ಕಣ್ಮರೆಯಾದ ಕರುಣಾಮೂರ್ತಿ ಜೆ.ಸಿ.ಲಿನ್
ನಿವೃತ್ತ ಐಎಎಸ್ ಅಧಿಕಾರಿ ಲಿನ್ ಮೃದು ಮಾತಿನ, ಸೌಮ್ಯ ಸ್ವಭಾವದ, ಸರಳ ಸಜ್ಜನಿಕೆಯ ವ್ಯಕ್ತಿ. ಆದರೆ ಆಡಳಿತಾತ್ಮಕ ವಿಷಯದಲ್ಲಿ ವಸ್ತುನಿಷ್ಠವಾಗಿ ವಿವೇಚಿಸುವ...
2015- ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನಿಸಿ ನೂರು ವರ್ಷಗಳಾಗಿದ್ದವು. ಆ ನೆಪದಲ್ಲಿ ರಾಜ್ಯ ಸರಕಾರ ದೇವರಾಜ ಅರಸು ಶತಮಾನೋತ್ಸವ ಆಚರಿಸಲು ನಿರ್ಧರಿಸಿ, ಅದಕ್ಕೊಂದು ಸಮಿತಿ ರಚಿಸಿ, ಇಡೀ ವರ್ಷ ಅರಸು ಅವರನ್ನು ಮತ್ತೆ ನಾಡಿಗೆ ನೆನಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ನಾನು ದೇವರಾಜ ಅರಸು ಅವರ ಆಪ್ತ ಒಡನಾಟದಲ್ಲಿದ್ದ ಎಲ್ಲಾ ವರ್ಗದ ವ್ಯಕ್ತಿಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದೆ. ಅಂಥವರನ್ನು ಕಂಡು ಮಾತನಾಡಿಸಿ, ದೇವರಾಜ ಅರಸು ಅವರ ವ್ಯಕ್ತಿತ್ವವನ್ನು ನಾಡಿನ ಜನತೆಯ ಮುಂದಿಡುವ ಕೆಲಸದಲ್ಲಿ ನಿರತನಾಗಿದ್ದೆ.
ಆಗ ನನ್ನ ಗಮನಕ್ಕೆ ಬಂದವರು ನಿವೃತ್ತ ಐಎಎಸ್ ಅಧಿಕಾರಿ ಜೆ.ಸಿ.ಲಿನ್. ಆ ಸಂದರ್ಭದಲ್ಲಿ ಅವರ ಬಗ್ಗೆ ಹೆಚ್ಚಿಗೆ ತಿಳಿದಿರಲಿಲ್ಲ. ತಿಳಿಯುವ ಆಸಕ್ತಿ ಮತ್ತು ಅನಿವಾರ್ಯತೆಯೂ ಎದುರಾಗಿರಲಿಲ್ಲ. ಆದರೆ ಅರಸು ಅವರಿಗೆ ತೀರಾ ಆಪ್ತ ಅಧಿಕಾರಿಯಾಗಿದ್ದರು ಎಂದು ತಿಳಿದಾಗ, ಜೆ.ಸಿ.ಲಿನ್ ಅವರ ಬಗ್ಗೆ ಮಾಹಿತಿ ಕಲೆಹಾಕತೊಡಗಿದೆ. ಮೊದಲಿಗೆ ಫೋನ್ ನಂಬರ್ ಸಂಪಾದಿಸಿದೆ, ಮನೆ ವಿಳಾಸ ಪತ್ತೆ ಹಚ್ಚಿದೆ. ಅವರು ರೆಗ್ಯುಲರ್ ಆಗಿ ಸೇಂಟ್ ಮಾರ್ಕ್ಸ್ ರೋಡಿನ ಕೋಶಿಶ್ ರೆಸ್ಟೋರೆಂಟ್ಗೆ ಭೇಟಿ ನೀಡುತ್ತಾರೆಂಬುದನ್ನು ಸ್ನೇಹಿತರಿಂದ ತಿಳಿದೆ.
ಆದರೆ ಜೆ.ಸಿ.ಲಿನ್ರನ್ನು ಖುದ್ದಾಗಿರಲಿ, ಫೋಟೋದಲ್ಲಿಯೂ ನೋಡಿರಲಿಲ್ಲ. ಬೇರೆಯವರ ಮೂಲಕ ಪರಿಚಯ ಮಾಡಿಕೊಳ್ಳಲೂ ಹೋಗಿರಲಿಲ್ಲ. ಹಾಗಾಗಿ ನೇರವಾಗಿ ಕೋಶಿಶ್ ರೆಸ್ಟೋರೆಂಟ್ ಮ್ಯಾನೇಜರ್ ಬಳಿ ಹೋಗಿ, ವಿಷಯ ತಿಳಿಸಿದೆ. ಅವರು, ‘ಇತ್ತೀಚೆಗೆ ರೆಗ್ಯುಲರ್ ಆಗಿ ಬರ್ತಾ ಇಲ್ಲ, ಬಂದರೆ ಕೊನೆಪಕ್ಷ ಅರ್ಧಗಂಟೆಯಾದರೂ ಸಮಯ ಕಳೆಯುತ್ತಾರೆ, ನಿಮ್ಮ ಫೋನ್ ನಂಬರ್ ಕೊಡಿ, ತಿಳಿಸುತ್ತೇನೆ’ ಎಂದರು. ನಾನು ನನ್ನ ಕೆಲಸದ ಸಮಯವನ್ನು ಸರಿದೂಗಿಸಿಕೊಂಡು, ಅವರ ಭೇಟಿಗಾಗಿ ಕಾಯತೊಡಗಿದೆ. ಕೊನೆಗೂ ಫೋನ್ ಬಂತು, ‘ಲಿನ್ ಸಾಹೇಬರು ಬಂದಿದ್ದಾರೆ, ಬೇಗ ಬನ್ನಿ’ ಎಂದು. ಹೋದೆ, ಕೋಶಿಶ್ನ ಸಪ್ಲೈಯರ್ ಬಂದು, ‘ನೋಡಿ, ಅಲ್ಲಿ ಕೂತಿದ್ದಾರಲ್ಲ, ಅವರೇ ಲಿನ್ ಸಾಹೇಬರು’ ಎಂದರು. ಹೋಗಿ ಪರಿಚಯಿಸಿಕೊಂಡೆ. ಅರಸು ವಿಷಯ ತಿಳಿಸಿದೆ. ಮುಖದಲ್ಲಿ ಒಂದು ಸಣ್ಣ ನಗು. ಸ್ವಲ್ಪ ಸಮಯದ ಮೌನದ ನಂತರ, ‘ಇಲ್ಲಿ ಬೇಡ, ಮನೆಗೇ ಬನ್ನಿ, ಮಾತನಾಡುವ, ವಿಳಾಸ ಗೊತ್ತಾ..’ ಎಂದರು. ಅವರು ಹೇಳಿದ ದಿನ, ಸಮಯಕ್ಕೆ ಅವರ ಮನೆಯಲ್ಲಿದ್ದೆ.
ಎಂಜಿ ರೋಡಿನ ಮೇಯೋ ಹಾಲ್ ಹತ್ತಿರದ ಸೆಂಟ್ರಲ್ ಮಾಲ್ ಹಿಂಭಾಗದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಒಂದನೇ ಮಹಡಿಯಲ್ಲಿದ್ದ ತೀರಾ ಸಾಧಾರಣವಾದ ಥ್ರಿ ಬೆಡ್ ರೂಂ ಹೌಸ್. ಒಳಗೆ ಹೋಗುತ್ತಿದ್ದಂತೆ, ಮನೆಯಲ್ಲಿರುವವರು ಲಿನ್ ಸಾಹೇಬರು ಮತ್ತವರ ಮಗಳು, ಇಬ್ಬರೆ ಎಂದು ತಿಳಿಯಿತು. ಪರಿಚಯ ಮಾಡಿಕೊಟ್ಟರು, ಕುಡಿಯಲು ಟೀ ಕೊಟ್ಟರು. ಕೆಲವೇ ತಿಂಗಳುಗಳ ಹಿಂದೆ ತೀರಿಹೋದ ಮಡದಿಯ ಫೋಟೋ ತೋರಿಸಿ, ಮತ್ತಷ್ಟು ಮೌನವಾದರು. ಆನಂತರ, ನಿಧಾನವಾಗಿ ಮಾತಿಗಿಳಿದು, ‘ದೇವರಾಜ ಅರಸು ಈಗೇಕೆ? ನನ್ನ ಅವರ ಒಡನಾಟವನ್ನು ನಿಮಗೆ ತಿಳಿಸಿದರಾರು?’ ಎಂದರು. ಎಲ್ಲವನ್ನು ವಿವರವಾಗಿ ಹೇಳಿದ ಮೇಲೆ, ‘ಗ್ರೇಟ್ ಮ್ಯಾನ್, ಒಳ್ಳೆಯ ಕೆಲಸ ಮಾಡಿ, ನನಗೆ ಗೊತ್ತಿರುವಷ್ಟು ಹೇಳುತ್ತೇನೆ.. ನನ್ನ ಕನ್ನಡ ಸ್ವಲ್ಪ ಕಷ್ಟ, ಇಂಗ್ಲಿಷ್ ಮಿಕ್ಸ್ ಮಾಡಿ ಮಾತನಾಡಬಹುದಾ’ ಎಂದರು.
1972ರಲ್ಲಿ, ದೇವರಾಜ ಅರಸು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜೆ.ಸಿ.ಲಿನ್ ಮಂಡ್ಯದ ಜಿಲ್ಲಾಧಿಕಾರಿಯಾಗಿದ್ದರು. ಅಂದಿನ ಮುಖ್ಯ ಕಾರ್ಯದರ್ಶಿ ರೆಬೆಲೋ ಸಾಹೇಬರ ಒಂದು ಫೋನ್ ಕರೆಗೆ, ಲಿನ್ ಸಾಹೇಬರು ಗಂಟುಮೂಟೆ ಕಟ್ಟಿಕೊಂಡು ಬಂದು ಅವರ ಮುಂದೆ ನಿಂತಿದ್ದರು. ದೇವರಾಜ ಅರಸು ಅವರ ಸೂಚನೆಗೆ ಮೇರೆಗೆ ‘ಮುಖ್ಯಮಂತ್ರಿಗಳ ಕಾರ್ಯದರ್ಶಿ’ ಹುದ್ದೆಯನ್ನು ಅಲಂಕರಿಸಿದ್ದರು. ''ಅವರು `ನನ್ನನ್ನು ನೀವು ಕನ್ವಿನ್ಸ್ ಮಾಡಿ, ನಿಮ್ಮನ್ನು ನಾನು ಕನ್ವಿನ್ಸ್ ಮಾಡುತ್ತೇನೆ... ಐ ಯಾಮ್ ನಾಟ್ ಓವರ್ ರೂಲಿಂಗ್ ಆನ್ ಯೂ' ಎಂದರು. ಅಷ್ಟೆ. ನಾನು ಅವರನ್ನು ನಂಬಿದೆ, ಅವರು ನನ್ನನ್ನು ನಂಬಿದರು. ಹಾಗಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯ ಬರಲೇ ಇಲ್ಲ. ಇದು ಸತತವಾಗಿ 7 ವರ್ಷಗಳ ಕಾಲ ನಡೆಯಿತು'' ಎಂದು ಅವರ ಮತ್ತು ಅರಸರ ನಡುವಿನ ಒಡನಾಟವನ್ನು ಬಹುವಿಸ್ತಾರವಾಗಿ ಹೇಳಿದರು.
ಲಿನ್, ದೇವರಾಜ ಅರಸರ ಮಿತಿ ಮತ್ತು ಆದ್ಯತೆಗಳನ್ನು ಅರ್ಥ ಮಾಡಿಕೊಂಡಿದ್ದರು. ಅರಸು ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕಿಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಲಿನ್, ಅರಸರ ಅಚ್ಚುಮೆಚ್ಚಿನ ಅಧಿಕಾರಿಗಳಲ್ಲೊಬ್ಬರಾದರು. ಅದರ ಫಲವಾಗಿಯೇ ಸುಮನಹಳ್ಳಿಯ ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆಯಾಯಿತು. ಖಾಸಗಿಯವರ ಕೈಯಲ್ಲಿದ್ದ ಭದ್ರಾವತಿಯ ಎಂಪಿಎಂ ಕಾರ್ಖಾನೆ ಸರಕಾರದ ಸ್ವತ್ತಾಯಿತು. ಇಂತಹ ಹತ್ತು ಹಲವು ಕಾರ್ಯಕ್ರಮಗಳು, ಕಾಯ್ದೆಗಳು ನಾಡಿನ ಒಳಿತಿಗಾಗಿ ವಿನಿಯೋಗವಾಗುವಂತಾಯಿತು.
ದೇವರಾಜ ಅರಸು ಎಂದಾಕ್ಷಣ ಸಾಮಾಜಿಕ ನ್ಯಾಯದ ಹರಿಕಾರ ಎನ್ನುವ ಮಾತಿದೆ. ಅದನ್ನು ಅವರ ಆಪ್ತ ಅಧಿಕಾರಿ ಲಿನ್, ‘ದೇವರಾಜ ಅರಸು ರಾಜಕಾರಣದಲ್ಲಿ ಮಾತ್ರ ಸಾಮಾಜಿಕ ನ್ಯಾಯವನ್ನು ಜಾರಿಗೆ ತರಲಿಲ್ಲ, ತಮ್ಮ ಆಪ್ತ ಸಹಾಯಕರನ್ನಾಗಿ ಗೋಪಾಲಶಾಸ್ತ್ರಿ ಹಾಗೂ ಮೊಯಿದೀನ್ರನ್ನು ನೇಮಿಸಿಕೊಂಡಿದ್ದರು. ಒಬ್ಬರು ಬ್ರಾಹ್ಮಣರು, ಮತ್ತೊಬ್ಬರು ಮುಸ್ಲಿಮರು. ಇನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ, ಮುಖ್ಯ ಕಾರ್ಯದರ್ಶಿ ರೆಬೆಲೋ, ನಂತರ ಎಸ್.ಕೆ.ದಾಸ್ ಇದ್ದರು. ಇವರ ಕೈ ಕೆಳಗಿನ ಅಧಿಕಾರಿಗಳಾಗಿ ಎಸ್.ಕೆ.ಹಾಜರ, ಚಿರಂಜೀವಿ ಸಿಂಗ್ ಮತ್ತು ನಾನು- ಎಲ್ಲರೂ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಸಮುದಾಯಗಳಿಗೆ ಸೇರಿದವರು. ಅರಸರ ಸೋಷಿಯಲ್ ಜಸ್ಟೀಸ್, ಅಧಿಕಾರಿಗಳ ಆಯ್ಕೆಯಲ್ಲೂ ಜಾರಿಯಾಗಿತ್ತು- ಯಾರಿಗೂ ಗೊತ್ತಾಗದಂತೆ’ ಎಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಆಯ್ಕೆಗಳನ್ನು, ನೇಮಕಗಳನ್ನು ನೋಡುತ್ತಿದ್ದೇವೆ.
1937ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಜೆ.ಸಿ.ಲಿನ್, ಅಲ್ಪಸಂಖ್ಯಾತ ಆಂಗ್ಲೋ ಗೋವನ್ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು. ಬೆಂಗಳೂರಿನ ಸೇಂಟ್ ಜೋಸೆಫ್ ಸ್ಕೂಲ್ ವಿದ್ಯಾರ್ಥಿಯಾಗಿ, ಎಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆಯುವ ಮೂಲಕ ಶಾಲೆಗೆ ಹೆಸರು ತಂದವರು. 1960ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿ, ಸರಕಾರಿ ಸೇವೆಗೆ ನಿಯೋಜನೆಗೊಂಡ ಲಿನ್, ಮೃದು ಮಾತಿನ, ಸೌಮ್ಯ ಸ್ವಭಾವದ, ಸರಳ ಸಜ್ಜನಿಕೆಯ ವ್ಯಕ್ತಿ. ಆದರೆ ಆಡಳಿತಾತ್ಮಕ ವಿಷಯದಲ್ಲಿ ವಸ್ತುನಿಷ್ಠವಾಗಿ ವಿವೇಚಿಸುವ, ಕಾನೂನಿನ ರೀತಿ-ನೀತಿಗೆ ಬದ್ಧವಾಗಿ ನಿರ್ಣಯಗಳನ್ನು ಕೈಗೊಳ್ಳುವ, ದಕ್ಷ-ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ಗಳಿಸಿದ್ದವರು.
ಶಿಸ್ತಿನ ಸೇವೆಗೆ, ನಿಯಮಪಾಲನೆಗೆ ಹೆಸರಾಗಿದ್ದ ಜೆ.ಸಿ.ಲಿನ್, ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ್, ದೇವರಾಜ ಅರಸು ಮತ್ತು ಆರ್.ಗುಂಡೂರಾವ್ ಕಾಲದ ಕರ್ನಾಟಕದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲವರು. 1981 ರಿಂದ 83ರವರೆಗೆ ಕೆಎಸ್ಆರ್ ಟಿಸಿ ಛೇರ್ಮನ್ ಆಗಿದ್ದಾಗ ಬೆಂಗಳೂರಿನ ಸಿಟಿ ಬಸ್ ಸ್ಟಾಂಡ್ ಟರ್ಮಿನಲ್ ನಿರ್ಮಾಣದಲ್ಲಿ ಹಾಗೂ 1983-84ರಲ್ಲಿ ಕೈಗಾರಿಕಾ ಕಾರ್ಯದರ್ಶಿಯಾಗಿದ್ದಾಗ ಭಾರತದ ಐಟಿ ನಕ್ಷೆಯಲ್ಲಿ ಬೆಂಗಳೂರನ್ನು ಗುರುತಿಸುವಂತೆ ಮಾಡುವಲ್ಲಿ ಲಿನ್ ಪ್ರಮುಖ ಪಾತ್ರ ವಹಿಸಿದವರು. 1992ರಲ್ಲಿ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾದಾಗ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾದ ಜೆ.ಸಿ.ಲಿನ್ 1994ರವರೆಗೆ ಸೇವೆಯಲ್ಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಿಇಟಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿಗಳ ಆಶಯಕ್ಕೆ ಒತ್ತಾಸೆಯಾಗಿ ನಿಂತವರು. 1994ರಲ್ಲಿ ನಿವೃತ್ತರಾದ ಲಿನ್, ನಿವೃತ್ತಿಯ ನಂತರವೂ, ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸುಮಾರು 34 ವರ್ಷಗಳ ಕಾಲ ಗಳಿಸಿದ ಅಪಾರ ಆಡಳಿತಾತ್ಮಕ ಅನುಭವವನ್ನು ಕರ್ನಾಟಕದ ಜನತೆಯ ಒಳಿತಿಗಾಗಿ ಬಳಸಿದ ಅಪರೂಪದ ಅಧಿಕಾರಿ.
ಸಾಮಾನ್ಯವಾಗಿ ಐಎಎಸ್ ಅಧಿಕಾರಿ ಎಂದಾಕ್ಷಣ ನಾಲ್ಕಾರು ತಲೆಮಾರು ತಿಂದುಣ್ಣುವಷ್ಟು ಆಸ್ತಿಯ ಒಡೆಯರು ಎನ್ನುವುದು ಜನಜನಿತ. ಆದರೆ ಲಿನ್ ಸಾಹೇಬರು ಅದಕ್ಕೆ ಹೊರತಾದವರು. ಸೇವೆಯುದ್ದಕ್ಕೂ ಹೆಣ್ಣು ಕೊಟ್ಟು ಮಾವನ ಕೂಡು ಕುಟುಂಬದಲ್ಲಿದ್ದವರು. ಮನೆಗೆ ಬೇಕಾದ ಹಣ್ಣು-ತರಕಾರಿಗಳನ್ನು ಖುದ್ದು ಅವರೇ ಅಂಗಡಿಗಳಿಗೆ ಹೋಗಿ ತರುತ್ತಿದ್ದರು. ಪ್ರತಿ ರವಿವಾರ ಪ್ರಾರ್ಥನೆಗಾಗಿ ಚರ್ಚ್ಗೆ ಹೋಗುತ್ತಿದ್ದರು. ಆಗಾಗ ಕಾಫಿಗಾಗಿ, ಆ ನೆಪದಲ್ಲಿ ಒಂದಷ್ಟು ಸೆಲೆಕ್ಟೆಡ್ ಸ್ನೇಹಿತರೊಂದಿಗಿನ ಹರಟೆಗಾಗಿ ಚರ್ಚ್ ಸ್ಟ್ರೀಟ್ನ ಕೋಶಿಷ್ ರೆಸ್ಟೋರೆಂಟ್ನ ಖಾಯಂ ಗಿರಾಕಿಯಾಗಿದ್ದರು.
ಇತ್ತೀಚೆಗೆ, ಕಳೆದ ಸೆಪ್ಟೆಂಬರ್ 19ರಂದು ಅವರ ಮನೆಗೆ ಹೋಗಿ, ‘ನಮ್ಮ ಅರಸು’ ಪುಸ್ತಕವನ್ನು ಅವರ ಕೈಗಿಡುತ್ತಿದ್ದಂತೆಯೇ... ‘ಓಹೋ, ನಮ್ಮ ಅರಸು’ ಎಂದು ತೊದಲುತ್ತಾ ಓದಿ ಖುಷಿಪಟ್ಟಿದ್ದರು. ಆದರೆ ಅವರ ಸ್ಥಿತಿ ಅಷ್ಟು ಖುಷಿಪಡುವಂತಿರಲಿಲ್ಲ. ಕಾರಣ ಆರೋಗ್ಯ ಹದಗೆಟ್ಟಿತ್ತು. ಉಸಿರಾಟದ ತೊಂದರೆಯಾಗಿ ಮೂಗಿಗೆ ನಳಿಕೆ ಜೋಡಿಸಲಾಗಿತ್ತು. ದೇಹ ದಣಿದಿತ್ತು. ಪಕ್ಕದಲ್ಲಿ ಮಗಳು ಜೊತೆಗೆ ಒಬ್ಬ ಆಳು ಆರೈಕೆ ಮಾಡುತ್ತಿದ್ದರೂ, ಕೂತು ಮಾತನಾಡದಷ್ಟು ನಿತ್ರಾಣರಾಗಿದ್ದರು. ಅವರ ಆ ಸ್ಥಿತಿ ಕಂಡು, ಹೆಚ್ಚು ಕಷ್ಟ ಕೊಡಬಾರದೆಂದು, ‘ಬರುತ್ತೇನೆ ಸಾರ್’ ಎಂದಿದ್ದೆ. ಆಗಲೂ ಅವರು, ಪುಸ್ತಕವನ್ನು ತುಂಬು ಪ್ರೀತಿಯಿಂದ ಎದೆಗವುಚಿಕೊಂಡು, ‘ಥ್ಯಾಂಕ್ಸ್’ ಎಂದಿದ್ದರು.
ಅವರ ಥ್ಯಾಂಕ್ಸ್ ಕಿವಿಯಲ್ಲಿರುವಾಗಲೇ, ಕರುಣಾಮೂರ್ತಿ ಕಣ್ಮರೆಯಾದ(ಎ.15ರ ರಾತ್ರಿ 9.30) ಸುದ್ದಿ ಬಂದಿದೆ. ಅವರ ಸಜ್ಜನಿಕೆಗೆ, ನಾಡಿಗೆ ಸಲ್ಲಿಸಿದ ನಿಸ್ಪೃಹ ಸೇವೆಗೆ- ಥ್ಯಾಂಕ್ಸ್ ಹೇಳುವ ಮೂಲಕ ಶ್ರದ್ಧಾಂಜಲಿ ಸಲ್ಲಿಸೋಣ.
-ಬಸವರಾಜು ಮೇಗಲಕೇರಿ