ಕೃಷ್ಣ ಟಾಕೀಸ್: ‘ಟಾಕೀಸ್’ನಲ್ಲಿ ದೆವ್ವವಿದೆ ಎಚ್ಚರಿಕೆ..!
ಕೃಷ್ಣ ಟಾಕೀಸ್‌ನಲ್ಲಿ ರಾತ್ರಿ ಶೋ ಸಿನೆಮಾ ನೋಡಿದವರು ತಿಂಗಳಿಗೊಬ್ಬರಂತೆ ಸಾಯುತ್ತಾರೆ! ಹಾಗಂತ ಸುದ್ದಿ ಹಬ್ಬುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದವನು ಚಿತ್ರದ ನಾಯಕ ಅಜಯ್. ಆದರೆ ಯಾವಾಗ ಸ್ನೇಹಿತ ಸೂರಿ ಕೂಡ ಅದೇ ಚಿತ್ರಮಂದಿರದಲ್ಲಿ ಸಿನೆಮಾ ನೋಡಿ ಬರುವಾಗ ಅಪಘಾತದಲ್ಲಿ ತೀರಿಕೊಂಡನೋ ಅಂದಿನಿಂದ ತಾನು ಆ ಕೌತುಕದ ಬೆನ್ನು ಬೀಳುತ್ತಾನೆ. ಈ ಬಗ್ಗೆ ಆತ ನಡೆಸುವ ತನಿಖೆಗೆ ಸ್ಥಳೀಯ ಪೊಲೀಸ್ ಇಲಾಖೆ ಸಂಪೂರ್ಣ ಬೆಂಬಲ ನೀಡುತ್ತದೆ. ಹಾಗೆ ಸಂಭವಿಸುತ್ತಿರುವ ನಿರಂತರವಾದ ಸಾವಿಗೆ ಕಾರಣವೇನು? ನಿಜಕ್ಕೂ ಅಲ್ಲಿ ದೆವ್ವದ ಕಾಟ ಇದೆಯೇ? ಈ ರಹಸ್ಯದ ಪತ್ತೆಗೆ ಮುಂದಾದ ಅಜಯ್‌ಗೆ ತಿಳಿದು ಬರುವ ರೋಚಕ ಸತ್ಯ ಏನು ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಸೊಗಸು.
ಅಜಯ್ ರಾವ್ ಅವರ ಯಶಸ್ವಿ ‘ಕೃಷ್ಣ’ ಚಿತ್ರಗಳ ಸಾಲಲ್ಲಿ ಹೊಸದಾಗಿ ತೆರೆಗೆ ಬಂದಿರುವ ಚಿತ್ರ ‘ಕೃಷ್ಣ ಟಾಕೀಸ್.’ ಆದರೆ ಇದು ಹಲವು ವಿಚಾರಗಳಲ್ಲಿ ಹಿಂದಿನ ಚಿತ್ರಗಳಿಗಿಂತ ವಿಭಿನ್ನತೆ ಪಡೆದುಕೊಂಡಿದೆ. ಅವುಗಳಲ್ಲಿ ಇದೊಂದು ದೆವ್ವದ ಚಿತ್ರ ಎನ್ನುವುದು ಪ್ರಮುಖ ಅಂಶ. ನಾಯಕನಾಗಿ ಅಜಯ್ ರಾವ್ ಅವರು ತನಿಖೆ ಮಾಡುವ ರೀತಿ ಗಮನಿಸಿದರೆ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರವನ್ನೇ ನೀಡಬಹುದಿತ್ತು ಅನಿಸದಿರದು. ಯಶಸ್ವಿ ಪತ್ರಕರ್ತನಾಗುವಲ್ಲಿಯೂ ಸೋತ ಒಬ್ಬ ಯುವಕನಿಗೆ ಆತ ಪರಿಚಿತ ಎನ್ನುವ ಒಂದೇ ಕಾರಣಕ್ಕೆ ಪೊಲೀಸರು ನೀಡುವ ಸಹಕಾರವನ್ನು ನಂಬುವುದು ಕಷ್ಟ. ಆದರೆ ಅಜಯ್ ಅವರು ಮಾತ್ರ ತಮ್ಮ ಎಂದಿನ ಶೈಲಿಯ ನೈಜ ನಟನೆಯಿಂದ ಮನಸಿಗೆ ಆಪ್ತವಾಗುತ್ತಾರೆ. ಅವರ ಮಾತು, ನೋಟ, ನೃತ್ಯ ಎಲ್ಲದರಲ್ಲಿಯೂ ಲಯವಿದೆ. ನಾಯಕಿಯಾಗಿ ಅಪೂರ್ವ ಅವರಿಗೆ ಅಭಿನಯಕ್ಕೆ ದೃಶ್ಯಗಳೇ ಅಪೂರ್ವವಾಗಿದೆ.
ನಾಯಕನ ಸ್ನೇಹಿತ ಸೂರಿಯಾಗಿ ಚಿಕ್ಕಣ್ಣ ನಗಿಸಲು ಆರಂಭಿಸುವ ಹೊತ್ತಿಗೆ ಪಾತ್ರವೇ ಅಂತ್ಯಗೊಂಡುಬಿಡುತ್ತದೆ! ಆರಂಭದಲ್ಲೇ ನಾಪತ್ತೆಯಾದ ಪರಿಮಳಾ ಪಾತ್ರಧಾರಿ ಸಿಂಧು ಲೋಕನಾಥ್ ಚಿತ್ರದ ಕೊನೆಯ ತನಕವೂ ತಮ್ಮದೊಂದು ‘ಹವಾ’ ಇರಿಸಿರುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಈ ಹಿಂದೆ ನಟಿಸಿರುವ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತಾರೆ. ಪ್ರಕಾಶ್ ತೂಮಿನಾಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶವವಾಗಿ ಮಾತ್ರ ಕಾಣಿಸಿರುವ ನಟ ಶಿವಮಂಜು ಅದೊಂದು ಲುಕ್‌ನಲ್ಲೇ ಭಯಾನಕತೆ ಮೂಡಿಸಿದ್ದಾರೆ. ಖಳ ಟೋನಿಯ ಪಾತ್ರದಲ್ಲಿ ಯಶ್ ಶೆಟ್ಟಿ ತಮ್ಮ ಎಂದಿನ ಶೈಲಿಯಂತೆ ಅಬ್ಬರಿಸಿದ್ದಾರೆ. ದ್ವಿಪಾತ್ರದಲ್ಲಿ ನಟಿಸಿರುವ ನಿರಂತ್ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಪ್ರಮುಖವಾದ ಸಂಭಾಷಣೆಯನ್ನು ಥೇಟ್ ರವಿಶಂಕರ್ ಅವರ ಜನಪ್ರಿಯ ಆರ್ಮುಗಂ ಶೈಲಿಯಲ್ಲಿ ಹೇಳಿದ್ದಾರೆ.
ಕತೆಯ ಕತೂಹಲಕ್ಕೆ ತೆರೆ ಎಳೆಯುವ ಆ ಘಟ್ಟದಲ್ಲಿ ಇಂತಹ ಸಂಭಾಷಣಾ ಶೈಲಿಗೆ ನಗಬೇಕೋ; ಅಳಬೇಕೋ ಎನ್ನುವಂತಹ ಪರಿಸ್ಥಿತಿ ಪ್ರೇಕ್ಷಕರದ್ದಾಗುತ್ತದೆ. ಚಿತ್ರಮಂದಿರದ ಸೀಟ್ ನಂಬರ್ ಎಫ್ 13ರ ಬಗ್ಗೆ ಒಂದು ಆಕರ್ಷಣೆ ಮತ್ತು ಕುತೂಹಲವನ್ನು ಮೂಡಿಸುವಂತಹ ಕತೆಯನ್ನು ಚಿತ್ರ ಮಾಡಿರುವ ನಿರ್ದೇಶಕರ ಆಯ್ಕೆ ಚೆನ್ನಾಗಿದೆ. ಆದರೆ ಇರುವ ಕುತೂಹಲಕ್ಕೆ ತಣ್ಣೀರೆರಚುವ ಮಾದರಿಯಲ್ಲಿ ಚಿತ್ರಕತೆ ಹೆಣೆದಿರುವುದು ವಿಪರ್ಯಾಸ.
ಚಿತ್ರದ ಸಂಭಾಷಣೆಯೂ ಅಷ್ಟೇ; ಎರಡು ದೃಶ್ಯಗಳಲ್ಲಿ ಬಂದು ಹೋಗುವ ಪಾತ್ರಗಳು ಕೂಡ ಪ್ರಾಸದ ಮಾತುಗಳನ್ನೇ ಆಡುತ್ತವೆ. ಅಲ್ಲಿಗೆ ಪ್ರಾಸಕ್ಕೆಂದೇ ಸಂಭಾಷಣೆಗಳ ಸೃಷ್ಟಿಯಾಗಿದೆಯೇನೋ ಎನ್ನುವಂತೆ ನಮ್ಮ ಗಮನ ಚಿತ್ರದಿಂದ ಹೊರಗೆ ನಡೆಯುತ್ತದೆ. ಅಪರಾಧಿ ಎನಿಸಿಕೊಂಡ ಒಬ್ಬ ಮುಸಲ್ಮಾನನ ಮನೆಗೆ ನುಗ್ಗಬೇಕಾಗುವ ಸಂದರ್ಭ ಬರುತ್ತದೆ. ‘‘ಪರ್ಮಿಷನ್ನೇ ಇಲ್ಲದೆ ಪಾಕಿಸ್ತಾನಕ್ಕೆ ನುಗ್ಗಿದ ನಮಗೆ ಇಲ್ಲಿ ಯಾರ ಪರವಾನಿಗೆ ಬೇಕು’’ ಎನ್ನುವಂತಹ ಸಂಭಾಷಣೆ ಸಾಂದರ್ಭಿಕವೆಂದೋ, ನಾಯಕನ ಇಮೇಜ್‌ಗೆ ಪೂರಕವೆಂದೋ ಅನಿಸುವುದೇ ಇಲ್ಲ. ಅದೇ ರೀತಿ ಶ್ರೀಧರ್ ಸಂಭ್ರಮ್ ಅವರ ಸಂಗೀತದಲ್ಲಿ ಈಗಾಗಲೇ ಜನಪ್ರಿಯವಾಗಿರುವ ಚಿತ್ರದ ಹಾಡುಗಳು ಕೂಡ ಅನಗತ್ಯವಾಗಿ ತುರುಕಿದಂತೆ ಎದುರಾಗುತ್ತವೆ. ಅಭಿಷೇಕ್ ಕಾಸರಗೋಡು ಅವರ ಛಾಯಾಗ್ರಹಣ, ಶ್ರೀಧರ್ ಸಂಭ್ರಮ್ ಅವರ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆ. ನಿರ್ದೇಶಕ ವಿಜಯ್ ಆನಂದ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಲೇಬೇಕು.
ತಾರಾಗಣ: ಅಜಯ್ ರಾವ್, ಅಪೂರ್ವ
ನಿರ್ದೇಶನ: ವಿಜಯ್ ಆನಂದ್
ನಿರ್ಮಾಣ: ಗೋವಿಂದ ರಾಜು, ಆಲೂರು