ಅನ್ಶು ಮಲಿಕ್, ಸೋನಮ್ ಮಲಿಕ್ ಟೋಕಿಯೊ ಒಲಿಂಪಿಕ್ಸ್ ಗೆ ತೇರ್ಗಡೆ
ಅಲ್ಮಾಟಿ: ಹದಿನೆಂಟು ವರ್ಷದ ಸೋನಮ್ ಮಲಿಕ್ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಕಿರಿಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಖಝಕಿಸ್ತಾನದ ಅಲ್ಮಾಟಿಯಲ್ಲಿ ಶನಿವಾರ ನಡೆದ ಏಶ್ಯನ್ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯಗಳಲ್ಲಿ ಸೋನಮ್ ಮತ್ತು ಅನ್ಶು ಮಲಿಕ್ ಕ್ರಮವಾಗಿ 62 ಕೆ.ಜಿ.ಮತ್ತು 57 ಕೆ.ಜಿ. ವಿಭಾಗದಲ್ಲಿ ಫೈನಲ್ತಲುಪುವ ಮೂಲಕ ಒಲಿಂಪಿಕ್ಸ್ ನಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದಿರಿಸಿದ್ದಾರೆ. ಸೋನಮ್ ತನ್ನ ಗ್ರೂಪ್ ‘ಬಿ’ ಪಂದ್ಯದಲ್ಲಿ ಚೀನಾದ ಜಿಯಾ ಲಾಂಗ್ ಅವರನ್ನು 5-2 ಮತ್ತು ಚೈನಾ ತೈಪೆಯ ಹ್ಸಿನ್ ಪಿಂಗ್ ಪೈ ಅವರನ್ನು 11-0 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತೆ ಖಝಕಿಸ್ತಾನದ ಅಯಾಲಿಮ್ ಕಾಸಿಮೋವಾ ಅವರನ್ನು 9-6ರಿಂದ ಸೋಲಿಸಿ ಒಲಿಂಪಿಕ್ಸ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡರು. ಫೈನಲ್ನಲ್ಲಿ ಸೋನಮ್ ಅವರು ಜಿಯಾ ಅವರನ್ನು ಎದುರಿಸಲಿದ್ದಾರೆ.
ಗ್ರೂಪ್ ‘ಎ’ ಪಂದ್ಯಗಳಲ್ಲಿ ಹತ್ತೊಂಭತ್ತು ವರ್ಷದ ಅನ್ಶು ಅವರು ದಕ್ಷಿಣ ಕೊರಿಯಾದ ಒಲಿಂಪಿಯನ್ ಜೀಯುನ್ ಉಮ್ ಅವರನ್ನು 10-0 ಅಂತರದಿಂದ ,ಖಝಕಿಸ್ತಾನದ ಎಮ್ಮಾ ಟಿಸ್ಸಿನಾ ಅವರನ್ನು 10-0 ಅಂತರದಿಂದ ಮಣಿಸಿದರು. ಉಜ್ಬೇಕಿಸ್ತಾನ್ನ ಶೋಖಿದಾ ಅಖ್ಮೆಡೋವಾ ಅವರನ್ನು ಸೆಮಿಫೈನಲ್ನಲ್ಲಿ 12-0 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದರು. ಅನ್ಶು ಫೈನಲ್ನಲ್ಲಿ ಮಂಗೋಲಿಯಾದ ಖೊಂಗೋರ್ಜುಲ್ ಬೋಲ್ಡ್ ಸೈಖಾನ್ ಅವರನ್ನು ಎದುರಿಸಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ಗೆ ವಿನೇಶ್ ಫೋಗಾಟ್ (53 ಕೆ.ಜಿ.) ಭಾರತದ ಪರ ಸ್ಥಾನ ಕಾಯ್ದಿರಿಸಿದ ಭಾರತದ ಮೊದಲ ಕುಸ್ತಿಪಟು ಎನಿಸಿಕೊಂಡಿದ್ದರು. ಬಳಿಕ ರವಿ ಕುಮಾರ್ ದಹಿಯಾ (57 ಕೆ.ಜಿ), ಭಜರಂಗ್ ಪುನಿಯಾ (65 ಕೆ.ಜಿ.) ಮತ್ತು ದೀಪಕ್ ಪೂನಿಯಾ (86 ಕೆ.ಜಿ.) ಪುರುಷರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಇದುವರೆಗೆ ಒಲಿಂಪಿಕ್ಸ್ನಲ್ಲಿ ತಮ್ಮ ಸ್ಥಾನಗಳನ್ನು ದೃಢಪಡಿಸಿಕೊಂಡಿದ್ದಾರೆ.