ಭೂಮಿಯ ತಿರುಳು ತಣ್ಣಗಾದರೆ...?
ಹವಾಮಾನ ವೈಪರೀತ್ಯ ಮತ್ತು ಭೂತಾಪಮಾನ ಏರಿಕೆಯ ಕುರಿತು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಓದುತ್ತಿದ್ದ ತಂದೆ ಒಮ್ಮೆಲೇ ನಿಟ್ಟುಸಿರು ಬಿಟ್ಟರು. ಪಕ್ಕದಲ್ಲೇ ಕುಳಿತು ಹೋಂವರ್ಕ್ ಮಾಡುತ್ತಿದ್ದ ರಾಜೇಶ್ ‘‘ಏನಾಯ್ತಪ್ಪ...!’’ ಎಂದ. ‘‘ಏನಿಲ್ಲಪ್ಪ, ಪ್ರತಿವರ್ಷವೂ ಭೂತಾಪಮಾನ ಏರುತ್ತಲೇ ಇದೆ. ಇದು ಹೀಗೇ ಮುಂದುವರಿದರೆ ಭವಿಷ್ಯ ಹೇಗೆ ಎಂಬುದೇ ಚಿಂತೆಯಾಗಿದೆ’’ ಎಂದರು ತಂದೆ. ‘‘ಭೂ ತಾಪಮಾನ ಏರಿಕೆಯಿಂದ ಏನಾಗುತ್ತೆ ಅಪ್ಪಾ...?’’ ಎಂದು ಥಟ್ಟನೆ ಪ್ರಶ್ನೆ ಹಾಕಿದ ರಾಜೇಶ್. ‘‘ಭೂ ತಾಪಮಾನ ಏರಿಕೆಯಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಳವಾಗುತ್ತದೆ. ಇದರಿಂದ ಜೀವಿಗಳ ಬದುಕು ತೊಂದರೆಗೆ ಒಳಗಾಗುತ್ತದೆ’’ ಎಂದು ಸಂಕ್ಷಿಪ್ತವಾಗಿ ವಿವರಿಸಿದರು. ‘‘ಭೂಮಿಯ ತಾಪಮಾನ ಅಂದರೆ ಭೂಮಿಯೊಳಗಿನ ತಾಪ ಅಲ್ವೇನಪ್ಪಾ?’’ ಎಂದಳು ಪಕ್ಕದಲ್ಲಿದ್ದ ಕೀರ್ತಿ. ತಂದೆ ಹೌದೆಂದು ತಲೆಯಾಡಿಸಿ ಮಾತು ಪ್ರಾರಂಭಿಸಿದರು. ‘‘ಭೂಮಿಯೊಳಗೆ ಶಿಲಾರಸ ತಾಪಮಾನದಿಂದ ಯಾವಾಗಲೂ ಕುದಿಯುತ್ತಲೇ ಇರುತ್ತದೆ. ಹಾಗಾಗಿ ಭೂಮಿಯ ತಾಪಮಾನ ಹೆಚ್ಚುತ್ತಲೇ ಇರುತ್ತದೆ’’ ಎಂದರು. ‘‘ಅಪ್ಪಾ... ಭೂಮಿಯೊಳಗಿನ ತಾಪಮಾನ ಕಡಿಮೆಯಾದರೆ ಈ ತೊಂದರೆ ಇರುವುದಿಲ್ಲ ಅಲ್ಲವೇ?’’ ಎಂದಳು ಕೀರ್ತಿ. ‘‘ಇಲ್ಲಮ್ಮ ಭೂಮಿಯ ಕೋರ್ ಅಂದರೆ ತಿರುಳು ತಂಪಾದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’’ ಎಂದರು ತಂದೆ.
ತಂದೆಯ ಉತ್ತರಕ್ಕೆ ಸುಮ್ಮನಾಗದ ಕೀರ್ತಿ ಮತ್ತು ರಾಜೇಶ್ ‘‘ಭೂಮಿಯ ಕೋರ್ ತಣ್ಣಗಾದರೆ ಏನಾಗುತ್ತದೆ ಹೇಳಪ್ಪಾ?’’ ಎಂದು ತಂದೆಯನ್ನು ಕಾಡತೊಡಗಿದರು. ‘‘ಈ ಬಗ್ಗೆ ನನಗೆ ಅಷ್ಟೊಂದು ತಿಳಿಯದು. ಅಲ್ಲಿ ನಿಮ್ಮ ಮಾಮನ ಬಳಿ ಹೋಗಿ ಕೇಳಿ, ಅವರು ಹೇಳುತ್ತಾರೆ’’ ಎಂದು ಇಬ್ಬರನ್ನೂ ಸಾಗಹಾಕಿದರು. ಇಬ್ಬರೂ ಮಾಮನ ಬಳಿ ಬಂದು ಅದೇ ಪ್ರಶ್ನೆ ಕೇಳಿದರು. ಮಾಮನ ಉತ್ತರ ಮುಂದಿನಂತಿದೆ.
ಕೋರ್ ಎನ್ನುವುದು ಭೂಮಿಯ ಒಳಗಿನ ಭಾಗವಾಗಿದೆ. ಭೂಮಿಯ ಕೋರ್‌ನ ಬಗ್ಗೆ ತಿಳಿಯುವ ಮೊದಲು ಭೂರಚನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯುವುದು ಅಗತ್ಯ. ಭೂಮಿಯನ್ನು ಒಂದು ಮೊಟ್ಟೆಗೆ ಹೋಲಿಸಬಹುದು. ಮೊಟ್ಟೆಯ ಮೇಲೆ ಗಟ್ಟಿಯಾದ ಕವಚ ಇರುವಂತೆ ಭೂಮಿಗೂ ಹೊರಚಿಪ್ಪುಇದೆ. ಇದರಲ್ಲಿ ಗುಡ್ಡ, ಬೆಟ್ಟ, ನದಿ, ಸಾಗರಗಳಿವೆ. ಇದನ್ನು ಶಿಲಾಗೋಳ ಎನ್ನುವರು. ಇದರ ಕೆಳಗಿನ ಭಾಗವೇ ಮ್ಯಾಂಟಲ್. ಇದು ಮೊಟ್ಟೆಯ ಲೋಳೆಯಂತೆ, ಯಾವಾಗಲೂ ಶಿಲಾರಸ ಕುದಿಯುತ್ತಲೇ ಇರುತ್ತದೆ. ಇಲ್ಲಿನ ಉಷ್ಣತೆ 20,000 ಸೆಲ್ಸಿಯಸ್‌ಗೂ ಮಿಗಿಲು. ಮ್ಯಾಂಟಲ್‌ನ ಕೆಳಭಾಗವೇ ತಿರುಳು ಅಥವಾ ಕೋರ್. ಮೊಟ್ಟೆಗೆ ಹಳದಿ ಭಾಗ ಇರುವಂತೆ ಭೂಮಿಗೆ ತಿರುಳು. ಸೂರ್ಯನ ಮೇಲ್ಮೈನಂತೆ ಭೂಮಿಯ ತಿರುಳೂ ಸಹ ಅತ್ಯಂತ ಸ್ವಾರಸ್ಯಕರವಾದುದು. ಭೂಮಿಯು ರೂಪುಗೊಂಡ ವೇಳೆ ಕೋರ್ ಸಹ ರೂಪುಗೊಳ್ಳುತ್ತಾ ಬಂದಿದೆ. ಇದು ಭೂ ಮೇಲ್ಮೈಯಿಂದ ಸುಮಾರು 6,370 ಕಿ.ಮೀ. ಆಳದಲ್ಲಿದೆ. ಇಲ್ಲಿನ ಉಷ್ಣತೆ 45,000-60,000 ಸೆಲ್ಸಿಯಸ್. ಭೂಮಿಗೆ ಕಾಂತಶಕ್ತಿಯನ್ನು ನೀಡಿರುವುದು ಈ ಭಾಗವೇ.
ಇಲ್ಲಿ ನಿಕ್ಕಲ್ ಮತ್ತು ಕಬ್ಬಿಣದ ಸಂಯೋಜನೆಯಿಂದ ಕೂಡಿದ ರಸಾಯನಿಕಗಳಿವೆ. ಇದನ್ನು ನಿಫೆ(ನಿ-ನಿಕ್ಕಲ್, ಫೆ-ಫೆರಸ್) ಎಂದು ಕರೆಯಲಾಗುತ್ತದೆ. ಗುರುತ್ವಾಕರ್ಷಣೆಯಿಂದ ಕಬ್ಬಿಣ ಮತ್ತು ನಿಕ್ಕಲ್‌ನಂತಹ ಭಾರವಾದ ಲೋಹಗಳು ಕೇಂದ್ರದ ಮಧ್ಯದಲ್ಲಿ ಜಮಾವಣೆಗೊಂಡವು. ಗಾಳಿ ಮತ್ತು ನೀರಿನಂತಹ ಹಗುರ ಪದಾರ್ಥಗಳು ಹೊರಪದರಕ್ಕೆ ಏರಿದವು. ಭೂಮಿಯ ತಿರುಳಿನ ಗುರುತ್ವಾಕರ್ಷಣೆಯು ಹೊರಗಿನ ಮೇಲ್ಮೈ ಗುರುತ್ವಾಕರ್ಷಣೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಗುರುತ್ವಾಕರ್ಷಣೆಯಿಂದ ಭಾರಲೋಹಗಳು ಕೇಂದ್ರವನ್ನು ಸೇರುತ್ತಲೇ ಇರುತ್ತವೆ. ಇದರಿಂದ ಭೂಮಿಯ ತಿರುಳು ಅಂದರೆ ಕೋರ್ ಪ್ರತಿ ಸಾವಿರ ವರ್ಷಗಳಿಗೆ ಸುಮಾರು ಒಂದು ಸೆಂ.ಮೀ. ಬೆಳೆಯುತ್ತಲೇ ಇದೆ. ಭೂಮಿಯ ತಿರುಳಿನ ಗಾತ್ರ ಹೆಚ್ಚಿದಂತೆಲ್ಲಾ ಶಾಖದ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ಬಿಸಿಯಾದ ತಿರುಳು ಭೂಮಿಯ ಮೇಲೆ ಜೀವಿಗಳು ಬದುಕಲು ಅಗತ್ಯವಾದ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ. ಒಂದು ವೇಳೆ ತಿರುಳು ತಣ್ಣಗಾದರೆ ಭೂಮಿಯ ಮೇಲಿನ ಪ್ರಮುಖ ಕಾರ್ಯಗಳನ್ನು ಅಡ್ಡಿಪಡಿಸುತ್ತದೆ. ಖಂಡಿತವಾಗಿಯೂ ನಾವು ಅದನ್ನು ಬಯಸದಿರುವುದೇ ಒಳಿತು. ಆದರೆ ಕುತೂಹಲಕ್ಕಾಗಿಯಾದರೂ ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.
ತಂಪಾದ ತಿರುಳು ಎಂದರೆ ತಂಪಾದ ಅಥವಾ ಸತ್ತ ಗ್ರಹ ಎಂದೇ ಹೇಳಬಹುದು. ಕೋರ್ ತಣ್ಣಗಾದರೆ ಭೂಮಿಯೂ ತಣ್ಣಗಾದಂತೆ. ಇದು ಭೂಮಿಯ ಅವಸಾನದ ಸ್ಥಿತಿ ಎಂದು ಭೂವಿಜ್ಞಾನಿಗಳು ಹೇಳುತ್ತಾರೆ. ಭೂಮಿಯ ಅಂತರಾಳದ ಉಷ್ಣವು ಹಬೆಯನ್ನು ಉತ್ಪತ್ತಿ ಮಾಡುತ್ತದೆ. ಈ ಹಬೆಯು ಅಂತರ್ಗತ ಶಕ್ತಿಯಾದ ವಿದ್ಯುತ್ ಉತ್ಪಾದಿಸುತ್ತದೆ. ಇದರಿಂದ ಭೂಕಾಂತ ಕ್ಷೇತ್ರವು ರೂಪಗೊಂಡಿದೆ. ಕೋರ್ ತಣ್ಣಗಾದರೆ ಆಂತರಿಕ ವಿದ್ಯುತ್ ಉತ್ಪತ್ತಿ ನಿಲ್ಲುತ್ತದೆ ಹಾಗೂ ಭೂಕಾಂತ ಕ್ಷೇತ್ರವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಸೈನಿಕರಿಗೆ ಗುರಾಣಿ ಇದ್ದಂತೆ ಭೂಮಿಗೆ ಭೂಕಾಂತ ಕ್ಷೇತ್ರ. ಇದು ಸೂರ್ಯನಿಂದ ಬರುವ ಹಾನಿಕಾರಕ ಕಾಸ್ಮಿಕ್ ಹಾಗೂ ಸೌರ ವಿಕಿರಣದಿಂದ ಭೂಮಿಯನ್ನು ರಕ್ಷಿಸುತ್ತದೆ. ಭೂಕಾಂತದ ಗುರಾಣಿ ಇಲ್ಲವಾದರೆ ಭೂಗ್ರಹವು ಹೆಚ್ಚು ಬಿಸಿಯಾಗುತ್ತದೆ. ಇದು ಮುಂದುವರಿದರೆ ಭೂಮಿಯ ಮೇಲಿನ ನೀರು ಸೌರ ಉಷ್ಣದಿಂದ ಆವಿಯಾಗಿ ಇಡೀ ಭೂಗ್ರಹ ಮಂಗಳ ಮತ್ತು ಶುಕ್ರಗ್ರಹಗಳಂತೆ ಒಣಗ್ರಹವಾಗಬಹುದು.
ಭೂಮಿಯು ಒಣಗ್ರಹವಾದರೆ ಉಸಿರಾಡಲು ಆಮ್ಲಜನಕ ಇಲ್ಲದಂತಾಗುತ್ತದೆ. ಅದಕ್ಕಾಗಿ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಿಕೊಳ್ಳ ಬೇಕಾಗಬಹುದು ಎಂದು ಹೇಳಿ ಮಾಮ ಧೀರ್ಘ ಉಸಿರನ್ನು ಒಳಗೆಳೆದುಕೊಂಡರು. ಇಲ್ಲಿಯವರೆಗೂ ಉಸಿರನ್ನು ಅಂಗೈಯಲ್ಲಿ ಹಿಡಿದುಕೊಂಡಂತೆ ವಿಷಯವನ್ನು ಕೇಳುತ್ತಾ ಕುಳಿತಿದ್ದ ರಾಜೇಶ್ ಮತ್ತು ಕೀರ್ತಿ ದೀರ್ಘ ಉಸಿರನ್ನು ಒಳಗೆಳೆದುಕೊಂಡರು. ಆದರೂ ರಾಜೇಶ್ ತನ್ನ ಮನದಲ್ಲಿ ಮೂಡಿದ್ದ ಮತ್ತೊಂದು ಪ್ರಶ್ನೆಯನ್ನು ಕೇಳಿದ. ‘‘ಮಾಮಾ, ಭೂಮಿಯ ಕೋರ್ ತಣ್ಣಗಾದರೆ ಜ್ವಾಲಾಮುಖಿಗಳು ಉಂಟಾಗುವುದಿಲ್ಲ ಅಲ್ವಾ’’ ಎಂದ. ‘‘ಹೌದು ಸರಿಯಾಗಿ ಊಹಿಸಿದ್ದೀಯಾ. ತಿರುಳು ತಣ್ಣಗಾದರೆ ಮಂಜುಗಡ್ಡೆಯಂತೆ ಹೆಪ್ಪುಗಟ್ಟುತ್ತದೆ. ಆಗ ಜ್ವಾಲಾಮುಖಿಗಳು ಸಂಭವಿಸುವುದಿಲ್ಲ. ಭೂಮಿಯ ಟೆಕ್ಟೋನಿಕ್ ಪ್ಲೇಟ್‌ಗಳು ಪರಸ್ಪರ ಢಿಕ್ಕಿಹೊಡೆಯುವುದಿಲ್ಲ ಮತ್ತು ದೂರ ಸರಿಯುವುದಿಲ್ಲ. ಇದರಿಂದ ಸುನಾಮಿಗಳಾಗಲೀ, ಭೂಕಂಪಗಳಾಗಲಿ ಸಂಭವಿಸುವುದಿಲ್ಲ’’ ಎಂದರು ಮಾಮ.
ಆಗ ಬಾಣದಷ್ಟೇ ವೇಗವಾಗಿ ಕೀರ್ತಿಯಿಂದ ಮತ್ತೊಂದು ಪ್ರಶ್ನೆ ಬಂದಿತು. ‘‘ಮಾಮ ಭೂಮಿಗೆ ರಂಧ್ರ ಕೊರೆದು ಕೋರನ್ನು ತಲುಪಬಹುದೇ?’’. ಕೋರ್ ತಣ್ಣಗಾದರೆ ಏನಾಗುತ್ತೆ ಎಂದು ಹೇಳಿ ಸುಸ್ತಾಗಿದ್ದ ಮಾಮ ‘‘ಇನ್ನೊಂದು ದಿನ ಈ ಬಗ್ಗೆ ಹೇಳುವೆ’’ ಎಂದು ಹೇಳುತ್ತಾ ಹೊರನಡೆದರು.