varthabharthi


ಮುಂಬೈ ಸ್ವಗತ

ಮುಂಬೈ ಫುಟ್ಬಾಲ್‌ನ ದ್ರೋಣಾಚಾರ್ಯ ‘ಬಿಪಿನ್’ ಸುರೇಂದ್ರ ಕರ್ಕೇರ

ವಾರ್ತಾ ಭಾರತಿ : 16 Apr, 2021
ದಯಾನಂದ ಸಾಲ್ಯಾನ್

‘ಮುಂಬೈಯ ಫುಟ್ಬಾಲ್ ಕ್ರೀಡೆಯ ನರ್ಸರಿ’ ಎಂದು ಪ್ರಶಂಸೆಗೆ ಪಾತ್ರವಾಗಿರುವ ಬಿಪಿನ್ ಅಕಾಡಮಿಯ ಬೆಳವಣಿಗೆಯಲ್ಲಿ ಇಲ್ಲಿನ ಪತ್ರಿಕೆಗಳ ಪಾತ್ರ ಬಹಳಷ್ಟಿದೆ ಎಂದು ಧನ್ಯತೆಯಿಂದ ನೆನೆಯುವ ಕರ್ಕೇರ, ಮಕ್ಕಳಿಂದ ಶುಲ್ಕ ತೆಗೆದುಕೊಳ್ಳಬೇಕೆಂದು ಕೆಲವರು ವಿನಂತಿಸುವಾಗ, ‘‘ಇಷ್ಟರವರೆಗಿದ್ದ ಪ್ರಾಮಾಣಿಕತೆ, ನಿಷ್ಠೆಯನ್ನು ಕಳೆದುಕೊಳ್ಳಲಾರೆ’’ ಎಂದು ಹಸನ್ಮುಖಿಯಾಗಿ ನುಡಿಯುತ್ತಾರೆ. ಫುಟ್ಬಾಲ್ ಮೂಲಕವೇ ತಮ್ಮ ಮಗನನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ಕರ್ಕೇರ, ಹೊಸ ಪ್ರತಿಭೆಗಳಲ್ಲಿ ಕಳೆದುಹೋದ ತನ್ನ ಮಗ ಬಿಪಿನ್‌ನನ್ನು ಕಾಣುತ್ತಿದ್ದಾರೆ.


‘‘ಕಾಲ್ಚೆಂಡಾಟದ ಮೂಲ ಬೇರುಗಳನ್ನು ಗಟ್ಟಿಗೊಳಿಸುವ ಓರ್ವ ಸಂವೇದನಾಶೀಲ ವ್ಯಕ್ತಿ’’ (ನವಭಾರತ್ ಹಿಂದಿ) ‘‘ಮಹಾನಗರದ ಕಾಲ್ಚೆಂಡಾಟದ ದ್ರೋಣಾಚಾರ್ಯ’’ (ಆಫ್ಟರ್‌ನೂನ್) ಎಂದೆಲ್ಲ ಪ್ರಶಂಸೆಗೆ, ಮನ್ನಣೆಗೆ ಪಾತ್ರರಾದ ಸುರೇಂದ್ರ ಕರ್ಕೇರ ಮೂಲತಃ ಅವಿಭಜಿತ ದಕ್ಷಿಣ ಕನ್ನಡದವರು ಎನ್ನುವುದು ಸಕಲ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಬರಿಗೈಯಲ್ಲಿ ಬಂದು, ಮುಂಬಾಪುರಿಯಲ್ಲಿ ಬದುಕನ್ನು ಕಟ್ಟಿ, ಇಲ್ಲಿ ಸಾಧನೆಯ ಶಿಖರವನ್ನು ಏರಿದ ತುಳು-ಕನ್ನಡಿಗರು ಹತ್ತು ಹಲವರು. ಅಂತಹ ಸಾಧನೆಯ ಮೇರು ಎತ್ತರವನ್ನು ಏರಿದವರಲ್ಲಿ ಸುರೇಂದ್ರ ಕರ್ಕೇರ ಓರ್ವರು. ‘‘ಬಡ ಫುಟ್ಬಾಲ್ ಆಟಗಾರರ ಬಂಧು’’ (ನವಭಾರತ್ ಟೈಮ್ಸ್) ‘‘ಎಲ್ಲವೂ ಕೇವಲ ಫುಟ್ಬಾಲ್ ಆಟಕ್ಕಾಗಿ’’ (ನವಕಾಲ್) ಎಂದು ಇಲ್ಲಿಯ ಪತ್ರಿಕೆಗಳು ಬಣ್ಣಿಸಿರುವುದು ಅವರೇಕೆ ಮುಖ್ಯರಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವಾಗಿದೆ.

ಬಾಲ್ಯದಿಂದಲೇ ಕಾಲ್ಚೆಂಡಾಟದಲ್ಲಿ ಆಸಕ್ತಿ ಹೊಂದಿದ್ದ ಸುರೇಂದ್ರ ಕರ್ಕೇರ ಕೋಟೆ ಪರಿಸರದಲ್ಲಿ ಜರುಗುತ್ತಿದ್ದ ಕಾಲ್ಚೆಂಡಾಟದ ಸ್ಪರ್ಧೆಗಳನ್ನು ಆಸಕ್ತಿಯಿಂದ ನೋಡುತ್ತಾ ಬೆಳೆದವರು. ಮುನ್ಸಿಪಲ್ ಶಾಲೆಯಲ್ಲಿ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ ಯಂಗ್‌ಮೆನ್ಸ್ ರಾತ್ರಿಶಾಲೆಯಲ್ಲಿ ಮುಂದಿನ ಶಿಕ್ಷಣ ಮುಂದುವರಿಸಿದರು. ರಾತ್ರಿ ಶಾಲೆಗಳ ಸುವರ್ಣ ದಿನಗಳೆಂದು ಗುರುತಿಸಲ್ಪಟ್ಟ ಕಾಲ ಅದು. ಹಗಲು ಹೊಟೇಲ್‌ಗಳಲ್ಲಿ ಗ್ಲಾಸ್, ಪ್ಲೇಟ್ ತೊಳೆಯುತ್ತಾ, ರಾತ್ರಿಶಾಲೆಗಳಲ್ಲಿ ಅಕ್ಷರಗಳ ನಕ್ಷತ್ರಗಳ ಬೆನ್ನು ಹತ್ತಿದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಆ ಕಾಲದಲ್ಲಿದ್ದರು. ರಾತ್ರಿ ಶಾಲೆಗಳಲ್ಲಿ ನುರಿತ ಅಧ್ಯಾಪಕರ ಬೋಧನೆ; ಶಾಲೆ ಬಿಟ್ಟ ನಂತರ ಹಾರ್ನಿಮನ್ ಸರ್ಕಲ್, ಟೌನ್‌ಹಾಲ್‌ಗಳ ಮೆಟ್ಟಲುಗಳಲ್ಲಿ, ರಸ್ತೆಬದಿಯ ಬೆಳಕಿನ ಕೆಳಗೆ ಕುಳಿತು ಅಧ್ಯಯನ... ಹೀಗೆ ದಿನ ಕಳೆಯುತ್ತಿದ್ದವು.

ರಜಾದಿನಗಳಲ್ಲಿ ಈಗ ಇರುವ ವಾಂಖೆಡೆ ಸ್ಟೇಡಿಯಂ ಜಾಗದಲ್ಲಿನ ಮೈದಾನದಲ್ಲಿ ತುಳು ಕನ್ನಡಿಗರ ಕಲರವ. ಕಾಲ್ಚೆಂಡಾಟ ತುಳು ಕನ್ನಡಿಗರ ಅಚ್ಚುಮೆಚ್ಚಿನ ಕ್ರೀಡೆ. ಕೋಟೆ ಪರಿಸರದಿಂದ ತಮ್ಮವರ ಕಾಲ್ಚೆಂಡಾಟದ ಸೊಗಸನ್ನು ಸವಿಯಲು ಮನೆಮಂದಿ ಬಂದು ಒಟ್ಟು ಸೇರುತ್ತಿದ್ದ ಅಂದಿನ ಆ ದಿನಗಳು ಮತ್ತೆ ಮರಳಿ ಬರಲಾರವು. ಆ ದಿನಗಳಲ್ಲಿ ಸುರೇಂದ್ರ ಎಂಬ ಬಾಲಕನ ಕಣ್ಣುಗಳು ಕಾಲ್ಚೆಂಡಾಟದ ಸೂಕ್ಷ್ಮಗಳನ್ನು ಗಮನಿಸ ತೊಡಗಿದವು. ಆ ಮೈದಾನ ಮುಂದೆ ವಾಂಖೆಡೆ ಸ್ಟೇಡಿಯಂ ಆದಾಗ, ಫುಟ್ಬಾಲ್ ಆಟಗಾರರು ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದರು.

ಅಡ್ವೊಕೇಟ್ ಕುದ್ರೋಳಿ ಮೊದಲಾದವರ ನಿಸ್ವಾರ್ಥ ಹೋರಾಟದಿಂದಾಗಿ ಕನ್ನಡಿಗರ ಹಕ್ಕಿನ ಈಗಿರುವ ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್ ಮೈದಾನದ ಜಾಗ ಸಿಕ್ಕಿತು. ಈ ಎಲ್ಲಾ ವಿದ್ಯಮಾನಗಳಿಗೆ ಸಾಕ್ಷೀಭೂತರಾಗಿರುವ ಸುರೇಂದ್ರ ಕರ್ಕೇರ ಮುಂದೆ ಇಡೀ ಮುಂಬೈ ನಗರವೇ ಹೆಮ್ಮೆಪಡುವ ಬಿಪಿನ್ ಫುಟ್ಬಾಲ್ ಅಕಾಡಮಿಯನ್ನು ಕಟ್ಟಿದರು. ಅದೂ ಆಕಸ್ಮಿಕವಾಗಿ, ಯಾವುದೇ ಪೂರ್ವ ನಿರ್ಧಾರ ಹಾಗೂ ಪೂರ್ವ ತಯಾರಿ ಇಲ್ಲದೆ. ಹಿಂದಿಯ ಪ್ರತಿಷ್ಠಿತ ‘ನವಭಾರತ’ ದೈನಿಕ ಗುರುತಿಸಿರುವಂತೆ, ‘‘ಮುಂಬೈಯಲ್ಲಿ ಪ್ರತಿವರ್ಷ ಬಾಲಕರು ಹಾಗೂ ಬಾಲಕಿಯರಿಗಾಗಿ ಉಚಿತವಾಗಿ ಕಾಲ್ಚೆಂಡಾಟದ ಸೂಕ್ಷ್ಮಗಳನ್ನು ಪರಿಚಯಿಸಿಕೊಡುವ ಏಕೈಕ ಸಂಘಟನೆ ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಸಂಸ್ಥೆ.’’

ಹೌದು! ಬಿಪಿನ್ ಫುಟ್ಬಾಲ್ ಅಕಾಡಮಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಡುವ ಒಂದು ಸರಕಾರೇತರ ಸಂಘಟನೆ. ಈ ಸಂಘಟನೆಯ ಹಿಂದೆ ಕತೆ ಮಾತ್ರವಲ್ಲ, ವ್ಯಥೆಯೂ ಇದೆ. ಶೋಕದಿಂದ ರಾಮಾಯಣ ಹುಟ್ಟಿಕೊಂಡಿತು ಎನ್ನುವಂತೆ ಸುರೇಂದ್ರ ಕರ್ಕೇರ ಅವರನ್ನು ಶೋಕದ ದಳ್ಳುರಿಗೆ ತಳ್ಳಿದ ಆ ಘಟನೆ ‘ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಅಸೋಷಿಯೇಷನ್’ನ ಹುಟ್ಟಿಗೆ ಕಾರಣವಾಗುತ್ತದೆ.

 ಬಿಪಿನ್ ಎಂಬ 6 ವಸಂತಗಳನ್ನು ಕಂಡ ಪುಟ್ಟ ಬಾಲಕ ತಂದೆಯಂತೆ ತಾನೂ ಕಾಲ್ಚೆಂಡಾಟದ ಕ್ರೀಡಾಪಟು ಆಗಬೇಕೆಂದು ಕನಸನ್ನು ಕಂಡವ. ಅದು 1988ರ ಡಿಸೆಂಬರ್ ತಿಂಗಳ ರವಿವಾರ, ರೋವರ್ಸ್ ಕಪ್ ಅಂತಿಮ ಪಂದ್ಯದ ದಿನ. ಅದರ ವೀಕ್ಷಣೆಗಾಗಿ ಕಾಡಿ ಬೇಡಿದ ಮುದ್ದುಮಗನ ಕರೆಗೆ ಕಿವಿಯಾದ ತಂದೆ ಸುರೇಂದ್ರ ಕರ್ಕೇರ ಆತನಿಗೆ ಆ ಪಂದ್ಯ ತೋರಿಸಲೆಂದು ಫೈನಲ್ ಪಂದ್ಯದ ಫ್ರೀಪಾಸ್ ತಂದದ್ದೂ ಆಯಿತು. ಆದರೆ ಮನೆಗೆ ಆಕಸ್ಮಿಕವಾಗಿ ಬಂದ ನೆಂಟರಿಂದಾಗಿ ಅಂದು ಮೈದಾನಕ್ಕೆ ಕರೆದುಕೊಂಡು ಹೋಗಲು ಅಸಾಧ್ಯವಾಯಿತು. ಮಗನ ಫುಟ್ಬಾಲ್ ವಾಂಛೆಯನ್ನು ಅರಿತ ಆ ತಂದೆ ‘‘ಎಪ್ರಿಲ್‌ನಿಂದ ನಿನ್ನನ್ನು ನಮ್ಮ ಮನೆಯ ಹಿಂದಿರುವ ಮೈದಾನಕ್ಕೆ ಕರೆದೊಯ್ದು ಅಲ್ಲಿ ಫುಟ್ಬಾಲ್ ಆಟದ ಎಲ್ಲಾ ತಂತ್ರಗಳನ್ನು ಕಲಿಸುವೆ; ನಿನ್ನನ್ನು ಓರ್ವ ಶ್ರೇಷ್ಠ ಫುಟ್ಬಾಲ್ ಆಟಗಾರನನ್ನಾಗಿಸುವೆ’’ ಎಂದು ಸಮಾಧಾನಿಸಿದಾಗ ಮಗನಿಗೂ ಖುಷಿ. ಆದರೆ ವಿಧಿ ಬೇರೆಯೇ ಆಟವಾಡಿತ್ತು.

ನಾಲ್ಕು ದಿನಗಳ ನಂತರ ಗುರುವಾರ ಅಮಾವಾಸ್ಯೆಯಂದು ಸುರೇಂದ್ರ ಕರ್ಕೇರ ಹಾಗೂ ಅವರ ಕುಟುಂಬವನ್ನು ಗಾಢ ಕತ್ತಲಿಗೆ ತಳ್ಳಿತು. ರಾತ್ರಿ ಮಲಗುವವರೆಗೂ ನಗುನಗುತ್ತಾ ಆಟವಾಡುತ್ತಾ ಇದ್ದ ಬಾಲಕ ಬಿಪಿನ್ ಅಚಾನಕ್ಕಾಗಿ ಅಸ್ವಸ್ಥನಾದ. ಆ ಪುಟ್ಟ ಕಂದನಿಗೆ ಅಂದು ತಿನ್ನಿಸಿದ ಪಿಜ್ಜಾ ಗಂಟಲಲ್ಲಿ ಸಿಕ್ಕಿಕೊಂಡಿತೋ ಅಥವಾ ಅಸ್ತಮಾ ಕಾಯಿಲೆ ಇದ್ದ ಬಾಲಕನಿಗೆ ಅದು ಉಲ್ಬಣಿಸಿತೋ ಯಾವುದೂ ಅರ್ಥವಾಗಲಿಲ್ಲ. ಅರ್ಥವಾಗುವ ಮೊದಲೇ ಬಾಲಕ ಬಿಪಿನ್ ಅಗಲಿ ಹೋಗಿದ್ದ. ವೈದ್ಯರು ಆ ರಾತ್ರಿ ಅರ್ಧ ಗಂಟೆ ಬಾಗಿಲು ತೆರೆಯದೆ ಕಾಯಿಸಿದ್ದು, ಅಸ್ತಮಾ ತಜ್ಞರಲ್ಲಿಗೆ ಮೊದಲು ಕರೆದೊಯ್ಯದೆ ಇದ್ದಿದ್ದು, ಈ ಎಲ್ಲವೂ ತಂದೆಯನ್ನು ಕಾಡತೊಡಗಿತು. ರೋವರ್ಸ್ ಕಪ್ ಫೈನಲ್ ಪಂದ್ಯದ ಪಾಸ್ ತಂದೆಯನ್ನು ಅಣಕಿಸುತ್ತಿತ್ತು; ಪಾಪಪ್ರಜ್ಞೆ ಕಾಡುತ್ತಿತ್ತು. ಮಗ ಬಿಪಿನ್, ರೋವರ್ಸ್ ಕಪ್, ಪಾಸ್, ಅಸ್ತಮಾ, ಪಿಜ್ಜಾ, ಮನೆಯ ಹಿಂದಿನ ಮೈದಾನ ಎಲ್ಲವೂ ಕಣ್ಣಮುಂದೆ ಒಂದರ ಹಿಂದೆ ಒಂದು ಹಾದು ಬರುತ್ತಿತ್ತು. ಕೊನೆಗೂ ಏನೋ ಒಂದು ನಿರ್ಧಾರಕ್ಕೆ ಬಂದ ಸುರೇಂದ್ರ ಕರ್ಕೇರ ಕಾಲ್ಚೆಂಡಾಟದ ತಮ್ಮ ಆತ್ಮೀಯ ಗೆಳೆಯರನ್ನು ತಮ್ಮ ಕೋಟೆ ಪರಿಸರದ ಅಡ್ಡೆಯಲ್ಲಿ ಸೇರಿಸಿದರು.

ಬಿಪಿನ್‌ನ ನೆನಪಿಗಾಗಿ ಆತನ ಜನ್ಮದಿನದಂದು ಟೂರ್ನಮೆಂಟ್ ಹಮ್ಮಿಕೊಳ್ಳುವ ನಿರ್ಧಾರ ತಿಳಿಸಿದರು. ಇನ್ನೂ ತಿಂಗಳು ಉಳಿದಿಲ್ಲ, ತಯಾರಿ ಹೇಗೆ ಎಂದು ಜತೆಗಾರರು ಚರ್ಚಿಸಲು ‘‘ಹೇಗೆಂದು ನನಗೆ ಗೊತ್ತಿಲ್ಲ; ಅದಕ್ಕೆ ಬೇಕಾದ ಹಣದ ವ್ಯವಸ್ಥೆ ನನ್ನದು’’ ಎಂಬ ಕರ್ಕೇರರ ದೃಢ ನಿರ್ಧಾರಕ್ಕೆ ಗೆಳೆಯರಲ್ಲಿ ಮರುಪ್ರಶ್ನೆ ಇರಲಿಲ್ಲ. ಫೆಬ್ರವರಿ 11, 1989ರಂದು ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್‌ನಲ್ಲಿ ಮುಂಬೈಯ ಪ್ರತಿಷ್ಠಿತ 8 ತಂಡಗಳನ್ನು ಆಹ್ವಾನಿಸಿ ಬಿಪಿನ್ ನೆನಪಲ್ಲಿ ಪ್ರಥಮ ಟೂರ್ನಮೆಂಟನ್ನು ಆಯೋಜಿಸಲಾಯಿತು. ಬಲಿಷ್ಠ ಪೋರ್ಚುಗಲ್ ತಂಡ ಆ ಟೂರ್ನಮೆಂಟನ್ನು ಗೆದ್ದುಕೊಂಡಿತ್ತು. ಹೀಗೆ ಜನ್ಮತಾಳಿದ್ದು ‘ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಅಸೋಷಿಯೇಷನ್’. ಬಿಪಿನ್ ಮೆಮೋರಿಯಲ್ ಕಾಲ್ಚೆಂಡಾಟದ ಪ್ರಥಮ ಶಿಬಿರ ಪ್ರಾರಂಭಗೊಂಡದ್ದು ಎಪ್ರಿಲ್ 1989ರಲ್ಲಿ. ಹದಿನಾರರ ಒಳಗಿನ ಮಕ್ಕಳಿಗಾಗಿ ನಡೆದ ಈ ಶಿಬಿರವು ಡಾನ್‌ಬಾಸ್ಕೊ ಗೋರೆಗಾಂವ್ ಮೈದಾನದಲ್ಲಿ ಜರುಗಿತು. ಮುಂದೆ ಅದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಇಪ್ಪತ್ತೆರಡು ದಿನಗಳವರೆಗೆ ಮುಂಬೈ ನಗರದ ವಿವಿಧೆಡೆ 6 ಶಿಬಿರಗಳು ನಡೆದಿದ್ದವು.

ಈ ಶಿಬಿರಗಳನ್ನು ಕೇವಲ ಹೆಸರಿಗಾಗಿ, ಪ್ರತಿಷ್ಠೆಗಾಗಿ ಮಾಡಿದ್ದಲ್ಲ. ಭಾರತದ ಶ್ರೇಷ್ಠ ತರಬೇತುದಾರರು, ಮಾಜಿ ಒಲಿಂಪಿಯನ್‌ಗಳು ಈ ಶಿಬಿರಗಳಲ್ಲಿ ಮಕ್ಕಳಿಗೆ ಕಾಲ್ಚೆಂಡಾಟದ ಎಲ್ಲಾ ಸೂಕ್ಷ್ಮಾತಿಸೂಕ್ಷ್ಮಗಳನ್ನು ಮನದಟ್ಟು ಮಾಡುತ್ತಿದ್ದರು. ಮುಂದೆ ‘ಬಿಪಿನ್’ ಎಂದೂ ಹಿಂದೆ ಸರಿಯಲಿಲ್ಲ. ಈ ರೀತಿ ಅಸ್ತಿತ್ವಕ್ಕೆ ಬಂದ ಮಹಾರಾಷ್ಟ್ರ ಪ್ರಥಮ ಏಕೈಕ ಖಾಸಗಿ ಫುಟ್ಬಾಲ್ ತರಬೇತಿ ಶಿಬಿರವು ರಾಜ್ಯ ಫುಟ್ಬಾಲ್ ಅಕಾಡೆಮಿಯ ಕೆಂಗಣ್ಣಿಗೆ ಗುರಿಯಾಯಿತು. ಸುರೇಂದ್ರ ಅವರ ವಿರುದ್ಧ ‘ಅನಧಿಕೃತ’ ಎಂದು ಒಂದಲ್ಲ ಎರಡು ಸಲ ಮೊಕದ್ದಮೆ ಹೂಡಲಾಯಿತು. ಎರಡು ಸಲವೂ ಜಯವು ಸುರೇಂದ್ರ ಕರ್ಕೇರ ಹಾಗೂ ‘ಬಿಪಿನ್’ನ ಪಾಲಿಗಾಯಿತು. ಏಳೆಂಟು ವರ್ಷ ನಿರಂತರ ದೊಡ್ಡವರ ಟೂರ್ನ್‌ಮೆಂಟ್ ಜತೆಗೆ ಮಕ್ಕಳ ಶಿಬಿರ ಮತ್ತು ಟೂರ್ನಮೆಂಟ್ ನಡೆಯುತ್ತಿದ್ದವು. ಆದರೆ ಎಲ್ಲ ರೀತಿಯಿಂದಲೂ ದೊಡ್ಡವರ ಟೂರ್ನಮೆಂಟಿಗೆ ಪ್ರಾಮುಖ್ಯತೆ ಸಿಗುತ್ತಿರುವುದು ಕರ್ಕೇರ ಅವರಿಗೆ ಸರಿಕಾಣಲಿಲ್ಲ. ಹೀಗಾಗಿ ದೊಡ್ಡವರ ಟೂರ್ನಮೆಂಟನ್ನು ಅನಿವಾರ್ಯವಾಗಿ ನಿಲ್ಲಿಸಲಾಯಿತು. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳ ಮಕ್ಕಳ ಶಾಲಾ ರಜಾ ಸಂದರ್ಭಗಳಲ್ಲಿ ಇಪ್ಪತ್ತೊಂದು ದಿನ ನಗರ ಹಾಗೂ ಉಪನಗರಗಳಲ್ಲಿ ಶಿಬಿರಗಳ ಆಯೋಜನೆ, ಕೊನೆಗೆ ಶಿಬಿರಗಳ ಆಯ್ದ ಮಕ್ಕಳಿಂದ ಶಿಬಿರಗಳೊಳಗೆ ಪಂದ್ಯಾಟ ಜರಗುತ್ತಿದ್ದವು.

ವಿದ್ಯಾರ್ಥಿನಿಯರು ಇಂತಹ ಶಿಬಿರಗಳಿಂದ ಯಾಕೆ ವಂಚಿತರಾಗಬೇಕೆಂದು ಮನಗಂಡ ಕರ್ಕೇರ ಹೆಣ್ಣುಮಕ್ಕಳ ಶಿಬಿರವನ್ನು ಆಯೋಜಿಸಲು ಪ್ರಾರಂಭಿಸಿದರು. ಇದು ಮಹಾರಾಷ್ಟ್ರದಲ್ಲಿ ಪ್ರಥಮ ಎನಿಸಿತು. ಶಿಬಿರಾರ್ಥಿಗಳಿಂದ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ಉಚಿತವಾಗಿ ಸುಮಾರು ಎರಡರಿಂದ ಮೂರು ಸಾವಿರ ಮಕ್ಕಳಿಗೆ ಪ್ರತಿವರ್ಷ ಶಿಬಿರ ನಡೆಸುವುದು, ಕೊನೆಗೆ ಟೂರ್ನಮೆಂಟ್‌ಗಳ ಆಯೋಜನೆ.. ಇವೆಲ್ಲವುದಕ್ಕೂ ಪ್ರಾಯೋಜಕರು, ದಾನಿಗಳು, ಆಪ್ತಮಿತ್ರರು ಸಹಕರಿಸಿದರೂ ತಮ್ಮ ಕೈಯಿಂದಲೂ ಹಣ ನೀರಿನಂತೆ ವ್ಯಯ ಮಾಡುತ್ತಿದ್ದರು. ಪ್ರತಿಭೆಗಳು ಎಲ್ಲೂ ಅಡಗಿರಬಹುದು, ಅವುಗಳನ್ನು ಹುಡುಕುವ, ಗುರುತಿಸುವ ಕಾರ್ಯ ತಮ್ಮದು ಎಂದರಿತ ಕರ್ಕೇರರ ‘ಬಿಪಿನ್’ ಬುಡಕಟ್ಟು ಹಾಗೂ ಕೊಳೆಗೇರಿಯ ಸುಮಾರು ನೂರೈವತ್ತು ಮಕ್ಕಳನ್ನು ಒಟ್ಟುಗೂಡಿಸಿ ಅವರಿಗೂ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಮುಂಬೈ ಹಾಗೂ ಉಪನಗರಗಳು, ರಾಜ್ಯವನ್ನು ದಾಟಿ ಅಂಕೋಲಾ, ಮಂಗಳೂರು ಇತ್ಯಾದಿ ಕಡೆಗಳಿಗೆ ತೆರಳಿ ಅಲ್ಲಿಯೂ ಶಿಬಿರಗಳನ್ನು ‘ಬಿಪಿನ್’ ಆಯೋಜಿಸಿದೆ.

ಆದರೆ ಅದರಿಂದಾಗಿ ಕರ್ಕೇರ ಬಹಳಷ್ಟು ದೊಡ್ಡ ಮೊತ್ತದ ಹಣವನ್ನು ಕಳಕೊಂಡರು. ಸಾಲದ ಹೊರೆ ಲಕ್ಷ ದಾಟಿತು. ಅಷ್ಟೇ ಆಗಿದ್ದರೆ ಚಿಂತೆಯಿರಲಿಲ್ಲ. ಮಂಗಳೂರಿನ ಸೈಂಟ್ ಅಲೋಶಿಯಸ್ ಮೈದಾನದಲ್ಲಿ ಮುಂಬೈ ‘ಬಿಪಿನ್’ ತಂಡ ನಿಯಮದ ಪ್ರಕಾರ 9ರಿಂದ 16 ವರ್ಷಗಳ ಬಾಲಕರಿಗಾಗಿ ವ್ಯವಸ್ಥಿತವಾಗಿ ಶಿಬಿರ ನಡೆಸಿತ್ತು. ಆದರೆ ಪಂದ್ಯಾಟಕ್ಕಾಗಿ ಅವರನ್ನು ಮುಂಬೈಗೆ ಆಹ್ವಾನಿಸಿದಾಗ ಆಗಮಿಸಿದ ತಂಡದಲ್ಲಿದ್ದವರು ಐದಾರು ಶಿಬಿರಾರ್ಥಿ ಬಾಲಕರು. ಉಳಿದವರೆಲ್ಲ 20ರಿಂದ 22 ವರ್ಷದ ಆಸುಪಾಸಿನ ಯುವಕರು. ತನ್ನೂರಿನ ತಂಡದಿಂದ ಇಂತಹ ದ್ರೋಹವನ್ನು ನಿರೀಕ್ಷಿಸಿರದ ಕರ್ಕೇರರಿಗೆ ಭ್ರಮನಿರಸನವಾಯಿತು. ತಮ್ಮವರಿಂದಲೇ ಆದ ಅನ್ಯಾಯಕ್ಕೆ ರೋಸಿಹೋದ ಕರ್ಕೇರ ಮುಂದೆಂದೂ ಅಂತಹ ಸಾಹಸಕ್ಕೆ ಕೈ ಹಾಕಲಿಲ್ಲ. ಇಲ್ಲಿಗೆ ಬಂದ ಮಂಗಳೂರು ತಂಡ ಟ್ರೋಫಿಯನ್ನು ಎತ್ತಿದಾಗ ಕರ್ಕೇರ ತನಗಾದ ಅವಮಾನ, ವಂಚನೆಗೆ ತಾನೇ ತಲೆ ತಗ್ಗಿಸುವಂತಾಯಿತು.

ಹೆಣ್ಣು ಮಕ್ಕಳಿಗೆ ಪ್ರಥಮ ಶಿಬಿರ ಆಯೋಜಿಸಿದ್ದ ‘ಬಿಪಿನ್’ನ ಸುರೇಂದ್ರ ಕರ್ಕೇರ ಅವರನ್ನು ಗುರುತಿಸಿ ಮಹಾರಾಷ್ಟ್ರ ಮಹಿಳಾ ಫುಟ್ಬಾಲ್ ತಂಡದ ಸಂಚಾಲಕರಾಗಿ, ತಂಡದ ಮ್ಯಾನೇಜರ್ ಆಗಿ, ಆಯ್ಕೆಗಾರ ರನ್ನಾಗಿ ನೇಮಿಸಲಾಯಿತು. ಆ ಮೂಲಕ ಮಹಾರಾಷ್ಟ್ರ ರಾಜ್ಯ ಮಹಿಳಾ ಫುಟ್ಬಾಲ್ ತಂಡ ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವಂತಾಯಿತು.

ಹಲವು ಏಳುಬೀಳುಗಳನ್ನು ದಾಟಿ ರಜತ ಸಂಭ್ರಮ ವನ್ನು ಆಚರಿಸಿದ್ದ ‘ಬಿಪಿನ್’, ಕರ್ಕೇರರ ಕನಸಿನಂತೆ ‘ಬಿಪಿನ್ ಫುಟ್ಬಾಲ್ ಅಕಾಡಮಿ’ಯಾಗಿ ರೂಪಾಂತರಗೊಂಡಿತು. ಮಹಾರಾಷ್ಟ್ರದ ಮಹಿಳಾ ತಂಡ ಮಾತ್ರವಲ್ಲದೆ, ಪುರುಷರ ತಂಡದ ಆಯ್ಕೆಗಾರರಾಗಿ ನಿಯುಕ್ತಿಗೊಂಡು ನಿಷ್ಪಕ್ಷದಿಂದ ರಾಜ್ಯದ ಉತ್ತಮ ತಂಡವನ್ನು ಕಟ್ಟಿದರು. ಡಬಲ್ ಚಾಂಪಿಯನ್ ಎಚ್. ಎಸ್. ನಾರಾಯಣ್, ಫಿಫಾ ರೆಫ್ರಿ ಎಂ. ಜಿ. ಸುವರ್ಣ, ಮಾಜಿ ಭಾರತೀಯ ತರಬೇತುದಾರರಾದ ಡೆರಿಕ್ ಡಿ’ಸೋಜ, ಮಾಜಿ ಟಾಟಾ ತರಬೇತುದಾರರಾದ ಅರ್ಥರ್ ಪಿರೇರಾ, ತಿಮೋತಿ ಪಿರೇರಾ, ಫ್ರಾನ್ಸಿಸ್ ಫೆರ್ನಾಂಡಿಸ್, ಕೆ. ಬಾಲಕೃಷ್ಣನ್, ಹರೀಶ್ ರಾವ್, ತೇಜ್‌ಪಾಲ್ ಸಾಲ್ಯಾನ್, ದಾಮೋದರ್ ಕುಕ್ಯಾನ್, ಚಾರ್ಲಿ ಪಡ್ವಾಲ್, ಸುರೇಶ್ ರಾವ್, ಎಲ್ವಿಸ್ ಸೋನ್ಸ್, ಟೋನಿ ರೊಡ್ರಿಗಸ್, ಕೆಮೆಲೊ ಫೆರ್ನಾಂಡಿಸ್, ವಿಲ್ಫ್ರೆಡ್ ಪಿರೇರಾ, ಗೋಕುಲ್ ಕಾಂಚನ್, ಪೀಟರ್ ಫೆರ್ನಾಂಡಿಸ್, ರೆನ್ವಿಕ್ ಡಿ’ ಸೋಜ, ಪುರುಷೋತ್ತಮ್ ಬಂಗೇರ... ಹೀಗೆ ಫುಟ್ಬಾಲ್ ಕ್ರೀಡೆಯ ಒಳಹೊರಗನ್ನು ಬಲ್ಲ ತಜ್ಞರನ್ನೊಳಗೊಂಡ ಈ ತಂಡದಿಂದ ಅತ್ಯುತ್ತಮ ಪ್ರತಿಭೆಗಳು ಮೂಡಿಬಂದವು. ಇಲ್ಲಿನ ಪ್ರತಿಭೆಗಳು ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಕೆಲವರಂತೂ ಖ್ಯಾತ ತರಬೇತುದಾರರಾಗಿಯೂ ಇಂದು ಗುರುತಿಸಲ್ಪಡುತ್ತಿದ್ದಾರೆ.

‘ಮುಂಬೈಯ ಫುಟ್ಬಾಲ್ ಕ್ರೀಡೆಯ ನರ್ಸರಿ’ ಎಂದು ಪ್ರಶಂಸೆಗೆ ಪಾತ್ರವಾಗಿರುವ ಬಿಪಿನ್ ಅಕಾಡಮಿಯ ಬೆಳವಣಿಗೆಯಲ್ಲಿ ಇಲ್ಲಿನ ಪತ್ರಿಕೆಗಳ ಪಾತ್ರ ಬಹಳಷ್ಟಿದೆ ಎಂದು ಧನ್ಯತೆಯಿಂದ ನೆನೆಯುವ ಕರ್ಕೇರ, ಮಕ್ಕಳಿಂದ ಶುಲ್ಕ ತೆಗೆದುಕೊಳ್ಳಬೇಕೆಂದು ಕೆಲವರು ವಿನಂತಿಸುವಾಗ, ‘‘ಇಷ್ಟರವರೆಗಿದ್ದ ಪ್ರಾಮಾಣಿಕತೆ, ನಿಷ್ಠೆಯನ್ನು ಕಳೆದುಕೊಳ್ಳಲಾರೆ’’ ಎಂದು ಹಸನ್ಮುಖಿಯಾಗಿ ನುಡಿಯುತ್ತಾರೆ. ಫುಟ್ಬಾಲ್ ಮೂಲಕವೇ ತಮ್ಮ ಮಗನನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವ ಕರ್ಕೇರ, ಹೊಸ ಪ್ರತಿಭೆಗಳಲ್ಲಿ ತನ್ನ ಕಳೆದುಹೋದ ಬಿಪಿನ್‌ನನ್ನು ಕಾಣುತ್ತಿದ್ದಾರೆ. ಇವರ ಫುಟ್ಬಾಲ್‌ನ ಹುಚ್ಚನ್ನು ಕಂಡು ‘‘ಫುಟ್ಬಾಲ್ ಕಿ ದೀವಾನ್‌ಗೀ ಉಸೆ ಕಹಾ ಲೆಜಾಯೇಗೀ?’’ ಎಂದು ದೈನಿಕಗಳು ಉದ್ಗರಿಸಿವೆ. ತಮ್ಮ ಫುಟ್ಬಾಲ್ ಹುಚ್ಚಿನಿಂದ ಸಾಲದ ಹೊರೆ ಹೆಚ್ಚಿದಾಗ ತಮ್ಮ ಸೆಂಟ್ರಲ್ ಬ್ಯಾಂಕಿನ ಕೆಲಸಕ್ಕೆ ರಾಜೀನಾಮೆ ನೀಡಿ ಬಂದ ಮೊತ್ತದಲ್ಲಿ ಒಂದಷ್ಟು ಸಾಲ ತೀರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟವರು ಕರ್ಕೇರ.

ತನ್ನ ಮಗನ ಸಾವು ಮೂಲ ಕಾರಣವಾಗಿ ಆ ಮೂಲಕ ಇಲ್ಲಿನ ಕಾಲ್ಚೆಂಡಾಟವನ್ನು ಶ್ರೀಮಂತಗೊಳಿಸಿದ ಕರ್ಕೇರ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ‘ಶಿವಛತ್ರಪತಿ ಪುರಸ್ಕಾರ’ ರಾಜಕೀಯ ಧುರೀಣರಿಂದಾಗಿ ತಪ್ಪಿಹೋದಾಗ ಇಲ್ಲಿನ ‘ಸಾಮ್ನಾ’, ‘ಲೋಕಸತ್ತಾ’, ‘ಆಫ್ಟರ್‌ನೂನ್’, ಟೈಮ್ಸ್ ಆಫ್ ಇಂಡಿಯಾ ಮೊದಲಾದ ಪತ್ರಿಕೆಗಳು ‘‘ಛತ್ರಪತಿ ಪುರಸ್ಕಾರ ಪಡೆಯುವುದು ಒಂದು ಕಲೆ’’ಯೆಂದು ಕರ್ಕೇರ ಅವರ ಪರವಾಗಿ ನಿಂತು ಅವರನ್ನು ಸಮಾಧಾನಿಸಿತ್ತು. ತನಗೆ ಪ್ರಶಸ್ತಿ ಬಂದಿದ್ದರೆ ಅದರಿಂದ ದೊರೆತ ಹಣದಿಂದ ತಾನು ಋಣಮುಕ್ತನಾಗುತ್ತಿದ್ದೆ ಎಂದು ಹೇಳುವಾಗ ಕರ್ಕೇರರ ಮುಗ್ಧತೆಯ ಅರಿವು ನಮಗಾಗುತ್ತದೆ. ನಮ್ಮ ಕರ್ನಾಟಕ ಸರಕಾರವಂತೂ ಮುಂಬೈಯತ್ತ ದೃಷ್ಟಿ ಬೀರುವುದಿಲ್ಲ; ಅದರ ನಿರೀಕ್ಷೆಯೂ ಇಲ್ಲಿನ ಜನರಿಗಿಲ್ಲ. ‘‘ವಿಪರೀತ ಆರ್ಥಿಕ ಸಮಸ್ಯೆಯ ನಡುವೆಯೂ ಕರ್ಕೇರ ಅವರಿಗಿದ್ದ ಕಾಲ್ಚೆಂಡಾಟ ಹಾಗೂ ಮಕ್ಕಳ ಮೇಲಿನ ಮಮತೆಯು ‘ಬಿಪಿನ್’ ಫುಟ್ಬಾಲ್ ಚಳವಳಿಯನ್ನು ಮುಂಬೈಯ ಒಂದು ಶ್ರೇಷ್ಠ ಗುಣಮಟ್ಟದ ಕ್ರೀಡಾ ಸಂಘಟನೆಯನ್ನಾಗಿಸಿತ್ತ್ತು’’ ಎಂದು ‘ಮಿಡ್‌ಡೇ’ ಪತ್ರಿಕೆಯು ಉಲ್ಲೇಖಿಸಿರುವುದು ಈ ಸಂದರ್ಭದಲ್ಲಿ ನೆನೆಯಬಹುದು.

ಮುಂಬೈ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಚುನಾವಣೆಯಲ್ಲೂ ತನ್ನ ಬಣವನ್ನು ಕಟ್ಟಿ ಅಲ್ಲಿ ಯಶಸ್ಸು ಸಾಧಿಸಿದ ‘ಬಿಪಿನ್’ ಬಳಗದ ಜನಪ್ರಿಯತೆಯನ್ನು ಅದರಿಂದಲೇ ಗಮನಿಸಬಹುದು. ಸತೀಶ್ ಉಚ್ಚಿಲ್ ಅಧ್ಯಕ್ಷರಾಗಿರುವ ಶಾಸಕ ಗೋಪಾಲ್ ಶೆಟ್ಟಿ (ಟ್ರಸ್ಟಿ), ಡಬಲ್ ಒಲಿಂಪಿಯನ್ ಎಸ್. ಎಸ್. ನಾರಾಯಣ್ (ಟ್ರಸ್ಟಿ), ಎಚ್. ವಿ. ಸುವರ್ಣ (ಗೌರವ ಕಾರ್ಯದರ್ಶಿ), ಅಡ್ವಕೇಟ್ ಮಂಜುಳಾ ರಾವ್ (ಟ್ರಸ್ಟಿ), ಫಾ. ಜೆರಾಲ್ಡ್ ರೋಡ್ರಿಗಸ್ (ಟ್ರಸ್ಟಿ), ಸುರೇಂದ್ರ ಕರ್ಕೇರ (ಸಂಸ್ಥಾಪಕರು) ಮೊದಲಾಗಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನೊಳಗೊಂಡಿರುವ ಬಿಪಿನ್ ಫುಟ್ಬಾಲ್ ಅಕಾಡಮಿಯು ಬಿಪಿನ್ ನೆನಪನ್ನು ಜೀವಂತವಾಗಿಡಲು ಬಯಸುವುದರ ಜತೆಗೆ ಮಕ್ಕಳಿಗೆ ಮೂಲಭೂತ ಸೌಕರ್ಯದೊಂದಿಗೆ ಫುಟ್ಬಾಲ್ ಕ್ರೀಡೆಯನ್ನು ಕಲಿಸುವ ಉಚ್ಚ ಮಟ್ಟದ ತರಬೇತಿ ನೀಡುವ ಭರವಸೆಯೊಂದಿಗೆ ಮುನ್ನಡೆಯುತ್ತಿದೆ. ಈಗಿನ ಕೊರೋನ ಸಂದರ್ಭದಲ್ಲಿ ತಮ್ಮ ಪತ್ನಿ ಬೀನಾ ಕರ್ಕೇರ ಹಾಗೂ ಕಿರಿಮಗ ವಿಶಾಲ್ ಕರ್ಕೇರ ಜೊತೆ ಮನೆಯಲ್ಲಿಯೂ ಫುಟ್ಬಾಲ್‌ನೊಂದಿಗೆ ಧ್ಯಾನಸ್ಥರಾಗಿದ್ದಾರೆ ಸುರೇಂದ್ರ ಕರ್ಕೇರ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)