varthabharthi


ನಿಮ್ಮ ಅಂಕಣ

ವಿಶ್ವೇಶ್ವರನಿಗೆ ಬೇಡದ ಮೈಕಾಸುರನ ಸಂಹಾರ ಯಾವಾಗ?

ವಾರ್ತಾ ಭಾರತಿ : 21 Apr, 2021
ಆಬಿದಾನುಜ, ಪುತ್ತಿಗೆ

ಧರ್ಮಗಳ ಮೂಲ ಸ್ವಭಾವವನ್ನು ಹುಡುಕ ಹೊರಟರೆ ಅಲ್ಲಿ ಮೌನ ಮತ್ತು ಪ್ರಶಾಂತತೆಗೆ ಬಹಳಷ್ಟು ಮಹತ್ವ ಮತ್ತು ಗೌರವ ಇರುವುದನ್ನು ಕಾಣುತ್ತೇವೆ. ಅದಕ್ಕೆ ಹೋಲಿಸಿದರೆ ಸದ್ದುಗದ್ದಲಗಳಿಗೆ ಅಂತಹ ಯಾವುದೇ ಮಾನ್ಯ ಸ್ಥಾನವನ್ನು ಧರ್ಮಗಳಂತೂ ಖಂಡಿತ ನೀಡಿಲ್ಲ. ನಾವಿಂದು ಧರ್ಮದ ಹೆಸರಲ್ಲಿ ನಮ್ಮ ಸುತ್ತ ಪದೇ ಪದೇ ಮೊಳಗುತ್ತಿರುವ, ಕಿವಿ ಕಿವುಡಾಗಿಸುವ ಸದ್ದುಗದ್ದಲಗಳನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲೂ ಅಷ್ಟೇ. ಅವುಗಳ ಹಿಂದೆ ಧರ್ಮ ಅಥವಾ ದೇವರಿಗೆ ಹೆಚ್ಚಿನ ಪಾತ್ರವೇನೂ ಇದ್ದಂತಿಲ್ಲ. ಎಲ್ಲೆಡೆ ಧರ್ಮಗಳ ಮತ್ತು ದೇವರ ಅಂಧ ಭಕ್ತರ ಮರ್ಜಿಯೇ ಮೆರೆಯುತ್ತಿರುತ್ತದೆ. ಸ್ವತಃ ದೇವರು ಎಲ್ಲಾದರೂ ಸದ್ದು ಗದ್ದಲ ಮಾಡಿದ್ದಿಲ್ಲ. ಸದ್ದುಗದ್ದಲ ಮಾಡಿರೆಂದು ಅವನು ಯಾರಿಗೂ ಹೇಳಿದ್ದೂ ಇಲ್ಲ. ಸದ್ದುಗದ್ದಲಗಳನ್ನು ಅವನು ಮೆಚ್ಚುತ್ತಾನೆ ಎನ್ನುವುದಕ್ಕೂ ಆಧಾರವೇನಿಲ್ಲ. ಸದ್ದುಗದ್ದಲವೆಲ್ಲ ಅವನ ಭಕ್ತರ ನೆಚ್ಚಿನ ಕಾರುಬಾರು ಮಾತ್ರ.

ದೇವರು ಸೃಷ್ಟಿಸಿ ಪರಿಪಾಲಿಸುತ್ತಿರುವ ಪ್ರಕೃತಿ ಸಾಮಾನ್ಯವಾಗಿ ಮೌನವಾಗಿರುತ್ತದೆ. ಅಲ್ಲಿ ಕೆಲವೊಮ್ಮೆ ವಿವಿಧ ಧ್ವನಿಗಳು ಮೂಡುತ್ತಿರುತ್ತವೆ. ಆದರೆ ಸಾಮಾನ್ಯವಾಗಿ ಅವೆಲ್ಲವೂ ಬಹಳ ಇಂಪಾದ, ಲಯಬದ್ಧ, ಮಧುರ ಧ್ವನಿಗಳಾಗಿರುತ್ತವೆ. ಪ್ರಕೃತಿಯಲ್ಲಿ, ದಿಗಿಲು ಹುಟ್ಟಿಸುವ ದೊಡ್ಡ ಶಬ್ದಗಳು ಬಹಳ ಅಪರೂಪಕ್ಕೆ ಮಾತ್ರ ಮೊಳಗುತ್ತವೆ. ಅಲ್ಲೂ ಪುಟ್ಟ ಸ್ಥಳಗಳಿಂದ ದೊಡ್ಡ ಶಬ್ದಗಳು ಮೊಳಗುವುದಿಲ್ಲ. ದೊಡ್ಡ ಶಬ್ದಗಳು ಆಕಾಶ, ಸಮುದ್ರ, ಮರುಭೂಮಿ, ಪರ್ವತ, ದಟ್ಟಾರಣ್ಯ ಮುಂತಾದ ದೊಡ್ಡ ಸ್ಥಳಗಳಿಂದ, ಆಯಾ ಸ್ಥಳದ ಗಾತ್ರಕ್ಕನುಸಾರವಾಗಿ ಮೊಳಗುತ್ತವೆ. ಮೋಡಗಳು, ವಾಯುಲೋಕ ಮುಂತಾದ ಮೂಲಗಳಿಂದ ಮೊಳಗುವ ಶಬ್ದಗಳು ಹೆಚ್ಚಿನ ವೇಳೆ ಭೂಜೀವಿಗಳಿಗೆ ಉಪಯುಕ್ತವಾದ, ಮಹತ್ವದ ಮಾಹಿತಿ ಅಥವಾ ಮುನ್ಸೂಚನೆಗಳನ್ನು ಹೊತ್ತಿರುತ್ತವೆ. ತನ್ನ ಮಹಿಮೆ ಮತ್ತು ಸಾಧನೆಗಳೆಲ್ಲಾ ದೇವರಿಗೆ ಚೆನ್ನಾಗಿ ಗೊತ್ತಿವೆ. ಅದನ್ನು ಬೇರಾರೂ ಅವನಿಗೆ ತಿಳಿಸಬೇಕಾಗಿಲ್ಲ. ಹೀಗಿರುವಾಗ, ಕೆಲವೊಮ್ಮೆ ಹಗಲೆಲ್ಲಾ, ಕೆಲವೊಮ್ಮೆ ಹಗಲಿರುಳೆಲ್ಲಾ ಮತ್ತು ಕೆಲವೊಮ್ಮೆ ಹಲವು ದಿನಗಳವರೆಗೂ ಆಧುನಿಕ ಮತ್ತು ಶಾಸ್ತ್ರೀಯವಾದ ವಿವಿಧ ಯಂತ್ರ, ಉಪಕರಣ ಮತ್ತು ಸಾಧನಗಳನ್ನು ಬಳಸಿ ದೇವರ ಮಹಿಮೆಯನ್ನು, ಮಹಾತ್ಮೆಯನ್ನು ಮತ್ತು ಅವನ ಸಾಧನೆಗಳನ್ನು ಕೊಂಡಾಡುವ ಕಥೆ, ಹಾಡುಗಳನ್ನೆಲ್ಲಾ ಕೇಳಿಸುವವರು ಅದನ್ನೆಲ್ಲ ಯಾರಿಗೆ ಕೇಳಿಸುತ್ತಿದ್ದಾರೆ? ಯಾಕೆ ಕೇಳಿಸುತ್ತಿದ್ದಾರೆ? ಈ ಅಬ್ಬರದ ಚಟುವಟಿಕೆಗಳಿಂದ ದೇವರ ಜನಪ್ರಿಯತೆಯೇನಾದರೂ ಹೆಚ್ಚುತ್ತದೆಯೇ? ಜನರಲ್ಲಿ ದೇವರ ಕುರಿತಾದ ಭಯ, ಭಕ್ತಿ, ಗೌರವಗಳೇನಾದರೂ ವೃದ್ಧಿಸುತ್ತವೆಯೇ? ನಿಜವಾಗಿ, ದೇವರ ಕುರಿತು ಒಂದಷ್ಟು ಪ್ರೀತ್ಯಾದರ ಉಳ್ಳವರು ಅಥವಾ ಅವನ ವಿಷಯದಲ್ಲಿ ನಿರ್ಲಿಪ್ತರಾಗಿರುವವರು ಕೂಡಾ ಈ ಸದ್ದುಗದ್ದಲಗಳ ಕಿರಿಕಿರಿಗೆ ರೋಸಿ ಧರ್ಮ, ದೇವರುಗಳ ಬಗ್ಗೆ ಜಿಗುಪ್ಸೆ ತಾಳುವುದುಂಟು.

ಧರ್ಮ - ದೇವರುಗಳ ಕುರಿತಂತೆ ಒಳ್ಳೆಯದೇನೂ ಅವರ ಕಿವಿಗೆ ಬೀಳುವುದಿಲ್ಲ. ಬಲವಂತವಾಗಿ ಅವರ ಕಿವಿಯೊಳಗೆ ತಳ್ಳಲ್ಪಡುವ ಧ್ವನಿಗಳೆಲ್ಲ ಧರ್ಮದ ಹೆಸರಲ್ಲಿ ಮೊಳಗಿಸಲಾದ ಕಿರುಚಾಟ ಮಾತ್ರವಾಗಿದ್ದರೆ ಅವರಲ್ಲಿ ದೇವರು, ಧರ್ಮಗಳ ಕುರಿತು ಒಲವು ಮೂಡುವುದಾದರೂ ಹೇಗೆ? ಇವೆಲ್ಲಾ ದೇವರಿಗೆ ಕೇಳಿಸಲಿಕ್ಕಿರುವ ಕಿರುಚಾಟಗಳು ಎಂದು ನಂಬಿರುವವರು, ದೇವರಿಗೇನು ಶ್ರವಣ ಸಮಸ್ಯೆ ಇದೆಯೇ? ಅಥವಾ ದೇವರೇನು ನಾವು ಕೂಗಿ ಕರೆಯಬೇಕಾದಷ್ಟು ನಮ್ಮಿಂದ ದೂರವಿದ್ದಾನೆಯೇ? ಎಂದು ಅಚ್ಚರಿ ಪಡುವುದೂ ಇದೆ. ಧರ್ಮ ಗ್ರಂಥಗಳು ಮನುಷ್ಯರಿಗೆ ಪರಿಚಯಿಸುವ ದೇವರು ಸದಾ ಮನುಷ್ಯರ ಹತ್ತಿರವಿರುತ್ತಾನೆ. ಆದರೆ ದೇವರು ನಮ್ಮ ಎಲ್ಲ ಚಲನವಲನಗಳನ್ನು ನೋಡಬಲ್ಲಷ್ಟು, ನಮ್ಮೆಲ್ಲ ಪಿಸುಮಾತುಗಳನ್ನೂ ಕೇಳಬಲ್ಲಷ್ಟು ನಮ್ಮ ಸಮೀಪವಿದ್ದಾನೆ ಮತ್ತು ಎಲ್ಲ ಜೀವಿಗಳ ಮನದೊಳಗಿನ ಎಲ್ಲ ತುಮುಲಗಳನ್ನು ಸ್ಪಷ್ಟವಾಗಿ ಗ್ರಹಿಸಬಲ್ಲಷ್ಟು ಸಂವೇದನಾಶೀಲನಾಗಿದ್ದಾನೆ ಎಂಬ ಸಾಮೀಪ್ಯ ಮತ್ತು ಸಂವೇದನೆಯ ಕಲ್ಪನೆ ಯಾವುದೇ ಧರ್ಮದ ಪುರೋಹಿತರ ಪಾಲಿಗೆ ದುಃಸ್ವಪ್ನವಾಗಿರುತ್ತದೆ. ಏಕೆಂದರೆ ದೇವರು ಜನಸಾಮಾನ್ಯರ ಎಟುಕಿಗೆ ಸಿಗಲಾರದಷ್ಟು ದೂರವಿದ್ದಾನೆ ಎಂಬ ಮೌಢ್ಯವೇ ಪುರೋಹಿತರ ಬಂಡವಾಳ. ಅವನು ಹತ್ತಿರವೇ ಇದ್ದಾನೆ ಎಂದು ಜನ ಸಾಮಾನ್ಯರು ನಂಬತೊಡಗಿದರೆ ಮತ್ತೆ ಪುರೋಹಿತರಿಗೆ ಕೆಲಸವೆಲ್ಲಿದೆ? ಮಧ್ಯಸ್ತಿಕೆಯನ್ನೇ ತಮ್ಮ ಪ್ರಧಾನ ವ್ಯವಹಾರವಾಗಿಸಿಕೊಂಡವರ ವ್ಯವಹಾರಕ್ಕೆ ಅವಕಾಶವೆಲ್ಲಿದೆ? ನಿಮ್ಮ ಮೊರೆಯನ್ನು ನಾವು ದೇವರಿಗೆ ತಲುಪಿಸುತ್ತೇವೆ ಎಂಬ ಅವರ ಬೊಗಳೆಗೆ ಬೆಲೆ ಎಲ್ಲಿದೆ? ತಾನು ಸೃಷ್ಟಿಸಿದ ಜೀವಿಗಳಿಗೆ ಕಿವಿಗಳನ್ನು ಕೊಟ್ಟ ದೇವರು ಆ ಕಿವಿಗಳ ಮೇಲೆ ಒಂದಷ್ಟು ಇತಿ ಮಿತಿಗಳನ್ನೂ ಹೇರಿದ್ದಾನೆ. ಯಾವುದೇ ಧ್ವನಿ ಅಥವಾ ಶಬ್ದದ ತೀವ್ರತೆ ಒಂದು ನಿರ್ದಿಷ್ಟ ಮಟ್ಟವನ್ನು ಮೀರಿತೆಂದರೆ ಅದು ಕಿವಿಯ ಪಾಲಿಗೆ ಅಸಹನೀಯವಾಗಿ ಬಿಡುತ್ತದೆ.

ಸದ್ಯ ದೇವರ ಮಹಿಮೆ ಸಾರುವುದಕ್ಕಾಗಿ ಮೈಕಾಸುರನ ಆಶ್ರಯ ಪಡೆಯುವವರು ಮತ್ತು ಪಟಾಕಿ, ಸಿಡಿಮದ್ದು, ಸ್ಫೋಟಕಗಳನ್ನು ಬಳಸುವವರು ದೇವರು ಸೃಷ್ಟಿಸಿದ ಕಿವಿಗಳನ್ನು ನಾಶಮಾಡುತ್ತಿದ್ದಾರೆ. ದೇವರು ಮೆಚ್ಚುವ ಪ್ರಶಾಂತತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಜೀವಿಗಳಿಗೆಲ್ಲ ದೇವರೇ ವಿಧಿಸಿರುವ ನಿದ್ದೆ ಎಂಬ ಅನಿವಾರ್ಯ ಚಟುವಟಿಕೆಗೆ ಭಂಗ ತರುತ್ತಿದ್ದಾರೆ. ದೇವರನ್ನು ನಂಬುವವರು ದೇವರ ಹೆಸರಲ್ಲಿ ದೇವನಿರ್ಮಿತ ಹಾಗೂ ದೇವರು ಮೆಚ್ಚುವ ವಿಧಾನಗಳನ್ನು ಬಿಟ್ಟು ತಾವೇ ತಮ್ಮ ಆಡಂಬರಕ್ಕಾಗಿ, ಶೋಕಿಗಾಗಿ ಮತ್ತು ಮನರಂಜನೆಗಾಗಿ ಆವಿಷ್ಕರಿಸಿಕೊಂಡ ಸದ್ದುಗದ್ದಲ ಮತ್ತು ಆರ್ಭಟದ ವಿಧಾನಗಳನ್ನು ಬಳಸಿದರೆ ಅದರಿಂದ ದೇವರ ಎಲ್ಲ ಸೃಷ್ಟಿಗಳಿಗೆ ಕಿರಿಕಿರಿಯಾಗುತ್ತದೆ, ದೇವದತ್ತ ಪ್ರಕೃತಿಗೆ ಹಾನಿಯಾಗುತ್ತದೆ. ಸಾಕ್ಷಾತ್ ದೇವರು ಕೂಡಾ ಇದನ್ನು ಖಂಡಿತ ಮೆಚ್ಚಲಾರ. ಆದ್ದರಿಂದ ದುಷ್ಟರ ಸಂಹಾರದಿಂದ ದೇವರು ಪ್ರಸನ್ನನಾಗುತ್ತಾನೆಂದು ನಂಬುವ ಎಲ್ಲ ದೇವಭಕ್ತರು ಮೈಕಾಸುರ, ಶಬ್ದಾಸುರ, ಗದ್ದಲಾಸುರ, ಆರ್ಭಟಾಸುರ ಇತ್ಯಾದಿಗಳನ್ನೆಲ್ಲ ಸಂಹರಿಸಿ ಪ್ರಕೃತಿ ಮತ್ತು ಕಿವಿಗಳಿಗೆ ಹಿತಕರವಲ್ಲದ ಎಲ್ಲ ಧ್ವನಿಗಳಿಂದ ಮುಕ್ತವಾದ ಪ್ರಶಾಂತ, ಸಭ್ಯ ಉಪಾಸನಾ ವಿಧಾನಗಳನ್ನು ನೆಚ್ಚಿಕೊಳ್ಳುವುದೊಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)