varthabharthi


ಕರ್ನಾಟಕ

ಕಾರ್ಮಿಕ ಧುರೀಣ ಎಚ್.ವಿ.ಅನಂತ ಸುಬ್ಬರಾವ್

ಸರಕಾರದ ದಮನಕಾರಿ ನೀತಿ, ನೌಕರರ ಹುಂಬತನ-ಎರಡೂ ಸರಿಯಲ್ಲ

ವಾರ್ತಾ ಭಾರತಿ : 8 Apr, 2021
ಸಂದರ್ಶನ: ಪ್ರಕಾಶ್ ರಾಮಜೋಗಿಹಳ್ಳಿ

ಬೆಂಗಳೂರು: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ರಾಜ್ಯದಲ್ಲಿನ ನಾಲ್ಕೂ ಸಾರಿಗೆ ಸಂಸ್ಥೆಗಳ ಭವಿಷ್ಯದ ಬಗ್ಗೆ ಆಸಕ್ತಿ, ಸಾರ್ವಜನಿಕ ಪ್ರಯಾಣಿಕರ ಬಗ್ಗೆ ಪ್ರೀತಿ, ಕಳಕಳಿ, ಬದ್ಧತೆ ರಾಜ್ಯ ಸರಕಾರ ಮತ್ತು ಸಂಸ್ಥೆಯ ಎಲ್ಲ ನೌಕರರಿಗೂ ಇರಬೇಕು. ಶೇ.8ರಷ್ಟು ವೇತನ ಹೆಚ್ಚಳ ಮಾಡಿದ ಸರಕಾರದ ಏಕಪಕ್ಷೀಯ ನಿರ್ಧಾರ, ನೌಕರರ ಮುಷ್ಕರ ಸದೆಬಡಿಯಲು ‘ದಮನಕಾರಿ ನೀತಿ’ ಅಸ್ತ್ರ ಪ್ರಯೋಗ ವಿವೇಚನಾರಹಿತ ಕ್ರಮವಾಗಿದೆ’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ಧುರೀಣ ಎಚ್.ವಿ.ಅನಂತ ಸುಬ್ಬರಾವ್ ಹೇಳಿದ್ದಾರೆ.

ಕೊರೋನ ವೈರಸ್ ಸೋಂಕಿಗೆ ಒಳಗಾಗಿ ಕೆಲದಿನಗಳ ಚಿಕಿತ್ಸೆ ಬಳಿಕ ಹೋಮ್ ಕ್ವಾರಂಟೈನ್‌ನಲ್ಲಿ ಚೇತರಿಸಿಕೊಳ್ಳುತ್ತಿರುವ ಅನಂತ ಸುಬ್ಬರಾವ್ ಅವರೊಂದಿಗೆ ‘ವಾರ್ತಾಭಾರತಿ’ ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ತಮ್ಮ ಹೋರಾಟದ ಅನುಭವವನ್ನು ಹಂಚಿಕೊಂಡಿದ್ದಾರೆ.

► ವಾರ್ತಾ ಭಾರತಿ: ಸಾರಿಗೆ ನೌಕರರ ಮುಷ್ಕರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅನಂತ ಸುಬ್ಬರಾವ್: ಸಾರಿಗೆ ಸಂಸ್ಥೆ ನೌಕರರ ಮುಷ್ಕರಕ್ಕೆ ಮುಂದಾಗಲು ಕಾರಣ ವೇತನ ತಾರತಮ್ಯ. ಈ ಹಿಂದೆಯೇ ಸರಕಾರಕ್ಕೆ ಕಾರ್ಮಿಕ ಸಂಘಟನೆಗಳು ಮನವಿ ಮಾಡಿದರೂ ಸ್ಪಂದಿಸಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಮಾತುಕತೆಗೆ ಮುಂದಾಗದ ಹಿನ್ನೆಲೆಯಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ನೌಕರರು ಮುಷ್ಕರದ ಹಾದಿ ಹಿಡಿದಿದ್ದಾರೆ. ಸರಕಾರದ ಧೋರಣೆಯಿಂದ ಸಾರ್ವಜನಿಕ ಪ್ರಯಾಣಿಕರು ಪರದಾಡಬೇಕಾದ ದುಸ್ಥಿತಿ ಬಂದಿದೆ.

► ವಾ.ಭಾ: ಆರನೇ ವೇತನ ಆಯೋಗದ ಶಿಫಾರಸು ಅನ್ವಯ, ಸರಕಾರಿ ನೌಕರರೆಂದು ಪರಿಗಣನೆ ಬಗ್ಗೆ ನಿಮ್ಮ ಅನಿಸಿಕೆಯೇನು?

ಅನಂತ ಸುಬ್ಬರಾವ್: ಸಾರಿಗೆ ನೌಕರರ ಬಹುದಿನಗಳ ಬೇಡಿಕೆ ಇದು. ಆದರೆ, ಸುಮಾರು 4 ಸಾವಿರ ಕೋಟಿ ರೂ.ಗಳಷ್ಟು ಹಣಕಾಸು ಇದಕ್ಕೆ ಅಗತ್ಯವಿದೆ. ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಸಾರಿಗೆ ಸಂಸ್ಥೆಗಳು ಸುಮಾರು 3,750 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿವೆ. ಜೊತೆಗೆ ಸಾರಿಗೆ ಸಂಸ್ಥೆಗಳು 4 ಸಾವಿರ ಕೋಟಿ ರೂ.ಗಳಷ್ಟು ನಷ್ಟದಲ್ಲಿರುವುದು ಸೇರಿದಂತೆ 8 ಸಾವಿರ ಕೋಟಿ ರೂ.ಗಳಷ್ಟು ನಷ್ಟದ ಸುಳಿಯಲ್ಲಿರುವ ಇಂತಹ ಸಂದಿಗ್ಧ ಸಂದರ್ಭದಲ್ಲಿ ಈ ಸಂಸ್ಥೆಗಳ ಕಲ್ಯಾಣಕ್ಕೆ ಸರಕಾರ ಆಯವ್ಯಯದಲ್ಲಿ ಒಂದೇ ಒಂದು ಬಿಡಿಗಾಸನ್ನು ನೀಡಿಲ್ಲ.

ಹೀಗಿರುವಾಗ ಆರನೇ ವೇತನ ಆಯೋಗದ ಶಿಫಾರಸನ್ನು ಸರಕಾರ ಸಾರಿಗೆ ನೌಕರರಿಗೆ ಅನ್ವಯಿಸುತ್ತದೆ ಎಂಬ ಭರವಸೆ ಇರಿಸಲು ಸಾಧ್ಯವಿಲ್ಲ. ಆದರೆ, ಇಂದಿನ ಪರಿಸ್ಥಿತಿಗೆ ತಕ್ಕಂತೆ ನೌಕರರ ವೇತನ ಹೆಚ್ಚಳಕ್ಕೆ ಸರಕಾರ ಸೌಹಾರ್ದಯುತ ಮಾತುಕತೆ ನಡೆಸಬೇಕಿತ್ತು. ಕನಿಷ್ಠ ಪಕ್ಷ ಶೇ.20ರಷ್ಟು ವೇತನ ಹೆಚ್ಚಳ ಕೊಡಬೇಕು. ಹಗಲು-ರಾತ್ರಿಗಳ ಪರಿವೇ ಮರೆತು, ಹಬ್ಬ-ಹರಿದಿನಗಳನ್ನೆದೆ ದುಡಿದು ಬದುಕು ಸವೆಸುತ್ತಿರುವ ಸಾರಿಗೆ ನೌಕರರ ಕಠಿಣ ಪರಿಸ್ಥಿತಿಯನ್ನು ಸರಕಾರ ಉಪೇಕ್ಷೆ, ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ನೌಕರರ ಮೇಲೆ ಕಠಿಣ ಕ್ರಮಕ್ಕೆ ಸರಕಾರ ಮುಂದಾಗುವುದು ಕಾರ್ಯಸಾಧು ಕ್ರಮವಲ್ಲ. ಆ ಕ್ರಮಗಳನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಎಂಬುದು ನನ್ನ ಆಗ್ರಹವಾಗಿದೆ.

► ವಾ.ಭಾ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಹೋರಾಟದ ಬಗ್ಗೆ ನಿಮ್ಮ ನಿಲುವು?

ಅನಂತ ಸುಬ್ಬರಾವ್: ‘ಹೊಳೆ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ’. ಸಾರಿಗೆ ಸಂಸ್ಥೆಯ ಕಾರ್ಮಿಕರ ಹೋರಾಟ ಯಾರೊಬ್ಬರ ಗುತ್ತಿಗೆಯೂ ಅಲ್ಲ. ಹಾಗೆಯೇ ಇಲ್ಲಿ ನನ್ನದೇ ನಡೆಯಬೇಕೆಂಬ ಧೋರಣೆಯನ್ನು ನಾನು ಎಂದೂ ಹೊಂದಿಲ್ಲ. ಆದರೆ, ನೌಕರರ ವೇತನ ಹೆಚ್ಚಳಕ್ಕೆ ಸಂಸ್ಥೆಯನ್ನು ಮಾರಾಟ ಮಾಡಿಯಾದರೂ ಹಣ ತಂದು ಕೊಡಬೇಕು. ಜೈಲಿಗೆ ಹೋದರೂ ನಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬ ‘ಹುಡುಗ ಬುದ್ಧಿ, ಹುಂಬತನ’ದ ತೀರ್ಮಾನ ಸರಿಯಲ್ಲ. ನೌಕರರು ಜೈಲಿಗೆ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ದಿಲ್ಲಿಯಲ್ಲಿ ರೈತರ ಮೂರ್ನಾಲ್ಕು ತಿಂಗಳ ಹೋರಾಟ ಮಾಡುತ್ತಿದ್ದಾರೆಂದು ಸಾರಿಗೆ ನೌಕರರು ಹಾಗೇ ದೀರ್ಘಾವಧಿ ಚಳವಳಿ ಮಾಡಲು ಸಾಧ್ಯವಿಲ್ಲ. ಸಾರಿಗೆ ಸಂಸ್ಥೆ ಭವಿಷ್ಯದಲ್ಲಿ ಉಳಿಯಬೇಕು. ಸಾರ್ವಜನಿಕ ಪ್ರಯಾಣಿಕರ ಬಗ್ಗೆ ಪ್ರೀತಿ, ಕಳಕಳಿ ಸರಕಾರ ಮತ್ತು ನೌಕರರಲ್ಲಿಯೂ ಇರಬೇಕು.

► ವಾ.ಭಾ: ಸರಕಾರ ಮತ್ತು ಮುಷ್ಕರನಿರತ ನೌಕರರ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ನಿಮ್ಮ ಸಲಹೆಯೇನು?

ಅನಂತ ಸುಬ್ಬರಾವ್: ಸಾರಿಗೆ ಸಂಸ್ಥೆಗಳು ಹಾಗೂ ಸರಕಾರದ ನಡುವೆ ದ್ವೇಷ ವಾತಾವರಣವನ್ನು ನಿರ್ಮೂಲನೆ ಮಾಡಿ ಸಾರ್ವಜನಿಕರ ಸೇವೆಗೆ ಅಗತ್ಯವಿರುವ ಸೇವಾ ಸಂಸ್ಥೆಗಳ್ಳಲ್ಲಿ ಒಳ್ಳೆಯ ಗೌರವದ ವಾತಾವರಣ ಸೃಷ್ಟಿಸಬೇಕು. ಇಲ್ಲವಾದರೆ ‘ದ್ವೇಷ’ ಸಾರಿಗೆ ಸಂಸ್ಥೆಗಳನ್ನು ನಾಶ ಮಾಡಲು ಬುನಾದಿ ಹಾಕುತ್ತದೆ ಎಂಬ ಎಚ್ಚರಿಕೆ ರಾಜ್ಯ ಸರಕಾರ ಹಾಗೂ ಸಾರಿಗೆ ಸಂಸ್ಥೆ ನೌಕರರಿಗೆ ಇರಬೇಕಾಗುತ್ತದೆ.

► ವಾ.ಭಾ: ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಿಗೆ ಖಾಸಗಿ ಬಸ್‌ಗಳ ಪ್ರವೇಶ ಏಷ್ಟು ಸರಿ?

ಅನಂತ ಸುಬ್ಬರಾವ್: ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳು ಸೇರಿದಂತೆ ಸಾರಿಗೆ ಸಂಸ್ಥೆಗಳ ಅಕ್ಕಪಕ್ಕದಲ್ಲಿಯೂ ಖಾಸಗಿ ಬಸ್‌ಗಳ ಪ್ರವೇಶಕ್ಕೆ ಎಂದೂ ಅವಕಾಶ ನೀಡಿರಲಿಲ್ಲ. ಇಂದು ನಮ್ಮ ಹಣೆಬರಹ ನೋಡಿ. ಎಲ್ಲ ಖಾಸಗಿ ಬಸ್‌ಗಳು ಸರಕಾರಿ ಬಸ್ ನಿಲ್ದಾಣಗಳನ್ನು ಪ್ರವೇಶಿಸಿವೆ. ಈ ಹಿಂದೆ ಖಾಸಗಿ ಬಸ್‌ಗಳ ಪ್ರವೇಶ ತಡೆಗಟ್ಟಲು ಖಾಸಗಿ ಬಸ್‌ಗಳಿಗೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದೇವೆ. ಖಾಸಗಿ ಬಸ್‌ಗಳ ‘ಸಾರ್ವಜನಿಕ ಸುಲಿಗೆ’ಗೆ ಕಡಿವಾಣ ಹಾಕಲು ಸಂಸ್ಥೆಗಳ ನೌಕರರ ಸೇವಾ ಮನೋಭಾವವೂ ಕಾರಣವಾಗಿದೆ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕಿತ್ತು. ಸರಕಾರಿ ಬಸ್ ನಿಲ್ದಾಣಗಳಿಗೆ ಖಾಸಗಿ ಬಸ್‌ಗಳಿಗೆ ಪ್ರವೇಶಕ್ಕೆ ಅವಕಾಶವನ್ನೇ ನೀಡಬಾರದಿತ್ತು. ಸಾರಿಗೆ ಸಂಸ್ಥೆಯಲ್ಲಿ ಗುತ್ತಿಗೆ ಪದ್ಧತಿಗೂ ಅವಕಾಶ ನೀಡಿಲ್ಲ. ಕೆಇಬಿಯಲ್ಲಿ ವೇತನ ಹೆಚ್ಚಿ ದ್ದರೂ ಅಲ್ಲಿ ಎಲ್ಲವೂ ಗುತ್ತಿಗೆ ಪದ್ಧತಿಯಲ್ಲಿ ಇದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)