ಬೇಸಿಗೆಯಲ್ಲಿ ಮೂಗಿನಲ್ಲಿ ರಕ್ತಸ್ರಾವದ ಅಪಾಯದಿಂದ ದೂರವಿರಲು ಹೀಗೆ ಮಾಡಿ
ಮೂಗಿನಲ್ಲಿ ರಕ್ತಸ್ರಾವ ಅಥವಾ ವೈದ್ಯಕೀಯವಾಗಿ ಕರೆಯಲಾಗುವ ಎಪಿಸ್ಟಾಕ್ಸಿಸ್ ಬೇಸಿಗೆಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಲವರಲ್ಲಿ ಈ ಸಮಸ್ಯೆ ಕಂಡುಬರುತ್ತದೆಯಾದರೂ ಅದು ನಿರಂತರವಾಗಿದ್ದರೆ ಹೆಚ್ಚಿನ ಕಿರಿಕಿರಿ ಮತ್ತು ತೊಂದರೆಗಳನ್ನುಂಟು ಮಾಡುತ್ತದೆ. ನಮ್ಮ ಮೂಗಿನ ಮುಂದಿನ ಮತ್ತು ಹಿಂದಿನ ಭಾಗಗಳಲ್ಲಿ ಬಹಳಷ್ಟು ರಕ್ತನಾಳಗಳಿರುತ್ತವೆ. ಇವು ಅತ್ಯಂತ ದುರ್ಬಲ ಮತ್ತು ಮೃದುವಾಗಿರುವುದರಿಂದ ಸುಲಭವಾಗಿ ರಕ್ತವನ್ನು ಸ್ರವಿಸುತ್ತವೆ. ವಯಸ್ಕರಲ್ಲಿ ಮಾತ್ರವಲ್ಲ,ಮಕ್ಕಳಲ್ಲಿಯೂ ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಕ್ರಮೇಣ ಇದು ರಕ್ತ ನಷ್ಟ, ರಕ್ತಹೀನತೆ,ತಲೆ ಸುತ್ತುವಿಕೆ ಮತ್ತು ಬಳಲಿಕೆಗಳಿಗೆ ಕಾರಣವಾಗುತ್ತದೆ.
ಮೂಗಿನಲ್ಲಿ ರಕ್ತಸ್ರಾವಕ್ಕೆ ಕಾರಣವಾಗುವ ಅಪಾಯದ ಅಂಶಗಳು
* ನಿರಂತರ ಮೂಗು ಒಣಗುವಿಕೆ
ಮೂಗು ಒಣಗಿರುವುದು ರಕ್ತಸ್ರಾವಕ್ಕೆ ಸಾಮಾನ್ಯ ಕಾರಣವಾಗಿದೆ. ಒಣಗಾಳಿಯು ಮೂಗು ಒಣಗುವಂತೆ ಮಾಡುವ ಜೊತೆಗೆ ಬಿರುಕುಗಳನ್ನುಂಟು ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ಮೂಗನ್ನು ತಿಕ್ಕಿದಾಗ ಅಥವಾ ಸೀಟಿದಾಗ ರಕ್ತಸ್ರಾವವುಂಟಾಗುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
* ಪದೇ ಪದೇ ಮೂಗಿನ ಸೋಂಕುಗಳು
ಈ ಸ್ಥಿತಿಯಿಂದ ನರಳುತ್ತಿರುವ ವ್ಯಕ್ತಿಗಳು ಆಗಾಗ್ಗೆ ಮೂಗನ್ನು ಸೀಟುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ವೈರಲ್ ಸೋಂಕು ಉಂಟಾದಾಗ ಮೂಗಿನ ಒಳಭಾಗದಲ್ಲಿ ಕಿರಿಕಿರಿಯಾಗುತ್ತಿರುತ್ತದೆ ಮತ್ತು ಮೃದುವಾಗಿರುತ್ತದೆ ಹಾಗೂ ರಕ್ತಸ್ರಾವವುಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
* ಮೂಗಿನಲ್ಲಿ ಪದೇ ಪದೇ ಬೆರಳು ತೂರಿಸುವುದು
ಮೂಗನ್ನು ಸ್ವಚ್ಛಗೊಳಿಸುವುದು ನೈರ್ಮಲ್ಯದ ದೃಷ್ಟಿಯಿಂದ ಒಳ್ಳೆಯದೇ,ಆದರೆ ಬೆರಳನ್ನು ತೂರಿಸಿ ಅತಿಯಾಗಿ ಕೆರೆಸುತ್ತಿದ್ದರೆ ಅದು ಗಾಯ ಮತ್ತು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದು ಮೂಗಿನಿಂದ ರಕ್ತಸ್ರಾವಕ್ಕೆ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದೆ.
* ಋತುಮಾನಕ್ಕನುಗುಣವಾದ ಅಲರ್ಜಿಗಳು
ಋತುಮಾನಕ್ಕನುಗುಣವಾಗಿ ಉಂಟಾಗುವ ಅಲರ್ಜಿಗಳು ಮೂಗಿನಲ್ಲಿ ಕಿರಿಕಿರಿಯನ್ನುಂಟು ಮಾಡುತ್ತವೆ ಮತ್ತು ಇದು ನಿರಂತರ ಸೀನುವಿಕೆಗೆ ಕಾರಣವಾಗುತ್ತದೆ. ತೀವ್ರ ಸೀನುವಿಕೆಯು ಮೂಗಿನಲ್ಲಿ ರಕ್ತಸ್ರಾವವನ್ನುಂಟು ಮಾಡಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.
* ಗಾಯ
ಮುಖ ಮತ್ತು ಮೂಗಿಗೆ ತೀವ್ರ ಗಾಯಗಳಾದರೆ ಮೂಗಿನಿಂದ ರಕ್ತಸ್ರಾವವಾಗುತ್ತದೆ. ಆದರೆ ಮೂಗಿನಲ್ಲಿಯ ಲೋಳೆಪೊರೆಗೆ ಸಣ್ಣಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ಕೆಲ ಸಮಯದ ಬಳಿಕ ನಿಲ್ಲುತ್ತದೆ. ಆದರೆ ಮುಖಕ್ಕೆ ತೀವ್ರ ಗಾಯವಾಗಿದ್ದರೆ ಅದು ವಿಪರೀತ ರಕ್ತಸ್ರಾವಕ್ಕೆ ಕಾರಣವಾಗಬಹುದು ಮತ್ತು ಮೂಗಿಗೆ ಹತ್ತಿಯ ಪ್ಯಾಕಿಂಗ್ ನೀಡಬೇಕಾಗಬಹುದು.
* ರಕ್ತ ತೆಳುವಾಗಿಸುವ ಔಷಧಿಗಳು
ಆಸ್ಪಿರಿನ್ ಮತ್ತು ವಾರ್ಫರಿನ್‌ನಂತಹ ಬ್ಲಡ್ ಥಿನ್ನರ್‌ಗಳು ಅಥವಾ ರಕ್ತವನ್ನು ತೆಳ್ಳಗಾಗಿಸುವ ಔಷಧಿಗಳು ಅವೇ ಆಗಿ ಮೂಗಿನಿಂದ ರಕ್ತಸ್ರಾವಕ್ಕೆ ಕಾರಣವಾಗುವುದಿಲ್ಲ,ಆದರೆ ಅವು ರಕ್ತವನ್ನು ಹೆಪ್ಪುಗಟ್ಟಿಸುವ ಸಾಮರ್ಥ್ಯವನ್ನು ತಗ್ಗಿಸುತ್ತವೆ ಮತ್ತು ಇದು ಮೂಗಿನಿಂದ ಅತಿಯಾಗಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಟಿಪ್ಸ್
ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ತುರ್ತು ಕೆಲಸಕ್ಕಾಗಿ ಹೊರಗೆ ಹೋಗಲೇಬೇಕಿದ್ದರೆ ತಲೆಗೆ ಹ್ಯಾಟ್ ಧರಿಸಿ ಬಿಸಿಗಾಳಿ ಮೂಗನ್ನು ಪ್ರವೇಶಿಸುವುದನ್ನು ತಡೆಯಲು ನಿಮ್ಮ ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಬಿಸಿಲಿಗೆ ಒಡ್ಡಿಕೊಳ್ಳದಿರುವುದು ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ಅತ್ಯಂತ ಮುಖ್ಯವಾಗಿದೆ.
ಆದಷ್ಟು ತಂಪು ವಾತಾವರಣದಲ್ಲಿರಲು ಪ್ರಯತ್ನಿಸಿ. ಕೋಣೆಯಲ್ಲಿ ಏರ್ ಕಂಡಿಷನರ್‌ಗಳು,ಏರ್‌ಕೂಲರ್‌ಗಳಿದ್ದರೆ ಗಾಳಿಯಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಮತ್ತು ಮೂಗು ಒಣಗುವುದನ್ನು ತಡೆಯುತ್ತದೆ.
ಮೂಗನ್ನು ಒಣಗಲು ಬಿಡಬೇಡಿ. ನೇಸಲ್ ಸ್ಪ್ರೇ ಅಥವಾ ಸಾದಾ ಲವಣಯುಕ್ತ ನೀರನ್ನು ಇದಕ್ಕಾಗಿ ಬಳಸಬಹುದು,ಇವು ಗಾಳಿಯಿಂದ ಮೂಗು ಒಣಗುವುದನ್ನು ಕಡಿಮೆ ಮಾಡುತ್ತವೆ. ಮೂಗು ಒಣಗಿರುವುದು ರಕ್ತಸ್ರಾವಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಇದನ್ನು ಸಾಧ್ಯವಿದ್ದಷ್ಟು ತಪ್ಪಿಸುವುದು ಅಗತ್ಯವಾಗಿದೆ.
ಬೇಸಿಗೆಯಲ್ಲಿ ಶರೀರದಲ್ಲಿ ನಿರ್ಜಲೀಕರಣವನ್ನು ಮತ್ತು ಮೂಗು ಒಣಗುವುದನ್ನು ತಪ್ಪಿಸಲು ನೀರು ಮತ್ತು ಇತರ ಆರೋಗ್ಯಕರ ಪಾನೀಯಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಪ್ರತಿದಿನ 7-8 ಗ್ಲಾಸ್ ನೀರನ್ನು ಮತ್ತು ಇಂಗಾಲೀಕೃತ ಪಾನೀಯಗಳ ಬದಲು ತಾಜಾ ಹಣ್ಣುಗಳ ರಸವನ್ನು ಸೇವಿಸಿ.
ನಿಮ್ಮ ಆಹಾರ ಸಮತೋಲಿತ ಮತ್ತು ಆರೋಗ್ಯಕರವಾಗಿರಲಿ
ಬೇಸಿಗೆಯ ದಿನಗಳಲ್ಲಿ ಇಡಿಯ ಗೋಧಿಯಿಂದ ತಯಾರಿಸಲಾದ ಬ್ರೆಡ್ ನಿಮ್ಮ ದಿನದ ಆಹಾರದ ಭಾಗವಾಗಿರಲಿ. ಅದು ಅಧಿಕ ಸತುವನ್ನು ಒಳಗೊಂಡಿರುತ್ತದೆ ಮತ್ತು ಶರೀರದಲ್ಲಿಯ ರಕ್ತನಾಳಗಳನ್ನು ರಕ್ಷಿಸುತ್ತದೆ. ಮೂಗಿನಿಂದ ರಕ್ತಸ್ರಾವವನ್ನು ತಡೆಯಲು ನಿಮ್ಮ ಆಹಾರವು ಆರೋಗ್ಯಕರ ಮತ್ತು ಸಮತೋಲಿತವಾಗಿರಬೇಕು.
ಸೌಮ್ಯ ರಕ್ತಸ್ರಾವಕ್ಕೆ ನೈಸರ್ಗಿಕ ಚಿಕಿತ್ಸೆ
ಮೂಗಿನಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ಹೊರಗೆ ಹಾಕಿ ಹಾಗೂ ಕನಿಷ್ಠ ಐದು ನಿಮಿಷಗಳ ಕಾಲ ಮೂಗಿನ ಕೆಳ ಅರ್ಧ ಭಾಗದ ಮೇಲೆ ನೇರವಾಗಿ ಬಲವಾದ ಒತ್ತಡವನ್ನು ಹಾಕಿ. ಈ ಸಮಯದಲ್ಲಿ ತಲೆಯು ಮುಂದಕ್ಕೆ ಬಗ್ಗಿರಲಿ ಮತ್ತು ತಲೆಯನ್ನು ಹಿಂದಕ್ಕೆ ವಾಲಿಸುವುದನ್ನು ತಪ್ಪಿಸಿ. ಹೀಗೆ ಒತ್ತಡ ಹಾಕಿದ ಬಳಿಕವೂ 20 ನಿಮಿಷಕ್ಕೂ ಹೆಚ್ಚು ಸಮಯ ರಕ್ತಸ್ರಾವವಾಗುತ್ತಿದ್ದರೆ ತುರ್ತಾಗಿ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.
* ನವ್ಯಾ ಖರಬಂದಾ
* ಪೂರಕ ಮಾಹಿತಿ
ಡಾ.ಸಂಯುಕ್ತಾ ಸಮವೇದನ್
ಇಎನ್‌ಟಿ ಸರ್ಜನ್,ಹೈದ್ರಾಬಾದ್
* ಕೃಪೆ:Onlymyhealth