ಯುಎಇಯ ಮೊದಲ ಮಹಿಳಾ ಗಗನಯಾನಿ ನೂರಾ ಅಲ್-ಮತ್ರೂಶಿ
ದುಬೈ (ಯುಎಇ), ಎ. 10: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನ್ನ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಇನ್ನಿಬ್ಬರು ಗಗನಯಾನಿಗಳನ್ನು ಶನಿವಾರ ನೇಮಿಸಿದ್ದು, ಈ ಪೈಕಿ ಒಬ್ಬರು ಮಹಿಳೆಯಾಗಿದ್ದಾರೆ.
ದುಬೈ ಆಡಳಿತಗಾರ ಹಾಗೂ ಯುಎಇ ಪ್ರಧಾನಿ ಹಾಗೂ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಇಬ್ಬರು ಗಗನಯಾನಿಗಳ ಹೆಸರುಗಳನ್ನು ಟ್ವಿಟರ್ನಲ್ಲಿ ಘೋಷಿಸಿದ್ದಾರೆ. ಅವರೆಂದರೆ ನೂರಾ ಅಲ್-ಮತ್ರೂಶಿ ಮತ್ತು ಮುಹಮ್ಮದ್ ಅಲ್-ಮುಲ್ಲಾ.
ನೂರಾ ಅಲ್-ಮತ್ರೂಶಿ ಯುಎಇಯ ಮೊದಲ ಮಹಿಳಾ ಗಗನಯಾನಿಯಾಗಿದ್ದಾರೆ.
ಈ ಹುದ್ದೆಗಳಿಗಾಗಿ ಯುಇಎಯ ಏಳು ಎಮಿರೇಟ್ಗಳಿಂದ 4,000ಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದರು. ಆಯ್ಕೆಯಾಗಿರುವ ಇಬ್ಬರು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಹ್ಯೂಸ್ಟನ್ನಲ್ಲಿರುವ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ತರಬೇತಿ ಪಡೆಯಲಿದ್ದಾರೆ.
2019ರಲ್ಲಿ ಮೇಜರ್ ಜನರಲ್ ಹಝ್ಝ ಅಲ್-ಮನ್ಸೂರಿ ಯುಎಇಯ ಪ್ರಥಮ ಗಗನಯಾನಿಯಾಗಿದ್ದರು. ಅವರು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 8 ದಿನಗಳನ್ನು ಕಳೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುಎಇಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದೆ. ಅದರ ಮಂಗಳ ಶೋಧಕ ನೌಕೆ ‘ಹೋಪ್’ ಫೆಬ್ರವರಿಯಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ಸೇರಿದೆ. ಈ ಸಾಧನೆಗೈದ ಮೊದಲ ಅರಬ್ ದೇಶ ಅದಾಗಿದೆ.
2024ರಲ್ಲಿ, ಚಂದ್ರನ ಮೇಲೆ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಗುರಿಯನ್ನು ಯುಎಇ ಹೊಂದಿದೆ.
ಅದೂ ಅಲ್ಲದೆ, 2,117ರ ವೇಳೆಗೆ ಮಂಗಳ ಗ್ರಹದಲ್ಲಿ ಮಾನವ ಕಾಲನಿಯೊಂದನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನೂ ಅದು ಹೊಂದಿದೆ.