ದೇವೇಂದ್ರ ಫಡ್ನವಿಸ್ ಅವರ 23 ವಯಸ್ಸಿನ ಅಳಿಯನಿಗೆ ಕೋವಿಡ್ ಲಸಿಕೆ!
ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್, ಎನ್ ಸಿಪಿ
ನಾಗ್ಪುರ: ರಾಜ್ಯದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರ 23 ವರ್ಷದ ಸೋದರಳಿಯನಿಗೆ ಎರಡನೇ ಬಾರಿ ಕೊರೊನ ಲಸಿಕೆಯ ಡೋಸ್ ಅನ್ನು ನೀಡಿರುವ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಎನ್‍ಸಿಪಿ ವಕ್ತಾರ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ಆಗ್ರಹಿಸಿದ್ದಾರೆ.
ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ 45 ವರ್ಷದ ಕಡಿಮೆ ವಯಸ್ಸಿನವರು ಲಸಿಕೆ ಪಡೆಯಲು ಅನರ್ಹರಾಗಿರುತ್ತಾರೆ. ಆರೋಗ್ಯ ರಕ್ಷಣೆ ಅಥವಾ ಮುಂಚೂಣಿ ಕಾರ್ಯಕರ್ತರಿಗೆ ವಯಸ್ಸಿನ ಮಿತಿ ಇಲ್ಲ.
ಫಡ್ನವಿಸ್ ಅಳಿಯ ಮುಂಚೂಣಿ ಆರೋಗ್ಯರಕ್ಷಣಾ ಕಾರ್ಯಕರ್ತರೇ? ಇದಲ್ಲದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮಲಿಕ್ ಆಗ್ರಹಿಸಿದರು.
ತನ್ಮಯ್ ಅವರು ಮಾಜಿ ಶಾಸಕಿ ಶೋಭಾ ಫಡ್ನವಿಸ್ ಅವರ ಮೊಮ್ಮಗನಾಗಿದ್ದು, ಶೋಭಾ ಮಾಜಿ ಸಿಎಂ ಫಡ್ನವಿಸ್ ಅವರ ಚಿಕ್ಕಮ್ಮ. ತನ್ಮಯ್ ಅವರ ಸ್ನೇಹಿತರ ಪ್ರಕಾರ ಅವರಿಗೆ ಈಗ 23 ವರ್ಷ. ನಗರದ ಶ್ರದ್ದಾನಂದ ಪೇಟ್ ನಲ್ಲಿ ವಾಸವಾಗಿದ್ದಾರೆ. ಸೋಮವಾರ ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೊರೋನ ಲಸಿಕೆ ಸ್ವೀಕರಿಸುವ ಚಿತ್ರವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿದ್ದರು.
ತನ್ಮಯ್ ದೂರದ ಸಂಬಂಧಿ. ಕೊರೋನ ವಿರುದ್ಧ ಅವರು ಯಾವ ಮಾನದಂಡದಲ್ಲಿ ಚುಚ್ಚುಮದ್ದನ್ನು ಪಡೆದಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವನು ಅರ್ಹನಾಗಿದ್ದರೆ ಅದು ಉತ್ತಮ. ಅದು ಅಲ್ಲದಿದ್ದರೆ ಸಂಪೂರ್ಣವಾಗಿ ಅನುಚಿತ. ನನ್ನ ಪತ್ನಿ, ಮಗಳಿಗೆ ಲಸಿಕೆ ಹಾಕಲಾಗಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.
ಫಡ್ನವಿಸ್ ಅವರು ಲಸಿಕೆಗಳನ್ನು ಸಂಗ್ರಹಿಸಿ ತಮ್ಮ ಕುಟುಂಬ ಸದಸ್ಯರಿಗೆ ನೀಡುತ್ತಾರೆಯೇ ಎಂದು ತಿಳಿಯಲು ಬಯಸುವೆ. ತನ್ಮಯ್ ಅಪರಾಧ ಮಾಡಿದು, ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ಕರ್ನಾಟಕದ ಕಾಂಗ್ರೆಸ್ಸಿಗರಾದ ಶ್ರೀವಾತ್ಸವ ಟ್ವೀಟ್ ಮಾಡಿದ್ದಾರೆ.