ಕುಂಭಮೇಳ ನಿಲ್ಲಿಸುವ ಯಾವುದೇ ಯೋಜನೆಯಿಲ್ಲ: ಉತ್ತರಾಖಂಡ ಸರಕಾರ
ಹೊಸದಿಲ್ಲಿ, ಎ.14: ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಎಪ್ರಿಲ್ 30ರವರೆಗೂ ಮುಂದುವರಿಯಲಿದ್ದು, ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಎರಡು ವಾರ ಮುಂಚಿತವಾಗಿಯೇ ಮುಕ್ತಾಯಗೊಳಿಸುವ ಬಗ್ಗೆ ಯಾವುದೇ ಚರ್ಚೆ ನಡೆಯು ತ್ತಿಲ್ಲವೆಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
‘‘ಕುಂಭಮೇಳವು ಸಾಮಾನ್ಯವಾಗಿ ಜನವರಿಯಲ್ಲಿ ಆರಂಭವಾಗುತ್ತದೆ. ಕೋವಿಡ್ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಈ ಬಾರಿ ಅದನ್ನು ಎಪ್ರಿಲ್ನಲ್ಲಿ ಆರಂಭಿಸಲು ನಿರ್ಧರಿಸಿತ್ತು. ಕೇಂದ್ರ ಸರಕಾರದ ಕಾರ್ಯವಿಧಾನ ಮಾನದಂಡ (ಎಸ್ಓಪಿ)ವು ಕೋವಿಡ್ ಸನ್ನಿವೇಶದ ಹಿನ್ನೆಲೆಯಲ್ಲಿ ಕುಂಭಮೇಳದ ಅವಧಿಯನ್ನು ಕಡಿಮೆಗೊಳಿಸಬಹುದೆಂದು ತಿಳಿಸಿದೆ. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’’ ಎಂದು ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್, ಕುಂಭಮೇಳ ಅಧಿಕಾರಿ ದೀಪಕ್ ರಾವತ್ ಬುಧವಾರ ತಿಳಿಸಿದ್ದಾರೆ.
ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಂಭಮೇಳ ಸಮಾರಂಭವನ್ನು ಅವಧಿಗೆ ಮುಂಚಿತವಾಗಿ ಮುಕ್ತಾಯಗೊಳಿಸುವ ಬಗ್ಗೆ ಉತ್ತರ ಸರಕಾರ ಹಾಗೂ ಧಾರ್ಮಿಕ ನಾಯಕರ ಜೊತೆ ಮಾತುಕತೆ ನಡೆಯುತ್ತಿರುವುದಾಗಿ ವರದಿಗಳು ಈ ಮೊದಲು ತಿಳಿಸಿದ್ದವು. ಆದರೆ ಧಾರ್ಮಿಕ ನಾಯಕರು ಈ ತನಕ ಕಾರ್ಯಕ್ರಮವನ್ನು ರದ್ದುಪಡಿಸಲು ಒಪ್ಪುತ್ತಿಲ್ಲವೆಂದು ಅವು ಹೇಳಿವೆ.
ಆದರೆ ಅಧಿಕಾರಿಗಳು ಬುಧವಾರ ಸಂಜೆ ಹೇಳಿಕೆಯೊಂದನ್ನು ನೀಡಿ, ಈ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಹಾಗೂ ಕುಂಭಮೇಳವು ಅಬಾಧಿತವಾಗಿ ಮುಂದುವರಿಯಲಿದೆ ಎಂದು ತಿಳಿಸಿದರು.
ಮಂಗಳವಾರ ಉತ್ತರಾಖಂಡದಲ್ಲಿ 1925 ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಇದು ದಿನದ ಗರಿಷ್ಠ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳಲ್ಲಿ ಹರಿದ್ವಾರದಲ್ಲಿ 1 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗಿವೆ.