ಉದ್ವಿಗ್ನತೆ ನಿವಾರಣೆಗೆ ಸೌದಿ ಅರೇಬಿಯ, ಇರಾನ್ ನಡುವೆ ರಹಸ್ಯ ಮಾತುಕತೆ?
ಟೆಹರಾನ್ (ಇರಾನ್), ಎ. 19: ಸೌದಿ ಅರೇಬಿಯ ಮತ್ತು ಇರಾನ್ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳ ಅಧಿಕಾರಿಗಳು ಈ ತಿಂಗಳು ನೇರ ಮಾತುಕತೆ ನಡೆಸಿದ್ದಾರೆ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
2015ರ ಇರಾನ್ ಪರಮಾಣು ಒಪ್ಪಂದಕ್ಕೆ ಮರುಜೀವ ನೀಡಲು ಹಾಗೂ ಯೆಮನ್ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮುಂದಾಗಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಆದರೆ, ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಎಪ್ರಿಲ್ 9ರಂದು ನಡೆದ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎನ್ನಲಾಗಿದೆ.
ಮಾತುಕತೆಯು ಮುಖ್ಯವಾಗಿ ಯೆಮನ್ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಮೂಲಗಳು ತಿಳಿಸಿವೆ. ಯೆಮನ್‌ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರನ್ನು ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ಎದುರಿಸುತ್ತಿದೆ.
‘‘ಅದು ವಲಯದಲ್ಲಿನ ಉದ್ವಿಗ್ನತೆಯನ್ನು ನಿವಾರಿಸುವ ಯಾವುದಾದರೂ ವಿಧಾನವಿದೆಯೇ ಎನ್ನುವುದನ್ನು ಪತ್ತೆಹಚ್ಚುವುದಕ್ಕಾಗಿ ಏರ್ಪಡಿಸಲಾದ ಕೆಳ ಹಂತದ ಸಭೆಯಾಗಿತ್ತು’’ ಎಂದು ಇರಾನ್ ಅಧಿಕಾರಿ ಹೇಳಿದರು. ಇರಾಕ್‌ನ ಮನವಿಯಂತೆ ಸಭೆ ನಡೆಯಿತು ಎಂದರು.
ಸೌದಿ ಜೊತೆ ಮಾತುಕತೆಗೆ ಸಿದ್ಧ: ಇರಾನ್
ಸೌದಿ ಅರೇಬಿಯದೊಂದಿಗೆ ನೇರ ಮಾತುಕತೆಗೆ ಇರಾನ್ ಸಿದ್ಧವಿದೆ ಎಂದು ಇರಾನ್ ವಿದೇಶ ಸಚಿವಾಲಯ ಹೇಳಿದೆ. ಇತ್ತೀಚೆಗೆ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಉಭಯ ದೇಶಗಳ ನಡುವೆ ರಹಸ್ಯ ಮಾತುಕತೆ ನಡೆದಿದೆ ಎಂಬ ಮಾಧ್ಯಮ ವರದಿಗಳ ಬಳಿಕ ಅದು ಈ ಹೇಳಿಕೆ ನೀಡಿದೆ.
ಬಗ್ದಾದ್‌ನಲ್ಲಿ ನಡೆಯಿತೆನ್ನಲಾದ ಮಾತುಕತೆಯನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೆ ಸೋಮವಾರ ನಿರಾಕರಿಸಿದರು.
‘‘ಆದರೆ, ಸೌದಿ ಅರೇಬಿಯದೊಂದಿಗಿನ ಮಾತುಕತೆಯನ್ನು ಇರಾನ್ ಯಾವತ್ತೂ ಸ್ವಾಗತಿಸಿದೆ. ಉಭಯ ದೇಶಗಳ ಜನತೆ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಮಾತುಕತೆ ಸಹಕಾರಿ ಎಂಬುದಾಗಿ ಅದು ಭಾವಿಸಿದೆ ಹಾಗೂ ಈ ಭಾವನೆ ಮುಂದುವರಿಯಲಿದೆ’’ ಎಂದು ಅವರು ಹೇಳಿದರು.