ಯಾವ ಜಾಗದಲ್ಲಿ ಬೆಂಕಿ ಹಚ್ಚಿದರೋ ಅದೇ ಜಾಗದಲ್ಲಿ ಕನ್ನಡ ಗ್ರಂಥಾಲಯ ಸ್ಥಾಪಿಸುತ್ತೇನೆ: ಸೈಯದ್ ಇಸಾಕ್
''ನಾನು ಸತ್ತರೂ ಕನ್ನಡದ ಹೆಸರಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು''
ಮೈಸೂರು,ಎ.10: ಕನ್ನಡ ನನ್ನನ್ನು ಅಪ್ಪಕೊಂಡಿದೆ. ಸುತ್ತಿಕೊಂಡ ಕನ್ನಡವೇ ನನ್ನ ಉಸಿರು. ಕನ್ನಡವೇ ನನ್ನ ಬುದುಕು. ನಾನು ಸತ್ತರೂ ಕನ್ನಡದ ಹೆಸರಿನಲ್ಲೇ ಅಂತ್ಯಕ್ರಿಯೆ ಮಾಡಬೇಕು. ನನ್ನ ಗ್ರಂಥಾಲಯವನ್ನು ಎಲ್ಲಿ ಸುಟ್ಟಿದ್ದಾರೊ ಅಲ್ಲೆ ಮತ್ತೆ ಗ್ರಂಥಾಲಯ ಸ್ಥಾಪಿಸುತ್ತೇನೆ. ನನಗೆ ಸಹಕಾರ ಯಾರು ಕೊಡುತ್ತಾರೊ ಬಿಡುತ್ತಾರೊ ಗೊತ್ತಿಲ್ಲ. ಆದರೆ ನಾನು ಮತ್ತೆ ಕನ್ನಡ ಸಾರ್ವಜನಿಕ ಗ್ರಂಥಾಲಯವನ್ನು ಪುನರ್ ಸ್ಥಾಪಿಸಿಯೇ ತೀರುತ್ತೇನೆ ಎಂದು ಕನ್ನಡ ಅಭಿಮಾನಿ ಸೈಯದ್ ಇಸಾಕ್ ಭಾವುಕರಾದರು.
ನಗರದ ರಾಜೀವ್ ನಗರದ ಎರಡನೇ ಹಂತದ ಅಮೂರ್ ಮಸೀದಿ ಮುಂಭಾಗದ ಸರ್ಕಾರಿ ಜಾಗದಲ್ಲಿ ಸಣ್ಣದೊಂದು ಶೆಡ್ ನಿರ್ಮಿಸಿ ಕುರಾನ್, ಭಗವದ್ಗೀತೆ, ಸೇರಿದಂತೆ 11 ಸಾವಿರ ಗ್ರಂಥಗಳನ್ನೊಳಗೊಂಡ ಕನ್ನಡ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ ಕನ್ನಡಾಭಿಮಾನ ಮರೆದಿದ್ದ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಎ.8ರಂದು ಗುರುವಾರ ತಡರಾತ್ರಿ ಬೆಂಕಿ ಇಟ್ಟು ಇಡೀ ಅಂಗಡಿಯನ್ನೇ ಸಂಪೂರ್ಣ ಸುಟ್ಟುಹಾಕಿದ್ದಾರೆ.
ಈ ಸಂಬಂಧ 'ವಾರ್ತಾಭಾರತಿ'ಯೊಂದಿಗೆ ತಮ್ಮ ನೋವನ್ನು ಸೈಯದ್ ಇಸಾಕ್ ತೋಡಿಕೊಂಡಿದ್ದು ಹೀಗೆ. ''ಇಲ್ಲಿ ಶೇ.98ರಷ್ಟು ಉರ್ದು ಭಾಷಿಕರೇ ಇರುವುದು. ಇಲ್ಲಿ ಕನ್ನಡವನ್ನು ಹುಟ್ಟು ಹಾಕಬೇಕು ಎಂಬುದು ನನ್ನ ಆಸೆ. ಕನ್ನಡ ನೆಲ, ಜಲದಲ್ಲಿ ವಾಸ ಮಾಡುತ್ತಿರುವ ನಾವು ಕನ್ನಡ ಕಲಿಯದಿದ್ದರೆ ಹೇಗೆ ಎಂದು ಕೊಂಡ ನಾನು ಕನ್ನಡ ಪುಸ್ತಕಗಳನ್ನೊಳಗೊಂಡ ಸಣ್ಣದೊಂದು ಗ್ರಂಥಾಲಯವನ್ನು ಸ್ಥಾಪಿಸಿದೆ ಎಂದರು.
ನಾನು ಶ್ರೀರಂಗಪಟ್ಟಣದವನು. ಮನೆಯಲ್ಲಿನ ಕಷ್ಟದಿಂದ ಸಣ್ಣವಯಸ್ಸಿನಲ್ಲೇ ಒಕ್ಕಲಿಗರು, ಲಿಂಗಾಯತರು ಮತ್ತು ನಾಯಕರ ಮನೆಯಲ್ಲಿ ಜೀತ ಮಾಡುತ್ತಿದ್ದೆ. ಅಲ್ಲಿ ಅವರ ಮಕ್ಕಳು ಓದುವುದನ್ನು ನೋಡಿ ನನಗೂ ಓದಬೇಕು ಎಂಬ ಆಸೆ ಮೂಡುತ್ತಿತ್ತು. ಆದರೆ ನನಗೆ ಅದು ಸಾಧ್ಯವಾಗಲಿಲ್ಲ. ಮುಂದೆ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕನ್ನಡ ಉಳಿಸಿ ಶಿಕ್ಷಣ ಪ್ರೀತಿ ಹುಟ್ಟುಹಾಕುವ ಉದ್ದೇಶದಿಂದ ಗ್ರಂಥಾಲಯ ನಿರ್ಮಿಸಿದೆ.
ಸ್ಯಾನಿಟರಿ ವರ್ಕ್, ಪ್ಲಂಬಿಂಗ್, ಬಣ್ಣ ಹೊಡೆಯುವ ಕೆಲಸ ಮಾಡಿಕೊಂಡು ಅಲ್ಪ ಸ್ವಲ್ಪ ಹಣ ಉಳಿಸಿಕೊಂಡು ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದೆ. ನನಗೆ ಅನೇಕ ಮಂದಿ ಸಹಾಯ ಮಾಡಿ ಸಾವಿರಾರು ಪುಸ್ತಕಗಳನ್ನು ಉಚಿತವಾಗಿ ನೀಡಿದರು. 11 ಸಾವಿರ ಪುಸ್ತಕಗಳೊಂದಿಗೆ 18 ಕನ್ನಡ ಪತ್ರಿಕೆಗಳನ್ನು ತರಿಸಿ ಸಾರ್ವಜನಿಕರಿಗೆ ಓದುವ ಹುಚ್ಚನ್ನು ಹತ್ತಿಸಿದ್ದೆ. ಪ್ರತಿ ದಿನ 150 ರಿಂದ 200 ಮಂದಿ ನನ್ನ ಗ್ರಂಥಾಲಯಕ್ಕೆ ಬಂದು ಓದುತ್ತಿದ್ದರು. ಆದರೆ ಇಂದು ಎಲ್ಲಾ ಪುಸ್ತಕಗಳೂ ಸುಟ್ಟು ಭಸ್ಮವಾಗಿದೆ ಎಂದು ಕಣ್ಣೀರಿಟ್ಟರು.
ನನಗೆ ಇದೇ ಮೊದಲಲ್ಲ ಹಿಂಸೆ ಕೊಟ್ಟಿರುವುದು. ಈ ಹಿಂದೆ ಮೂರು ಬಾರಿ ನಾನು ಬೇರೆ ಬೇರೆ ಕಡೆಗಳಲ್ಲಿ ಗ್ರಂಥಾಲಯ ನಡೆಸುತ್ತಿದ್ದಾಗ ನನ್ನ ಅಂಗಡಿ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ನಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಈಗ ನನ್ನ ಕನಸಿನ ಗ್ರಂಥಾಲಯವನ್ನು ಸುಟ್ಟು ಹಾಕಿದ್ದಾರೆ. ಇದನ್ನು ಯಾರು ಮಾಡಿದ್ದರೊ ಅವರನ್ನು ಈ ದೇಶದಿಂದಲೇ ಗಡಿಪಾರು ಮಾಡಬೇಕು. ಹಾಗಾಗಿ ಈ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದೇನೆ ಎಂದು ಆಕ್ರೋಶಿತರಾದರು.
ನನ್ನ ಗ್ರಂಥಾಲಯದ ಮುಂದೆ ಜಲ್ಲಿಕಲ್ಲು ಹೊಡೆದು ಅದನ್ನು ಮಾರಿಕೊಂಡು ಲೈಬ್ರರಿ ನಡೆಸುತ್ತಿದ್ದೆ. ನನಗೆ ನನ್ನ ಪತ್ನಿ ಸಾಥ್ ನೀಡುತ್ತಿದ್ದರು. ನನ್ನ ಪತ್ನಿ ಬೆಳಗ್ಗೆಯೇ ಬಂದು ಅಂಗಡಿ ಮುಂದೆ ಕಸ ಗುಡಿಸಿ ನೀರು ಹಾಕಿ ರಂಗೋಲಿ ಹಾಕುತ್ತಿದ್ದರು. ನಮ್ಮ ಗ್ರಂಥಾಲಯದಲ್ಲಿರುವ ಪುಸ್ತಕವನ್ನು ಬಟ್ಟೆಯಿಂದ ಒರಸಿ ಹೋಗುತ್ತಿದ್ದರು. ನನ್ನ ಗ್ರಂಥಾಲಯವನ್ನು ಎಷ್ಟು ಪ್ರೀತಿಸುತ್ತೇನೊ ಅಷ್ಟೇ ನನ್ನ ಪತ್ನಿಯನ್ನೂ ಪ್ರೀತಿಸುತ್ತೇನೆ. ನನಗೆ ನಾಲ್ವರು ಮಕ್ಕಳಿದ್ದು, ಐದು ಮಂದಿ ಮೊಮ್ಮಕ್ಕಳು ಇದ್ದಾರೆ. ಈಗ ನನಗೆ 63 ವರ್ಷ ವಯಸ್ಸಾಗಿದೆ ಎಂದರು.
ಹರಿದು ಬಂದ ನೆರವಿನ ಮಹಾಪೂರ: ಕನ್ನಡವನ್ನೇ ಉಸಿರಾಗಿಸಿಕೊಂಡು ಉಚಿತ ಗ್ರಂಥಾಲಯ ನಡೆಸುತ್ತಿದ್ದ ಸೈಯದ್ ಇಸಾಕ್ ಅವರ ಶೆಡ್‍ಗೆ ಬೆಂಕಿ ಹಚ್ಚಿ ಇಡೀ ಪುಸ್ತಕಗಳೇ ಸುಟ್ಟು ಕರಕಲಾಗಿರುವ ವಿಷಯ ತಿಳಿದ ಅನೇಕರು ಇಸಾಕ್ ಅವರ ನೆರವಿಗೆ ಧಾವಿಸಿದ್ದಾರೆ.
ಇವರ ಕನ್ನಡ ಪ್ರೇಮ ಕಂಡ ಆಲ್ ಇಂಡಿಯಾ ಡೆವಲಪ್‍ಮೆಂಟ್ ಫೋರಂ ಸಂಘಟಕರು ಬೆನ್ನಿಗೆ ನಿಂತಿದ್ದಾರೆ. ಶಾಸಕ ಝಮೀರ್ ಅಹಮದ್ ಅವರು ಮತ್ತೆ ಗ್ರಂಥಾಲಯವನ್ನು ಪುನರ್ ಸ್ಥಾಪಿಸಲು ಬೇಕಾಗಿರುವ ಹಣವನ್ನು ನೀಡುವುದಾಗಿ ಹೇಳಿ 2 ಲಕ್ಷ ರೂ.ಗಳನ್ನು ನೀಡಿದ್ದಾರೆ.
ಎಐಎಂಡಿಎಫ್ ಸಂಸ್ಥಾಪಕ ಅಧ್ಯಕ್ಷ ಶಕೀಲ್ ಹಸನ್ ಸೇರಿದಂತೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಸೈಯದ್ ಇಸಾಕ್ ಅವರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಅನೇಕ ಕನ್ನಡ ಪರ ಹೋರಾಟಗಾರರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ದೂರವಾಣಿ ಕರೆ ಮಾಡಿ ನಿಮ್ಮ ಬೆಂಬಲಕ್ಕ ಸರ್ಕಾರ ಇದ್ದು, ನಿಮ್ಮ ಸಹಾಯಕ್ಕೆ ನಾವು ನಿಲ್ಲುತ್ತೇವೆ. ಶೀಘ್ರದಲ್ಲಿಯೆ ನಿಮ್ಮ ಲೈಬ್ರರಿ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಸುಟ್ಟುಹೋಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಮಾಹಿತಿ ಪಡೆಯುತ್ತಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.