ಮಹಿಳೆಯ ಅಸ್ಮಿತೆಯನ್ನು ಎತ್ತಿ ಹಿಡಿಯುವುದೇ ನನ್ನ ಗುರಿ
ಕಸಾಪದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿ
ಈ ಬಾರಿಯ ರಾಜ್ಯಮಟ್ಟದ ಕಸಾಪ ಅಧ್ಯಕ್ಷೀಯ ಚುನಾವಣೆಗೆ ಬೇರೆಯದೇ ಸ್ವರೂಪ ಬಂದಿದೆ. ಇದಕ್ಕೆ ಕಾರಣ ಈ ಬಾರಿ ಸ್ಪರ್ಧಾ ಕಣದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಿಂತಿರುವುದು. ಒಬ್ಬ ಮಹಿಳೆ ಕಸಾಪದ ಅಧ್ಯಕ್ಷರಾದರೆ ಬಹುಶಃ ಅದೊಂದು ಇತಿಹಾಸ ಆಗಬಹುದು. ಇಂತಹ ಕುತೂಹಲಕಾರಿ ಚುನಾವಣೆಯ ಸ್ಥಿತಿಯನ್ನು ನಿರ್ಮಿಸಿರುವ ಡಾ. ಸರಸ್ವತಿ ಚಿಮ್ಮಲಗಿ ಅವರನ್ನು ಶಿಕ್ಷಕಿ ಹಾಶಮಾ ರಫೀಕ್ ಮಾತಾಡಿಸಿದ್ದಾರೆ.
ಪ್ರಶ್ನೆ: ಡಾ. ಸರಸ್ವತಿ ಅವರೇ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸ್ಥಾನಕ್ಕೆ ಈ ವರೆಗೆ ಮಹಿಳೆಯೊಬ್ಬರು ಸ್ಪರ್ಧಿಸುವ ಮನಸ್ಸು ಮಾಡಿದ್ದಿಲ್ಲ. ನೀವು ಈಗ ಈ ಸ್ಥಾನಕ್ಕೆ ಸ್ಪರ್ಧಿಸಿರುವ ನಿರ್ಧಾರ ಏಕೆ ಮಾಡಿದ್ದೀರಿ?
ಡಾ. ಸರಸ್ವತಿ: ನಿಜ. ಇದುವರೆಗೆ ಮಹಿಳೆಯೊಬ್ಬರು ಇಂತಹ ಪ್ರಯತ್ನ ಮಾಡಿಲ್ಲ. ನನಗಿಂತ ಹೆಚ್ಚು ಯೋಗ್ಯತೆ ಇದ್ದ ಮಹಿಳೆಯರು ಇದ್ದರು. ಆದರೆ ಅವರೂ ಧೈರ್ಯ ಮಾಡಿರಲಿಲ್ಲ. ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮಹಿಳೆಯನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಸಿರುವುದು ನನಗೆ ಮೊದಲಿನಿಂದ ನೋವು ಉಂಟುಮಾಡಿದೆ. ಅದರಲ್ಲೂ ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯದ ಮೂಲವಾಗಿರುವ ಸಂಸ್ಥೆಗಳ ಆಡಳಿತದಲ್ಲಿ ಮಹಿಳೆ ಇರದೆ ಇರುವುದು, ಮಹಿಳೆ ಬಲಹೀನಳು ಎಂಬ ಹಣೆಪಟ್ಟಿ ಕಟ್ಟಿ, ಚುನಾವಣೆಗಳಂತಹ ಸ್ಪರ್ಧಾತ್ಮಕ ಮನೋಭಾವಗಳಿಂದ ಮಹಿಳೆಯನ್ನು ದೂರವಿಟ್ಟಿದ್ದನ್ನು ಖಂಡಿಸಲು ಹಾಗೂ ಅವಕಾಶ ವಂಚಿತ ದಲಿತ ಹಿಂದುಳಿದ ಸಾಹಿತ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾನು ಈ ಸ್ಪರ್ಧೆಗೆ ಇಳಿದಿದ್ದೇನೆ.
ಪ್ರಶ್ನೆ: ಈ ವರ್ಷದ ಚುನಾವಣೆಯಲ್ಲಿ ಪುರುಷ ಸ್ಪರ್ಧಿಗಳೇ ಹೆಚ್ಚಾಗಿದ್ದಾರೆ. ಅವರೆಲ್ಲರ ಮಧ್ಯದಲ್ಲಿ ನಿಮ್ಮ ಸ್ಪರ್ಧೆಯೂ ಎದ್ದು ಕಾಣುತ್ತಿದೆ. ಇವರೆಲ್ಲರ ಜೊತೆ ಸ್ಪರ್ಧಿಸಲು ನೀವು ವಿಶೇಷ ತಯಾರಿ ನಡೆಸಿರಬೇಕಲ್ಲ.?
ಡಾ. ಸರಸ್ವತಿ: ಚುನಾವಣೆ ನನಗೆ ಹೊಸದು. ಆದರೆ ಈಗ ನಡೆಯುತ್ತಿರುವ ಸಾಹಿತ್ಯ ಪರಿಷತ್ನ ಚಟುವಟಿಕೆಗಳಿಗೆ ನಾನು ಹೊಸಬಳಲ್ಲ. ನಾನು ಪ್ರಗತಿಪರ ಸಾಹಿತಿಯಾಗಿ, ರಂಗಕರ್ಮಿಯಾಗಿ, ಸಮಾಜ ಸೇವಕಿಯಾಗಿ ಹತ್ತುಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದೇನೆ. ಆದ್ದರಿಂದ ಸಾಹಿತ್ಯ ಸಂಸ್ಥೆಯ ರೂಪರೇಷೆಗಳಿಗೆ ನಾನು ಹೊಸಬಳಲ್ಲ. ಈಗ ನೀವೇ ಹೇಳಿದಂತೆ, ಈ ಸಲದ ಚುನಾವಣೆಯಲ್ಲಿ ಪುರುಷ ಸ್ಪರ್ಧಿಗಳೇ ಹೆಚ್ಚಾಗಿದ್ದಾರೆ. ಆದರೆ ಅವರಲ್ಲಿ ಅನೇಕರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿ ಕೊಂಡವರಲ್ಲ. ಜನಾಭಿಪ್ರಾಯ ಮಹಿಳಾ ಅಭ್ಯರ್ಥಿ ಒಬ್ಬರೇ ಈ ಸ್ಥಾನಕ್ಕೆ ಯೋಗ್ಯರು ಎಂದು ಬಿಂಬಿಸುತ್ತಿದೆ. ಚುನಾವಣೆಯ ದೃಷ್ಟಿಯಿಂದ ಅಷ್ಟಿಷ್ಟು ತಯಾರಿ ನಡೆಸಿದ್ದೇನೆ. ಸುಮಾರು 85 ಸಾವಿರ ಮಹಿಳಾ ಸದಸ್ಯರು ಪರಿಷತ್ತಿನಲ್ಲಿ ಇದ್ದಾರೆಂದು ಕೇಳಿದ್ದೇನೆ. ಅವರ ಬೆಂಬಲ ಹಾಗೂ ಪುರುಷ ಸದಸ್ಯರ ಬೆಂಬಲವೂ ನನಗೆ ದೊರಕಲಿದೆ. ವಾಟ್ಸ್ಆ್ಯಪ್, ಫೇಸ್ಬುಕ್ಗಳಂತಹ ಸಾಮಾಜಿಕ ಮಾಧ್ಯಮಗಳಿಂದ ಮತದಾರರನ್ನು ಮುಟ್ಟುತ್ತಿದ್ದೇನೆ. ಪ್ರತಿ ಜಿಲ್ಲೆಯ ಶಿಕ್ಷಕ, ಶಿಕ್ಷಕಿಯರನ್ನು ಭೇಟಿ ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ.
ಪ್ರಶ್ನೆ: ಎಲ್ಲ ಮಹಿಳಾ ಮತದಾರರ ಬೆಂಬಲ ನಿಮಗೆ ಸಿಗುವ ಭರವಸೆ ಇದೆಯೇ, ಪುರುಷರ ಬೆಂಬಲವನ್ನೂ ನೀವು ಬಲವಾಗಿ ನಂಬಿದ್ದೀರಲ್ಲವೆ.?
ಡಾ. ಸರಸ್ವತಿ: ಪರಿಷತ್ನ ಚುಕ್ಕಾಣಿ ಒಬ್ಬ ಮಹಿಳೆಗೆ ಸಿಗುವುದಾದರೆ ಅದೊಂದು ಇತಿಹಾಸ. ಮಹಿಳಾ ಸಾಹಿತ್ಯವನ್ನು ‘ಅಡುಗೆಮನೆ ಸಾಹಿತ್ಯ’ ಎಂದು ಕಡೆಗಣಿಸುವ ದರಿದ್ರ ವ್ಯವಸ್ಥೆಯನ್ನು ಮೊದಲು ತೆಗೆದು ಹಾಕಬೇಕಾಗಿದೆ. ಇದಕ್ಕೆ ಮಹಿಳೆ ಪುರುಷರಿಬ್ಬರೂ ಸಹಕರಿಸಬೇಕು. ಅನೇಕ ಪುರುಷರು ಮಹಿಳೆಯನ್ನು ಹಾಗೂ ಅವಳ ಕ್ರಿಯಾಶೀಲತೆಯನ್ನು ಮೆಚ್ಚುತ್ತಾರೆ ಹಾಗೂ ಬೆಂಬಲಿಸುತ್ತಾರೆ. ನನಗೆ ಇವರಿಬ್ಬರ ಬೆಂಬಲ ಸಿಗುವ ಭರವಸೆ ಇದೆ.
ಪ್ರಶ್ನೆ: ಸಾಹಿತ್ಯ ಪರಿಷತ್ನ ಅಧ್ಯಕ್ಷಸ್ಥಾನ ಮಹಿಳೆಗೆ ಸಿಕ್ಕರೆ ಏನೇನು ಬದಲಾವಣೆ ಆಗಬಹುದು?
ಡಾ. ಸರಸ್ವತಿ: ಮೊತ್ತ ಮೊದಲು ಪರಿಷತ್ನಲ್ಲಿ ಮನೆ ಮಾಡಿಕೊಂಡಿರುವ ಮಹಿಳಾ ಕೀಳರಿಮೆ ಹೋಗಲಾಡಿಸುವುದು, ಪರಿಷತ್ ನ ಎಲ್ಲ ಸಾಹಿತ್ಯ ಕಲಾಪಗಳಲ್ಲಿ ಆಕೆಗೆ ಯೋಗ್ಯ ಅವಕಾಶಗಳನ್ನು ಕೊಡುವುದು, ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ಮಹಿಳಾ ಸಾಹಿತ್ಯ ಪರ ಕಮ್ಮಟಗಳನ್ನು ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ತ್ರೀ ಪುರುಷ ಸಾಹಿತಿಗಳಿಗೆ ಸಮಾನ ಅವಕಾಶ ಮಾಡಿಕೊಡುವುದು, ಪರಿಷತ್ನ ಆದಾಯವನ್ನು ಅದರ ಚಟುವಟಿಕೆಗಳಿಂದ ಹೆಚ್ಚಿಸು ವುದು, ಪುಸ್ತಕಗಳ ಪ್ರಕಟನೆ ಮಾರಾಟಕ್ಕೆ ವಿಶೇಷವಾದ ಯೋಜನೆಗಳನ್ನು ಹಾಕಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇನೆ.
ಪ್ರಶ್ನೆ: ನಾವು ಕನ್ನಡಿಗರಾಗಿ ಮಹಿಳಾ ಅಧ್ಯಕ್ಷರಿಂದ ಇನ್ನೂ ಏನನ್ನು ನಿರೀಕ್ಷಿಸಬಹುದು.?
ಡಾ. ಸರಸ್ವತಿ: ಸ್ತ್ರೀಪರವಾದ, ದಲಿತ ಹಿಂದುಳಿದವರ ಶೋಷಿತ ಸಾಹಿತ್ಯಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು, ಪರಿಷತ್ನ ಕೆಲವು ಬೈಲಾಗಳಲ್ಲಿ ಬದಲಾವಣೆ ಮಾಡಿ ಜನಪರ ವಾತಾವರಣ ಮೂಡಿಸುತ್ತೇನೆ. ಮಹಿಳೆಯ ಅಸ್ಮಿತೆಯನ್ನು ಎತ್ತಿಹಿಡಿದು ರಾಷ್ಟ್ರಮಟ್ಟದಲ್ಲಿ ಬೆಳೆಯಲು ರಹದಾರಿ ಸಿದ್ಧಗೊಳಿಸುತ್ತೇನೆ.