನ್ ಗುಪ್ತಾಗೆ ರಫೇಲ್ ಯುದ್ಧವಿಮಾನಗಳ ಪ್ರತಿಕೃತಿ ಮಾದರಿಗಳ ‘ತಯಾರಿಕೆ’ಯ ನೆಪದಲ್ಲಿ 1.1 ಮಿಲಿಯನ್ ಯುರೋಗಳ ಉಡುಗೊರೆಯನ್ನು ನೀಡಿತ್ತು ಎಂಬ ಸ್ಫೋಟಕ ವರದಿಯನ್ನು ಪ್ರಕಟಿಸಿದ್ದ ಪ್ಯಾರಿಸ್‌ನ ತನಿಖಾ ಜಾಲತಾಣ ಮೀಡಿಯಾಪಾರ್ಟ್ ತನ್ನ ವರದಿಯ ಎರಡನೇ ಭಾಗದಲ್ಲಿ ಬೆಟ್ಟು ಮಾಡಿದೆ.

ಮೀಡಿಯಾಪಾರ್ಟ್ ಖ್ಯಾತ ಭ್ರಷ್ಟಾಚಾರ ವಿರೋಧಿ ಎನ್‌ಜಿಒ ಶೆರ್ಪಾ 2018ರಲ್ಲಿ ಸಲ್ಲಿಸಿದ್ದ ದೂರನ್ನು ಹೌಲೆಟ್ ಅವರ ನ್ಯಾಷನಲ್ ಫೈನಾನ್ಸಿಯಲ್ ಪ್ರಾಸಿಕ್ಯೂಟರ್  (ಎನ್‌ಎಫ್‌ಪಿ)ಕಚೇರಿಯು ಪಾರದರ್ಶಕವಲ್ಲದ ರೀತಿಯಲ್ಲಿ ವಿಲೇಗೊಳಿಸಿದ್ದರ ಕುರಿತು ಹಲವಾರು ಪ್ರಶ್ನೆಗಳನ್ನೆತ್ತಿದೆ. ಡಸಾಲ್ಟ್ ಏವಿಯೇಷನ್‌ನ ವಕೀಲರೊಂದಿಗೆ ಹೌಲೆಟ್ ಅವರ ಅನೌಪಚಾರಿಕ ಭೇಟಿಯು ಇವುಗಳಲ್ಲಿ ಸೇರಿದೆ. ಈ ಭೇಟಿ ಸಂದರ್ಭದಲ್ಲಿ ಡಸಾಲ್ಟ್‌ನ ವಕೀಲರು ಮೋದಿ ಸರಕಾರವು 58,000 ಕೋಟಿ ಡಾ.ವೆಚ್ಚದಲ್ಲಿ 36 ರಫೇಲ್ ವಿಮಾನಗಳ ಖರೀದಿಗಾಗಿ 2016ರಲ್ಲಿ ಫ್ರಾನ್ಸ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಮೊದಲೇ ಡಸಾಲ್ಟ್‌ನ ಭಾರತೀಯ ಪಾಲುದಾರನಾಗಿ ಅನಿಲ್ ಅಂಬಾನಿ ಗುರುತಿಸಿಕೊಂಡಿದ್ದರು ಎಂಬ ತಪ್ಪು ಮಾಹಿತಿ ಮತ್ತು ಅದೇ ಹಳಸಲು ಸಮರ್ಥನೆಯನ್ನು ನೀಡುವ ಮೂಲಕ ಪ್ರಾಸಿಕ್ಯೂಶನ್ ಏಜೆನ್ಸಿಯನ್ನು ಗೊಂದಲದಲ್ಲಿ ಬೀಳಿಸಲು ಪ್ರಯತ್ನಿಸಿದ್ದರು ಎಂದು ಮೀಡಿಯಾಪಾರ್ಟ್ ಹೇಳಿದೆ.

ಕಳೆದ ವರ್ಷ ಪ್ಯಾರಿಸ್ ಮ್ಯಾಚ್ ಮ್ಯಾಗಝಿನ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೌಲೆಟ್ ರಫೇಲ್ ಒಪ್ಪಂದದ ಕುರಿತು ತನಿಖೆ ನಡೆಸದಿರುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಫ್ರೆಂಚ್ ರಾಷ್ಟ್ರೀಯ ಹಿತಾಸಕ್ತಿಗಳನ್ನು ಉಲ್ಲೇಖಿಸಿದ್ದರು. 2018,  ಅಕ್ಟೋಬರ್‌ನಲ್ಲಿ ಎನ್‌ಜಿಒ ಶೆರ್ಪಾ ಭಾರತಕ್ಕೆ ರಫೇಲ್ ಯುದ್ಧವಿಮಾನಗಳ ಮಾರಾಟದಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯ ಬಗ್ಗೆ ಎನ್‌ಎಫ್‌ಪಿ ಮತ್ತು ಹೌಲೆಟ್ ಅವರಿಗೆ ದೂರು ಸಲ್ಲಿಸಿತ್ತು. ಮೋದಿ ಸರಕಾರದ ಒತ್ತಾಸೆಯ ಮೇರೆಗೆ ಡಸಾಲ್ಟ್‌ನ ಪಾಲುದಾರನಾಗಿ ಅನಿಲ್ ಅಂಬಾನಿ ಗ್ರೂಪ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರು ಮೀಡಿಯಾಪಾರ್ಟ್ ಸೇರಿದಂತೆ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಶೆರ್ಪಾ ಈ ದೂರನ್ನು ದಾಖಲಿಸಿತ್ತು. ಹೊಲ್ಲಾಂಡೆಯವರ ಪಾಲುದಾರನನ್ನು ಒಳಗೊಂಡಿದ್ದ ಚಲನಚಿತ್ರ ಯೋಜನೆಯೊಂದಕ್ಕೆ ಅಂಬಾನಿ ಗ್ರೂಪ್ ಒಂದು ಮಿಲಿಯನ್ ಯುರೋಗೂ ಅಧಿಕ ಮೊತ್ತದ ಆರ್ಥಿಕ ನೆರವನ್ನು ಒದಗಿಸಿದ್ದರಿಂದ ಹೊಲ್ಲಾಂಡೆಯವರ ಈ ಹೇಳಿಕೆಯು ಹಲವರಿಗೆ ಅಚ್ಚರಿಯನ್ನು ಮೂಡಿಸಿತ್ತು.

ಹೌಲೆಟ್ ಅವರ ಎನ್‌ಎಫ್‌ಪಿ ಅಥವಾ ಪಾರ್ಕೆಟ್ ನ್ಯಾಷನಲ್ ಫೈನಾನ್ಶಿಯರ್ (ಪಿಎನ್‌ಎಫ್) ಕೈಗೊಂಡಿದ್ದ ಕ್ರಮಗಳನ್ನು ವಿಶ್ಲೇಷಿಸಿದ ಬಳಿಕ ಮೀಡಿಯಾಪಾರ್ಟ್,ಶೆರ್ಪಾದ ಆರೋಪಗಳ ಕುರಿತು ತನಿಖೆ ನಡೆಸಲು ಹೌಲೆಟ್ ಗಂಭೀರ ಪ್ರಯತ್ನಗಳನ್ನೇ ಮಾಡಿರಲಿಲ್ಲ ಎಂದು ಆಪಾದಿಸಿದೆ.

ರಫೇಲ್ ಪ್ರಕರಣದ ಅಧಿಕೃತ ಉಸ್ತುವಾರಿಯನ್ನು ಹೊಂದಿದ್ದ ಲರ್ಗೊಲಿಕ್ಸ್ ತನಿಖೆಯನ್ನು ಕೈಬಿಡುವ ನಿರ್ಧಾರವನ್ನು ಒಪ್ಪಿಕೊಂಡಿರಲಿಲ್ಲ ಮತ್ತು ಹೌಲೆಟ್ ತನ್ನ ನಿರ್ಧಾರಕ್ಕೆ ತಲುಪುವ ಮುನ್ನ ನಡೆಸಿದ್ದ ಏಕೈಕ ಸಂದರ್ಶನವೆಂದರೆ ಡಸಾಲ್ಟ್‌ನ ವಕೀಲರೊಂದಿಗಿನ ಭೇಟಿಯಾಗಿತ್ತು ಎನ್ನುವುದು ವರದಿಯಲ್ಲಿನ ಅತ್ಯಂತ ಗಂಭೀರ ಪ್ರತಿಪಾದನೆಯಾಗಿದೆ.

ಪ್ರಕರಣವನ್ನು ಅಂತ್ಯಗೊಳಿಸುವ ಕಾನೂನಾತ್ಮಕ ನೋಟಿಸನ್ನು ಸಿದ್ಧಗೊಳಿಸಲು ಮತ್ತು ಅದಕ್ಕೆ ಸಹಿ ಹಾಕಲು ಲರ್ಗೊಲಿಕ್ಸ್ ನಿರಾಕರಿಸಿದ್ದರು. ನಿರಾಕರಣೆಗೆ ಯಾವುದೇ ಕಾರಣವನ್ನು ಉಲ್ಲೇಖಿಸಲು ತನಗೆ ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ಹೌಲೆಟ್ ನಿವೃತ್ತಿಯ ಬಳಿಕ 2019, ಅ.14ರಂದು ಈಗಿನ ಪಿಎನ್‌ಎಫ್ ಮುಖ್ಯಸ್ಥ ಜೀನ್-ಫ್ರಾಂಕೋಯಿಸ್ ಬಾನರ್ಟ್ ಅವರು ಅಧಿಕಾರ ವಹಿಸಿಕೊಂಡಾಗಲೂ ಪ್ರಕರಣವನ್ನು ಅಂತ್ಯಗೊಳಿಸುವ ನೋಟಿಸನ್ನು ಸಿದ್ಧಪಡಿಸಲಾಗಿರಲಿಲ್ಲ. ಕೊನೆಗೂ ಉಪಮುಖ್ಯಸ್ಥ ಜೀನ್-ಲೂಕ್ ಬ್ಲಾಕನ್ ಅವರು ಆ ಕೆಲಸವನ್ನು ಮಾಡಿದ್ದರು ಎಂದು ಮೀಡಿಯಾಪಾರ್ಟ್ ವರದಿಯಲ್ಲಿ ಹೇಳಿದೆ.

2012,   ಫೆಬ್ರವರಿಯಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಮೊದಲ ಒಪ್ಪಂದದಲ್ಲಿಯೇ ಡಸಾಲ್ಟ್ ಅನಿಲ್ ಅಂಬಾನಿ ಗ್ರೂಪ್‌ನ್ನು ತನ್ನ ಪಾಲುದಾರನನ್ನಾಗಿ ಆಯ್ಕೆ ಮಾಡಿಕೊಂಡಿತ್ತೇ ಹೊರತು ಮೋದಿ ಸರಕಾರವು ಅದನ್ನು ಸೂಚಿಸಿರಲಿಲ್ಲ ಎಂದು ಕಂಪನಿಯ ವಕೀಲರು ಪಿಎನ್‌ಎಫ್ ಮುಂದೆ ವಾದಿಸಿದ್ದ ಹಸಿಸುಳ್ಳನ್ನೇ ಡಸಾಲ್ಟ್ ಮತ್ತು ಬಿಜೆಪಿ ನಾಯಕರು ಹಿಂದಿನಿಂದಲೇ ಬಳಸುತ್ತ ಬಂದಿದ್ದಾರೆ ಮತ್ತು ರಫೇಲ್ ಒಪ್ಪಂದದ ಕುರಿತು ತನಿಖೆಯನ್ನು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯದ ವಿವಾದಾತ್ಮಕ ತೀರ್ಪಿನಲ್ಲಿಯೂ ಈ ಸುಳ್ಳು ಸೇರಿಕೊಂಡಿತ್ತು ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

ರಫೇಲ್ ಒಪ್ಪಂದ ಕುರಿತು ಬಿಕ್ಕಟ್ಟು ತೀವ್ರಗೊಂಡಾಗ ಅನಿಲ್ ಅಂಬಾನಿಯ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ್ನು ಆಫ್‌ಸೆಟ್ ಪಾರ್ಟ್‌ನರ್ ಆಗಿ ಆಯ್ಕೆ ಮಾಡಿಕೊಂಡಿದ್ದು 2012ರಲ್ಲಿ ಡಸಾಲ್ಟ್ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ಮಾಡಿಕೊಂಡಿದ್ದ ಪಾಲುದಾರಿಕೆಯ ಮುಂದುವರಿಕೆಯಾಗಿತ್ತಷ್ಟೇ ಎಂದು ಡಸಾಲ್ಟ್ ಮತ್ತು ಮೋದಿ ಸರಕಾರ ಬಹಿರಂಗವಾಗಿ ಸಮಜಾಯಿಷಿ ನೀಡಿದ್ದವು. ಆದರೆ ಅಂಬಾನಿ ಸೋದರರು ತಮ್ಮದೇ ಆದ ಪ್ರತ್ಯೇಕ ಉದ್ಯಮ ಸಾಮ್ರಾಜ್ಯಗಳನ್ನು ಹೊಂದಿದ್ದರಿಂದ ಈ ಸಮಜಾಯಿಷಿ ಸಂಪೂರ್ಣ ಸುಳ್ಳಾಗಿತ್ತು ಎಂದು ಮೀಡಿಯಾಪಾರ್ಟ್‌ನ ವರದಿಯು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)