ಕೇಂದ್ರ ಸರಕಾರ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ : ಪ್ರಿಯಾಂಕಾ ಗಾಂಧಿ
ಡಾ.ಮನಮೋಹನ್ ಸಿಂಗ್ ಅವರ ಸಲಹೆಯನ್ನೂ ಅಪಹಾಸ್ಯ ಮಾಡಲಾಗುತ್ತಿದೆ
ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ದೇಶವು ಹಿಂದೆಂದೂ ಕಾಣದ ಆರೋಗ್ಯ ಬಿಕಟ್ಟನ್ನು ಎದುರಿಸುತ್ತಿದ್ದರೂ ಕೇಂದ್ರ ಸರಕಾರವು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇಡೀ ರಾಷ್ಟ್ರ ಒಟ್ಟಾಗಿ ನಿಲ್ಲುವ ಕ್ಷಣ ಇದಾಗಿದೆ ಎಂದು ಒತ್ತಿ ಹೇಳಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ಹಿಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಶ್ರದ್ದಾಪೂರ್ವಕವಾಗಿ ನೀಡಿರುವ ಶಿಫಾರಸುಗಳನ್ನು ಅಪಹಾಸ್ಯ ಮಾಡಿದೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಅವರು ಕೊರೋನ ಬಿಕ್ಕಟ್ಟಿನ ಕುರಿತಾಗಿ ದೇಶದ ಜನತೆ ಹಾಗೂ ವಿರೋಧ ಪಕ್ಷಗಳ ಜೊತೆ ಮಾತನಾಡಬೇಕು. ಕೇಂದ್ರ ಸರಕಾರವು ಪಾಕಿಸ್ತಾನದ ಅಂತರ್ ಸೇವೆಗಳ ಗುಪ್ತಚರದೊಂದಿಗೆ ಮಾತನಾಡಲು ಬಯಸುತ್ತದೆ. ಆದರೆ ಪ್ರತಿಪಕ್ಷ ನಾಯಕರೊಂದಿಗೆ ಮಾತನಾಡಲು ಬಯಸುತ್ತಿಲ್ಲ ಎಂದು ಉತ್ತರಪ್ರದೇಶದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಹೇಳಿದ್ದಾರೆ.
ರಚನಾತ್ಮಕ ಹಾಗೂ ಸಕಾರಾತ್ಮಕ ಸಲಹೆಗಳನ್ನು ನೀಡದ ಯಾವುದೇ ವಿರೋಧ ಪಕ್ಷಗಳ ನಾಯಕರು ಇದ್ದಾರೆ ಎಂದು ನಾನು ಭಾವಿಸುವುದಿಲ್ಲ. ನಾವು ನಿಮ್ಮೊಂದಿಗೆ(ಕೇಂದ್ರ)ಇದ್ದೇವೆ ಎಂದು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಜೀ 10 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿದ್ದರು. ಅವರು ಎಷ್ಟೊಂದು ಗೌರವಾನ್ವಿತ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತಿದೆ. ಅವರು(ಮನಮೋಹನ್ ಸಿಂಗ್)ಸಲಹೆಗಳನ್ನು ನೀಡುತ್ತಿದ್ದರೆ, ಸಲಹೆಗಳನ್ನು ಗೌರವದಿಂದ ತೆಗೆದುಕೊಳ್ಳಬೇಕು. ಪ್ರತಿ ಪಕ್ಷ ನಾಯಕರು ಧ್ವನಿಎತ್ತದಿದ್ದರೆ ಇನ್ಯಾರು ಮಾತನಾಡುತ್ತಾರೆ ಎಂದರು.
ಡಾ.ಸಿಂಗ್ ಅವರು ರವಿವಾರ ಪ್ರಧಾನಿ ಮೋದಿಗೆ ಪತ್ರ ಬರೆದು ಕೊರೋನ ನಿಭಾಯಿಸುವ ಕುರಿತು 5 ಸಲಹೆಗಳನ್ನು ನೀಡಿದ್ದರು. ಆದರೆ ಈ ಸಲಹೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಉತ್ತರಿಸಿ , ಡಾ.ಸಿಂಗ್ ಅವರ ಪತ್ರವನ್ನು ಅಪಹಾಸ್ಯ ಮಾಡಿದ್ದರು. ನಿಮ್ಮ ಸಲಹೆಯನ್ನು ನಿಮ್ಮ ಪಕ್ಷದವರು ಕೇಳುತ್ತಾರೆಯೋ ? ಅವರಿಗೆ ಮೊದಲಿಗೆ ಹೇಳಿ ಎಂದು ಮೂದಲಿಸಿದ್ದರು.