varthabharthi


ಕರ್ನಾಟಕ

ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಮೃತ್ಯು

ವಾರ್ತಾ ಭಾರತಿ : 8 Apr, 2021

ಪಾಂಡವಪುರ, ಎ.8: ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಧಾರುಣ ಘಟನೆ ತಾಲೂಕಿನ ಬಳೇಅತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಬಿ.ಕೆ.ಮಹದೇವ ಮತ್ತು ಭಾರತಿ ದಂಪತಿ ಮಕ್ಕಳಾದ ಚಂದನ್(13) ಮತ್ತು ಕಾರ್ತಿಕ್(11) ಹಾಗೂ ಇದೇ ಗ್ರಾಮದ ಮಲ್ಲಿಕಾರ್ಜುನ ಮತ್ತು ಸುಮ ದಂಪತಿ ಮಗ ಬಿ.ಎಂ.ರಿತೇಶ್(10) ಸಾವನ್ನಪ್ಪಿದವರು.

ಚಂದನ್ ಮತ್ತು ಕಾರ್ತಿಕ್ ಪಾಂಡವಪುರ ನಿರ್ಮಲ ಕಾನ್ವೆಂಟ್‍ನಲ್ಲಿ 6 ಮತ್ತು 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದರೆ, ರಿತೇಶ್ ಬಳೇಅತ್ತಿಗುಪ್ಪೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.

ಕೊರೋನ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಮೂವರು ಮಕ್ಕಳು ಗ್ರಾಮದ ಸಮೀಪದಲ್ಲಿರುವ ಬೇವಿನಕುಪ್ಪೆ ನಿಂಗೇಗೌಡರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಕೃಷಿ ಹೊಂಡದ ಪಕ್ಕದ ಜಮೀನಿನ ಅಪ್ಪಾಜಣ್ಣ ಎಂಬವರು ಮಕ್ಕಳನ್ನು ಕೃಷಿ ಹೊಂಡದ ಬಳಿ ಹೋಗಬೇಡಿ ಎಂದು ಗದರಿದರೂ ಕೇಳದೆ ಮಕ್ಕಳು ಈಜಲು ಹೋಗಿದ್ದು, ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳು ತುಂಬಾ ಹೊತ್ತಾದರೂ ಹೊರಗೆ ಬಾರದಿದ್ದನ್ನು ಕಂಡ ಅಪ್ಪಾಜಣ್ಣ ಕೃಷಿ ಹೊಂಡದ ಬಳಿ ಬಂದಾಗ ಮಕ್ಕಳು ಸಾವನ್ನಪ್ಪಿರುವುದು ಗೊತ್ತಾಗಿದೆ

ಜಿಲ್ಲಾಧಿಕಾರಿ ಭೇಟಿ: ವಿಷಯ ತಿಳಿದ ಜಿಲ್ಲಾಧಿಕಾರಿ ಎಸ್.ಅಶ್ವಥಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ತಹಶೀಲ್ದಾರ್ ವರದಿ ಮತ್ತು ಪ್ರಸ್ತಾವನೆ ನೀಡಿದ ಬಳಿಕ ಮುಖ್ಯಮಂತ್ರಿಗಳ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. 

ಶಾಸಕ ಸಿ.ಎಸ್.ಪುಟ್ಟರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ಯ, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಇಒ ಆರ್.ಪಿ.ಮಹೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಪ್ರಭಾಕರ್, ಸಬ್‍ಇನ್ಸ್‍ಪೆಕ್ಟರ್ ಪೂಜಾ ಕುಂಟೋಜಿ, ಬಿಇಒ ಮಲ್ಲೇಶ್ವರಿ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.

ಮೃತ ಮಕ್ಕಳ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೆ ನಡೆಸಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

'ಶಾಲೆಗೆ ರಜೆ ನೀಡಿದ್ದು ಸಾವಿಗೆ ಕಾರಣ'
ಕೊರೊನಾ ಹಿನ್ನೆಲೆ ಶಾಲೆಗೆ ರಜೆ ಘೋಷಿಸಿರುವುದು ಮಕ್ಕಳ ಸಾವಿಗೆ ಕಾರಣವಾಯಿತು ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಾಂತರ ಪ್ರದೇಶದ ಮಕ್ಕಳು ಶಾಲೆ ಇಲ್ಲದಿದ್ದಾಗ ಹೀಗೆ ಅಲ್ಲಿ ಇಲ್ಲಿ ಓಡಾಡುತ್ತಾರೆ. ಒಂದು ವೇಳೆ ಶಾಲೆ ಇದ್ದಿದ್ದರೆ ಮಕ್ಕಳು ಸಾಯುತ್ತಿರಲಿಲ್ಲ ಎಂದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)