ಟೋಕಿಯೊ ಒಲಿಂಪಿಕ್ಸ್ ಗೆ ವಿಷ್ಣು, ಗಣಪತಿ-ವರುಣ್ ಜೋಡಿ ಅರ್ಹತೆ
ಹೊಸದಿಲ್ಲಿ: ಭಾರತದ ನಾಲ್ವರು ನಾವಿಕರು ಇದೇ ಮೊದಲ ಬಾರಿ ಈ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಒಮಾನ್‌ನಲ್ಲಿ ನಡೆದ ಏಶ್ಯನ್ ಕ್ವಾಲಿಫೈಯರ್ ಮೂಲಕ ವಿಷ್ಣು ಸರವಣನ್, ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ.
ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯಿಂಗ್ ಇವೆಂಟ್ ಆಗಿರುವ ಮುಸ್ಸಾನ್ಹಾ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಜಯ ಸಾಧಿಸುವ ಮೂಲಕ ನೇತ್ರಾ ಕುಮಾರನ್ ಬುಧವಾರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಸೈಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಭಾರತವು ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಮೂರು ಸೈಲಿಂಗ್ ಇವೆಂಟ್‌ಗಳಲ್ಲಿ ಸ್ಪರ್ಧಿಸುತ್ತಿದೆ.
ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಇಬ್ಬರು ಸೈಲರ್‌ಗಳು ದೇಶವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರೂ ಭಾರತವು ಕೇವಲ ಒಂದು ಇವೆಂಟ್‌ನಲ್ಲಿ ಮಾತ್ರ ಸ್ಪರ್ಧಿಸಿತ್ತು. ಹೌದು, ಇತಿಹಾಸ ನಿರ್ಮಾಣವಾಗಿದೆ. ಮೂರು ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಭಾರತದ ನಾಲ್ವರು ಸೈಲರ್‌ಗಳು ಅರ್ಹತೆ ಪಡೆದಿದ್ದಾರೆ ಎಂದು ಯಾಚ್‌ಟಿಂಗ್ ಅಸೋಸಿಯೇಶನ್ ಆಫ್ ಇಂಡಿಯಾದ ಜೊತೆ ಕಾರ್ಯದರ್ಶಿ ಕ್ಯಾಪ್ಟನ್ ಜಿತೇಂದ್ರ ದೀಕ್ಷಿತ್ ಪಿಟಿಐಗೆ ತಿಳಿಸಿದ್ದಾರೆ.
ನೇತ್ರಾ ಬುಧವಾರ ಅರ್ಹತೆ ಪಡೆದಿದ್ದರು. ಇಂದು ವಿಷ್ಣು, ಗಣಪತಿ ಹಾಗೂ ವರುಣ್ ಜೋಡಿ ಅರ್ಹತೆ ಪಡೆದಿದ್ದಾರೆ.ಗುರುವಾರ ಲೇಸರ್ ಸ್ಟಾಂಡರ್ಡ್ ಸೈಲಿಂಗ್ ಇವೆಂಟ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ವಿಷ್ಣು ಸರವಣನ್‌ಗೆ ನಾನು ಅಭಿನಂದನೆ ಸಲ್ಲಿಸುವೆ. ಸರವಣನ್ ಲೇಸರ್ ಸ್ಟಾಂಡರ್ಡ್ ಕ್ಲಾಸ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಮೊದಲಿಗನಾಗಿದ್ದಾರೆ. ಚೆಂಗಪ್ಪ ಹಾಗೂ ಥಕ್ಕರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.