varthabharthi


ಕರ್ನಾಟಕ

ರಾಜ್ಯ ಸರಕಾರ ಆದೇಶ

ರಾಜ್ಯದ ಕೆಲ ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ 'ಕೊರೋನ ಕರ್ಫ್ಯೂ'

ವಾರ್ತಾ ಭಾರತಿ : 8 Apr, 2021

ಬೆಂಗಳೂರು, ಎ. 8: `ಕೊರೋನ ಸೋಂಕಿನ ಎರಡನೆ ಅಲೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಉಡುಪಿ ನಗರ, ಮಣಿಪಾಲ ನಗರ, ತುಮಕೂರು ನಗರ, ಬೀದರ್ ನಗರ, ಕಲಬುರಗಿ ನಗರ ಸೇರಿದಂತೆ ಎಂಟು ಜಿಲ್ಲಾ ಕೇಂದ್ರಗಳಲ್ಲಿ ಎ.10ರ ರಾತ್ರಿ 10ಗಂಟೆಯಿಂದ ಬೆಳಗ್ಗೆ 5ರ ವರೆಗೆ `ಕೊರೋನ ಕರ್ಫ್ಯೂ' ಜಾರಿಗೊಳಿಸಲಾಗುವುದು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿಯವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, `ಎ.10ರಿಂದ ಎ.20ರ ವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದ್ದು, ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ರಾತ್ರಿ 10 ಗಂಟೆಯ ಬಳಿಕ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ' ಎಂದು ತಿಳಿಸಿದರು.

ಪ್ರಧಾನಿ ಮೋದಿಯವರಿಗೆ ರಾಜ್ಯದಲ್ಲಿ ಕೋವಿಡ್ 19ರ ಪರಿಸ್ಥಿತಿ ಹಾಗೂ ಈ ಸಾಂಕ್ರಾಮಿಕದ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಒದಗಿಸಲಾಯಿತು. ಬೆಂಗಳೂರು ಮತ್ತು ಇತರ 6 ಜಿಲ್ಲೆಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ, ಮರಣ ಪ್ರಮಾಣ ರಾಜ್ಯದಲ್ಲಿ ಶೇ.0.50ರಷ್ಟು ಇರುವುದು ಸಮಾಧಾನದ ಸಂಗತಿ. ಈ ಕುರಿತು ಕೇಂದ್ರ ಸರಕಾರವೂ ತೃಪ್ತಿ ವ್ಯಕ್ತಪಡಿಸಿದೆ ಎಂದರು.

ಲಸಿಕಾ ಉತ್ಸವ: ಜ್ಯೋತಿಬಾ ಫುಲೆ ಜನ್ಮ ದಿನವಾದ ಎ.11ರಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ದಿನವಾದ ಎ.14ರ ವರೆಗೆ ಲಸಿಕಾ ಆಂದೋಲನ ಹಮ್ಮಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ರಾಜ್ಯದಲ್ಲಿಯೂ ಲಸಿಕಾ ಉತ್ಸವ ನಡೆಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಯುವಜನರು ಮುನ್ನೆಚ್ಚರಿಕೆಯ ಕ್ರಮಗಳನ್ನು ತಪ್ಪದೆ ಪಾಲಿಸುವ ಕುರಿತು ಆದ್ಯತೆ ನೀಡಬೇಕು. ಕೋವಿಡ್ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು, ಸಮಾಜದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಸಹಯೋಗ ಪಡೆಯಲು ಪ್ರಧಾನಿ ಸೂಚಿಸಿದ್ದಾರೆ ಎಂದ ಅವರು, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಹಾಗೂ ನಿಖರತೆಗೆ ಆದ್ಯತೆ ನೀಡುವಂತೆ ಪ್ರಧಾನ ಮಂತ್ರಿಯವರು ಸಲಹೆ ನೀಡಿದ್ದಾರೆ ಎಂದು ವಿವರಿಸಿದರು.

ಇದರೊಂದಿಗೆ ಮೈಕ್ರೋ ಕಂಟೇನ್‍ಮೆಂಟ್ ವಲಯಗಳಿಗೆ ಆದ್ಯತೆ ನೀಡಬೇಕು. ಆಂಬ್ಯುಲೆನ್ಸ್, ಆಕ್ಸಿಜನ್ ಪೂರೈಕೆ ಹಾಗೂ ವೆಂಟಿಲೇಟರ್ ಸೌಲಭ್ಯಗಳಿಗೆ ಆಸ್ಥೆ ವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಜಾತ್ರೆ, ಹಬ್ಬಗಳು ಮತ್ತಿತರ ಧಾರ್ಮಿಕ ಮತ್ತು ಸಾಮಾಜಿಕ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಮಾಡದ, ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಲಾಗುತ್ತಿದೆ. ಪ್ರತಿದಿನ ಆರು ಸಾವಿರ ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 5,400 ಸರಕಾರಿ ಹಾಗೂ 600 ಖಾಸಗಿ ಆರೋಗ್ಯ ಸಂಸ್ಥೆಗಳು. ಈ ವರೆಗೆ 53 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. 45 ವರ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆಯ ಶೇ.22.31ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಈ ವರ್ಗದ ರಾಷ್ಟ್ರೀಯ ಸರಾಸರಿ ಎ.5ರಂದು ಶೇ.13.94ರಷ್ಟು ಇದೆ. ಲಸಿಕೆಗಳು ವ್ಯರ್ಥವಾಗುವ ಪ್ರಮಾಣ ಅತಿ ಕಡಿಮೆ ಇದೆ ಎಂದರು.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿದಿನ ನಡೆಸುವ ಪರೀಕ್ಷೆಗಳ ಪ್ರಮಾಣ ದುಪ್ಪಟ್ಟಾಗಿದ್ದು, 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಶೇ.95ಕ್ಕೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸಾಮಾನ್ಯ ಬೆಡ್‍ಗಳು, ಆಕ್ಸಿಜನ್ ಸಂಪರ್ಕವಿರುವ ಬೆಡ್‍ಗಳು ಮತ್ತು ಐಸಿಯುಗಳು ಸಾಕಷ್ಟು ಲಭ್ಯವಿದೆ. 42 ಸಾವಿರ ಸಾಮಾನ್ಯ ಹಾಸಿಗೆಗಳು, 30 ಸಾವಿರ ಆಮ್ಲಜನಕ ಸಂಪರ್ಕವಿರುವ ಹಾಸಿಗೆಗಳು ಹಾಗೂ 3 ಸಾವಿರ ಐಸಿಯುಗಳು ಮತ್ತು 2,900 ವೆಂಟಿಲೇಟರ್ ಗಳಿರುವ ಹಾಸಿಗೆಗಳು ಲಭ್ಯವಿದೆ ಎಂದು ವಿವರ ನೀಡಿದ ಯಡಿಯೂರಪ್ಪ, ಮುಂಜಾಗ್ರತೆಯ ಕ್ರಮವಾಗಿ ಪಿಎಂ-ಕೇರ್ಸ್ ನಿಧಿಯಿಂದ ಆಕ್ಸಿಜನ್ ಜನರೇಟರುಗಳನ್ನು ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ.

ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸಲು ಕೇಂದ್ರ ಸರಕಾರದ ನೆರವಿನೊಂದಿಗೆ ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ನಾಗರಿಕರ ಸಹಕಾರ ಹಾಗೂ ಜವಾಬ್ದಾರಿಯುತ ನಡವಳಿಕೆ ಅತಿಮುಖ್ಯ. ರಾಜ್ಯದ ಜನತೆ ಸರಕಾರದ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರಕಾರದೊಂದಿಗೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡುತ್ತೇನೆ
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)