ದುಬೈಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಹಾರ್ಟ್ ಆ್ಯಂಡ್ ಲಂಗ್ ಸೆಂಟರ್ ಆಫ್ ಎಕ್ಸಲೆನ್ಸ್
ದುಬೈ: ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಹಾರ್ಟ್ ಆ್ಯಂಡ್ ಲಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ದುಬೈಯಲ್ಲಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದ್ದು ದುಬೈಯಲ್ಲಿ ಇದು ಇಂತಹ ಪ್ರಥಮ ಸೌಲಭ್ಯವಾಗಲಿದೆ. ಈ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಮುಂದಿನ ಹಂತದಲ್ಲಿ ರೋಗಿಗಳಿಗೆ ಕೈಗೆಟಕುವ ದರಗಳಲ್ಲಿ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಕ್ರಿಯೆ ಸೌಲಭ್ಯ ದೊರೆಯುವ ಸಾಧ್ಯತೆಯೂ ಇದೆ.
ಯುಎಇ ಮೂಲದ ಕೆಇಎಫ್ ಹೆಲ್ತ್ ಕೇರ್ ಸಂಸ್ಥೆ ಭಾರತದಲ್ಲಿ ಸ್ಥಾಪಿಸಿರುವ ಮೈತ್ರಾ ಕೇರ್ ನೆಟ್ವರ್ಕ್ ಹಾಗೂ ಕೆನಡಿಯನ್ ಸ್ಪೆಷಲಿಸ್ಟ್ ಹಾಸ್ಪಿಟಲ್ (ಸಿಎಸ್‍ಎಚ್) ಜತೆಗೂಡಿ ಈ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲಿದ್ದು ಹಂತ ಹಂತವಾಗಿ ಈ ಕೇಂದ್ರ ಅಭಿವೃದ್ಧಿಗೊಳ್ಳಲಿದೆ.
ವಿಶ್ವವಿಖ್ಯಾತ ಕಾರ್ಡಿಯೋಥೊರಾಸಿಕ್ ಸರ್ಜನ್ ಡಾ ಕೆ ಆರ್ ಬಾಲಕೃಷ್ಣನ್ ಅವರು ಈ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆರಂಭಿಕ ಹಂತದಲ್ಲಿ ಸೆಂಟರ್ ಫಾರ್ ಎಕ್ಸಲೆನ್ಸ್ ನಲ್ಲಿ ಅಡ್ವಾನ್ಸ್ ಡ್ ಇಂಟರ್‍ವೆನ್ಶನಲ್ ಕಾರ್ಡಿಯಾಲಜಿ ಪ್ರಕ್ರಿಯೆಗಳನ್ನು ನಡೆಸಲಾಗುವುದು ಹಾಗೂ ಅಲ್ಲಿ ಇಲೆಕ್ಟ್ರೋ ಫಿಸಿಯಾಲಜಿ ವಿಭಾಗವೂ ಕಾರ್ಯಾಚರಿಸಲಿದೆ. ಮೈತ್ರಾ ಆಸ್ಪತ್ರೆಯ ಪೂರ್ಣಕಾಲಿಕ ತಂಡವೊಂದೂ ಸಿಎಸ್‍ಎಚ್ ಆಸ್ಪತ್ರೆಯಲ್ಲಿರಲಿದೆ. ಎರಡನೇ ಹಂತದಲ್ಲಿ ದುಬೈಯ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಪೂರ್ಣಪ್ರಮಾಣದ ಹೃದ್ರೋಗ ವಿಜ್ಞಾನ ವಿಭಾಗ ಇರಲಿದ್ದು ಹೃದಯಕ್ಕೆ ಸಂಬಂಧಿಸಿದ ಎಲ್ಲಾ ಶಸ್ತ್ರಕ್ರಿಯೆಗಳೂ ಇಲ್ಲಿ ನಡೆಯಲಿವೆ. ಈ ಹಂತದಲ್ಲಿ ಆರ್ಥೋಪೀಡಿಕ್ಸ್ ಹಾಗೂ ರೋಬಾಟಿಕ್ ಸರ್ಜಿರಿ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಕೂಡ ಆರಂಭಗೊಳ್ಳಲಿದ್ದು ಇದರ ಭಾಗವಾಗಿ ಬೆನ್ನು ಮೂಳೆ ಶಸ್ತ್ರಕ್ರಿಯೆಗೆ ಅನುಕೂಲ ಕಲ್ಪಿಸುವ ಅತ್ಯಾಧುನಿಕ ನರರೋಗವಿಜ್ಞಾನ ವಿಭಾಗವೂ ಇರಲಿದೆ.
ಈ ಕುರಿತು ಗಲ್ಫ್ ನ್ಯೂಸ್ ನೊಂದಿಗೆ ಮಾತನಾಡಿದ ಡಾ. ಬಾಲಕೃಷ್ಣನ್, "ನಾವು ಮುಂದಿನ ಹಂತಗಳಲ್ಲಿ ಹೃದಯ ಕಸಿ ಮಾಡುವ ಉದ್ದೇಶ ಹೊಂದಿದ್ದೇವೆ. ಯುಎಇ ಮತ್ತು ಪ್ರದೇಶದ ಜನ್ಮಜಾತ ಹೃದಯ ರೋಗ ಹೊಂದಿರುವ ರೋಗಿಗಳಿಗೆ ರೋಗ ಪರಿಹಾರ ನೀಡುವ ಸಲುವಾಗಿ ಕೃತಕ ಮತ್ತು ಯಾಂತ್ರಿಕ ಹೃದಯ ಕಸಿ ಮಾಡುವಿಕೆಯಿಂದ ಪ್ರಾರಂಭಿಸುತ್ತೇವೆ" ಎಂದು ಹೇಳಿಕೆ ನೀಡಿದರು.
ಕೆಇಎಫ್ ಹೋಲ್ಡಿಂಗ್ಸ್ ಹಾಗೂ ಕ್ಯಾಲಿಕಟ್ ಮೂಲದ ಮೈತ್ರಾ ಆಸ್ಪತ್ರೆ ಮತ್ತು ಮೈತ್ರಾ ಕೇರ್ ನೆಟ್ವರ್ಕ್ ಸ್ಥಾಪಕರು ಹಾಗೂ ಅಧ್ಯಕ್ಷರಾಗಿರುವ ಫೈಝಲ್ ಕೊಟ್ಟಿಕೊಲ್ಲೊನ್ ಮಾತನಾಡಿ, ದುಬೈಯಲ್ಲಿ ಆರಂಭಗೊಳ್ಳಲಿರುವ ಹಾರ್ಟ್ ಆ್ಯಂಡ್ ಲಂಗ್ ಸೆಂಟರ್ ಆಫ್ ಎಕ್ಸಲೆನ್ಸ್ ಜಾಗತಿಕ ಗುಣಮಟ್ಟದ ಆರೋಗ್ಯ ಸೇವಾ ಸವಲತ್ತುಗಳನ್ನು ದುಬೈ ಮತ್ತು ಯುಎಇ ಜನರಿಗೆ ಒದಗಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.