varthabharthi


ರಾಷ್ಟ್ರೀಯ

ಆಕ್ಸಿಜನ್ ಗೆ ಉದ್ದಿಮೆಗಳು ಕಾಯಬಹುದು, ರೋಗಿಗಳು ಕಾಯಲಾಗದು: ದಿಲ್ಲಿ ಹೈಕೋರ್ಟ್

ವಾರ್ತಾ ಭಾರತಿ : 20 Apr, 2021

ಹೊಸದಿಲ್ಲಿ, ಎ.20: ಮಾನವ ಜೀವಗಳು ಅಪಾಯದಲ್ಲಿವೆ. ಆಕ್ಸಿಜನ್ಗೆ ಕಾರ್ಖಾನೆಗಳು ಕಾಯಬಹುದು, ಆದರೆ ರೋಗಿಗಳು ಕಾಯಲಾಗದು ಎಂದು ಹೇಳಿರುವ ದಿಲ್ಲಿ ಹೈಕೋರ್ಟ್, ಕಾರ್ಖಾನೆಗಳಿಂದ ಆಕ್ಸಿಜನ್(ಆಮ್ಲಜನಕ) ಅನ್ನು ವರ್ಗಾಯಿಸಬಹುದೇ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

ದೇಶದಲ್ಲಿ ಆಮ್ಲಜನಕದ ಕೊರತೆ ಕಂಡುಬಂದೊಡನೆ ಪ್ರಮುಖ ಉದ್ದಿಮೆಗಳಿಗೆ ಆಮ್ಲಜನಕ ಸರಬರಾಜು ಯಾಕೆ ನಿಷೇಧಿಸಿಲ್ಲ? ಉಕ್ಕು ಸ್ಥಾವರಗಳು ಬಹಳಷ್ಟು ಆಮ್ಲಜನಕ ಉತ್ಪಾದಿಸುತ್ತವೆ ಎಂದು ಹೇಳುತ್ತೀರಿ, ಹಾಗಾದರೆ ಅವುಗಳಿಂದ ಆಮ್ಲಜನಕ ಪಡೆಯುತ್ತಿದ್ದೀರಾ? ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಳ್ಳಿಯವರಿದ್ದ ನ್ಯಾಯಪೀಠ ಕೇಂದ್ರಸರಕಾರವನ್ನು ಪ್ರಶ್ನಿಸಿತು.

ಉಕ್ಕು ಮತ್ತು ಪೆಟ್ರೋಲಿಯಂ ಉದ್ದಿಮೆಗಳು ಹೆಚ್ಚಿನ ಪಾಲನ್ನು ಹೊಟ್ಟೆಗಿಳಿಸುತ್ತಿವೆ ಎಂದು ನನಗಿಸುತ್ತದೆ. ಆದ್ದರಿಂದಲೇ ಇವು ಹೆಚ್ಚು ಆಕ್ಸಿಜನ್ ಉತ್ಪಾದಿಸುತ್ತದೆ . ಆದರೆ ಈಗ ಸಾಯುತ್ತಿರುವ ರೀತಿಯಲ್ಲೇ ಜನ ಸಾಯುವುದಾದರೆ ಆರ್ಥಿಕತೆಗೆ ಹೆಚ್ಚಿನ ಉತ್ಪಾದನೆಯ ಕೊಡುಗೆ ನೀಡುವುದರಲ್ಲಿ ಯಾವ ಅರ್ಥವಿದೆ? ಎಂದು ನ್ಯಾ ವಿಪಿನ್ ಸಂಘಿ ಕೇಂದ್ರ ಸರಕಾರವನ್ನು ಪ್ರಶ್ನಿಸಿದರು. ದಿಲ್ಲಿಯಲ್ಲಿ ಆಮ್ಲಜನಕದ ಕೊರತೆ ಇರುವುದರಿಂದ ಕೊರೋನ ರೋಗಿಗಳಿಗೆ ಒದಗಿಸುವ ಆಮ್ಲಜನಕವನ್ನು ಕಡಿಮೆಗೊಳಿಸುವಂತೆ ಗಂಗಾರಾಮ್ ಆಸ್ಪತ್ರೆಯ ವೈದ್ಯರಿಗೆ ಸೂಚಿಸಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿದ ನ್ಯಾಯಪೀಠ ‘ಉದ್ದಿಮೆಗಳಿಗೆ ಆಮ್ಲಜನಕ ಪೂರೈಕೆಯನ್ನು ಯಾಕೆ ಮೊಟಕುಗೊಳಿಸಬಾರದು ? ಎಂದು ಕೇಂದ್ರ ಸರಕಾರದ ನ್ಯಾಯವಾದಿ ಮೋನಿಕಾ ಆರೋರಾರನ್ನು ಪ್ರಶ್ನಿಸಿತು.

ದಿಲ್ಲಿಗೆಂದು ನಿಗದಿಗೊಳಿಸಿರುವ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ಪೂರೈಸಬಾರದು ಎಂದು ಸೋಮವಾರ ಆಮ್ಲಜನಕ ಉತ್ಪಾದನೆ ಸಂಸ್ಥೆ ‘ಇನಾಕ್ಸ್’ಗೆ ಸೂಚಿಸಿತ್ತು. ಆದರೆ ದಿಲ್ಲಿಗೆ ಒಂದು ಮೆಟ್ರಿಕ್ ಟನ್ ಆಮ್ಲಜನಕವೂ ಪೂರೈಕೆಯಾಗಿಲ್ಲ ಎಂದು ಮಂಗಳವಾರ ದಿಲ್ಲಿ ಸರಕಾರ ಹೈಕೋರ್ಟ್ನ ಗಮನಕ್ಕೆ ತಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆ ಸಂಸ್ಥೆಯನ್ನೂ ಈ ಪ್ರಕರಣದ ಕಕ್ಷಿದಾರನಾಗಿ ಸೇರಿಸುವಂತೆ ಸೂಚಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)